ಬೆಂಗಳೂರು:ರಾಜ್ಯದಲ್ಲಿ ಕೊಬ್ಬರಿ ಖರೀದಿ ಕೇಂದ್ರದಲ್ಲಿ ನಡೆದಿರುವ ಅಕ್ರಮ ವಿಧಾನಸಭೆಯಲ್ಲಿ ಕಾವೇರಿದ ಚರ್ಚೆಗೆ ಕಾರಣವಾಯಿತು. ಬೋಗಸ್ ಖರೀದಿಯನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಶಾಸಕರು ಪಕ್ಷಾತೀತವಾಗಿ ಸರ್ಕಾರವನ್ನು ಆಗ್ರಹಿಸಿದರು.
ಕೊಬ್ಬರಿ ಖರೀದಿ ಕೇಂದ್ರದಲ್ಲಿನ ಅವ್ಯವಸ್ಥೆ ಕುರಿತು ಜೆಡಿಎಸ್ ನಿಲುವಳಿ ಮಂಡಿಸಿ ಚರ್ಚೆಗೆ ಅವಕಾಶ ಕೋರಿತು. ಆರಂಭದಲ್ಲಿ ಮಾತನಾಡಿದ ಶಾಸಕ ಬಾಲಕೃಷ್ಣ, ಎಚ್.ಡಿ. ರೇವಣ್ಣ, ಸುರೇಶ್ ಗೌಡ, ಶಿವಲಿಂಗೇಗೌಡ, ಷಡಾಕ್ಷರಿ ಸೇರಿ ಹಲವು ಶಾಸಕರು ಸಮಸ್ಯೆಯನ್ನು ಪ್ರಸ್ತಾಪಿಸಿ, ಖರೀದಿ ಕೇಂದ್ರದಲ್ಲಿ ಬೋಗಸ್ ನಡೆದಿದೆ. ಅರ್ಹ ರೈತರಿಗೆ ಇನ್ನೂ ಕೊಬ್ಬರಿ ಮಾರಾಟ ಮಾಡಲು ಸಾಧ್ಯವಾಗಿಲ್ಲ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಚ್.ಡಿ. ರೇವಣ್ಣ, ಕೊಬ್ಬರಿ ಖರೀದಿ ಕೇಂದ್ರದಲ್ಲಿನ ಅಕ್ರಮ ಖರೀದಿ ಮತ್ತು ಆರು ಮಂದಿ ಅಮಾನತು ಸಂಬಂಧಿಸಿದಂತೆ ವಿಜಯವಾಣಿ ಮಾಡಿದ್ದ ವರದಿಯನ್ನು ಪ್ರಸ್ತಾಪಿಸಿದರು.
ಜಟಾಪಟಿ: ನಿಯಮ 69ರಡಿ ಚರ್ಚೆಗೆ ಅವಕಾಶ ಸಿಗುತ್ತಿದ್ದಂತೆ ಎಚ್.ಡಿ. ರೇವಣ್ಣ ಮಾತನಾಡಿ, ಒಂಬತ್ತು ಜಿಲ್ಲೆಗಳ ಪ್ರಮುಖ ಬೆಳೆ ತೆಂಗು. ಆದರೆ, ಕಳೆದ ಮೂರ್ನಾಲ್ಕು ತಿಂಗಳಿಂದ ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಇನ್ನೂ ಒಂದೂವರೆ ಲಕ್ಷ ಮೆಟ್ರಿಕ್ ಟನ್ ಬೆಳೆ ಖರೀದಿಯಾಗದೇ ಉಳಿದಿದೆ ಎಂದರು.
ಹಾಗೆಯೇ, ವಿಧಾನಸಭೆ ಚುನಾವಣೆಗೂ ಮುನ್ನ ಕೊಬ್ಬರಿ ಬೆಂಬಲ ಬೆಲೆ ಸಂಬಂಧ ಪ್ರತಿಭಟನೆ ನಡೆಸಿದ್ದಾಗ ಕ್ವಿಂಟಾಲ್​ಗೆ 15 ಸಾವಿರ ರೂ. ಕೊಡಿಸುವುದಾಗಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದರು. ಅದನ್ನು ಇದುವರೆಗೆ ಕೊಟ್ಟಿಲ್ಲ ಎಂದು ಆರೋಪಿಸಿದರು. ಇದಕ್ಕೆ ಶಿವಲಿಂಗೇಗೌಡ ಹಾಗೂ ಷಡಾಕ್ಷರಿ ಆಕ್ಷೇಪಿಸಿದರು.
ಚುನಾವಣೆ ಸಂದರ್ಭದಲ್ಲೂ ಎಲ್ಲರೂ ಭರವಸೆ ಕೊಟ್ಟಿರುತ್ತೇವೆ. ಮೋದಿ ಏನು ಎಲ್ಲರ ಖಾತೆಗೆ 15 ಲಕ್ಷ ರೂ. ಹಾಕಿದ್ದಾರೆಯೇ? ಎಂದು ಷಡಾಕ್ಷರಿ ಪ್ರಶ್ನಿಸಿದಾಗ, ರೇವಣ್ಣ ಸಿಟ್ಟಾದರು. ನಿಮಗೆ ನಾಚಿಕೆ ಆಗಬೇಕು, 15 ಸಾವಿರ ರೂ. ಕೊಡುತ್ತೇವೆಂದು ಚುನಾವಣೆಗೋಸ್ಕರ ಹೇಳಿದ್ದೆವು. ನಮ್ಮ ಕೈಯಿಂದ ಮಾಡಲು ಸಾಧ್ಯವಿಲ್ಲ ಎಂದು ಬಹಿರಂಗವಾಗಿ ಹೇಳಿ ಹಾಗಿದ್ದರೆ… ಎಂದು ಸವಾಲು ಹಾಕಿದರು.
ಈ ವೇಳೆ ಮಾತನಾಡಿದ ಶಿವಲಿಂಗೇಗೌಡ, ಕೇಂದ್ರ ಸರ್ಕಾರ 11,750 ರೂ. ಇದ್ದ ಬೆಂಬಲ ಬೆಲೆಗೆ ಕೇವಲ 250 ರೂ. ಸೇರಿಸಿ 12 ಸಾವಿರ ರೂ. ಮಾಡಿದೆ. ನಮ್ಮ ರಾಜ್ಯ ಸರ್ಕಾರವು 1,500 ರೂ. ಸಹಾಯಧನ ಕೊಡುತ್ತಿದೆ. ಇದರ ಬಗ್ಗೆ ಯಾರೂ ರ್ಚಚಿಸುವುದೇ ಇಲ್ಲ. ಡಿ.ಕೆ. ಶಿವಕುಮಾರ್ ಹೆಸರು ಪ್ರಸ್ತಾಪಿಸಿ ಸುಮ್ಮನೆ ರಾಜಕೀಯ ಮಾಡಬೇಡಿ ಎನ್ನುತ್ತಿದ್ದಂತೆ ಕೈ- ಜೆಡಿಎಸ್ ಶಾಸಕರ ನಡುವೆ ವಾಗ್ವಾದ ಶುರುವಾಯಿತು.
ಪರಿಸ್ಥಿತಿ ಬೇರೆ ದಿಕ್ಕಿನತ್ತ ಹೋಗುವುದನ್ನು ಗಮನಿಸಿದ ಡಿ.ಕೆ. ಶಿವಕುಮಾರ್, ಇದೊಂದು ಸೂಕ್ಷ್ಮ ವಿಚಾರ. ಇದರ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವೂ ತೆಗೆದುಕೊಳ್ಳಬೇಕು, ನಾವೂ ತೆಗೆದುಕೊಳ್ಳಬೇಕು ಎಂದರು.
ಜತೆಗೆ ಚುನಾವಣೆ ಸಂದರ್ಭದಲ್ಲಿ 15 ಸಾವಿರ ರೂ. ಕೊಡಿಸುವುದು ನಮ್ಮ ಬದ್ಧತೆ ಎಂದಿದ್ದೆ. ಬುಧವಾರ ವಿವರವಾದ ಸಭೆ ಕರೆದು ತೀರ್ಮಾನ ಮಾಡುವ ಭರವಸೆ ನೀಡಿದರು.
ಪೈಪೋಟಿ-ಶಾರ್ಟ್​ಸರ್ಕ್ಯೂಟ್!:ಕೊಬ್ಬರಿ ಖರೀದಿ ಕೇಂದ್ರ ವಿಚಾರವಾಗಿ ಎಚ್.ಡಿ. ರೇವಣ್ಣ ಮಾತನಾಡಲು ನಿಂತಾಗ ತಮಗೂ ಅವಕಾಶ ಕೊಡಬೇಕೆಂದು ಶಿವಲಿಂಗೇಗೌಡ ಪಟ್ಟುಹಿಡಿದರು. ಈ ವೇಳೆ ರೇವಣ್ಣ ಬೆನ್ನಿಗೆ ನಿಂತ ಬಿಜೆಪಿಯ ಸಿ.ಸಿ. ಪಾಟೀಲ್, ತಾವೇ ಮೊದಲು ಮಾತನಾಡಿದ್ದೆಂದು ಮಾಧ್ಯಮಗಳಲ್ಲಿ ಬರಬೇಕೆಂಬ ಕಾರಣದಿಂದ ಶಿವಲಿಂಗೇಗೌಡ ಮಾತನಾಡುತ್ತಾರೆ. ರೈತರ ಪರವಾಗಿ ಮಾತನಾಡುವ ರೇವಣ್ಣಗೆ ಮೊದಲು ಅವಕಾಶ ಕೊಡಬೇಕು ಎಂದು ಕಾಲೆಳೆದರು. ಈ ಮಾತನ್ನು ಗಮನಿಸಿದ ಸ್ಪೀಕರ್ ಖಾದರ್, ಎಲ್ಲಿ ಶಾರ್ಟ್ ಸರ್ಕ್ಯೂಟ್ ಆಗುತ್ತೋ ಗೊತ್ತಿಲ್ಲ. ನೀವು ಬೇರೆ ಸುಮ್ಮಿರಿ ಮಾರಾಯ್ರೇ ಎಂದು ನಗುತ್ತಾ ಸುಮ್ಮನಾಗಿಸಿದರು.
ಕೊಬ್ಬರಿ ಖರೀದಿ ಕೇಂದ್ರದಲ್ಲಿ ಅಕ್ರಮವಾಗಿದೆ ಎಂದು ಪತ್ರಿಕೆಯಲ್ಲಿ ವರದಿ ಬಂದಿದೆ. ಆರು ಮಂದಿ ಅಮಾನತಾಗಿದ್ದಾರೆ. ಅರ್ಹ ರೈತರ ಕೊಬ್ಬರಿ ಖರೀದಿಯಾಗಬೇಕು.
| ಎಚ್.ಡಿ. ರೇವಣ್ಣ ಜೆಡಿಎಸ್ ಶಾಸಕ
ಬೋಗಸ್ ಖರೀದಿಯನ್ನು ರದ್ದುಪಡಿಸಿ, ನೈಜ ರೈತರಿಂದ ಕೊಬ್ಬರಿ ಖರೀದಿ ಮಾಡಬೇಕು. ಹೆಚ್ಚುವರಿ ಕೊಬ್ಬರಿ ಖರೀದಿಗೂ ಅನುಮತಿ ಕೊಡಬೇಕು.
| ಸುರೇಶ್ ಗೌಡ ಬಿಜೆಪಿ ಶಾಸಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 9 =
Remember me
