| ಅನುರಾಗ್ ಬೆಹರ್
ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ರೂಪಿಸಲಾದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2023 (ನ್ಯಾಷನಲ್ ಕರಿಕ್ಯುಲಮ್ ಫ್ರೇಮ್ರ್ಕ್- ಎನ್​ಸಿಎಫ್), ಒಟ್ಟು ಐದು ‘ಶಿಕ್ಷಣದ ಗುರಿಗಳನ್ನು’ ಒಳಗೊಂಡಿವೆ. ಅದರಲ್ಲಿ ರ್ತಾಕ ಆಲೋಚನೆ ಮತ್ತು ಸ್ವತಂತ್ರ ಚಿಂತನೆ, ಆರೋಗ್ಯ ಮತ್ತು ಯೋಗಕ್ಷೇಮ, ಪ್ರಜಾಸತ್ತಾತ್ಮಕ ಮತ್ತು ಸಾಮುದಾಯಿಕ ಪಾಲ್ಗೊಳ್ಳುವಿಕೆ, ಆರ್ಥಿಕ ಮತ್ತು ಸಾಂಸ್ಕೃತಿಕ ಭಾಗವಹಿಸುವಿಕೆ ಇವೆ. ಪಠ್ಯಕ್ರಮವು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕಾಗಿರುವ ಜ್ಞಾನ, ಸಾಮರ್ಥ್ಯ, ಮೌಲ್ಯ ಮತ್ತು ಮನೋಭಾವಗಳನ್ನು ಆಯ್ಕೆ ಮಾಡಿಕೊಳ್ಳಲು ಈ ಗುರಿಗಳು ಮಾರ್ಗದರ್ಶನ ನೀಡುತ್ತವೆ. ಪ್ರಸ್ತುತ ನಾವು ಈ ಮೌಲ್ಯಗಳು ಮತ್ತು ಮನೋಭಾವಗಳು ಯಾವವು ಎಂಬುದನ್ನು ನೋಡೋಣ.
ಈ ಐದು ಗುರಿಗಳನ್ನು ಸಾಧಿಸಲು ಎಲ್ಲ ವಿದ್ಯಾರ್ಥಿಗಳಲ್ಲಿ ಅಂತರ್-ಸಂಬಂಧಿತ ಮತ್ತು ಪೂರಕವಾದ ವಿವಿಧ ಮೌಲ್ಯಗಳನ್ನು ಬೆಳೆಸುವ ಅಗತ್ಯವಿದೆ. ಪ್ರಾಯೋಗಿಕ ಉದ್ದೇಶಗಳಿಗಾಗಿ ಈ ಮೌಲ್ಯಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಮೊದಲನೆಯದು, ನೈತಿಕ ಮತ್ತು ಸದಾಚಾರಕ್ಕೆ ಸಂಬಂಧಿಸಿದ ಮೌಲ್ಯಗಳು; ಇವು ಸಹಾನುಭೂತಿ ಮತ್ತು ಕಾಳಜಿ, ಸಂವೇದನೆ ಮತ್ತು ಆರೈಕೆ, ನಿಷ್ಠೆ ಮತ್ತು ಪ್ರಾಮಾಣಿಕತೆ, ಧೈರ್ಯ ಮತ್ತು ಪುಟಿದೇಳುವ ಗುಣಗಳನ್ನು ಒಳಗೊಂಡಿವೆ.
ಎರಡನೆಯದು, ಪ್ರಜಾಸತ್ತಾತ್ಮಕ ದೃಷ್ಟಿಕೋನವನ್ನು ಒಳಗೊಂಡ ಮೌಲ್ಯಗಳು; ಸ್ವಾಯತ್ತೆ ಮತ್ತು ಸ್ವಾತಂತ್ರ್ಯಕ್ಕೆ ಬದ್ಧತೆ; ಸಮಾನತೆ, ನ್ಯಾಯ; ವೈವಿಧ್ಯ, ಬಹುತ್ವ ಮತ್ತು ಒಳಗೊಳ್ಳುವಿಕೆಯನ್ನು ಅಳವಡಿಸಿಕೊಳ್ಳುವುದು; ಮಾನವೀಯತೆ ಮತ್ತು ಭ್ರಾತೃತ್ವ ಮನೋಭಾವ; ಸಾಮಾಜಿಕ ಜವಾಬ್ದಾರಿ ಮತ್ತು ಸೇವಾ ಮನೋಭಾವ. ಮೂರನೆಯ ಗುಂಪು, ಜ್ಞಾನ ಮತ್ತು ಸತ್ಯದ ಬಗ್ಗೆ ನಾವು ಹೊಂದಿರುವ ಮೌಲ್ಯಗಳು- ಜ್ಞಾನಮೀಮಾಂಸೆ ಎಂದು ಕರೆಯುವ, ವೈಜ್ಞಾನಿಕ ಮನೋಭಾವ; ಸಾಕ್ಷ್ಯಾಧಾರಿತ ಚಿಂತನೆ; ವಿವಿಧ ಕ್ಷೇತ್ರಗಳಲ್ಲಿ ಜ್ಞಾನ ಮತ್ತು ಸತ್ಯದ ಮೂಲಗಳನ್ನು ಗುರುತಿಸುವುದು; ಸತ್ಯದ ಅನ್ವೇಷಣಾ ವಿಧಾನಗಳೆಡೆಗೆ ದೃಢ ನಿಷ್ಠೆ ಹೊಂದಿರುವುದು.
ಈ ಮೌಲ್ಯಗಳ ಜೊತೆಗೆ, ವಿದ್ಯಾರ್ಥಿಗಳಲ್ಲಿ ಕೆಲವು ಮನೋಭಾವಗಳನ್ನು ಬೆಳೆಸಲು ಎನ್​ಸಿಎಫ್ ಶಾಲಾ ಪಠ್ಯಕ್ರಮಕ್ಕೆ ಮಾರ್ಗದರ್ಶನ ನೀಡುತ್ತದೆ. ಅದರಲ್ಲಿ ಮೊದಲನೆಯದು, ಧನಾತ್ಮಕ ಕಾರ್ಯನೀತಿ ಅಂಶಗಳಾದ ಪ್ರಾಮಾಣಿಕತೆ, ವಿವೇಚನೆ ಮತ್ತು ಸುಸ್ಥಿರತೆಯಿಂದ ಕೂಡಿದ ಕೆಲಸ. ಎರಡನೆಯದು, ಕುತೂಹಲ ಮತ್ತು ಅಚ್ಚರಿ. ಇದು ವಿದ್ಯಾರ್ಥಿಗಳಲ್ಲಿ ಜೀವನದುದ್ದಕ್ಕೂ ಕಲಿಯುವ ಆಸಕ್ತಿಯನ್ನು ಉಳಿಸುತ್ತದೆ. ಇವೆಲ್ಲದರೊಂದಿಗೆ ವಿಶ್ವಪ್ರಜೆಯಾಗಿರುವ ಜೊತೆಗೆ ಭಾರತದ ಬೇರಿನೊಂದಿಗೆ ಗುರುತಿಸಿಕೊಳ್ಳುವಂತೆ ಮಾಡುವುದು.
ಇದು ಶಾಲೆಗಳು ಮತ್ತು ಶಿಕ್ಷಣ ವ್ಯವಸ್ಥೆ ಅನೇಕ ಪ್ರಮುಖ ಅಂಶಗಳೊಂದಿಗೆ ಸಾಮರಸ್ಯದಿಂದ ಕಾರ್ಯನಿರ್ವಹಿಸುವ ವಿಧಾನ. ಪಠ್ಯವಿಷಯ, ಬೋಧನಾವಿಧಾನ ಮತ್ತು ಮೌಲ್ಯಮಾಪನವನ್ನು ಒಳಗೊಂಡಂತೆ, ಶಾಲೆಯ ಎಲ್ಲ ಹಂತ ಮತ್ತು ವಿಷಯಗಳಿಗೆ ಸಂಬಂಧಿಸಿದಂತೆ, ಕಲಿಕೆಯ ಮಾನದಂಡಗಳು ಹಾಗೂ ಪ್ರಕ್ರಿಯೆಯ ಸಮಗ್ರ ಭಾಗವಾಗಿ ಮೌಲ್ಯಗಳು ಮತ್ತು ಮನೋಭಾವವನ್ನು ಬೆಳೆಸುವುದು ಅಗತ್ಯ. ಉದಾಹರಣೆಗೆ, ಸಾಹಿತ್ಯದ ಮೂಲಕ ಸಹಾನುಭೂತಿ ಅಥವಾ ಸಾಮಾಜಿಕ ವಿಜ್ಞಾನದ ಮೂಲಕ ಸಾಕ್ಷ್ಯಾಧಾರಿತ ಚಿಂತನೆಯನ್ನು ಬೆಳೆಸುವುದು. ನಿಜಜೀವನದಲ್ಲಿ ಮೌಲ್ಯಗಳನ್ನು ವಿದ್ಯಾರ್ಥಿಗಳು ತಾವೇ ಅನುಭವಿಸಿ ಆಚರಣೆಗೆ ತಂದಾಗ ಕಲಿಯಲು ಸಾಧ್ಯವಾಗುತ್ತದೆ. ಶಾಲಾ ಸಂಸ್ಕೃತಿ ಮತ್ತು ತರಗತಿಯ ಪ್ರಕ್ರಿಯೆಗಳು ಮಕ್ಕಳು ಬೆಳೆದಂತೆ ಅವರ ಮೇಲೆ ಬೀರುವ ಪರಿಣಾಮಗಳು ವಿಭಿನ್ನವಾಗಿರುವುದರಿಂದ ಅವುಗಳನ್ನು ಸೂಕ್ತವಾಗಿ ಯೋಜಿಸಬೇಕಾಗುತ್ತದೆ. ಉದಾಹರಣೆಗೆ, ಚಿಕ್ಕಮಕ್ಕಳಿಗೆ ಅನುಸರಿಸಲು ಮಾದರಿ ನಡವಳಿಕೆ ಅಗತ್ಯವಿದ್ದರೆ, ದೊಡ್ಡ ಮಕ್ಕಳು ಯಾವುದೇ ವಿಷಯಕ್ಕೆ ಸಂಬಂಧಿಸಿದ ಕಾರಣಗಳನ್ನು ಆಲೋಚಿಸುತ್ತ ಹೋಗುತ್ತಾರೆ.
ಪಠ್ಯಕ್ರಮವು, ಈ ಪ್ರತಿಯೊಂದು ಪ್ರಕ್ರಿಯೆ ಮತ್ತು ವಿಷಯಗಳು ವಿಭಿನ್ನ ಮೌಲ್ಯಗಳ ಮೇಲೆ ಬೇರೆ ಬೇರೆ ರೀತಿಯ ಪರಿಣಾಮಕ್ಕೆ ಕಾರಣವಾಗುವುದನ್ನು ಪರಿಗಣಿಸಬೇಕಾಗುತ್ತದೆ. ಉದಾಹರಣೆಗೆ, ತರಗತಿಯಲ್ಲಿ ನಡೆಸಲಾಗುವ ನಿರಂತರ ಸಂವಾದ ಮತ್ತು ಚರ್ಚೆಯು ಪ್ರಜಾಸತ್ತಾತ್ಮಕ, ರ್ತಾಕ ಚಿಂತನೆ ಮತ್ತು ಸಂವೇದನೆಯನ್ನು ವಿದ್ಯಾರ್ಥಿಗಳಲ್ಲಿ ಅಭಿವೃದ್ಧಿಪಡಿಸುತ್ತದೆ. ಹಾಗೆಯೇ ಸಹನೆ, ಪ್ರಾಮಾಣಿಕತೆ ಮತ್ತು ಧೈರ್ಯ ಮುಂತಾದ ಸದ್ಗುಣಗಳನ್ನು ಕ್ರೀಡೆಗಳು ಬೆಳೆಸಿದರೆ ಜ್ಞಾನಕ್ಕೆ ಸಂಬಂಧಿಸಿದ ಮೌಲ್ಯಗಳನ್ನು ಬೆಳೆಸುವಲ್ಲಿ ಸಮಾಜ ವಿಜ್ಞಾನ, ವಿಜ್ಞಾನ ಮತ್ತು ಗಣಿತ ಮಹತ್ತರ ಪಾತ್ರ ವಹಿಸುತ್ತವೆ.
ಮೌಲ್ಯಗಳ ಮೇಲೆ ಅಧ್ಯಯನ ಸಾಮಗ್ರಿ ಸ್ಪಷ್ಟವಾಗಿ ಪ್ರಭಾವ ಬೀರುತ್ತದೆ. ಒಂಬತ್ತನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ‘ಸದಾಚಾರ ಮತ್ತು ನೈತಿಕ ರ್ತಾಕತೆ’ಯ ಘಟಕವನ್ನು ಪರಿಚಯಿಸಲಾಗಿದೆ. ಹಾಗೆಯೇ ಶಾಲೆಗಳು ಕೂಡ ಯಾವ ನಿರ್ದಿಷ್ಟ ಮೌಲ್ಯಗಳನ್ನು ವಿದ್ಯಾರ್ಥಿಗಳೊಂದಿಗೆ ನೇರವಾಗಿ ರ್ಚಚಿಸಬೇಕು ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ಉದಾಹರಣೆಗೆ, ಸಮಾಜ ವಿಜ್ಞಾನದ ಕೆಲವು ತರಗತಿಗಳಲ್ಲಿ ಸಹಾನುಭೂತಿಯನ್ನು ಗಮನದಲ್ಲಿಟ್ಟುಕೊಂಡು ಹಕ್ಕು ಮತ್ತು ಕರ್ತವ್ಯಗಳು ಒಂದಕ್ಕೊಂದು ಹೇಗೆ ಪೂರಕ ಎಂಬುದರ ಕುರಿತು ಗಮನಹರಿಸಬಹುದು. ಈ ರೀತಿಯ ವಿಷಯಗಳನ್ನು ಕಲಿಸಲು ಶಿಕ್ಷಕರಿಗೆ ತರಬೇತಿಯ ಅಗತ್ಯವಿರುತ್ತದೆ ಮತ್ತು ಅಂಥ ವಿಷಯಗಳನ್ನು ಕಲಿಸಲು ನೀರಸವಲ್ಲದ, ಆಸಕ್ತಿಕರ ಬೋಧನಾ-ಕಲಿಕೆ ಸಾಮಗ್ರಿಗಳ ಅಗತ್ಯವಿದ್ದು ಅವುಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ.
ಮೌಲ್ಯಗಳಲ್ಲಿ ಘರ್ಷಣೆಯಿರುವುದು ವಾಸ್ತವ ಮತ್ತು ಈ ಕುರಿತು ಎನ್​ಸಿಎಫ್ ನೇರವಾಗಿ ಗಮನ ಹರಿಸುತ್ತದೆ. ಪಠ್ಯಕ್ರಮದ ಭಾಗವಾಗಿ ಶಾಲೆಯಲ್ಲಿ ಪೋ›ತ್ಸಾಹಿಸಲಾಗುವ ಮೌಲ್ಯಗಳು ಹೊರಗೆ ಆಚರಣೆಯಲ್ಲಿ ಇರಲಾರದು ಹಾಗೂ ಇವುಗಳಿಗೆ ತಡೆಯೊಡ್ಡುವ ಪ್ರಯತ್ನಗಳು ನಡೆಯಬಹುದು. ಉದಾಹರಣೆಗೆ, ಶಾಲೆಯಲ್ಲಿ ಅನುಸರಿಸುವ ಪ್ರಮುಖ ಮೌಲ್ಯಗಳಲ್ಲಿ ಸಮಾನತೆಯೂ ಒಂದು. ಆದರೆ ಸಮುದಾಯಗಳಲ್ಲಿ ಲಿಂಗ, ಜಾತಿ, ಅಥವಾ ಇತರ ವಿಚಾರಗಳಲ್ಲಿ ತಾರತಮ್ಯ ಮೂಡಬಹುದು. ಹಾಗಾಗಿ, ಮಾನವ ಸಮಾಜದಲ್ಲಿ ಅಂತಹ ಘರ್ಷಣೆಯನ್ನು ಎದುರಿಸುವುದು ಅನಿವಾರ್ಯವಾದ ಕಾರಣ, ಪರಸ್ಪರ ಮಾತುಕತೆಯ ಮೂಲಕ ಮತ್ತು ಸಹಾನುಭೂತಿಯ ನಡವಳಿಕೆಯ ಮಾರ್ಗವನ್ನು ಎನ್​ಸಿಎಫ್ ಸೂಚಿಸುತ್ತದೆ.
ವಿದ್ಯಾರ್ಥಿಗಳಲ್ಲಿ ಮೌಲ್ಯಗಳು ಮತ್ತು ಸ್ವಭಾವಗಳನ್ನು ಬೆಳೆಸುವ ಜವಾಬ್ದಾರಿ ಶಾಲೆ ಮತ್ತು ಸಮುದಾಯಗಳ ಮೇಲಿದೆ. ಮುಖ್ಯವಾಗಿ, ಶಿಕ್ಷಣದಲ್ಲಿ ವ್ಯಕ್ತಿಯೊಬ್ಬನ ವೈಯಕ್ತಿಕ ನಂಬಿಕೆಗಳ ಹೊರತಾಗಿಯೂ, ಶಿಕ್ಷಣವು ಬೆಳೆಸಲು ಬಯಸುವ ಮೌಲ್ಯಗಳು ಎಲ್ಲರ ನಡವಳಿಕೆಯಲ್ಲಿಯೂ ವ್ಯಕ್ತವಾಗುವಂತಿರಬೇಕು.
ಪ್ರಾರಂಭದಲ್ಲಿಯೇ ಶಿಕ್ಷಣ ವ್ಯವಸ್ಥೆಗೆ ಮೌಲ್ಯಗಳನ್ನು ಅಭಿವೃದ್ಧಿಪಡಿಸುವುದು ದೊಡ್ಡ ಸವಾಲು ಎಂಬುದನ್ನು ಎನ್​ಸಿಎಫ್ ಸ್ಪಷ್ಟವಾಗಿ ಒಪ್ಪಿಕೊಳ್ಳುತ್ತದೆ. ಆದ್ದರಿಂದ ನಾವು ನಮ್ಮ ಗರಿಷ್ಠ ಪ್ರಯತ್ನವನ್ನು ಮಾಡಲೇಬೇಕಾಗಿದೆ. ಏಕೆಂದರೆ ಉತ್ತಮ ಮೌಲ್ಯಗಳಿಲ್ಲದ ಶಿಕ್ಷಣದಿಂದ ಏನು ಪ್ರಯೋಜನ?
(ಲೇಖಕರು ಅಜೀಂ ಪ್ರೇಮ್​ಜೀ ಫೌಂಡೇಶನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ)
ಕ್ಷಮಿಸು ಅಮ್ಮ… ನನಗೆ ಗೊತ್ತಿಲ್ಲದೆ ದೊಡ್ಡ ತಪ್ಪು ಮಾಡಿದೆ: ಹಿರಿಯ ನಟಿ ಲಕ್ಷ್ಮೀ ಪುತ್ರಿ ಐಶ್ವರ್ಯಾ ಕಣ್ಣೀರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
