| ಕೀರ್ತಿನಾರಾಯಣ ಸಿ. ಬೆಂಗಳೂರು
ಭಾರತ್ ಸ್ಟೇಜ್-4 (ಬಿಎಸ್-4) ಶ್ರೇಣಿ ವಾಹನಗಳ ಮಾರಾಟಕ್ಕೆ ಸುಪ್ರೀಂಕೋರ್ಟ್ ಕೊಟ್ಟಿದ್ದ ಗಡುವು ಮೀರಿ ಶೋರೂಂಗಳು ಅನಧಿಕೃತವಾಗಿ ಮಾರಾಟ ಮಾಡಿರುವ ಸಂಗತಿ ಬೆಳಕಿಗೆ ಬಂದ ಬೆನ್ನಲ್ಲೇ ಗ್ರಾಹಕರು ವಾಹನಗಳ ನೋಂದಣಿ ಮಾಡಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಂಗಳೂರಿನ ಕೆಲ ಶೋರೂಂಗಳು ಲಾಕ್​ಡೌನ್ ಸಂದರ್ಭದಲ್ಲೇ ಅನಧಿಕೃತವಾಗಿ ವಾಹನಗಳನ್ನು ಮಾರಾಟ ಮಾಡಿದ್ದರೆ ಮತ್ತೆ ಕೆಲ ಶೋರೂಂಗಳು ದಾಸ್ತಾನು ವಾಹನ ಗಳನ್ನು ಖಾಲಿ ಮಾಡುವ ಉದ್ದೇಶದಿಂದ ಜನವರಿ, ಫೆಬ್ರವರಿಯಲ್ಲಿ ತಾತ್ಕಾ ಲಿಕ ನೋಂದಣಿ ಸಂಖ್ಯೆಯನ್ನೂ ನೀಡದೆ ಗ್ರಾಹಕರ ಕೈಗೆ ವಾಹನ ಕೊಟ್ಟು ಕಳುಹಿಸಿವೆ. ಈ ವಂಚನೆಯಲ್ಲಿ ಶೋರೂಂ, ಸಬ್ ಡೀಲರ್​ಗಳು ಹಾಗೂ ವಿಮಾ ಕಂಪನಿಗಳೂ ಭಾಗಿಯಾಗಿರುವುದು ಬಹಿರಂಗವಾಗಿದೆ.
ಈ ದಂಧೆ ಬೆಳಕಿಗೆ ಬರುತ್ತಲೇ ಸುಪ್ರೀಂಕೋರ್ಟ್ ಈ ವಾಹನಗಳ ನೋಂದಣಿಗೆ ಅವಕಾಶ ನೀಡದಂತೆ ಆದೇಶ ನೀಡಿರುವುದರಿಂದ ಗ್ರಾಹಕರು ಆರ್​ಟಿಒ ಕಚೇರಿಗಳಲ್ಲಿ ವಾಹನ ರಿಜಿಸ್ಟ್ರೇಷನ್ ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಅನಧಿಕೃತ ಮಾರಾಟ ಶೋರೂಂಗಳ ಅಪರಾಧ ವಾಗಿರುವುದರಿಂದ ವಾಹನ ಹಿಂಪಡೆದು ಗ್ರಾಹಕರಿಗೆ ಹಣ ಹಿಂದಿರುಗಿಸುವಂತೆ ಆರ್​ಟಿಒ ಅಧಿಕಾರಿಗಳು, ಶೋರೂಂಗಳಿಗೆ ಸೂಚಿಸಿದ್ದಾರೆ.
ಸರ್ಕಾರಕ್ಕೆ ನಷ್ಟ
ಟ್ರೇಡ್ ಲೈಸೆನ್ಸ್ ಪಡೆದ ಶೋರೂಂನಿಂದ ಸಬ್ ಡೀಲರ್​ಶಿಪ್ ಹೆಸರಲ್ಲಿ ಹಲವು ಕಡೆ ಶೋರೂಂ ತೆಗೆಯಲಾಗುತ್ತಿದೆ. ನಿಯಮದ ಪ್ರಕಾರ ಸಬ್ ಡೀಲರ್​ಶಿಪ್​ಗೆ ಅವಕಾಶವಿಲ್ಲ. ಇದರಿಂದ ಸರ್ಕಾರಕ್ಕೆ ತೆರಿಗೆ, ಅನುಮತಿ ಶುಲ್ಕ ಸೇರಿ ಇನ್ನಿತರ ವಹಿವಾಟಿನಿಂದ ಕೋಟ್ಯಂತರ ರೂ. ನಷ್ಟವಾಗುತ್ತದೆ. ಇನ್ನಾದರೂ ಈ ಬಗ್ಗೆ ಸಾರಿಗೆ ಇಲಾಖೆ ಗಮನಹರಿಸಲು ಅಧಿಕಾರಿಗಳ ಆಗ್ರಹ.
ನೋಂದಣಿಗೆ ಸುಪ್ರೀಂ ತಡೆ
ಮಾ.22 ಮೊದಲ ಲಾಕ್​ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಬಿಎಸ್ 4 ವಾಹನಗಳ ಮಾರಾಟಕ್ಕಿದ್ದ ಮಾ.31ರ ಗಡುವನ್ನು ಸುಪ್ರೀಂಕೋರ್ಟ್ 10 ದಿನ ವಿಸ್ತರಿಸಿತ್ತು. ಆದರೆ, ಲಾಕ್​ಡೌನ್ ನಿಯಮ ಉಲ್ಲಂಘಿಸಿ ದೇಶಾದ್ಯಂತ ಲಕ್ಷಾಂತರ ವಾಹನ ಮಾರಾಟ ಮಾಡಿರುವುದು ಸುಪ್ರೀಂಕೋರ್ಟ್ ಗಮನಕ್ಕೆ ಬಂದಿದ್ದರಿಂದ ಹೆಚ್ಚುವರಿ ಅವಧಿಯಲ್ಲಿ ಮಾರಾಟ ಮಾಡಿರುವ ವಾಹನಗಳ ನೋಂದಣಿಗೆ ತಡೆ ಕೊಟ್ಟಿದೆ.
ಒಂದೇ ಕಡೆ 18 ಗಾಡಿ ಸೇಲ್!
ಬೆಂಗಳೂರಿನ ಆರ್​ಎಂವಿ 2ನೇ ಹಂತದಲ್ಲಿರುವ ಶೋರೂಂನ ಸಬ್ ಡೀಲರ್ ಒಂದರಲ್ಲೇ 18ಕ್ಕೂ ಹೆಚ್ಚು ವಾಹನಗಳನ್ನು ಅನಧಿಕೃತವಾಗಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಮಾರಾಟವಾಗಿರುವ ಎಲ್ಲ ವಾಹನಗಳು ಬಿಎಸ್ 4 ಇಂಜಿನ್ ಆಗಿದ್ದು, ರಿಜಿಸ್ಟ್ರೇಷನ್ ಆಗಿಲ್ಲ. ಇದೇ ರೀತಿ ಪ್ರತಿ ಶೋರೂಂನಲ್ಲೂ ನಿಯಮ ಉಲ್ಲಂಘಿಸಿ ಸಾವಿರಾರು ವಾಹನ ಮಾರಾಟ ಮಾಡಿರುವುದಾಗಿ ಆರ್​ಟಿಒ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೋಂದಣಿ ಇಲ್ಲದಿದ್ರೆ ಏನು?
ಬಿಎಸ್ 6 ಇನ್ಶೂರೆನ್ಸ್
ದೊಡ್ಡಬಿದರಕಲ್ಲಿನ ಎಂ.ಎಸ್.ಮೀನಾ ಎಂಬುವರು ಸುಜ್ಹುಕಿ ಆಕ್ಸೆಸ್ ಸ್ಕೂಟರ್ ಖರೀದಿಸಿದ್ದಾರೆ. ಶೋರೂಂನಿಂದ ತಾತ್ಕಾಲಿಕ ನೋಂದಣಿ ಸಂಖ್ಯೆಯನ್ನೂ ಕೊಟ್ಟಿಲ್ಲ. ಆದಾಗ್ಯೂ ರಿಜಿಸ್ಟ್ರೇಷನ್ ಇಲ್ಲದೆಯೇ ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್​ನಲ್ಲಿ ವಿಮಾ ಪಾಲಿಸಿಯನ್ನು ಶೋರೂಂ ಮಾಡಿಸಿಕೊಟ್ಟಿದೆ. ಆದರೆ, ಬಿಎಸ್-4 ಇಂಜಿನ್ ಬದಲು ಪಾಲಿಸಿಯಲ್ಲಿ ಬಿಎಸ್-6 ಎಂದು ನಮೂದಿಸಿ ಎಡವಟ್ಟು ಮಾಡಲಾಗಿದೆ. ರಿಜಿಸ್ಟ್ರೇಷನ್ ಸಂಖ್ಯೆ ಇಲ್ಲದೆಯೇ ಸಾಲ ಸೌಲಭ್ಯವೂ ಸಿಕ್ಕಿದೆ. ಆರ್​ಟಿಒ ಅಧಿಕಾರಿಗಳು ವಾಹನ ಜಪ್ತಿ ಮಾಡಿ ವಿಚಾರಿಸಿದಾಗ ಗೋಲ್ಮಾಲ್ ಬೆಳಕಿಗೆ ಬಂದಿದೆ.
ಏನಿದು ಬಿಎಸ್-6?
ವಾಹನ ಉಗುಳುವ ಹೊಗೆಯಲ್ಲಿರುವ ಮಾಲಿನ್ಯಕಾರಕ ಪ್ರಮಾಣಕ್ಕೆ ಮಿತಿ ಹೇರುವ ಕ್ರಮಕ್ಕೆ ಬಿಎಸ್ ಎನ್ನಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ಇದನ್ನು ಯೂರೋ ಸ್ಟೇಜ್ ಎನ್ನಲಾಗುತ್ತದೆ. ಭಾರತದಲ್ಲಿ ಭಾರತ್ ಸ್ಟೇಜ್ ಎಂದು ಕರೆಯಲಾಗುತ್ತದೆ. 2000ದಲ್ಲಿ ಬಿಎಸ್-1 ಜಾರಿಗೆ ಬಂತು. ಹಂತಹಂತವಾಗಿ ಬಿಎಸ್ 2, ಬಿಎಸ್ 3, ಬಿಎಸ್ 4 ಜಾರಿಯಾಗಿತ್ತು. ವಾಯುಮಾಲಿನ್ಯ ಪ್ರಮಾಣವನ್ನು ಇಳಿಕೆ ಮಾಡುವ ಉದ್ದೇಶದಿಂದ ಬಿಎಸ್ 5 ಕೈಬಿಟ್ಟು ನೇರವಾಗಿ ಬಿಎಸ್ 6 ಜಾರಿಗೆ ತರಲಾಗಿದೆ.
ಲ್ಯಾಂಬೋರ್ಗಿನಿ ಕಾರು ರಹಸ್ಯ ಬಯಲು: 5 ವರ್ಷದ ಬಳಿಕ ವಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 11 =
Remember me
