|ಜಗನ್ ರಮೇಶ್ಬೆಂಗಳೂರು
ಪತ್ನಿಯಾದವಳು ಪ್ರತ್ಯೇಕ ಮನೆ ಮಾಡುವಂತೆ ಪತಿಗೆ ಒತ್ತಾಯಿಸಿದ ಮಾತ್ರಕ್ಕೆ, ಪದೇಪದೆ ಗಂಡನ ಮನೆ ತೊರೆದು ತವರು ಮನೆಗೆ ತೆರಳಿದ ಮಾತ್ರಕ್ಕೆ ಅದನ್ನು ‘ಕ್ರೌರ್ಯ’ ಎನ್ನಲು ಸಾಧ್ಯವಿಲ್ಲ. ಅದು ವಿವಾಹ ವಿಚ್ಛೇದನಕ್ಕೆ ಕಾರಣವೂ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, 15 ವರ್ಷಗಳಿಂದ ದೂರವಿದ್ದ ದಂಪತಿಯನ್ನು ಮತ್ತೆ ಒಂದು ಮಾಡಿದೆ. ಕ್ರೌರ್ಯದ ಆಧಾರದಲ್ಲಿ ವಿಚ್ಛೇದನ ನೀಡುವಂತೆ ಪತಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ್ದ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ತುಮಕೂರು ಮೂಲದ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿರುವ ಹೈಕೋರ್ಟ್, ದಂಪತಿಗೆ ವಿಚ್ಛೇದನ ನೀಡಿ 2016ರಲ್ಲಿ ಫ್ಯಾಮಿಲಿ ಕೋರ್ಟ್ ಹೊರಡಿಸಿದ್ದ ಆದೇಶ ರದ್ದುಪಡಿಸಿದೆ.
ಪ್ರತ್ಯೇಕ ಮನೆಗೆ ಒತ್ತಾಯ:ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ 2002ರ ಮಾರ್ಚ್​ನಲ್ಲಿ ದಂಪತಿ ವಿವಾಹವಾಗಿತ್ತು. ಮದುವೆ ಬಳಿಕ ಇಬ್ಬರೂ ಬೆಂಗಳೂರಿನಲ್ಲಿ ನೆಲೆಸಿದ್ದರು. 2003ರ ಜೂನ್​ನಲ್ಲಿ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಕೆಲ ವರ್ಷಗಳ ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದರಿಂದ, ವಿವಾಹ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದ ಪತಿ, ಮದುವೆಯಾದ ದಿನದಿಂದಲೂ ಪ್ರತ್ಯೇಕ ಮನೆ ಮಾಡುವಂತೆ ಪತ್ನಿ ಒತ್ತಾಯಿಸುತ್ತಿದ್ದಾಳೆ. ವಿಧವೆ ತಾಯಿ ಹಾಗೂ ತಮ್ಮನ ಜವಾಬ್ದಾರಿ ಇರುವ ಕಾರಣಕ್ಕೆ ಪತ್ಯೇಕ ಮನೆ ಮಾಡಲು ನಿರಾಕರಿಸಿದ್ದೆ. ಇದೇ ವಿಚಾರಕ್ಕೆ ಮನೆಯವರೊಂದಿಗೆ ಜಗಳ ತೆಗೆಯುತ್ತಿದ್ದ ಪತ್ನಿ, ಮಗುವನ್ನೂ ಕರೆದುಕೊಂಡು ಸಹೋದರಿ ಹಾಗೂ ತಾಯಿಯ ಮನೆಗೆ ಹೋಗುತ್ತಿದ್ದಳು. ಆಕೆಯ ಈ ನಡುವಳಿಕೆಯಿಂದ ಜೀವನೇ ಶೋಚನೀಯವಾಗಿದೆ ಎಂದು ಪತಿ ಆರೋಪಿಸಿದ್ದರು.
ಪತ್ನಿ ಮೇಲೆ ಕ್ರೌರ್ಯದ ಆರೋಪ:2007ರ ಜನವರಿಯಲ್ಲಿ ಹೀಗೇ ಒಮ್ಮೆ ಮನೆ ಬಿಟ್ಟು ಹೋದವಳು ಹಿಂದಿರುಗಿ ಬರಲೇ ಇಲ್ಲ. ಆಗ ಪತ್ನಿಗೆ ವಕೀಲರ ಮೂಲಕ ನೋಟಿಸ್ ನೀಡಲಾಗಿತ್ತಾದರೂ ಸಮರ್ಥ ಉತ್ತರ ಸಿಗಲಿಲ್ಲ. ಬದಲಿಗೆ, ನನ್ನ ಹಾಗೂ ಕುಟುಂಬದವರ ವಿರುದ್ಧವೇ ವರದಕ್ಷಿಣೆ ಕಿರುಕುಳದ ಆರೋಪದಲ್ಲಿ ಸುಳ್ಳು ಪ್ರಕರಣ ದಾಖಲಿಸಿದ್ದಳು. ಆದರೆ, ಆ ಪ್ರಕರಣ ಖುಲಾಸೆಗೊಂಡಿತ್ತು. ಪತ್ನಿಗೆ ನನ್ನೊಂದಿಗೆ ವೈವಾಹಿಕ ಜೀವನ ನಡೆಸುವ ಉದ್ದೇಶವಿಲ್ಲ. ಇಬ್ಬರ ನಡುವೆ ಮತ್ತೆ ಸಾಮರಸ್ಯ ಮೂಡುವ ಯಾವುದೇ ಸಾಧ್ಯೆತೆಯೂ ಇಲ್ಲ. ಆದ್ದರಿಂದ, ಕ್ರೌರ್ಯ ಹಾಗೂ ಪರಿತ್ಯಾಗದ ಆಧಾರದ ಮೇಲೆ ಆಕೆಯಿಂದ ವಿಚ್ಛೇದನ ಕೊಡಿಸಬೇಕು ಎಂದು ಕೋರಿದ್ದರು.
ಪ್ರತ್ಯೇಕ ಮನೆ ಬೇಕೆನ್ನುವುದು ಕ್ರೌರ್ಯವಲ್ಲ:ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, ಪತಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ ಮಾತ್ರಕ್ಕೆ ಅದನ್ನು ಕ್ರೌರ್ಯ ಎನ್ನಲಾಗವುದಿಲ್ಲ. ಒಬ್ಬ ವ್ಯಕ್ತಿಯ ಜೀವಕ್ಕೆ, ದೈಹಿಕ ಅಥವಾ ಮಾನಸಿಕ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಉದ್ದೇಶಪೂರ್ವಕ ಹಾಗೂ ಸಮರ್ಥಿಸಿಕೊಳ್ಳಲಾಗದ ನಡುವಳಿಕೆಯಾಗಿದ್ದರೆ ಮಾತ್ರ ಅದು ಕ್ರೌರ್ಯವೆನಿಸಿಕೊಳ್ಳುತ್ತದೆ. ಜತೆಗೆ, ಪತ್ನಿ ವಿರುದ್ಧದ ಕ್ರೌರ್ಯದ ಆರೋಪಗಳನ್ನು ಸಾಬೀತುಪಡಿಸಲು ಪತಿಯೂ ವಿಫಲರಾಗಿದ್ದಾರೆ. ಬೇರೆ ಮನೆ ಮಾಡುವಂತೆ ಒತ್ತಾಯಿಸುವುದು, ಆಗಾಗ ತವರು ಮನೆಗೆ ಹೋಗುವುದನ್ನೇ ಕ್ರೌರ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ಸುಪ್ರೀಂಕೋರ್ಟ್ ಸಹ ಇದನ್ನೇ ಹೇಳಿದೆ. ಪತ್ನಿ ಯಾವ ಉದ್ದೇಶದಿಂದ ಬೇರೆ ಮನೆ ಮಾಡಲು ಹೇಳುತ್ತಿದ್ದರು ಎನ್ನುವುದಕ್ಕೆ ಪತಿ ಕಾರಣ ನೀಡಿಲ್ಲ. ಆದ್ದರಿಂದ, ಪ್ರತ್ಯೇಕ ಮನೆ ಮಾಡಲು ಪತ್ನಿ ಒತ್ತಾಯಿಸುತ್ತಿದ್ದರು ಎನ್ನುವ ಕಾರಣಕ್ಕೆ ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು, ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಿದೆ.
ವರದಕ್ಷಿಣೆ ಕಿರುಕುಳ ಆರೋಪ:ಪತಿಯ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದ ಪತ್ನಿ, ಹೆಚ್ಚಿನ ವರದಕ್ಷಿಣೆ ತರುವಂತೆ ಗಂಡ ಕಿರುಕುಳ ನೀಡುತ್ತಿದ್ದ. 2007ರ ಜನವರಿಯಲ್ಲಿ ಹಲ್ಲೆ ನಡಸಿ, ತವರು ಮನೆಯಿಂದ ವರದಕ್ಷಿಣೆ ತರುವಂತೆ ಒತ್ತಾಯಿಸಿದ್ದ. ನಿರಾಕರಿಸಿದ್ದ ನನ್ನನ್ನು ಪತಿ ಮತ್ತು ಆತನ ಸಂಬಂಧಿಕರು ಬಲವಂತಾಗಿ ಮನೆಯಿಂದ ಹೊರ ಹಾಕಿದ್ದರು. ಅದಾದ ಬಳಿಕ ತವರು ಮನೆಯಲ್ಲೇ ಉಳಿಯುವಂತಾಗಿತ್ತು. ಮತ್ತೆ ಮನೆಗೆ ಕರೆಸಿಕೊಳ್ಳುವಂತೆ ಪಾಲಕರು ಸಾಕಷ್ಟು ಮನವಿ ಮಾಡಿದರು. ಹಲವು ಪಂಚಾಯಿತಿಗಳೂ ನಡೆದವು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಕಡೆಗೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸುವಂತಾಗಿತ್ತು ಎಂದು ಪತಿಯ ಅರ್ಜಿಗೆ ಸಲ್ಲಿಸಿದ್ದ ಆಕ್ಷೇಪಣೆಯಲ್ಲಿ ಪತ್ನಿ ತಿಳಿಸಿದ್ದರು. ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ ದಂಪತಿಗೆ ವಿಚ್ಛೇದನ ನೀಡಿ ಆದೇಶಿಸಿತ್ತು. ಇದರಿಂದ, ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಗಂಡನನ್ನು ಬಿಟ್ಟು ಇಬ್ಬಿಬ್ಬರ ಜತೆ ಲಿವಿಂಗ್ ಟುಗೆದರ್​; ಅವಳಿಗಾಗಿ ಒಬ್ಬನಿಂದ ಇನ್ನೊಬ್ಬನ ಕೊಲೆಯತ್ನ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + thirteen =
Remember me
