ರಾಷ್ಟ್ರಪತಿ ಅಂಕಿತ | ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ | ‘ಭಾಗ್ಯಲಕ್ಷ್ಮೀ-ಸುಕನ್ಯಾ ಸಮೃದ್ಧಿ’ ಅಬಾಧಿತ
ಬಾಲ್ಯ ವಿವಾಹ ತಡೆಗೆ ಕಠಿಣ ಶಿಕ್ಷೆ ವಿಧಿಸಲು ಉದ್ದೇಶಿತ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದು, ಶೀಘ್ರವೇ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದರು.ಮೇಲ್ಮನೆಯಲ್ಲಿ ಶುಕ್ರವಾರ ಬಿಜೆಪಿಯ ಭಾರತಿಶೆಟ್ಟಿ, ಕಾಂಗ್ರೆಸ್​ನ ಉಮಾಶ್ರೀ, ಜೆಡಿಎಸ್​ನ ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
ಬಾಲ್ಯ ವಿವಾಹ ಪಿಡುಗು ಹತ್ತಿಕ್ಕಲೆಂದು ಸಿದ್ದರಾಮಯ್ಯ ಮೊದಲ ಆಡಳಿತಾವಧಿಯಲ್ಲಿ ಕಠಿಣ ಶಿಕ್ಷೆ ಪ್ರಸ್ತಾವಿತ ಮಸೂದೆ ಅಂಗೀಕಾರವಾಗಿತ್ತು. ಉಮಾಶ್ರೀ ಅವರೇ ಅಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿದ್ದರು. ನಂತರ ರಾಜ್ಯಪಾಲರ ಶಿಫಾರಸಿನಂತೆ ವಿಧೇಯಕವನ್ನು 2016ರಲ್ಲಿಯೇ ರಾಷ್ಟ್ರಪತಿ ಒಪ್ಪಿಗೆ ಕೋರಿ ಕಳುಹಿಸಲಾಗಿದೆ ಎಂದಾಗ ಮಧ್ಯೆ ಪ್ರವೇಶಿಸಿದ ಉಮಾಶ್ರೀ, ರಾಷ್ಟ್ರಪತಿ ಅನುಮೋದನೆ ಲಭಿಸಿದ ಮಾಹಿತಿಯಿದೆ ಎಂದು ಗಮನಸೆಳೆದರು. ಇಲಾಖೆ ಅಧಿಕಾರಿಗಳಿಂದ ಖಚಿತಪಡಿಸಿಕೊಂಡ ಹೆಬ್ಬಾಳ್ಕರ್, ಆದಷ್ಟು ಬೇಗ ಕಾಯ್ದೆ ಜಾರಿಯಾಗಲಿದೆ. ಕಳೆದ 10 ವರ್ಷಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಕ್ರಮೇಣ ಕಡಿಮೆಯಾಗಿವೆ ಎಂದರು. ಬಾಲ್ಯ ವಿವಾಹ ಪ್ರಕರಣದಲ್ಲಿ ಎರಡೂ ಕಡೆಯ ಪಾಲಕರು, ಮದುವೆ ಮಾಡಿಸುವ ಪುರೋಹಿತರು/ಸ್ವಾಮಿಗಳು, ಮದುವೆ ಪೆಂಡಾಲ್ ಹಾಕಿದವರಿಗೂ ಎರಡು ವರ್ಷ ಕಠಿಣ ಶಿಕ್ಷೆ ವಿಧಿಸುವುದಕ್ಕೆ ಕಾಯ್ದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ವಿವರಿಸಿದರು.
986 ಬಾಲ ಗರ್ಭಿಣಿಯರು:ಜಿಲ್ಲಾವಾರು ಮಾಹಿತಿ ಪ್ರಕಾರ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಒಟ್ಟು 986 ಬಾಲ್ಯ ವಿವಾಹ ಮತ್ತು ಬಾಲ ತಾಯಂದಿರ ಪ್ರಕರಣಗಳು ದಾಖಲಾಗಿದ್ದು, ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗಿದೆ ಎಂದು ಹೆಬ್ಬಾಳ್ಕರ್ ತಿಳಿಸಿದರು. ಮಂಡ್ಯ ಜಿಲ್ಲೆಯಲ್ಲಿ ಮಕ್ಕಳು ಹೆಚ್ಚು ಪ್ರೀತಿ, ಪ್ರೇಮ ಮತ್ತು ಆಕರ್ಷಣೆ, ಪಾಲಕರ ನಿರ್ಲಕ್ಷ್ಯದಿಂದ ಓಡಿ ಹೋಗಿ ಬಾಲ್ಯ ವಿವಾಹವಾಗುತ್ತಿದ್ದಾರೆ ಎಂದು ಉತ್ತರದಲ್ಲಿ ಉಲ್ಲೇಖಿಸಿದ್ದರ ಬಗ್ಗೆ ಭಾರತಿ ಶೆಟ್ಟಿ ತೀವ್ರವಾಗಿ ಆಕ್ಷೇಪಿಸಿದರು. ಹೆಬ್ಬಾಳ್ಕರ್ ಪ್ರತಿಕ್ರಿಯಿಸಿ, ಪ್ರೀತಿ, ಪ್ರೇಮ ಮಂಡ್ಯ ಜಿಲ್ಲೆಗೆ ಸೀಮಿತವಾಗಿಲ್ಲ, ಪಾಲಕರ ನಿರ್ಲಕ್ಷ್ಯವೆಂದು ಹೇಳಿದ್ದನ್ನೂ ಒಪ್ಪಲಾಗದು. ಮರು ವಿಮಶಿಸಲು ಸೂಚಿಸುವೆ ಎಂಬ ಭರವಸೆ ನೀಡಿದರು.
ಉನ್ನತಮಟ್ಟದ ಜಂಟಿ ಸಭೆ: ಜೆಡಿಎಸ್​ನ ಟಿ.ಎ.ಶರವಣ, ಮಹಿಳಾ ಮತ್ತು ಮಕ್ಕಳ ಆಯೋಗದ ವರದಿ ಪ್ರಕಾರ ಬಾಲ ಗರ್ಭಿಣಿ ಮತ್ತು ತಾಯಂದಿರ ಸಂಖ್ಯೆ 28,657 ಎಂದಿದ್ದರೆ ಇಲಾಖೆ ಕೇವಲ 986 ಹೇಳುತ್ತಿದ್ದು, ಮರು ಪರಿಶೀಲಿಸಬೇಕು ಎಂದರು.
ಕೆ.ಎ.ತಿಪ್ಪೇಸ್ವಾಮಿಯವರು ಕೋಲಾರ ಜಿಲ್ಲೆಯಲ್ಲಿ ಎಂಟು ತಿಂಗಳಲ್ಲಿ 98 ಪ್ರಕರಣಗಳು ದಾಖಲಾಗಿದ್ದು, ಸಮಸ್ಯೆ ಗಂಭೀರತೆಯನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಭಾಗ್ಯಲಕ್ಷ್ಮೀಗೆ ಮರು ನಾಮಕರಣ
ಯಡಿಯೂರಪ್ಪ ಆಡಳಿತಾವಧಿಯಲ್ಲಿ ಜಾರಿಗೊಳಿಸಿದ್ದ ಭಾಗ್ಯಲಕ್ಷ್ಮೀ ಯೋಜನೆ ಮುಂದುವರಿಸಿದ್ದು, ಭಾಗ್ಯಲಕ್ಷ್ಮೀ ಸುಕನ್ಯಾ ಸಮೃದ್ಧಿ ಎಂದು ಯೋಜನೆಗೆ ಮರು ನಾಮಕರಣ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು. ಬಿಜೆಪಿಯ ಎನ್.ರವಿಕುಮಾರ್ ಪ್ರಶ್ನೆಗೆ ಉತ್ತರಿಸಿ, ಯೋಜನೆಯಡಿ 3,74,999 ಫಲಾನುಭವಿಗಳಿಗೆ 11,249.97 ಲಕ್ಷ ರೂ. ವೆಚ್ಚವಾಗಿದೆ. ಸದ್ಯಕ್ಕೆ 1.21 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಮೊದಲು ಅರ್ಜಿದಾರರಿಗೆ 50 ಸಾವಿರ ಬಾಂಡ್ ನೀಡಲಾಗುತ್ತಿತ್ತು. ತಾಂತ್ರಿಕ ತೊಂದರೆ ಕಾರಣಕ್ಕೆ ಬದಲಾಯಿಸಿ ವಾರ್ಷಿಕ ಮೂರು ಸಾವಿರ ರೂ.ನಂತೆ 15 ವರ್ಷ ಆಯಾ ಫಲಾನುಭವಿಗಳ ಅಂಚೆ ಕಚೇರಿ ಖಾತೆಗೆ ಜಮೆಯಾಗಲಿದ್ದು, ಉಳಿದ ಷರತ್ತುಗಳು ಯಥಾ ರೀತಿ ಮುಂದುವರಿದಿವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ವಿವರಿಸಿದರು.
ಅನರ್ಹತೆ ತಪ್ಪಿಸಲು ವಿಧೇಯಕ ಆಸರೆ
ಲಾಭದಾಯಕ ಹುದ್ದೆಯಲ್ಲಿ ಅವಕಾಶ ಪಡೆದ ಶಾಸಕರಿಗೆ ಅನರ್ಹತೆ ತೂಗುಗತ್ತಿಯಿಂದ ತಪ್ಪಿಸಲು ಸರ್ಕಾರ ಕರ್ನಾಟಕ ವಿಧಾನ ಮಂಡಲ (ಅನರ್ಹತಾ ನಿವಾರಣಾ) (ತಿದ್ದುಪಡಿ) ವಿಧೇಯಕಕ್ಕೆ ಅನುಮೋದನೆ ಪಡೆದುಕೊಂಡಿದೆ. ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯರಾಗಿರುವವರು ಸಿಎಂ, ಡಿಸಿಎಂ ಸಲಹೆಗಾರರು, ಯಾವುದೇ ಆಯೋಗದ ಅಧ್ಯಕ್ಷರು, ಸದಸ್ಯರ ಹುದ್ದೆಗೆ ನೇಮಕಗೊಳ್ಳುವುದಕ್ಕೆ ಅನರ್ಹತೆ ವಿಧಿಸುವುದರಿಂದ ವಿನಾಯಿತಿ ನೀಡಲು ಉಪಬಂಧಗಳನ್ನು ಕಲ್ಪಿಸುವುದಕ್ಕೆ ವಿಧೇಯಕ ಮಂಡಿಸುತ್ತಿರುವುದಾಗಿ ಸರ್ಕಾರ ವಿವರಿಸಿತು.
ಪ್ರತಿಪಕ್ಷ ಸದಸ್ಯರು ಸ್ಪೀಕರ್ ಪೀಠದ ಮುಂದೆ ಧರಣಿಯಲ್ಲಿದ್ದಾಗ ಚರ್ಚೆ ಇಲ್ಲದೆ ವಿಧೇಯಕ ಅಂಗೀಕರಿಸಲಾಯಿತು. ಪ್ರಸ್ತುತ ಹಲವು ಶಾಸಕರನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಂಡಿದ್ದು, ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ. ಅದೇ ರೀತಿ 2024ನೇ ಸಾಲಿನ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕದ ಪರ್ಯಾಲೋಚನೆ ನಡೆಸಿ ಅಂಗೀಕಾರ ಪಡೆಯಲಾಯಿತು. ಬಗರ್ ಹುಕುಂ ಸಮಿತಿಗಳಲ್ಲಿ ಶಾಸಕರು ಪ್ರತಿನಿಧಿಸುತ್ತಾರೆ. ಆದರೆ, ಸಿಎಂ, ಡಿಸಿಎಂ, ಸಚಿವರು, ಹಿರಿಯ ಶಾಸಕರಿಗೆ ಕಾರ್ಯದೊತ್ತಡದ ಕಾರಣ ಸಮಿತಿ ಸಭೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದೇ ಇಲ್ಲ. ಅವರು ಪಾಲ್ಗೊಳ್ಳದಿದ್ದರೆ ಸಭೆ ಪೂರ್ಣವಾಗುವುದಿಲ್ಲ. ಈ ಕಾರಣಕ್ಕೆ ಶಾಸಕರು ಲಿಖಿತವಾಗಿ ಸೂಚಿಸುವ ವ್ಯಕ್ತಿಯನ್ನು ಸಮಿತಿ ಸದಸ್ಯರನ್ನಾಗಿ ನೇಮಿಸಲು ಅವಕಾಶ ಮಾಡಿಕೊಳ್ಳಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + fourteen =
Remember me
