ಬೆಂಗಳೂರು:ನಿಯಮಬದ್ಧವಾಗಿ ಬಡ್ತಿ ಕೊಟ್ಟು ಕಾಯಂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್​ಟಿಒ) ನೇಮಕಾತಿ ನಡೆಸಬೇಕಾದ ಸಾರಿಗೆ ಇಲಾಖೆಯಲ್ಲೀಗ ಹೆಚ್ಚುವರಿ ‘ಪ್ರಭಾರ’ ನಿಯೋಜನೆ ಹೆಸರಲ್ಲಿ ಲಂಚಾವತಾರ ನಡೆಯುತ್ತಿದೆ. 3 ಅಥವಾ 6 ತಿಂಗಳ ಅವಧಿಗೆ ಇಂತಿಷ್ಟು ಹಣವೆಂದು ನಿಗದಿಪಡಿಸಿ ಅಡ್ಡದಾರಿಯಲ್ಲಿ ಹಿರಿಯ ಇನ್​ಸ್ಪೆಕ್ಟರ್​ಗಳಿಗೆ ಹೆಚ್ಚುವರಿ ಜವಾಬ್ದಾರಿ ವಹಿಸುತ್ತಿರುವ ಆರೋಪ ಕೇಳಿಬಂದಿದೆ.
ನಿವೃತ್ತಿಯಿಂದ ತೆರವಾಗಿರುವ ಎಆರ್​ಟಿಒ/ಆರ್​ಟಿಒ ಹುದ್ದೆಗಳಿಗೆ ಬೇರೆ ಬೇರೆ ಆರ್​ಟಿಒಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 7 ಹಿರಿಯ ಇನ್​ಸ್ಪೆಕ್ಟರ್​ಗಳು ಹಾಗೂ ಓರ್ವ ಇನ್​ಸ್ಪೆಕ್ಟರ್ ಅನ್ನು (ಮೋಟಾರು ವಾಹನ) ಹೆಚ್ಚುವರಿ ಪ್ರಭಾರಿಗಳಾಗಿ ನಿಯೋಜಿಸಿ ಸೋಮವಾರದಿಂದ (ಜೂ.1) ಜಾರಿಗೆ ಬರುವಂತೆ ಸಾರಿಗೆ ಇಲಾಖೆ ಆದೇಶ ಹೊರಡಿಸಿರುವುದು ಭ್ರಷ್ಟಾಚಾರದ ಅನುಮಾನಕ್ಕೆ ಕಾರಣವಾಗಿದೆ.
ನಿಯಮದ ಪ್ರಕಾರ ಖಾಲಿ ಉಳಿದಿರುವ ಆರ್​ಟಿಒ ಹುದ್ದೆಗೆ ಕಚೇರಿಯಲ್ಲಿ ಹಾಲಿ ಸೇವೆ ಸಲ್ಲಿಸುತ್ತಿರುವ ಎಆರ್​ಟಿಒಗಳಿಗೆ ಇನ್​ಚಾರ್ಜ್ ಕೊಡಬೇಕು.
ಒಂದು ವೇಳೆ ಎಆರ್​ಟಿಒ ಲಭ್ಯವಿಲ್ಲದಿದ್ದಲ್ಲಿ ಬಡ್ತಿ ಸಿಗುವವರೆಗೆ ಬೇರೆ ವಿಭಾಗದ ಆರ್​ಟಿಒಗೆ ಹೆಚ್ಚುವರಿ ಜವಾಬ್ದಾರಿ ವಹಿಸಬೇಕು. ಆದರೆ, ಇನ್​ಸ್ಪೆಕ್ಟರ್ ಆಗಿರುವವರಿಗೆ ನೇರವಾಗಿ ಆರ್​ಟಿಒ ಕಾರ್ಯನಿರ್ವಹಣಾ ಜವಾಬ್ದಾರಿ ನೀಡಲಾಗುತ್ತಿದೆ.
ಮಡಿಕೇರಿಗೆ ಎತ್ತಂಗಡಿ
ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ನೌಕರರ ಪರಿಸ್ಥಿತಿಯೂ ಇದೇ ಆಗಿದೆ. ಹಣ ಕೊಟ್ಟರೆ ಕೇಳಿದ ಜಾಗಕ್ಕೆ ವರ್ಗಾವಣೆ ಭಾಗ್ಯ ಸಿಗುತ್ತದೆ. ಇಲ್ಲವಾದರೆ ಉದ್ದೇಶಪೂರ್ವಕವಾಗಿ ವರ್ಗಾವಣೆ ಮಾಡಲಾಗುತ್ತದೆ. ಯಶವಂತಪುರ ಆರ್​ಟಿಒದಲ್ಲಿ ಕೆಲಸ ಮಾಡುತ್ತಿರುವ, ಶೀಘ್ರದಲ್ಲೇ ನಿವೃತ್ತಿಯಾಗಲಿರುವ ಪ್ರಥಮ ದರ್ಜೆ ಮಹಿಳಾ ಉದ್ಯೋಗಿಯನ್ನು (ಗಂಡ ತೀರಿಕೊಂಡ ನಂತರ ಸಿಕ್ಕ ಉದ್ಯೋಗ) ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಮಡಿಕೇರಿಗೆ ಟ್ರಾನ್ಸ್​ಫರ್ ಮಾಡಲಾಗಿತ್ತು. ಈಗ ಹಲವರ ಬಳಿ ಅವಲತ್ತ್ತುಕೊಂಡ ಬಳಿಕ ಎರವಲು ಸೇವೆ ಮೇಲೆ ಬೆಂಗಳೂರಿಗೆ ನಿಯೋಜಿಸಲಾಗಿದೆ.
ಸಂಬಂಧಿಸದವರ ಹಿಡಿತ
ಸಾರಿಗೆ ಇಲಾಖೆಯ ನೌಕರರಲ್ಲದ, ಇಲಾಖೆಗೆ ಸಂಬಂಧಿಸದ ವ್ಯಕ್ತಿಗಳು ಇಲಾಖೆ ಅಧಿಕಾರಿಗಳ ಕಚೇರಿಗಳಲ್ಲಿ ಓಡಾಡಿಕೊಂಡಿದ್ದಾರೆ. ಯಾರು ಎಲ್ಲಿಗೆ ವರ್ಗಾವಣೆ ಆಗಬೇಕು? ಎರವಲು ಸೇವೆ ಮೇಲೆ ಯಾರನ್ನು ಎಲ್ಲಿಗೆ ಕಳುಹಿಸಬೇಕು? ಯಾರಿಗೆ ಪ್ರಭಾರ ಹುದ್ದೆ ಕಲ್ಪಿಸಬೇಕು ಎಂಬುದನ್ನು ಈ ವ್ಯಕ್ತಿಗಳು ನಿರ್ಧರಿಸುತ್ತಾರೆ. ಈ ಹಿಂದೆ ಡಿಐಪಿಆರ್​ನಲ್ಲಿ ಕೆಲಸ ಮಾಡಿ, ಅಲ್ಲಿಂದ ಹೊರಬಂದಿರುವ ವ್ಯಕ್ತಿ ಇಲ್ಲಿ ಕಮಿಷನ್ ವ್ಯವಹಾರ ಕುದುರಿಸುತ್ತಿದ್ದಾರೆ ಎಂದು ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಹಣ ಕೊಟ್ಟವರಿಗಷ್ಟೇ ಅಧಿಕಾರ
ಮೂರು ತಿಂಗಳು, ಆರು ತಿಂಗಳು ಅಥವಾ 1 ವರ್ಷದ ಅವಧಿಗೆ ಈ ಪ್ರಭಾರ ಹುದ್ದೆ ಭಾಗ್ಯ ಕಲ್ಪಿಸಲು ಡೀಲ್ ನಡೆಯುತ್ತದೆ ಎಂಬ ಆರೋಪವಿದೆ. ಬೆಂಗಳೂರಿನಲ್ಲಿ 1 ವರ್ಷದ ಅವಧಿಗೆ ಆರ್​ಟಿಒ ಆಗಿ ಹೆಚ್ಚುವರಿ ಪ್ರಭಾರಿಯಾಗಿ ನಿಯೋಜನೆಗೊಳ್ಳಬೇಕಾದರೆ ಕನಿಷ್ಠ 5 ಲಕ್ಷ ರೂ.ನಿಂದ ಲಂಚದ ಬೇಡಿಕೆ ಶುರುವಾಗುತ್ತದೆ. ಗರಿಷ್ಠ ಎಷ್ಟು ಬೇಕಾದರೂ ಆಗಿರಬಹುದು. ಹಣ ಕೊಟ್ಟವರಿಗೆ ಅಧಿಕಾರ ಸಿಗುತ್ತದೆ ಎಂದು ಖುದ್ದು ಆರ್​ಟಿಒ ಕಚೇರಿ ಅಧಿಕಾರಿಗಳೇ ಮಾಹಿತಿ ನೀಡುತ್ತಾರೆ. ಆಡಳಿತದ ದಿಢೀರ್ ಬದಲಾವಣೆಯಿಂದಾಗಿ ಹಣ ಕೊಟ್ಟು ಪ್ರಭಾರಿಗಳಾದವರು ಕೆಲವೇ ದಿನಗಳಲ್ಲಿ ಅಥವಾ ತಿಂಗಳುಗಳಲ್ಲಿ ಹಿಂದಿನ ಹುದ್ದೆಗೆ ಮರಳಿ ಕೈ ಸುಟ್ಟಿಕೊಂಡಿರುವ ಉದಾಹರಣೆಗಳೂ ಇವೆ.
| ಕೀರ್ತಿನಾರಾಯಣ. ಸಿ.
ಕರೊನಾ ಜತೆಗೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್​ ಮೇಲೆ ನಿಸರ್ಗದ ಮುನಿಸು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
