ಭಾರತ ಕೃಷಿ ಪ್ರಧಾನ ದೇಶ ಎಂದು ನಾವೆಲ್ಲ ಪ್ರಾಥಮಿಕ ಶಾಲಾ ಪಠ್ಯ ಪುಸ್ತಕದಲ್ಲಿ ಓದುತ್ತಾ ಬೆಳೆದವರು. ಪ್ರಮುಖವಾಗಿ ಆಹಾರ ಹಾಗೂ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಭಾರತ ಅನೇಕ ದೇಶಗಳಿಗೆ ಕಚ್ಚಾ ವಸ್ತುಗಳನ್ನು ಪೂರೈಸುತ್ತಿದೆ. ನಾಗರಿಕತೆಗಳ ಉಗಮದಿಂದ ಇಲ್ಲಿಯವರೆಗೂ ಕೃಷಿ ಬೆಳೆದು ಬಂದ ಬಗೆ ಆಶ್ಚರ್ಯವನ್ನುಂಟು ಮಾಡುತ್ತದೆ. ನಾಗರಿಕತೆಗಳ ಪ್ರಾರಂಭದಲ್ಲಿ ಅಲೆಮಾರಿಯಾಗಿ ಬದುಕು ನಡೆಸುತ್ತಿದ್ದ ಜನರು ನದಿಯ ಬದಿಗಳಲ್ಲಿ ನೆಲೆ ನಿಂತು ಆಹಾರಕ್ಕಾಗಿ ಕೃಷಿ ಆರಂಭಿಸಿದರು. ಪ್ರಾಣಿಗಳನ್ನು ಪಳಗಿಸಿಕೊಂಡು ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಂಡರು. ಪಶು ಸಾಕಾಣಿಕೆ ಮಾಡಿಕೊಂಡು ಜೀವನೋಪಾಯ ಕಂಡುಕೊಂಡರು. ಸಾಂಪ್ರದಾಯಿಕ ಪದ್ಧತಿಯಿಂದ ಆರಂಭಗೊಂಡ ಕೃಷಿ ಇಂದು ಯಂತ್ರೋಪಕರಣ, ತಾಂತ್ರಿಕತೆ ಅಳವಡಿಸಿಕೊಂಡು ಮುಂದುವರೆಯುತ್ತಿದೆ. ವಾಣಿಜ್ಯ, ಉದ್ಯಮ, ಕೈಗಾರಿಕೆ, ವಿಜ್ಞಾನ- ತಂತ್ರಜ್ಞಾನಗಳು ಸುಧಾರಣೆಗೊಂಡಂತೆ ಕೃಷಿಯೂ ಸಾಕಷ್ಟು ಸುಧಾರಣೆಗೊಂಡಿದೆ. ಅದು ಪ್ರಸ್ತುತ ಕಾಲದ ಅಗತ್ಯವೂ ಆಗಿದೆ.
ಹಿಂದೆಲ್ಲ ಗದ್ದೆ ಉಳುಮೆ ಮಾಡಲು, ರಂಟೆ ಹೊಡೆಯಲು ಕೋಣ, ಜೋಡೆತ್ತು ಬಳಸುತ್ತಿದ್ದರು. ಈಗ ಟಿಲ್ಲರ್, ಟ್ರಾ್ಯಕ್ಟರ್ ಬಳಸುತ್ತಿದ್ದಾರೆ. ಈ ಹಿಂದೆ ಅಡಿಕೆ ಮರದ ತುದಿಯವರೆಗೂ ಹತ್ತಿ ಬೋಡೋ ದ್ರಾವಣ ಸಿಂಪಡಿಸಲಾಗುತ್ತಿತ್ತು, ಈಗ ಮರ ಹತ್ತಲು ಮಶಿನ್, ಸಿಂಪಡಣೆಗೆ ಸ್ಪ್ರೇಯರ್​ಗಳು ಬಂದಿವೆ. ಕೂಲಿ ಆಳಿನ ಸಮಸ್ಯೆ ಸೇರಿದಂತೆ ಹಲವು ಕೃಷಿ ಕೆಲಸಗಳು ಯಾಂತ್ರೀಕರಣದಿಂದ ಸುಲಭವಾಗಿವೆ.
ನಾನಾ ಕಾರಣಗಳಿಂದ ಜನರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿ ಮಾಡುವವರೂ ಆಹಾರ ಬೆಳೆಗಳ ಬದಲು ಬೇಗ ಫಸಲು-ಲಾಭ ತಂದು ಕೊಡುವ ವಾಣಿಜ್ಯ ಬೆಳೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ಕಳೆದ ಒಂದು ದಶಕದಿಂದ ಈಚೆಗೆ ಭತ್ತ, ರಾಗಿ, ಗೋಧಿ, ಜೋಳ ಬೆಳೆಯುವ ರೈತರು ಹೆಚ್ಚಾಗಿ ವಾಣಿಜ್ಯ ಬೆಳೆಗಳನ್ನೇ ಬೆಳೆಯುತ್ತಾರೆ. ಹಾಗೆ ಮಾಡಿದರೆ ಆಹಾರ ವಸ್ತುಗಳ ಕೊರತೆ ಉಂಟಾಗಲೂಬಹುದು. ಆಹಾರ ಬೆಳೆಯಿಂದ ನಿರೀಕ್ಷಿತ ಆದಾಯ ದೊರಕದಿರುವುದು, ನೀರಿನ ಸಮಸ್ಯೆ, ಕೂಲಿ ಕಾರ್ವಿುಕರ ಕೊರತೆ, ನಾಟಿ, ಕೊಯ್ಲು ಇತ್ಯಾದಿಯನ್ನು ಸಕಾಲಕ್ಕೆ ನಿರ್ವಹಿಸಲು ಆಗದಿರುವುದು, ಪ್ರಾಣಿಗಳ ಉಪಟಳ, ರೋಗ ಬಾಧೆ, ಫಸಲಿನ ಸಂಗ್ರಹಣೆಗೆ ಸಮರ್ಪಕ ಸಂಗ್ರಹಣಾಲಯ ವ್ಯವಸ್ಥೆ ಇಲ್ಲದಿರುವುದು ಹೀಗೆ ಹಲವು ಕಾರಣಗಳು ರೈತರನ್ನು ಸದಾ ಕಾಡುತ್ತವೆ. ಹೀಗೆ ತಾವು ಮಾಡುವ ಕಾಯಕದಲ್ಲಿ ಸಮಸ್ಯೆಗಳ ಸರಮಾಲೆ ಇದ್ದಾಗ ಸಹಜವಾಗಿ ನಾನು ಕಷ್ಟಪಟ್ಟಿದ್ದು ಸಾಕು, ಇನ್ನು ನನ್ನ ಮಕ್ಕಳು ಕಷ್ಟಪಡುವುದು ಬೇಡ ಎಂದು ಜಮೀನು ಮಾರಿಯಾದರೂ ಮಕ್ಕಳನ್ನು ಓದಿಸಿ ಐಟಿ-ಬಿಟಿ ಮುಂತಾದ ಕೆಲಸ ಗಿಟ್ಟಿಸಿಕೊಳ್ಳುವಲ್ಲಿ ಆಸಕ್ತರಾದರು. ಕೃಷಿಯಿಂದ ಲಾಭವಿಲ್ಲ ಎಂದು ಕಮ್ಮಿ ಸಂಬಳವಾದರೂ ಸರಿ ನಗರ-ಪಟ್ಟಣಗಳಲ್ಲಿ ದುಡಿಯತೊಡಗಿದರು. ಪರಿಣಾಮವಾಗಿ ಕೃಷಿ ಸೊರಗತೊಡಗಿತು.
ಅತ್ತೆಗೊಂದು ಕಾಲ-ಸೊಸೆಗೊಂದು ಕಾಲ ಎಂಬಂತೆ ಎಲ್ಲರಿಗೂ, ಎಲ್ಲದಕ್ಕೂ ಒಂದು ಕಾಲ ಬಂದೇ ಬರುತ್ತದೆ. ಈಗ ಕೃಷಿ ಕ್ಷೇತ್ರವೂ ಅಭಿವೃದ್ಧಿಗೊಂಡಿದೆ. ಕೆಲವು ಕೃಷಿಕರು ಐಟಿ-ಬಿಟಿ ಉದ್ಯೋಗಿಗಳಿಗಿಂತ ಹೆಚ್ಚು ಸಂಪಾದಿಸುತ್ತಾರೆ, ಮಾತ್ರವಲ್ಲದೆ ಕುಟುಂಬದೊಂದಿಗೆ ಸಮಯವನ್ನು ಉತ್ತಮ ರೀತಿಯಲ್ಲಿ ಕಳೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ದೇಶ-ವಿದೇಶಗಳಲ್ಲಿದ್ದ ಉತ್ತಮ ಆದಾಯದ ಉದ್ಯೋಗ ತೊರೆದು ಕೃಷಿ ಭೂಮಿಯನ್ನು ಖರೀದಿಸಿ ಬದುಕು ನಡೆಸುವವರೂ ಇದ್ದಾರೆ. ಉದ್ಯೋಗದಲ್ಲಿದ್ದ ಒತ್ತಡ ಈಗಿಲ್ಲ. ನಮ್ಮದೇ ತೋಟದಲ್ಲಿ ವಿವಿಧ ಬೆಳೆ ಬೆಳೆಯುತ್ತಾ, ದನ ಸಾಕುತ್ತಾ ಹಾಯಾಗಿದ್ದೇವೆ. ನಮ್ಮ ಕುಟುಂಬ ನಡೆಸಲು ಇಷ್ಟೇ ಸಾಕು ಎಂದು ಸಂತಸದಿಂದ ಅನುಭವದ ಮಾತನ್ನು ಹಂಚಿಕೊಳ್ಳುತ್ತಾರೆ. ಕೃಷಿಕರು ಸೂಕ್ತ ನಿರ್ಧಾರ ಹಾಗೂ ಯೋಜನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿಯಲ್ಲೂ ಸಾಕಷ್ಟು ಲಾಭ ಮಾಡಿಕೊಳ್ಳಲು ಸಾಧ್ಯ. ಕೃಷಿಕರು ಏಕ ಬೆಳೆ ನೆಚ್ಚಿಕೊಳ್ಳುವುದು ಒಳ್ಳೆಯದಲ್ಲ. ಏಕೆಂದರೆ ಮಾರುಕಟ್ಟೆಯಲ್ಲಿ ಬೆಳೆಯ ಮೌಲ್ಯ ಏರುಪೇರಾಗಿ ನಷ್ಟ ಅನುಭವಿಸಬೇಕಾಗಿ ಬರಬಹುದು. ಕೆಲವು ವರ್ಷಗಳ ಹಿಂದೆ ವೆನಿಲಾಗೆ ಎಲ್ಲಿಲ್ಲದ ಬೇಡಿಕೆ ಬಂದಾಗ ಮಾರುಕಟ್ಟೆಯಲ್ಲಿ ಅದರ ಬೆಲೆ ಕೆಜಿಗೆ ಸಾವಿರ-ಎರಡು ಸಾವಿರದ ಗಡಿ ದಾಟಿತು. ಬೆಲೆ ಏರಿದ ಕೂಡಲೇ ಬಹುತೇಕ ರೈತರು ಮುಗಿಬಿದ್ದು ವೆನಿಲ್ಲಾ ಬೆಳೆಸಿದರು. ನಂತರ ಮಾರುಕಟ್ಟೆಯಲ್ಲಿ ವೆನಿಲಾದ ಬೆಲೆ ಕುಸಿತವಾಗಿ ಕೊಟ್ಟರೂ ಬೇಡ ಎಂಬ ಸ್ಥಿತಿಯಾಯಿತು.
ಮಿಶ್ರ ಬೆಳೆ ಬೆಳೆಯುವುದರಿಂದ ಸಾಕಷ್ಟು ಪ್ರಯೋಜನವಿದೆ. ಒಂದು ಬೆಳೆಯಲ್ಲಿ ನಷ್ಟವಾದರೂ ಇನ್ನೊಂದು ಬೆಳೆ ಕೈ ಹಿಡಿಯಬಹುದು. ಕೃಷಿ ಎಂದ ಕೂಡಲೇ ಗದ್ದೆ ತೋಟ ಮಾತ್ರವಲ್ಲ. ಪಶು, ಆಡು, ಕುರಿ ಸಾಕಣೆಯಲ್ಲದೆ ಕೋಳಿ, ಮೀನು ಸಾಕಣೆಯೂ ಉತ್ತಮ ಆದಾಯ ತಂದು ಕೊಡುತ್ತವೆ. ಅಣಬೆ ಕೃಷಿ, ತರಕಾರಿ ಬೆಳೆಸುವುದು ಇವೆಲ್ಲ ಆದಾಯ ತಂದುಕೊಡುವಂಥವು. ಕನಿಷ್ಠ ಒಂದು ಎಕರೆ ಜಾಗವುಳ್ಳವರು ಹಲವು ಬಗೆಯ ಕೃಷಿ ಮಾಡಿ ಉತ್ತಮ ಆದಾಯ ಸಂಪಾದನೆ ಮಾಡಬಹುದು. ಕೆಲವು ಕಡೆ 50-60 ಸೆಂಟ್ಸ್ ಜಾಗವಿದ್ದಲ್ಲಿ ತರಕಾರಿ ಬೆಳೆದು ಹಣ ಸಂಪಾದಿಸುತ್ತಾರೆ. ಜೊತೆಗೆ ದನ ಸಾಕಿಕೊಂಡು ದಿನಕ್ಕೆ 15-20 ಲೀಟರ್ ಹಾಲನ್ನು ಡೇರಿಗೆ ಹಾಕುತ್ತಾರೆ. ಸೆಗಣಿ ಗೊಬ್ಬರದಿಂದಲೂ ಹಣ ಗಳಿಸುತ್ತಾರೆ. ಮನಸ್ಸಿದ್ದಲ್ಲಿ ಮಾರ್ಗವಿದೆ ಎಂಬಂತೆ ಹಣ ಗಳಿಸಲು ಕೃಷಿ ಉತ್ತಮ ಮಾರ್ಗವಾಗಿದೆ.
ಹೆಚ್ಚಿನ ರಾಸಾಯನಿಕ ಬಳಕೆಯಿಂದ ಮಣ್ಣು ಫಲವತ್ತತೆ ಕಳೆದುಕೊಳ್ಳುತ್ತದೆ. ಆದರೂ ಹೆಚ್ಚಿನ ಇಳುವರಿ ಪಡೆಯಲು ರಾಸಾಯನಿಕ ಗೊಬ್ಬರ, ಕಳೆ- ಕೀಟನಾಶಕಗಳನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ನೂರಾರು ವರ್ಷಗಳಿಂದ ನಮ್ಮ ಹಿರಿಯರು ಸಾವಯವ ಕೃಷಿ ಮಾಡಿಕೊಂಡು ಬಂದಿದ್ದಾರೆ. ಹಟ್ಟಿಗೊಬ್ಬರ, ಗಂಜಲ, ಸೊಪ್ಪು, ಬೂದಿ, ತರಗೆಲೆ-ಎರೆಹುಳು ಗೊಬ್ಬರ ಬಳಸಿ ಕೃಷಿ ನಡೆಸುತ್ತಿದ್ದರು. ಅದರಿಂದಾಗಿ ಆಹಾರ ವಸ್ತುಗಳು ಪೌಷ್ಟಿಕಾಂಶ ಒಳಗೊಂಡು ರಾಸಾಯನಿಕ ಮುಕ್ತವಾಗಿತ್ತು. ಅದನ್ನು ಉಪಯೋಗಿಸಿದ ಹಿರಿಯರೂ ಹೆಚ್ಚಿನ ಕಾಯಿಲೆ ಬೀಳದೆ ಆರೋಗ್ಯಯುತವಾಗಿದ್ದುದನ್ನು ಕಂಡಿದ್ದೇವೆ. ಈಗ ಮನೆ ಅಂಗಳದಲ್ಲಿ ಬೆಳೆದ ಬೆಂಡೆಕಾಯಿ, ತೊಂಡೆಕಾಯಿ, ಅಲಸಂಡೆಗಳಿಗೂ ರಾಸಾಯನಿಕ ಗೊಬ್ಬರ ಹಾಕಬೇಕಾದ ಅನಿವಾರ್ಯತೆ ಇದೆ. ಗೊಬ್ಬರ ಹಾಕದಿದ್ದರೆ ಅದು ಫಸಲನ್ನೇ ನೀಡದು, ಕೀಟನಾಶಕ ಬಳಸದಿದ್ದರೆ ಗಿಡವೇ ಉಳಿಯದು. ಹಾಗಾಗಿದೆ ಪರಿಸ್ಥಿತಿ.
ಯಂತ್ರೋಪಕರಣಗಳಿಂದ ಕೃಷಿಗೆ ಕೂಲಿ ಸಮಸ್ಯೆ ನಿವಾರಣೆಯಾಗಿದೆ. ಈಗಿರುವ ಪ್ರಮುಖ ಸಮಸ್ಯೆ ನೀರಿನದ್ದು. ಅರ್ಧ ಬೇಸಗೆಯಾಗುವಾಗಲೇ ಕೆರೆ ನದಿಗಳೆಲ್ಲ ಬತ್ತತೊಡಗುತ್ತವೆ. ಎಷ್ಟು ಬೋರು ಕೊರೆಸಿದರೂ ನೀರಿನ ಅಭಾವವೇ ಹೆಚ್ಚಾಗಿದೆ. ಕೃಷಿಗೆ ಮಾತ್ರವಲ್ಲದೆ ಕುಡಿಯಲೂ ನೀರಿಲ್ಲದ ಪರಿಸ್ಥಿತಿ. ಈ ನೀರಿನ ಅಭಾವವನ್ನು ದೂರ ಮಾಡಲು ಇದೀಗ ಸಕಾಲ. ಈಗ ಹೇಗೂ ಮಳೆಗಾಲ. ಸುಮ್ಮನೆ ಹರಿದುಹೋಗುವ ನೀರನ್ನು ತಡೆ/ಅಡ್ಡ ಕಟ್ಟಿಯೋ, ಇಂಗು ಗುಂಡಿಗಳ ಮೂಲಕವೋ ಭೂಮಿಗೆ ಇಂಗಿಸಬಹುದು. ಹೀಗೆ ಎಷ್ಟು ಸಾಧ್ಯವೋ ಅಷ್ಟು ಜಲಮರುಪೂರಣ ಮಾಡಿದರೆ ನೀರಿನ ಅಭಾವದಿಂದ ತಪ್ಪಿಸಿಕೊಳ್ಳಬಹುದು. ಹಿಂದಿನ ಕಾಲದಲ್ಲಿ ಸಾಕಷ್ಟು ಭತ್ತದ ಗದ್ದೆಗಳಿದ್ದವು. ಮಳೆಗಾಲದಲ್ಲಿ ಗದ್ದೆಗಳಲ್ಲಿ ಒಂದೆರಡು ಅಡಿ ನೀರು ತುಂಬಿಕೊಂಡು ಭೂಮಿಗೆ ಜಲಮರುಪೂರಣದ ಕೆಲಸ ಮಾಡುತ್ತಿದ್ದವು. ಈಗ ಭತ್ತದ ಗದ್ದೆಗಳನ್ನು ಕಾಣುವುದೇ ಅಪರೂಪವಾಗಿದೆ. ಕೃಷಿಕರ ಹಾಗೂ ಕೃಷಿ ಕ್ಷೇತ್ರ ಅಭಿವೃದ್ಧಿಗಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೃಷಿಕರಿಗಾಗಿ ಹಲವಾರು ಜನೋಪಯೋಗಿ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದೇವೆ. ಕುಡಿಯಲು ಮತ್ತು ಕೃಷಿಗೆ ಬೇಕಾದ ನೀರು ಒದಗಿಸುವುದಕ್ಕಾಗಿ ನಮ್ಮ ಊರು- ನಮ್ಮ ಕೆರೆ ಕಾರ್ಯಕ್ರಮದ ಮೂಲಕ ಪಾಳು ಬಿದ್ದ, ಹೂಳು ತುಂಬಿದ ಕೆರೆಗಳನ್ನು ಪುನಶ್ಚೇತನಗೊಳಿಸುತ್ತಿದ್ದೇವೆ. ಕೃಷಿ ಕೂಲಿ ಕಾರ್ವಿುಕರ ಸಮಸ್ಯೆ ನಿವಾರಣೆಗಾಗಿ ಕೃಷಿಕರಿಗೆ ಕಡಿಮೆ ದರದಲ್ಲಿ ಯಂತ್ರೋಪಕರಣಗಳನ್ನು ಒದಗಿಸುವ ಯಂತ್ರಶ್ರೀ ಯೋಜನೆ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನಲ್ಲಿ 500 ಎಕರೆ ಗದ್ದೆಯಲ್ಲಿ ಯಾಂತ್ರೀಕೃತ ಭತ್ತ ನಾಟಿ ಮಾಡುವ ಮೂಲಕ ಭತ್ತ ಬೆಳೆಯುವ ರೈತರಿಗೆ ಪ್ರೇರಣೆ ನೀಡಲಾಗುತ್ತಿದೆ. ಇದಲ್ಲದೆ ನಶಿಸಿ ಹೋಗುವ ಹಂತದಲ್ಲಿದ್ದ ಸಿರಿಧಾನ್ಯಗಳನ್ನು ಬೆಳೆಯುವ ಬಗ್ಗೆಯೂ ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ರೈತರು ಬೆಳೆದ ಸಿರಿಧಾನ್ಯಗಳಿಂದ ವಿವಿಧ ಆಹಾರೋತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಒದಗಿಸುವ ಕಾರ್ಯವೂ ಕ್ಷೇತ್ರದ ಸಿರಿ ಸಂಸ್ಥೆಯಿಂದ ಆಗುತ್ತಿದೆ.
ಕೃಷಿಗೂ ನಮ್ಮ ಆಚಾರ, ಸಂಪ್ರದಾಯಗಳಿಗೂ ಅವಿನಾಭಾವ ನಂಟು. ಯುಗಾದಿ, ಸಂಕ್ರಾಂತಿ ಮುಂತಾದ ಹಬ್ಬ ಹರಿದಿನ, ಆಚರಣೆಗಳೆಲ್ಲ ಕೃಷಿಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಆಗುತ್ತಿರುವುದು. ಧರ್ಮಸ್ಥಳದಲ್ಲಿ ನಿಗದಿಪಡಿಸಿದ ದಿನದಂದು ಭತ್ತದ ಗದ್ದೆಯಲ್ಲಿ ನಾಟಿಯ ಕೆಲಸ ಕೊನೆಗೊಳ್ಳುವ ಸಂದರ್ಭದಲ್ಲಿ ಬಾಳೆಗಿಡ ನೆಡುವ ಸಂಪ್ರದಾಯವಿದೆ. ಇದಕ್ಕಾಗಿ ಒಂದೊಳ್ಳೆಯ ಮುಹೂರ್ತ ನಿಗದಿಪಡಿಸಲಾಗುತ್ತದೆ. ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಮಹಾಮಂಗಳಾರತಿ ಆಗುವ ಸಂದರ್ಭದಲ್ಲಿ ಈ ಕಾರ್ಯಕ್ರಮ ಮಾಡಲಾಗುತ್ತದೆ. ಈ ಬಾರಿ ಬಾಳೆಗಿಡ ನೆಡುವುದನ್ನು ವೀಕ್ಷಿಸಲು ಬಂದ ಸ್ಥಳೀಯ ಪ್ರಾಥಮಿಕ ಶಾಲೆಯ 25 ವಿದ್ಯಾರ್ಥಿಗಳು ಹಾಗೂ 25 ವಿದ್ಯಾರ್ಥಿನಿಯರು ಈ ಆಚರಣೆ ನೋಡಿ ಗದ್ದೆಯಲ್ಲಿ ನಾಟಿ ಮಾಡಿ ಸಂಭ್ರಮಿಸಿದರು. ಈ ವಿದ್ಯಾರ್ಥಿಗಳ ಉತ್ಸಾಹ ನೋಡಿದರೆ ಇಂದಿನ ಮಕ್ಕಳು ಕೂಡ ಕೃಷಿಯನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಬಹುದು. ಹಿರಿಯರಾದ ನಾವು, ಮಕ್ಕಳಿಗೆ ಇಂತಹ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟರೆ, ಅವರಿಗೆ ನೀರು, ಮಣ್ಣಿನ ಮಹತ್ವ ಮತ್ತು ಸಕಲ ಜೀವರಾಶಿಗಳಿಗೆ ಇದರಿಂದಾಗುವ ಉಪಯೋಗವನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಆಚರಣೆ ಜೊತೆಗೆ ಜೀವನಾನುಭವ ದೊರೆಯುತ್ತದೆ.
ಈಗಿನ ದಿನಗಳಲ್ಲಿ ಕೃಷಿಕರ ಅನೇಕ ಸಮಸ್ಯೆಗಳು ಪರಿಹಾರಗೊಳ್ಳುತ್ತಿವೆ. ಆದರೆ ಕೃಷಿಕ ಯುವಕರಿಗೆ ಮದುವೆಯಾಗಲು ವಧು ಸಿಗುವುದೇ ದೊಡ್ಡ ಸಮಸ್ಯೆಯಾಗಿದೆ ಎಂದೆನಿಸುತ್ತದೆ. ನನ್ನನ್ನು ಭೇಟಿಯಾಗುವ ಅನೇಕರು ಈ ವಿಷಯವನ್ನು ಬಹಳ ಬೇಸರದಿಂದ ಹಂಚಿಕೊಳ್ಳುತ್ತಾರೆ. ‘ಮಗ ಎಂ.ಎ. ಓದಿದ್ದಾನೆ. ಸರಿ ಕೆಲಸ ಸಿಗಲಿಲ್ಲ ಎಂದು ನಾನು ಮಾಡಿಟ್ಟ ತೋಟವನ್ನು ನೋಡಿಕೊಳ್ಳುತ್ತಿದ್ದಾನೆ. ಆದಾಯವೂ ಚೆನ್ನಾಗಿದೆ. ಸಮಸ್ಯೆಯೆಂದರೆ ಹುಡುಗ ಕೃಷಿ ಮಾಡುತ್ತಾನೆಂದು ಹುಡುಗಿಯರು ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾರೆ’ ಎನ್ನುತ್ತಾರೆ. ಇನ್ನೊಬ್ಬರು ಗದ್ದೆ, ಅಡಿಕೆ, ತೆಂಗಿನ ತೋಟ ಉಳ್ಳವರು. ಒಬ್ಬನೇ ಮಗ. ‘ನಮ್ಮನ್ನು ನೋಡಿಕೊಳ್ಳಲು ಯಾರೂ ಇಲ್ಲ ಎಂದು 50-60 ಸಾವಿರ ಸಂಬಳದ ಕೆಲಸ ಬಿಟ್ಟು ನಮ್ಮೊಂದಿಗೆ ಇದ್ದಾನೆ. ಅವನನ್ನು ಯಾವ ಹುಡುಗಿಯೂ ಒಪ್ಪುತ್ತಿಲ್ಲ. ಸಣ್ಣ ಕೆಲಸವಾದರೂ ಸರಿ, ಗಂಡ ಕೆಲಸದಲ್ಲಿರಬೇಕು, ಕೃಷಿಕ ಬೇಡ ಎನ್ನುವ ಹುಡುಗಿಯರೇ ಹೆಚ್ಚಿದ್ದಾರೆ’ ಎಂದರು. ಯಾಕೆಂದರೆ ಕೃಷಿಕನನ್ನು ಮದುವೆಯಾದರೆ ಜೀವಮಾನವಿಡೀ ಬೆಳಗ್ಗಿನಿಂದ ರಾತ್ರಿಯವರೆಗೂ ಕೆಲಸ ಮಾಡಿಕೊಂಡೇ ಇರಬೇಕಾಗುತ್ತದೆ ಎಂಬ ಭಾವನೆ ಬಹುತೇಕರಲ್ಲಿ ಬೇರೂರಿದೆ. ನಿಜ ಸಂಗತಿ ಹೇಳಬೇಕೆಂದರೆ ಕೃಷಿಕರನ್ನು ಮದುವೆಯಾದವರು ಸುಖಿ ಜೀವಿಗಳು.
ದುಡಿಮೆ ಕೃಷಿ ಮಾತ್ರವಲ್ಲ ಎಲ್ಲ ಕ್ಷೇತ್ರದಲ್ಲೂ ಇದ್ದೇ ಇದೆ. ಈಗಿನ ಕಾಲದಲ್ಲಿ ಬಡ ಮತ್ತು ಮಧ್ಯಮವರ್ಗದ ಕುಟುಂಬ ನಡೆಸಲು ಗಂಡ-ಹೆಂಡಿರಿಬ್ಬರೂ ದುಡಿಯಬೇಕಾಗಿದ ಪರಿಸ್ಥಿತಿ ಇದೆ. ಆಗ ಕುಟುಂಬದ ಕಡೆ, ಮಕ್ಕಳ ಕಡೆ ಗಮನ ನೀಡುವುದು ಕಷ್ಟವಾಗಬಹುದು. ಐಟಿ-ಬಿಟಿ ಉದ್ಯೋಗಿಗಳಂತೂ ರಾತ್ರಿ ಯಾವಾಗ- ಹಗಲು ಯಾವಾಗ ಎಂದರಿಯದೆ ದುಡಿಯುತ್ತಿರುತ್ತಾರೆ. ಹೆಂಡತಿ, ಮಕ್ಕಳ ಜತೆ ಕಾಲ ಕಳೆಯಲು ಸಮಯವೇ ಇರುವುದಿಲ್ಲ. ಮಕ್ಕಳು ವಾರದಲ್ಲೊಮ್ಮೆ ತಂದೆಯ ಮುಖ ನೋಡುವುದಷ್ಟೇ. ಇನ್ನು ಕಾರ್ಯಕ್ರಮಗಳಿಗಂತೂ ಅವರ ಗೈರುಹಾಜರಿ ಸಾಮಾನ್ಯ ಎಂಬ ಮಾತು ಬಹುತೇಕರ ಬಾಯಲ್ಲಿ ಕೇಳಿ ಬರುತ್ತದೆ.
ಕೃಷಿಕರು ಶ್ರಮ ಜೀವಿಗಳಾದರೂ ಅವರ ಬದುಕು ಉಳಿದವರಿಗಿಂತ ಭಿನ್ನ. ಕೃಷಿಕ ತನ್ನ ಗದ್ದೆ-ತೋಟದ ಕೆಲಸ ಜತೆಗೆ ಮನೆಕಾರ್ಯಗಳನ್ನು ನಿಭಾಯಿಸುತ್ತಾನೆ. ಹೋಟೆಲ್, ಫಾಸ್ಟ್​ಫುಡ್ ಊಟದ ಬದಲಾಗಿ ದಿನವೂ ಮನೆಯೂಟ ಮಾಡಿಕೊಂಡು ಆರೋಗ್ಯವಂತನಾಗಿರುತ್ತಾನೆ. ಮಕ್ಕಳ ಬೇಕು-ಬೇಡಗಳ ಜತೆಗೆ ತನ್ನ ಕುಟುಂಬ ಮಾತ್ರವಲ್ಲದೆ ಹೆಂಡತಿ ಕಡೆಯವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾನೆ. ದೇವಸ್ಥಾನ, ಸಾಮಾಜಿಕ ಕಾರ್ಯಕ್ರಮ, ಊರ ಹಬ್ಬ, ಜಾತ್ರೆ, ಹಬ್ಬ -ಹರಿದಿನಗಳನ್ನೆಲ್ಲ ಒಟ್ಟಾಗಿ ಸೇರಿ ಆಚರಿಸುತ್ತಾರೆ. ಹೀಗೆ ಬದುಕನ್ನು ಉತ್ತಮ ರೀತಿಯಲ್ಲಿ ಕಳೆಯುವವರು ಕೃಷಿಕರು. ಐಟಿ-ಬಿಟಿ ನೀಡುವ ಸಂಬಳಕ್ಕಿಂತ ಹೆಚ್ಚು ಆದಾಯ ಅನೇಕ ಕೃಷಿಕರಿಗಿದೆ. ಮನೆ, ಕಾರು ಇತ್ಯಾದಿ ಉಳ್ಳವರಾಗಿ ಅನುಕೂಲಸ್ಥರಾಗಿದ್ದಾರೆ. ಇಂದಿನ ದಿನಗಳಲ್ಲಿ ವಿದ್ಯಾಭ್ಯಾಸ ಮಾಡಿದ ಕೃಷಿಕರು ಕೃಷಿ ಕ್ಷೇತ್ರದಲ್ಲಿ ಹೊಸಹೊಸ ಪ್ರಯೋಗಗಳನ್ನು ಮಾಡುತ್ತಾ ಕೃಷಿ ಕ್ಷೇತ್ರವನ್ನು ಯಶಸ್ಸಿನತ್ತ ಕೊಂಡೊಯ್ಯುತ್ತಿದ್ದಾರೆ.
ಇತ್ತೀಚೆಗೆ ಯಾರೋ ಒಬ್ಬರು ಮಾತನಾಡುತ್ತಾ ಕರೊನಾ ಬಂದಾಗ ಲಾಕ್​ಡೌನ್ ಆದ ರೀತಿಯಲ್ಲೇ ಈಗಲೂ ಆದರೆ ಜನ ಮೊದಲು ಖರೀದಿಸುವುದು ಅಕ್ಕಿ ಬೇಳೆಗಳನ್ನು. ಬೇರಾವುದೇ ವಸ್ತುಗಳನ್ನು ಅಲ್ಲ ಅಲ್ವಾ… ಎಂದರು. ಹೌದು, ನಮ್ಮ ಮೂಲಭೂತ ಅವಶ್ಯಕತೆಗಳಲ್ಲಿ ಆಹಾರವೂ ಒಂದು. ಬೇರೆಲ್ಲ ವಸ್ತುಗಳು ನಮ್ಮ ಅನುಕೂಲ ಮತ್ತು ಅಗತ್ಯಗಳಿಗೆ ಮಾತ್ರ. ನಮ್ಮೆಲ್ಲರಿಗೂ ತುತ್ತು ಉಣಿಸುವ, ದೇಶದ ಬೆನ್ನೆಲುಬಾದ ರೈತರಿಗೆ ನಾವೆಲ್ಲ ವಿಶೇಷ ಕೃತಜ್ಞತೆ ಸಲ್ಲಿಸಲೇಬೇಕು. ಕಾರು, ಬಂಗಲೆ ಇರದೆ ಬದುಕಬಹುದು. ಆಹಾರವಿಲ್ಲದೆ ಬದುಕು ಸಾಧ್ಯವಿಲ್ಲ. ಹಾಗಾಗಿ ಆಹಾರವನ್ನು ಹಾಳು ಮಾಡದಿರೋಣ. ಆ ಮೂಲಕ ರೈತರ ಬೆವರಿಗೆ ಗೌರವ ನೀಡೋಣ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 4 =
Remember me
