|ರಾಘವ ಶರ್ಮ ನಿಡ್ಲೆನವದೆಹಲಿ
ಬಸವರಾಜ ಬೊಮ್ಮಾಯಿ ರಾಜ್ಯದ ಸಿಎಂ ಆದಂದಿನಿಂದ ಬಿಜೆಪಿ ಮತ್ತು ಸಂಘಟನೆ ಹಿನ್ನೆಲೆಯ ಕಾರ್ಯಕರ್ತರಲ್ಲಿ ‘ಸಂಘಟನೆ ಹಿನ್ನೆಲೆಯವರನ್ನು ಆಯ್ಕೆ ಮಾಡುವ ಒಳ್ಳೆಯ ಅವಕಾಶವನ್ನು ಪಕ್ಷ ಕಳೆದುಕೊಂಡಿತು’ ಎಂಬ ಅಸಮಾಧಾನ ಹೊಗೆಯಾಡುತ್ತಲೇ ಇದೆ. ಆದರೆ, ಬಹಿರಂಗವಾಗಿ ಯಾರೂ ಹೇಳಿಕೊಳ್ಳುತ್ತಿಲ್ಲ.
ಜನತಾ ಪರಿವಾರ ಮೂಲದ ಬೊಮ್ಮಾಯಿ ಬಿಜೆಪಿ ಸೇರಿದ್ದು 2008ರಲ್ಲಿ. ಹೀಗಾಗಿ, ಸಂಘಟನೆ ಹಿನ್ನೆಲೆಯವರಿಗೆ ನಂ.1 ಸ್ಥಾನ ಸಿಗಬೇಕಿತ್ತು ಎನ್ನುವುದು ಕಾರ್ಯಕರ್ತರ ಸಹಜ ಒತ್ತಾಸೆಯಾಗಿತ್ತು. ಎಬಿವಿಪಿ, ಆರ್​ಎಸ್​ಎಸ್​ನಿಂದ ಬಂದವರನ್ನು ಆಯ್ಕೆ ಮಾಡಿದ್ದರೆ ಸಂಘಟನೆಗೆ ಮತ್ತಷ್ಟು ಬಲ ತುಂಬಿದಂತಾಗಿತ್ತು ಮತ್ತು 2023ರ ಚುನಾವಣೆ ದೃಷ್ಟಿಯಿಂದಲೂ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಸೃಷ್ಟಿಯಾಗುತ್ತಿತ್ತು ಎಂಬ ಮಾತುಗಳು ಸಂಘ ಮತ್ತು ಪಕ್ಷದ ಕಾರ್ಯಕರ್ತರ ವಲಯದಲ್ಲೇ ಕೇಳಿಬರುತ್ತಿದೆ. ಯಡಿಯೂರಪ್ಪ ರಾಜೀನಾಮೆ ನೀಡಿದ ಪ್ರತಿಕೂಲ ಪರಿಸ್ಥಿತಿಯಲ್ಲಿ ಬಸವರಾಜ ಬೊಮ್ಮಾಯಿ ಆಯ್ಕೆಯನ್ನು ‘ರಕ್ಷಣಾತ್ಮಕ ನಡೆ’ ಎಂದು ಕೆಲವರು ವಿಶ್ಲೇಷಿಸಿದರೂ, ಹೊಸ ಪ್ರಯೋಗಕ್ಕೆ ಇದು ಸೂಕ್ತ ಕಾಲವಾಗಿತ್ತು ಎಂದು ಮತ್ತೆ ಕೆಲವರು ಪ್ರತಿವಾದಿಸುತ್ತಾರೆ.
ಹಾಗೆ ನೋಡಿದರೆ, ಬೊಮ್ಮಾಯಿ ಆಯ್ಕೆ ನಂತರ ಎರಡೂ ರಾಷ್ಟ್ರೀಯ ಪಕ್ಷಗಳಲ್ಲೂ ಸಂಘಟನೆ ಹಿನ್ನೆಲೆಯಿಂದ ಬಂದ, ಸರ್ಕಾರ ಮುನ್ನಡೆಸಬಲ್ಲ ಪ್ರಬಲ ನಾಯಕರಿಲ್ಲ ಎಂಬುದು ಸಾಬೀತಾದಂತಾಗಿದೆ. ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಜನತಾ ಪರಿವಾರದವರು. ಈಗಲೂ ಪಕ್ಷದಲ್ಲಿ ಸಿದ್ದರಾಮಯ್ಯರಷ್ಟು ಜನಪ್ರಿಯ ನಾಯಕರಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್ ಸೇರಿ ಯಾರೊಬ್ಬರಿಗೂ ದೊಡ್ಡ ಜನಸಮೂಹ ಸೆಳೆಯುವಂತಹ ಆಕರ್ಷಣೆ ಇಲ್ಲ. ಬಿಜೆಪಿ ಕೂಡ ಯಡಿಯೂರಪ್ಪ ರಾಜೀನಾಮೆಯಿಂದ ಮಾಸ್ ಲೀಡರ್​ರೊಬ್ಬರನ್ನು ಕಳೆದುಕೊಂಡಿದೆ. ದುರ್ಬೀನು ಹಾಕಿದರೂ ಅವರಂಥ ನಾಯಕತ್ವ ರಾಜ್ಯ ಬಿಜೆಪಿಯಲ್ಲಿ ಕಾಣುತ್ತಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಸಂಘಟನೆ ವಿಸ್ತಾರ ಹೆಚ್ಚಿದ್ದರೂ, ಅದೇ ಹಿನ್ನೆಲೆಯ ಮಾಸ್ ಲೀಡರ್ ಖ್ಯಾತಿಯ ನಾಯಕತ್ವವಿಲ್ಲ.
ಸಂಘಟನೆಯವರು 9 ಮಂದಿ ಮಾತ್ರ: 29 ಸದಸ್ಯರ ಮಂತ್ರಿ ಮಂಡಲದಲ್ಲಿ ಸಂಘಟನೆ ಹಿನ್ನೆಲೆಯವರ ಸಂಖ್ಯೆ ಕೇವಲ 9 ಮಾತ್ರ. ಈಶ್ವರಪ್ಪ, ಆರ್.ಅಶೋಕ್, ಸುನಿಲ್​ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಪ್ರಭು ಚವ್ಹಾಣ್, ಮುರುಗೇಶ್ ನಿರಾಣಿ, ಆರಗ ಜ್ಞಾನೇಂದ್ರ ಮತ್ತು ಬಿ.ಸಿ.ನಾಗೇಶ್ ಮೂಲ ಬಿಜೆಪಿಯವರು. ಉಳಿದ 20 ಮಂದಿ ಅನಿವಾರ್ಯ ಕಾರಣಗಳಿಗಾಗಿ ಕಾಂಗ್ರೆಸ್ ಮತ್ತು ಜನತಾ ಪರಿವಾರ ಬಿಟ್ಟು ಬಿಜೆಪಿ ಸೇರಿದವರು. ಸಂಪುಟ ವಿಸ್ತರಣೆ ಸಂದರ್ಭ ಇವೆಲ್ಲ ಚರ್ಚೆಗೆ ಬಂದಿದ್ದರಿಂದಲೇ, ಹಿರಿಯ ಮುಖಂಡರಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್​ರನ್ನು ಹೊರಗಿಡಬಾರದೆಂದು ತೀರ್ವನಿಸಲಾಯಿತು. ಇಲ್ಲವಾದಲ್ಲಿ, ಅವರಿಗೆ ಈ ಬಾರಿ ಕೊಕ್ ನೀಡುವುದು ಖಾತರಿಯಾಗಿತ್ತು.
ಮಾಜಿ ಡಿಸಿಎಂ ಲಕ್ಷ್ಮ ಸವದಿ ಅವರನ್ನು ಮಂತ್ರಿ ಸ್ಥಾನದಿಂದ ದೂರವಿರಿಸಲು ವಿಶೇಷ ಕಾರಣವಿಲ್ಲದಿದ್ದರೂ, ಸಂಘಟನೆ ಹಿನ್ನೆಲೆಯ ಕೋಟ ಶ್ರೀನಿವಾಸ ಪೂಜಾರಿ ಬದಲಿಗೆ ಎಂಎಲ್​ಸಿ ಕೋಟಾದಲ್ಲಿ ಸವದಿಗೆ ಆದ್ಯತೆ ನೀಡುವುದಕ್ಕೆ ಸಂಘ ಒಪ್ಪಿರಲಿಲ್ಲ. ಹೀಗಾಗಿ, ಕರಾವಳಿಯ ಶ್ರೀನಿವಾಸ ಪೂಜಾರಿ ಮತ್ತು ಸುನೀಲ್​ಕುಮಾರ್ ಒಂದೇ (ಈಡಿಗ) ಸಮುದಾಯದವರಾಗಿದ್ದರೂ ಇಬ್ಬರಿಗೂ ಮಂತ್ರಿ ಸ್ಥಾನ ನೀಡಲಾಯಿತು. ಪ್ರಭು ಚವ್ಹಾಣ್ ಮಂತ್ರಿಯಾಗಿ ನಿರೀಕ್ಷಿತ ಸಾಧನೆ ಮಾಡದಿದ್ದರೂ, ಹೈದರಾಬಾದ್ ಕರ್ನಾಟಕದಲ್ಲಿ ಸಂಘಟನೆಗೆ ತೊಂದರೆಯಾಗಬಾರದು ಎನ್ನುವುದೂ ಬಿಜೆಪಿ ವರಿಷ್ಠರ ಉದ್ದೇಶವಾಗಿತ್ತು.
ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಉನ್ನತ ಗೃಹ ಖಾತೆ ಸಚಿವರಾಗಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರರನ್ನು ಆಯ್ಕೆ ಮಾಡಿರುವುದು ‘ಅತೃಪ್ತ’ ಕಾರ್ಯಕರ್ತ, ಮುಖಂಡರಲ್ಲಿ ಹರ್ಷ ತಂದಿದೆ. ಕನಿಷ್ಠ 2ನೇ ಪ್ರಮುಖ ಹುದ್ದೆಯಾದರೂ ಸಂಘಟನೆಗೆ ಸಿಕ್ಕಿತ್ತಲ್ಲ ಎಂಬ ಖುಷಿ ಕಾಣುತ್ತಿದೆ. ಸಂಘಟನೆಯಲ್ಲಿ ಇದ್ದುಕೊಂಡು ಹಗಲಿರುಳು ಪಕ್ಷದ ಏಳಿಗೆಗಾಗಿ ಶ್ರಮಿಸಿರುವ ಆರಗ ಜ್ಞಾನೇಂದ್ರ ಪ್ರಾಮಾಣಿಕ, ಸಜ್ಜನ ರಾಜಕಾರಣಿ ಎಂದೇ ಖ್ಯಾತಿ. ಕಾರ್ಯಕರ್ತರೂ ಅವರನ್ನು ಬಹುವಾಗಿ ನೆಚ್ಚಿಕೊಂಡಿದ್ದಾರೆ. ಹೀಗಾಗಿಯೇ ಅವರಿಗೆ 2ನೇ ಹುದ್ದೆ ಒಲಿದುಬಂದಿದೆ. ಯುವ ನಾಯಕ ಸುನೀಲ್​ಕುಮಾರ್​ಗೆ ಇಂಧನ ಖಾತೆ ನೀಡಿರುವುದೂ ಗಮನಸೆಳೆದಿದೆ.
ಬೆಂಗಳೂರು:ನೂತನ ಸಿಎಂ ಮತ್ತು ಸಚಿವ ಸಂಪುಟಕ್ಕೆ ಆಯ್ಕೆಯಾದ ಸಚಿವರಿಗೆ ಅಭಿನಂದನೆ ಸಲ್ಲಿಸಿರುವ ಪ್ರಗತಿಪರ ಸ್ವಾಮೀಜಿಗಳು, ಅತೃಪ್ತರಿಗೆ ಸ್ಥಾನಮಾನ ನೀಡಿ ಆಂತರಿಕ ಬೇಗುದಿ ಶಮನ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಜತೆಗೆ ಸಚಿವ ಸಂಪುಟದಲ್ಲಿ ಉಳಿದಿರುವ ಇನ್ನೂ ನಾಲ್ಕು ಸ್ಥಾನಗಳಿಗೆ ಬಲಗೈ ದಲಿತ ಸಮುದಾಯದಲ್ಲಿರುವ ಗೊಲ್ಲರ ಜಾತಿಗೆ ನೀಡಬೇಕು. ಭ್ರಷ್ಟಾಚಾರ ಕಡಿವಾಣಕ್ಕೆ ಸರ್ಕಾರ ಕಠಿಣ ಕಾನೂನು ಜಾರಿಗೆ ಮುಂದಾಗಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಡುಮಾಮಿಡಿ ಮಠದ ಪೀಠಾಧಿಪತಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ನಮ್ಮ ಸಮುದಾಯದವರಿಗೆ ಸಿಎಂ ಸ್ಥಾನ ನೀಡುವಂತೆ ಒತ್ತಾಯಿಸಿದ್ದೇ ಹೊರತು ಮಠದ ರಾಜಕೀಯ ಮಾಡಲಿಲ್ಲ. ಇದರ ಹಿಂದೆ ನಾಡಿನ ಪ್ರಗತಿಯ ಹಿತದೃಷ್ಟಿ ಇತ್ತು. ಸಿಎಂ ಆಗಿ ಬಸವರಾಜ ಬೊಮ್ಮಾಯಿ ನೇಮಕ ಮಾಡಿರುವುದಕ್ಕೆ ಸಂತೋಷವಿದೆ. ಅಧಿಕಾರ ದೊರೆಯದೆ ಇರುವವರು ಅಸಮಾಧಾನಗೊಳ್ಳುವುದು ಸಹಜ. ಪಕ್ಷದಲ್ಲಿ ಆಂತರಿಕ ಭಿನ್ನಮತ ಕಾಣಿಸಿಕೊಳ್ಳುವ ಸಾಧ್ಯತೆಗಳು ಗೋಚರವಾಗತೊಡಗಿವೆ. ಆಂತರಿಕ ಭಿನ್ನಮತ ಎಂಬುದು ಸೆರಗಿನಲ್ಲಿ ಬೆಂಕಿ ಕಟ್ಟಿಕೊಂಡಂತೆ. ಈ ಭಿನ್ನತಮದಿಂದ ಈಗಾಗಲೆ ಪಕ್ಷ ಹಾಗೂ ಸರ್ಕಾರದ ವರ್ಚಸ್ಸು ಕುಂದಿರುವುದು ಸತ್ಯ. ಈ ಭಿನ್ನಮತ ಉಲ್ಬಣಗೊಂಡರೆ, ಮುಖ್ಯಮಂತ್ರಿ ದುರ್ಬಲಗೊಳ್ಳುತ್ತಾರೆ. ಸರ್ಕಾರ ದುರ್ಬಲಗೊಳ್ಳತ್ತದೆ. ಇದರಿಂದ ಆಡಳಿತದಲ್ಲಿ ಶಿಥಿಲತೆ ಕಾಣಿಸಿಕೊಳ್ಳುತ್ತದೆ. ಈ ಬಗ್ಗೆ ಎಚ್ಚರವಹಿಸಿ ಆರಂಭದಲ್ಲೇ ಶಮನ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಕಲಬುರಗಿ ಸುಲಫಲ ಮಠದ ಡಾ.ಜಗದ್ಗುರು ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಬಾಗಲಕೋಟೆ ಗುಳೇದಗುಡ್ಡದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಕಲಬುರಗಿ ಸೊನ್ನ ವಿರಕ್ತಮಠದ ಡಾ.ಶಿವಾನಂದ ಸ್ವಾಮೀಜಿ, ಯಾದಗಿರಿ ಗುರುಮಠಕಲ್ ಶಾಂತವೀರ ಮುರಘ ರಾಜೇಂದ್ರ ಸ್ವಾಮೀಜಿ, ಬೆಳಗಾವಿ ಉಗರಗೋಳ ಮಹಾಂತ ಸ್ವಾಮೀಜಿ ಇತರರಿದ್ದರು.
ಎಚ್ಚರಿಕೆ ವಹಿಸದಿದ್ದರೆ ಮೂರನೇ ಅಲೆ ನಿಶ್ಚಿತ: ಜಯದೇವ ಆಸ್ಪತ್ರೆಯ ಡಾ.ಸಿ.ಎನ್. ಮಂಜುನಾಥ್ ಆತಂಕ

ನಮಗದು ಚಿನ್ನಕ್ಕಿಂತಲೂ ಹೆಚ್ಚು; ಒಲಿಂಪಿಕ್ಸ್​ ಕುಸ್ತಿಯಲ್ಲಿ ಬೆಳ್ಳಿ ಗೆದ್ದ ರವಿಯ ಗ್ರಾಮಸ್ಥರು ಹೀಗಂದಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 8 =
Remember me
