ಬೆಂಗಳೂರು:ಬಡಾವಣೆ ಅನುಮೋದನೆ, ನಕ್ಷೆ ಮಂಜೂರಾತಿ ಇಲ್ಲದೆ ನಿಯಮ ಉಲ್ಲಂಘಿಸಿ ಕಂದಾಯ ಭೂಮಿಯಲ್ಲಿ ನಿರ್ಮಿಸಿದ ಕಟ್ಟಡಗಳಿಗೆ ಬಿಬಿಎಂಪಿ ರೀತಿಯಲ್ಲೇ ರಾಜ್ಯದ್ಯಂತ ಏಕರೂಪ ತೆರಿಗೆ ವಿಧಿಸುವುದು ಸೂಕ್ತ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸೌಧದ ಸಮಿತಿ ಸಭಾಂಗಣದಲ್ಲಿಂದು ನಡೆದ ಬಿಬಿಎಂಪಿ ಕಾಯ್ದೆ 2020ರ ಕಲಂ 144(6) ಮತ್ತು (21)ರ ಅಂಶಗಳನ್ನು ರಾಜ್ಯದ ಇತರ ಮಹಾನಗರ ಪಾಲಿಕೆಗಳಿಗೆ /ನಗರ ಸ್ಥಳೀಯ ಸಂಸ್ಥೆಗಳಿಗೆ ವಿಸ್ತರಣೆ ಮಾಡಲು, ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ 1976 ಹಾಗೂ ಕರ್ನಾಟಕ ಪುರಸಭೆ ಕಾಯ್ದೆ 1964ರಲ್ಲಿ ಅಳವಡಿಸಿಕೊಳ್ಳುವ ಕುರಿತು ಸಾಧಕ-ಬಾಧಕ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳುವ ಹಿನ್ನೆಲೆಯಲ್ಲಿ ರಚಿಸಲಾಗಿರುವ ಉಪಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅನಧಿಕೃತವಾಗಿ ಕಟ್ಟಿರುವ ಕಟ್ಟಡಗಳಿಗೆ ಒಂದು ಬಾರಿ ಅವಕಾಶ ನೀಡಿ ದಂಡ ವಿಧಿಸಿ, ಮೊದಲ ವರ್ಷ ದುಪ್ಪಟ್ಟು ತೆರಿಗೆ ವಿಧಿಸಿ, ನಂತರದ ವರ್ಷಗಳಲ್ಲಿ ನಿಯಮಿತವಾಗಿ ತೆರಿಗೆ ವಿಧಿಸಬಹುದು ಎಂದು ಸಲಹೆ ನೀಡಿದರು.
ಇನ್ನು ಮುಂದೆ ಯಾರೇ ಅನಧಿಕೃತವಾಗಿ ಬಡಾವಣೆ ನಿರ್ಮಿಸಿ ಸಂಬಂಧಿತ ಸ್ಥಳೀಯ ಸಂಸ್ಥೆಗಳಿಂದ ನಕ್ಷೆ ಮಂಜೂರಾತಿ ಇಲ್ಲದೆ ಕಟ್ಟಡ ನಿರ್ಮಿಸಿದರೆ ಅಂತಹವರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವಂತೆ ಕಾನೂನಿಗೆ ತಿದ್ದುಪಡಿ ತರುವುದು ಅಗತ್ಯ. ಇಲ್ಲವಾದರೆ ಅನಧಿಕೃತ ಬಡಾವಣೆಗಳು ರಾಜ್ಯದಾದ್ಯಂತ ನಾಯಿಕೊಡೆಗಳಂತೆ ತಲೆ ಎತ್ತುತ್ತಲೇ ಇರುತ್ತವೆ. ಹೀಗಾಗಿ ಕಾನೂನು ತಂದು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವುದು ಅಗತ್ಯ ಎಂದು ಹೇಳಿದರು.
ಯಾರೇ ನ್ಯಾಯಸಮ್ಮತವಾಗಿ ಸಾರ್ವಜನಿಕ ಉದ್ದೇಶಕ್ಕೆ ಜಾಗ ಬಿಟ್ಟು ಬಡಾವಣೆ ನಿರ್ಮಿಸಲು ಮುಂದಾದರೆ ಮತ್ತು ಮನೆ ನಿರ್ಮಾಣ ಮಾಡಲು ನಿಯಮಾನುಸಾರ ನಕ್ಷೆ ಮಂಜೂರಾತಿ ಬಯಸಿದಲ್ಲಿ ನಿಯಮ ಸರಳೀಕರಣ ಮಾಡಬೇಕು. ಮುಖಾಮುಖಿ ರಹಿತವಾಗಿ ನಿರ್ದಿಷ್ಟ ಕಾಲಮಿತಿಯೊಳಗೆ ಮಂಜೂರಾತಿ ಲಭಿಸುವಂತೆ ತಂತ್ರಾಂಶ ಅಭಿವೃದ್ಧಿ ಪಡಿಸುವ ಅಗತ್ಯವನ್ನೂ ಪ್ರತಿಪಾದಿಸಿದರು.
ಯಾರೊಬ್ಬರೂ ನಕಲಿ ಖಾತೆ ಪಡೆದು ನೋಂದಣಿ ಮಾಡಿಸದಂತೆ ಕಾವೇರಿ ತಂತ್ರಾಂಶದಲ್ಲಿ ಮಾರ್ಪಾಡು ಮಾಡಿದರೆ ಆಗ ಅನಧಿಕೃತ ಬಡಾವಣೆ, ಕಟ್ಟಡಗಳನ್ನು ನಿಯಂತ್ರಿಸಬಹುದು ಎಂದು ಈಶ್ವರ ಖಂಡ್ರೆ ಸಲಹೆದರು.
ನೂತನವಾಗಿ ಯಾವುದೇ ಸಮುಚ್ಚಯಗಳನ್ನು, ಗುಂಪು ಮನೆಗಳನ್ನು ಮತ್ತು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸುವಾಗ ಜಲಕಾಯಿದೆ, ವಾಯು ಕಾಯಿದೆ ಮತ್ತು ಪರಿಸರ ಸಂರಕ್ಷಣೆ ಕಾಯಿದೆ ಉಲ್ಲಂಘಿಸಿ ಕಟ್ಟಡ ನಿರ್ಮಿಸುವವರ ವಿರುದ್ಧ ಕಾನೂನು ರೀತ್ಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ನಕ್ಷೆ ಮಂಜೂರಾತಿ ಪಡೆದ ಬಳಿಕ ನಿಯಮ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಿಸುವವರ ವಿರುದ್ಧವೂ ಕ್ರಮ ಜರುಗಿಸಬೇಕು. ನಿರ್ಮಾಣ ಹಂತದಲ್ಲಿಯೇ ಇಂತಹ ಕಟ್ಟಡ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.ಈವರೆಗೆ ನಡೆದಿರುವ ಎಲ್ಲ ಸಭೆಗಳಲ್ಲಿ ನಡೆದ ಚರ್ಚೆಯ ಅಂಶಗಳನ್ನು ಕ್ರೋಡೀಕರಿಸಿ, ವಿಧೇಯಕ ರೂಪಿಸಲು ಮತ್ತು ಬಿಬಿಎಂಪಿಯಲ್ಲಿ ಬಿ ವಹಿಯಡಿ ಕಟ್ಟಡ ತೆರಿಗೆ ವಿಧಿಸುತ್ತಿರುವ ರೀತಿಯಲ್ಲೇ ರಾಜ್ಯದ ಇತರ ಪ್ರದೇಶಗಳಲ್ಲೂ ತೆರಿಗೆ ಸಂಗ್ರಹಿಸಲು ನಿಯಮಾವಳಿ ರೂಪಿಸುವಂತೆ ಈಶ್ವರ ಖಂಡ್ರೆ ಸೂಚಿಸಿದರು.ಪೌರಾಡಳಿತ ಸಚಿವ ರಹೀಂ ಖಾನ್ ಮತ್ತು ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತಿತರ ಅಧಿಕಾರಿಗಳು ಭಾಗಿಯಾಗಿದ್ದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nineteen − fifteen =
Remember me
