| ಮೇಧಾ ಪ್ರಹ್ಲಾದಾಚಾರ್ಯ ಜೋಶಿಯಾವ ಮಾಸದಲ್ಲಿ ರವಿ ಸಂಕ್ರಮಣವಿಲ್ಲದೆ ಎರಡು ಅಮಾವಾಸ್ಯೆಗಳು ಇರುತ್ತವೆಯೋ ಅದನ್ನು ಅಧಿಕ ಮಾಸವೆಂದು ತಿಳಿಸಿದ್ದಾರೆ. ಈ ಅಧಿಕ ಮಾಸವನ್ನು ಮಲಮಾಸ, ಪುರುಷೋತ್ತಮ ಮಾಸವೆಂದೂ ಕರೆಯುವರು. ಮಲ ಎಂದರೆ ಕಲ್ಮಶ, ಪಾತಕ, ಪಾಪ ಕರ್ಮಗಳು. ಅಧಿಕ ಮಾಸದಲ್ಲಿ ಕಥಾಶ್ರವಣ, ಸಂಕೀರ್ತನೆ, ದಾನ, ವ್ರತ ನಿಯಮಗಳು ಅದರಲ್ಲೂ ವಿಶೇಷವಾಗಿ ದೀಪಾರಾಧನೆಯಿಂದ ಮಾನಸಿಕ ಹಾಗೂ ದೈಹಿಕವಾದ ಎಲ್ಲ ಪಾತಕಗಳು, ಮಲಗಳು ಪರಿಹಾರವಾಗುವವು ಎಂದು ಪದ್ಮ ಪುರಾಣ ತಿಳಿಸಿದೆ. ಆದ್ದರಿಂದ ಇದು ಮಲಮಾಸ. ಸೂರ್ಯ ಸಂಕ್ರಮಣ ಇಲ್ಲದಿರುವುದರಿಂದ ಈ ಮಾಸದಲ್ಲಿ ಯಾವುದೇ ಶುಭ ಕಾರ್ಯ ವರ್ಜ್ಯವಾಗಿದೆ. ಇದರಿಂದ ವ್ಯಥೆಗೊಂಡ ಮಲ ಮಾಸವು ವಿಷ್ಣುವಿನ ಬಳಿಗೆ ಹೋಗಿ ಪ್ರಾರ್ಥಿಸಿತು. ವಿಷ್ಣುವು ಮಲ ಮಾಸಕ್ಕೆ ನಾನೇ ಪುರುಷೋತ್ತಮ ರೂಪದಿಂದ ನಿಯಾಮಕನಾಗಿರುವೆನೆಂದು ಅನುಗ್ರಹಿಸಿದ. ಆದ್ದರಿಂದ ಇದು ಪುರುಷೋತ್ತಮ ಮಾಸವಾಯಿತು. ಶುಭ ಕಾರ್ಯಗಳಿಗೆ ರ್ವ್ಯಜವಾದರೂ ಸಾಧನೆಗೆ ಪರ್ವಕಾಲವಾಯಿತು. ಈ ಮಾಸದಲ್ಲಿ ಮಾಡುವ ಸಣ್ಣ ಸಣ್ಣ ಅನುಷ್ಠಾನಗಳಿಗೂ ಬೇರೆಲ್ಲ ಮಾಸಗಳಿಗಿಂತ ಅಧಿಕ ಪುಣ್ಯ ಲಭಿಸುವುದು ಎಂದು ವಿಷ್ಣುವಿನ ಅನುಗ್ರಹವಾಗಿದ್ದರಿಂದ ಇದು ಅಧಿಕ ಮಾಸವಾಯಿತು.
ಸರಾಸರಿ 33 ಅಥವಾ 32 ತಿಂಗಳಿಗೊಮ್ಮೆ ಈ ಅಧಿಕ ಮಾಸ ಒದಗು ವುದು. ಚಾತುರ್ವಸ್ಯದಲ್ಲಿ ಕಾರ್ತಿಕ ಮಾಸವು ಹೇಗೆ ಶ್ರೇಷ್ಠವೋ ಅಂತಹ ಕಾರ್ತಿ ಕಕ್ಕಿಂತಲೂ ಅಧಿಕ ಮಾಸವು ಇನ್ನೂ ಶ್ರೇಷ್ಠವೆಂಬುದು ವಿಶೇಷ. ಏಕೆಂದರೆ ಸಾಕ್ಷಾತ್ ಶ್ರೀಹರಿಯೊಡನೆ 33 ಕೋಟಿ ದೇವತೆಗಳು ಈ ಮಾಸದಲ್ಲಿ ಅಧಿಷ್ಠಾನರಾಗಿರುವರು ಎಂದು ಪುರಾಣಗಳು ವರ್ಣಿಸಿವೆ. ಅಧಿಕ ಮಾಸದಲ್ಲಿ 33ಕ್ಕೆ ವಿಶೇಷ ಸ್ಥಾನವಿದ್ದರೂ ಪ್ರತಿ ಮಾಸದಲ್ಲಿ 30 ಅಥವಾ 31 ದಿನಗಳು ಮಾತ್ರ ಲಭಿಸುತ್ತವೆ.
ಅಧಿಕ ಮಾಸದ ವಿಶೇಷ ಆಚರಣೆಗಳು:ಅಧಿಕ ಮಾಸದಲ್ಲಿ ಶ್ರೀಮದ್ ಭಾಗವತದ ಶ್ರವಣವನ್ನು ಮಾಡುವುದರಿಂದ ವಿಶೇಷ ಪುಣ್ಯ ಎಂದು ಬೃಹನ್ನಾರದೀಯ ಪುರಾಣವು ತಿಳಿಸುತ್ತದೆ. ಭಾಗವತವು ಸಾಕ್ಷಾತ್ ಭಗವಂತನದ್ದೇ ಇನ್ನೊಂದು ಪ್ರತಿಕೃತಿ ಇದ್ದಂತೆ. ಆದ್ದರಿಂದ ಶ್ರೀಮದ್ ಭಾಗವತ ಗ್ರಂಥದ ದಾನವು ಸಹ ಬಹಳ ಶ್ರೇಷ್ಠವೆನಿಸಿದೆ.
ಅಧಿಕಮಾಸದಲ್ಲಿ 33 ತುಪ್ಪದ ಅಥವಾ ತೈಲದ ದೀಪಗಳನ್ನು ದೇವರ ಮುಂದೆ ಅಥವಾ ತುಳಸಿಯ ಮುಂದೆ ಹಚ್ಚುವುದು ಬಹಳ ಪುಣ್ಯಕರವಾಗಿದೆ. ವಿದ್ಯೆಯ ಪ್ರಾಪ್ತಿಗಾಗಿ ದೀಪದ ದಾನ ಮತ್ತು ದೀಪಾರಾಧನೆಯನ್ನು ಅನೇಕ ಕಡೆ ತಿಳಿಸಿದ್ದಾರೆ. ದೀಪಪ್ರಜ್ವಾಲನೆಯು ಕತ್ತಲೆಯನ್ನು ಕಳೆದಂತೆ, ಅಜ್ಞಾನ ನಾಶ ಹಾಗೂ ಜ್ಞಾನ ಪ್ರಾಪ್ತಿಯ ಸಂಕೇತವಾಗಿದೆ. ಎಲ್ಲ ವೇದೋಕ್ತವಾದ ಕರ್ಮಗಳ ಆಚರಣೆಯ ಫಲ ಒಂದು ಕಡೆಯಾದರೆ ಈ ಅಧಿಕ ಮಾಸದಲ್ಲಿ ದೀಪಾರಾಧನೆಯ ಫಲವು ಆ ಎಲ್ಲ ಫಲಗಳಿಗೆ ಸಮವೆನಿಸಿದೆ. (ಬೃಹನ್ನಾರದೀಯ ಪುರಾಣ)
ಅಧಿಕ ಶ್ರಾವಣ ಇಂದಿನಿಂದ:ಈ ಬಾರಿಯ ಅಧಿಕವು ಶ್ರಾವಣ ಮಾಸದಲ್ಲಿ ಒದಗಿದೆ. ಇದನ್ನು ಅಧಿಕ ಶ್ರಾವಣವೆಂದು ಕರೆಯುವರು. ಈ ಬಾರಿ ಜುಲೈ 18 ಮಂಗಳವಾರ ಅಧಿಕ ಮಾಸ ಪ್ರಾರಂಭವಾಗಿ ಅಗಸ್ಟ್ 16 ಅಮಾವಾಸ್ಯೆ ಬುಧವಾರದಂದು ಕೊನೆಗೊಳ್ಳುತ್ತದೆ. ಶುಕ್ಲ ಹಾಗೂ ಕೃಷ್ಣದಲ್ಲಿ ಬರುವ ಅಷ್ಟಮೀ, ದ್ವಾದಶಿ, ಚತುರ್ದಶಿ. ಹುಣ್ಣಿಮೆ ಹಾಗೂ ಅಮಾವಾಸ್ಯೆ ಈ ದಿನಗಳು ದಾನಕ್ಕೆ ಅತಿ ಶ್ರೇಷ್ಠವೆನಿಸಿವೆ. ಈ ಅಧಿಕ ಶ್ರಾವಣದ ಸಮಾಪ್ತಿಯ ನಂತರ ಹಬ್ಬಗಳ ಮಾಸವೆನಿಸಿದ ನಿಜ ಶ್ರಾವಣ ಮಾಸ ಪ್ರಾರಂಭವಾಗುವುದು(ಆಗಸ್ಟ್ 17 ಪ್ರತಿಪತ್).
ನಿಷೇಧ ಕಾರ್ಯಗಳು:ವಿವಾಹ, ಉಪನಯನ, ತೀರ್ಥಯಾತ್ರೆ, ಗೃಹಪ್ರವೇಶ, ಹೊಸದಾಗಿ ಬಂಗಾರವನ್ನು ಖರೀದಿಸುವುದು ಹೀಗೆ ಒಟ್ಟಾರೆ ಎಲ್ಲ ಶುಭಕಾರ್ಯಗಳನ್ನು ಅಧಿಕಮಾಸದಲ್ಲಿ ನಿಷೇಧ ಮಾಡಿದ್ದಾರೆ. ಎಲ್ಲ ವ್ರತ ನಿಯಮ ದಾನ ಕರ್ಮಗಳಿಗಿಂತಲೂ ಅತೀ ಶ್ರೇಷ್ಠವೆನಿಸಿದ್ದು ಭಗವಂತನ ಸಂಕೀರ್ತನೆ. ಹರಿ ನಾಮಸ್ಮರಣೆ. ಇದು ಸದಾಕಾಲದಲ್ಲಿ ಮಾಡಲೇಬೇಕೆಂದು ಶಾಸ್ತ್ರಗಳು ಆದೇಶಿಸಿದ್ದರೂ ಸಹ ಅಧಿಕ ಮಾಸದಲ್ಲಿ ಮಾತ್ರ ಇದಕ್ಕೆ ವಿಶೇಷ ಫಲ. ಆದ್ದರಿಂದಲೇ ಎಲ್ಲ ಮಠ ಮಂದಿರಗಳಲ್ಲಿ ಧಾರ್ವಿುಕ ಕೇಂದ್ರಗಳಲ್ಲಿ ದೇವರನಾಮಗಳ ಸಂಕೀರ್ತನೆಯ, ಅದರಲ್ಲೂ ವಿಶೇಷವಾಗಿ ಎಲ್ಲ ಸ್ತ್ರೀಯರು ಬಹಳ ಶ್ರದ್ಧಾ ಭಕ್ತಿಗಳಿಂದ ಈ ಸಂಕೀರ್ತನೆಯ ಕಾರ್ಯಕ್ರಮವನ್ನು ನಡೆಸುವುದು ಬಹಳ ವಿಶೇಷವಾಗಿದೆ. ಮಾಸಧರ್ಮಗಳ ಆಚರಣೆಯೂ ನಮ್ಮ ಸನಾತನ ಸಂಸ್ಕೃತಿಯ ಒಂದು ಅಂಗ. ಸಾಧನದೇಹ, ಸಾಧನದೇಶ, ಸಾಧನದಕಾಲಗಳ ತ್ರಿವೇಣಿ ಸಂಗಮ ಈ ಪುರುಷೋತ್ತಮ ಮಾಸ.
ಉಡುಪಿ:ಶ್ರಾವಣದಲ್ಲಿ ಅಧಿಕ ಮಾಸ ಬಂದಿರುವುದು ವಿಶೇಷ. ಜುಲೈ 18ರಿಂದ ಒಂದು ತಿಂಗಳ ಕಾಲ ಇರುವ ಅಧಿಕ ಶ್ರಾವಣ ಮಾಸದಲ್ಲಿ ದೇವತಾ ಪ್ರೀತ್ಯರ್ಥ ಮಾಡುವ ಸತ್ಕರ್ಮಗಳಿಗೆ ಅತ್ಯಧಿಕ ಫಲವಿದೆ. ಹೀಗಾಗಿ, ನಾಡಿನಾದ್ಯಂತ ಶ್ರೀರಾಮನ ಕೖಪೆ, ಲೋಕ ಕ್ಷೇಮಕ್ಕಾಗಿ ಪ್ರಾರ್ಥಿಸಿ ದಶಕೋಟಿ ರಾಮ ಜಪಯಜ್ಞ ನಡೆಯಬೇಕು ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ಥ, ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ. ಎಲ್ಲರೂ ಪ್ರತಿನಿತ್ಯ ಶುದ್ಧಮನಸ್ಸಿನಿಂದ ಕನಿಷ್ಠ ಹತ್ತು ನಿಮಿಷ 108 ಬಾರಿ ಶ್ರೀರಾಮ ಜಯರಾಮ ಜಯ ಜಯ ರಾಮ ಜಪವನ್ನು ಮಾಡಬೇಕು. ದೇವಸ್ಥಾನ, ಮಠ, ಭಜನಾ ಮಂದಿರ, ಸೇವಾ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ವ್ಯವಹಾರದ ಸ್ಥಳಗಳು, ಕಚೇರಿ, ಆಸ್ಪತ್ರೆ, ಅನಾಥಾಶ್ರಮ, ವೖದ್ಧಾಶ್ರಮ, ಜೈಲು ಹೀಗೆ ಎಲ್ಲೆಡೆ ಕನಿಷ್ಠ ಮೂರರಿಂದ ಐದು ದಿನ ಎಲ್ಲರೂ ಒಂದೆಡೆ ಸೇರಿ ಸರಳ ಮತ್ತು ಸುಲಭ ರೀತಿಯಲ್ಲಿ ರಾಮಜಪ ಮಾಡುವಂತಾಗಬೇಕು ಎಂದು ಶ್ರೀಗಳು ತಿಳಿಸಿದ್ದಾರೆ.
ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ.ಸಿ.ಎನ್. ಮಂಜುನಾಥ್ ಮುಂದುವರಿಕೆ!; ಇಲ್ಲಿದೆ ವಿವರ..

ವಿಶ್ವ ಕುಂದಾಪುರ ಕನ್ನಡ ದಿನಕ್ಕೆ ಸಿಎಂ-ಡಿಸಿಎಂ, ಸಚಿವರು ಸಂಸದರ ಶುಭಾಶಯ: ಬೆಂಗಳೂರಲ್ಲಿ 23ರಂದು ಆಚರಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − sixteen =
Remember me
