|ಮಂಡಗದ್ದೆ ಪ್ರಕಾಶಬಾಬು ಕೆ.ಆರ್.
ಹಿಮಾಲಯ ಪರ್ವತಶ್ರೇಣಿಯಲ್ಲಿರುವ ಕೈಲಾಸ ಶಿಖರ ಶಿವನ ವಾಸಸ್ಥಳ. ಶಿವನ ವಾಹನ ನಂದಿ ಎಂಬ ವೃಷಭವಾದ್ದರಿಂದ ಶಿವನನ್ನು ‘ವೃಷಭವಾಹನ’ ಮತ್ತು ‘ಪಶುಪತಿ’ ಎಂದೂ ಕರೆಯಲಾಗುತ್ತದೆ. ಹಸು ಧರ್ಮದ ಸಂಕೇತ. ಈ ಕಾರಣಕ್ಕೆ ಶಿವನು ಧರ್ಮರಕ್ಷಕನಾಗಿರುವನು.
ಹಾವು:ಹಾವು ಶಿವನ ಕಂಠದ ಸುತ್ತ ಮೂರು ಸುತ್ತುಹಾಕಿಕೊಂಡಿರುತ್ತದೆ. ಈ ಮೂರು ಸುತ್ತು ಕಾಲಚಕ್ರವಾದ ಭೂತ, ವರ್ತಮಾನ ಮತ್ತು ಭವಿಷತ್​ಗಳನ್ನು ಸೂಚಿಸುತ್ತದೆ. ಈ ಸರ್ಪವು ವಾಸುಕಿ ಎಂಬ ಹೆಸರಿನ ನಾಗಸರ್ಪ. ಇದು ಶಿವನ ಆಭರಣವಾಗಿ ಕಾಲ ಮತ್ತು ಸಾವನ್ನು ಮೀರಿನಿಂತಿರುವ ಸೂಚಕವಾಗಿದೆ ಹಾಗೂ ಕುಂಡಲಿನಿ ಶಕ್ತಿಯನ್ನು ಸಹ ತೋರಿಸುತ್ತದೆ.
ಭಸ್ಮ:ಶಿವನ ಹಣೆಯಲ್ಲಿ ಮೂರು ರೇಖೆಗಳ ವಿಭೂತಿ ಭಸ್ಮ ಇರುವುದು. ಇದು ಅಮರತ್ವ ಮತ್ತು ಕೀರ್ತಿಯನ್ನು ಎತ್ತಿ ತೋರಿಸುತ್ತದೆ. ಅದ್ವೈತ ತತ್ವದ ಸಂಕೇತವೂ ಆಗಿದೆ.
ಮರುಗ:ಶಿವನ ಬಳಿ ಇರುವ ಢಮರುಗ ವ್ಯಕ್ತ ಮತ್ತು ಅವ್ಯಕ್ತವನ್ನು ಸೂಚಿಸುತ್ತದೆ. ಇದನ್ನು ಬಾರಿಸಿದಾಗ ಓಂಕಾರದ ನಾದ ಹೊರಹೊಮ್ಮುತ್ತದೆ. ಈ ನಾದಕ್ಕೆ ನೃತ್ಯ ಮಾಡಿದ್ದರಿಂದ ಶಿವನು ನಟರಾಜನಾದ.
ರುದ್ರಾಕ್ಷಿ:ರುದ್ರನ ಕಣ್ಣೀರಿನ ಹನಿಯಿಂದ ರುದ್ರಾಕ್ಷಿ ಹುಟ್ಟಿರುವುದು. ಶಿವನ ಕತ್ತಿನಲ್ಲಿ 108 ರುದ್ರಾಕ್ಷಿಯ ಮಾಲೆ ಇರುವುದು. ಈ ರುದ್ರಾಕ್ಷಿಯು ಬ್ರಹ್ಮಾಂಡವನ್ನು ಸೃಷ್ಟಿಸಲು ಬೇಕಾಗುವ ಮೂಲಭೂತವಾದ ಭೂಮಿ, ಗಾಳಿ, ನೀರು, ಮತ್ತು ಬೆಂಕಿಯನ್ನು ಸೂಚಿಸುತ್ತದೆ. ರುದ್ರ ಎಂದರೆ ಭಯಂಕರ ಎಂದೂ ಅರ್ಥವಿದೆ. ರುದ್ರಾಕ್ಷಿ ಧರಿಸುವುದರಿಂದ ಯಾವುದೇ ಭಯಭೀತಿ ಇರುವುದಿಲ್ಲ.
ಗಂಗೆ:ಶಿವನ ತಲೆಯ ಮೇಲೆ ಗಂಗೆ ಇರುವುದು. ಭಗೀರಥ ರಾಜನು ಕಠಿಣ ತಪಸ್ಸುಮಾಡಿ ಶಿವನನ್ನು ಒಲಿಸಿಕೊಂಡು ಗಂಗೆ ಧರೆಗೆ ಬರಲು ಹೇಳಿದ ಷರತ್ತನ್ನು ಹೇಳುತ್ತಾನೆ. ಶಿವ ತನ್ನ ಜಡೆಯನ್ನು ಬಿಚ್ಚಿ ಆಕಾಶಕ್ಕೆ ಹರಡಿಕೊಂಡು ಗಂಗೆ ಸ್ವರ್ಗದಿಂದ ಧುಮುಕುವಲ್ಲಿ ನಿಂತು ಜಡೆಯಲ್ಲಿ ಹಿಡಿದಿಟ್ಟುಕೊಳ್ಳುತ್ತಾನೆ. ಎಷ್ಟು ಪ್ರಯತ್ನಪಟ್ಟರೂ ಗಂಗೆ ಶಿವನ ಜಡೆಯಿಂದ ಬಿಡಿಸಿಕೊಳ್ಳಲು ಆಗುವುದಿಲ್ಲ. ಭಗೀರಥ ತಪಸ್ಸು ಮಾಡಿ ಗಂಗೆಯನ್ನು ಬಿಡಲು ಕೇಳಿಕೊಳ್ಳುತ್ತಾನೆ. ಶಿವ ಶಾಂತನಾಗಿ ಗಂಗೆಯನ್ನು ಧಾರೆಯಾಗಿ ತನ್ನ ಜಡೆಯಿಂದ ಬಿಡುತ್ತಾನೆ. ಈ ಕಾರಣಕ್ಕಾಗಿ ಶಿವನನ್ನು ‘ಗಂಗಾಧರ’ ಎಂದು ಕರೆಯುವುದು.
ತ್ರಿಶೂಲ:ಶಿವನ ಕೈಯಲ್ಲಿ ತ್ರಿಶೂಲ ಇರುವುದು. ಇದರಲ್ಲಿರುವ ಮೂರು ಮೊನೆಗಳು ತ್ರಿಗುಣವಾದ ಸೃಷ್ಟಿ, ಸ್ಥಿತಿ ಮತ್ತು ಲಯದ ಸಂಕೇತ. ಹಾಗೂ ರಕ್ಷಣೆ ಮತ್ತು ಆಕ್ರಮಣದ ದ್ಯೋತಕ. ಮೂರು ಗುಣವನ್ನು ಅರಿತರೆ ರಕ್ಷಣೆ ಸಿಗುವುದು; ಮರೆತರೆ ಆಕ್ರಮಣ ಆಗುವುದು ಎಂದು ಪ್ರತಿನಿಧಿಸುತ್ತದೆ.
ಚಂದ್ರ:ಶಿವನ ತಲೆಯ ಮೇಲೆ ರಾರಾಜಿಸುತ್ತಿರುವ ಚಂದ್ರ ಸಮಯದ ಸಂಕೇತ. ಏಕೆಂದರೆ ಶುಕ್ಲಪಕ್ಷದಲ್ಲಿ ಪೃಥ್ವಿಯಾಗಿ ಕೃಷ್ಣಪಕ್ಷದಲ್ಲಿ ಕ್ಷಯವಾಗಿರುತ್ತಾನೆ.
ಹುಲಿಚರ್ಮ:ಶಿವನು ಹುಲಿಯ ಚರ್ಮ ಧರಿಸಿ ಅದರ ಮೇಲೆ ಕುಳಿತಿರುವನು. ಹುಲಿ ದುರ್ಗೆಯ ವಾಹನ. ಈಕೆ ಶಕ್ತಿಯ ದೇವತೆ. ಹುಲಿ ಕಾಮದ ಸಂಕೇತ. ಶಿವ ಶಕ್ತಿಯ ಒಡೆಯನಾಗಿರುವನು ಮತ್ತು ಕಾಮವನ್ನು ಗೆದ್ದಿರುವವನು ಎಂಬುದನ್ನು ಮತ್ತು ವೈರಾಗ್ಯ ಮೂರ್ತಿ ಎಂಬುದನ್ನು ತೋರಿಸುತ್ತದೆ.
ಬಿಲ್ವಪತ್ರೆ:ವಿಷ್ಣು ತುಳಸಿಪ್ರಿಯನಾದರೆ ಶಿವನು ಬಿಲ್ವಪತ್ರೆ ಪ್ರಿಯ. ಇದರಲ್ಲಿ ಮೂರು ದಳಗಳು ಸೇರಿ ಒಂದು ಕಾಂಡ ಇರುತ್ತದೆ. ಈ ದಳಗಳು ಸ್ತೋತ್ರಂ, ಸ್ತುತ್ಯ ಹಾಗೂ ಸ್ತುತಿ. ಅಂದರೆ ಪೂಜಕನೂ ನೀನೇ; ಪೂಜಿಸಲ್ಪಡುವವನೂ ನೀನೇ ಹಾಗೂ ಪೂಜಾ ಕೈಯೂ ನೀನೇ ಎಂದು ಪೂಜಿಸಬೇಕು. ಒಂದು ಬಿಲ್ವಪತ್ರೆಯಿಂದ ಶಿವನನ್ನು ಭಕ್ತಿ-ಶ್ರದ್ಧೆಯಿಂದ ಪೂಜಿಸಿದರೆ ಘೊರವಾದ ಪಾಪಗಳು ನಾಶವಾಗಿ ಸಾವಿರದಷ್ಟು ಅಧಿಕಫಲ ಸಿಗುತ್ತದೆ.
ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ |
ಉರ್ವಾರುಕುವಿವ ಬಂಧನಾತ್ ಮೃತ್ಯೋಮುಕ್ಷೀಯ ಮ್ಯಾಮೃತಾತ್
‘ಮೂರು ಕಣ್ಣಿನವನಾದ ಈಶ್ವರನನ್ನು ನಾನು ಧ್ಯಾನಿಸುತ್ತೇನೆ. ದೇಹದ ಮೋಹ ಕಳಚಿ ಮುಕ್ತಿ ದರ್ಶನ ಆಗಲಿ ಮತ್ತು ಅಪಮೃತ್ಯುವಿನಿಂದ ಪಾರುಮಾಡಿ ಆಯಸ್ಸನ್ನು ಕೊಡಲಿ’ ಎಂದು ಪ್ರಾರ್ಥಿಸಬೇಕು. ಶಿವ ಶಿವ ಎಂದರೆ ಭಯ ಇರುವುದಿಲ್ಲ.
ಶಿವರಾತ್ರಿ ಏಕಾಂತದ ಭಕ್ತಿಯ ವ್ರತ. ಆತ್ಮೋನ್ನತಿಯತ್ತ ಕರೆದುಕೊಂಡು ಹೋಗುವ ಹಬ್ಬ. ಶಿವರಾತ್ರಿ ದಿನ ಉಪವಾಸ ಮಾಡುವುದರಿಂದ ದೇಹ, ಇಂದ್ರಿಯ, ಮನಸ್ಸು ಹತೋಟಿಗೆ ಬರುವುದು. ಜಾಗರಣೆ ಮಾಡುವುದರಿಂದ ದೇಹವು ಜಾಗೃತಸ್ಥಿತಿಗೆ ಹೋಗುತ್ತದೆ. ಶಿವನನ್ನು ಭಕ್ತಿಯಿಂದ ಜಪಿಸಿದರೆ ಬೇಗ ಒಲಿವನು.
(ಲೇಖಕರು ಆಧ್ಯಾತ್ಮಿಕ ಚಿಂತಕರು)
ಇನ್ನೇನು ನಿಮ್ಮ ಕೆಲಸದ ಅವಧಿ ಮುಗಿಯುತ್ತೆ, ಮನೆಗೆ ಹೊರಡಿ: ಈ ಕಂಪನಿಯಲ್ಲಿ ಉದ್ಯೋಗಿಗಳಿಗೆ ಹೀಗೊಂದು ಎಚ್ಚರಿಕೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + one =
Remember me
