|ಹರೀಶ್ ಬೇಲೂರುಬೆಂಗಳೂರು
ಕರೊನಾ ಲಾಕ್​ಡೌನ್​ನಿಂದಾಗಿ ಉದ್ಯೋಗ ನಷ್ಟ, ವ್ಯಾಪಾರ ಸ್ಥಗಿತದಂತಹ ಸಂಕಷ್ಟಕ್ಕೆ ಸಿಲುಕಿ ಜನಸಾಮಾನ್ಯರು ಕಷ್ಟಪಡುತ್ತಿರುವ ಸಂದರ್ಭದಲ್ಲೇ ಪೆಟ್ರೋಲ್, ಡೀಸೆಲ್, ಎಲ್ಪಿಜಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರುತ್ತಲೇ ಇರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ತೈಲ ಬೆಲೆ ಶತಕದಂಚಿಗೆ ಸುಳಿದಿದ್ದರೆ, ಎಲ್ಪಿಜಿಯೂ ತುಟ್ಟಿಯಾಗಿದೆ. ಅಡುಗೆ ಎಣ್ಣೆ ದರ ಲೀಟರ್​ಗೆ 180 ರೂ. ತಲುಪಿದ್ದರೆ, ತೊಗರಿಬೇಳೆ ಕೆಜಿಗೆ 160 ರೂ. ಆಸುಪಾಸಿಗೆ ತಲುಪಿದೆ. ಸಿಮೆಂಟ್, ಸ್ಟೀಲ್ ಬೆಲೆ ಕೂಡ ಕೈಸುಡುತ್ತಿದೆ.
ಕಾರಣ ಏನು?:ಉತ್ಪಾದನೆ ವೆಚ್ಚ ಕಡಿಮೆ ಇದ್ದರೂ ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದಾಗಿ ಸಾಗಣೆ ಇನ್ನಿತರ ವೆಚ್ಚ ಹೆಚ್ಚುತ್ತಿದೆ. ಹೀಗಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಜನಸಾಮಾನ್ಯರಿಗೆ ನೇರವಾಗಿ ಹೊಡೆತ ನೀಡುತ್ತಿದೆ.
ವರ್ಷದಲ್ಲಿ 215 ರೂ. ಹೆಚ್ಚಳ:ಕಳೆದೊಂದು ವರ್ಷದಲ್ಲಿ 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ ಅಂದಾಜು 215 ರೂ. ಹೆಚ್ಚಳವಾಗಿದೆ. ಪ್ರಸ್ತುತ ಸಬ್ಸಿಡಿ ರಹಿತ ಸಿಲಿಂಡರ್ ದರ 812 ರೂ. ಇದೆ. 19 ಕೆಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ 1,701 ರೂ. ಇದೆ. ಕರೊನಾದಿಂದ ಈವರೆಗೆ ಗೃಹ ಬಳಕೆಯ ಸಿಲಿಂಡರ್ ದರದಲ್ಲಿ 4 ಬಾರಿ ತಲಾ 50 ರೂ. ಹಾಗೂ ಒಂದು ಬಾರಿ 25 ರೂ. ಹೆಚ್ಚಳವಾಗಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು ನಾಲ್ಕು ಬಾರಿ ಹೆಚ್ಚಿಸಲಾಗಿದೆ.
ಶೇ.97 ಕುಟುಂಬಕ್ಕೆ ಆಘಾತ:ಕಳೆದ ವರ್ಷ ಮಹಾಮಾರಿ ಆರಂಭವಾದಾಗಿನಿಂದ ಶೇ.97 ಕುಟುಂಬಗಳ ಆದಾಯದಲ್ಲಿ ಕುಸಿತವಾಗಿದೆ ಎಂದು ಭಾರತೀಯ ಆರ್ಥಿಕತೆ ನಿಗಾ ಕೇಂದ್ರ (ಸಿಎಂಐಇ)ದ ಸಿಇಒ ಮಹೇಶ ವ್ಯಾಸ್ ಹೇಳುತ್ತಾರೆ. ಸಂಸ್ಥೆಯ ಅಧ್ಯಯನದ ಪ್ರಕಾರ ಏಪ್ರಿಲ್​ನಲ್ಲಿ ಶೇ. 8 ಇದ್ದ ನಿರುದ್ಯೋಗ ಮೇ ಅಂತ್ಯಕ್ಕೆ ಶೇ. 12ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಅನೇಕರು ಸೋಂಕಿಗೆ ತುತ್ತಾಗಿ ಗೆದ್ದು ಬಂದಿದ್ದಾರೆ. ಆದರೆ ಬೃಹತ್ ಪ್ರಮಾಣದ ವೈದ್ಯಕೀಯ ವೆಚ್ಚ ಭರಿಸಿರುವ ಇವರು ಸಾಲ ಮರುಪಾವತಿಸಲು ಆಸ್ತಿ, ಒಡವೆ ಅಡಮಾನವಿಡುತ್ತಿದ್ದಾರೆ ಎಂದು ವ್ಯಾಸ್ ಹೇಳಿದ್ದಾರೆ.
200ರ ಗಡಿಯತ್ತ ಅಡುಗೆ ಎಣ್ಣೆ:ಸೂರ್ಯಕಾಂತಿ, ಸೋಯಾಬಿನ್, ಸಾಸಿವೆ ಎಣ್ಣೆ, 80 ರೂ.ಗಳಿಂದ 180 ರೂ.ಗೆ ಜಿಗಿತವಾಗಿದೆ. ಕಳೆದ 11 ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ದರ ಏರಿಕೆಯಾಗಿದೆ. ಭಾರತವು ಶೇ.65 ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಜಾಗತಿಕ ಮಟ್ಟದಲ್ಲಿ ಉತ್ಪಾದನೆ ಕುಸಿತ ಹಾಗೂ ಆಮದು ಸುಂಕ ಏರಿಕೆಯಿಂದಾಗಿ 2020ರಿಂದ ಖಾದ್ಯ ತೈಲ ದರಗಳು ಏರಿಕೆಯಾಗುತ್ತಿವೆ. ಮಲೇಷ್ಯಾ, ಇಂಡೊನೇಷ್ಯಾ, ಅರ್ಜೆಂಟೀನಾ, ಬ್ರೆಜಿಲ್, ಉಕ್ರೇನ್​ನಿಂದ ವಾರ್ಷಿಕ 1.35 ಕೋಟಿ ಟನ್ ಖಾದ್ಯ ತೈಲ ಭಾರತಕ್ಕೆ ಆಮದಾಗುತ್ತಿದೆ. ಖಾದ್ಯ ತೈಲಗಳ ಮೇಲೆ ಭಾರತ ಶೇ.35 ಸುಂಕ ವಿಧಿಸುತ್ತಿದೆ.
ಶತಕದ ಸನಿಹಕ್ಕೆ ಇಂಧನ:ಕರೊನಾ ಲಾಕ್​ಡೌನ್ ನಡುವೆಯೇ ಮೇ 4ರಿಂದ ಜೂ.4ರವರೆಗೆ 18 ಬಾರಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳಗೊಂಡಿದೆ. ಶುಕ್ರವಾರ ಪ್ರತಿ ಲೀಟರ್ ಪೆಟ್ರೋಲ್ 27 ಪೈಸೆ ಹಾಗೂ ಡೀಸೆಲ್ ಬೆಲೆ 28 ಪೈಸೆ ಹೆಚ್ಚಳವಾಗಿದೆ. ಆ ಮೂಲಕ 18 ದಿನದಲ್ಲಿ ಲೀಟರ್ ಪೆಟ್ರೋಲ್ ಮೇಲೆ 4.36 ರೂ. ಹಾಗೂ ಡೀಸೆಲ್ ಮೇಲೆ 4.93 ರೂ. ಏರಿಕೆ ಆಗಿದೆ. ಸದ್ಯ ಬೆಂಗಳೂರಿನಲ್ಲಿ ಪೆಟ್ರೋಲ್​ಗೆ 97.92 ರೂ ಹಾಗೂ ಡೀಸೆಲ್​ಗೆ 90.81 ರೂ.ಇದೆ.
ಬೇಳೆಯೂ ದುಬಾರಿ:2020ರ ಅಕ್ಟೋಬರ್​ನಲ್ಲಿ ಕೆಜಿ ತೊಗರಿಬೇಳೆಗೆ 90 ರೂ. ಇತ್ತು. ಈಗ 160 ರೂ.ಆಗಿದೆ. ಬರುವ ದಿನಗಳಲ್ಲಿ ಮತ್ತಷ್ಟು ದರ ಏರಿಕೆ ಸಾಧ್ಯತೆಯಿದೆ ಎನ್ನುತ್ತಾರೆ ವ್ಯಾಪಾರಿಗಳು.
ಟನ್ ಸ್ಟೀಲ್​ಗೆ 57 ಸಾವಿರ ರೂ.:5 ತಿಂಗಳ ಹಿಂದೆ ಸಿಮೆಂಟ್ ಬೆಲೆ 320 ರೂ. ಇತ್ತು. ಈಗ 430 ರೂ.ಆಗಿದೆ. ಒಂದು ಟನ್ ಸ್ಟೀಲ್​ಗೆ 43 ಸಾವಿರ ಇತ್ತು. ಈಗ 57 ಸಾವಿರ ರೂ.ಆಗಿದೆ. ಪ್ರತಿನಿತ್ಯ ಈ ವಸ್ತುಗಳ ದರ ವ್ಯತ್ಯಾಸವಾಗುತ್ತಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಳದಿಂದ ಸಾಗಣೆ ದರ ಹೆಚ್ಚಾಗಿ ಬೆಲೆ ಏರಿಕೆ ಆಗುತ್ತಿದೆ. ಸ್ಟೀಲ್ ಮತ್ತು ಸಿಮೆಂಟ್ ದರ ನಿಯಂತ್ರಣ ಪ್ರಾಧಿಕಾರ ರಚಿಸಿ ದರಕ್ಕೆ ಕಡಿವಾಣ ಹಾಕದಿದ್ದರೆ ಸಾರ್ವಜನಿಕರಿಗೆ ಮತ್ತಷ್ಟು ಹೊರೆ ಬೀಳಲಿದೆ ಎನ್ನುತ್ತಾರೆ ಬಿಲ್ಡರ್ ಅಸೋಸಿಯೇಷನ್ ಆಫ್ ಇಂಡಿಯಾ ಕರ್ನಾಟಕ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್.
ಕರೊನಾದಿಂದ ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಇದರಿಂದ, ನಷ್ಟವಾಗಿರುವ ಆದಾಯವನ್ನು ಸರಿದೂಗಿಸಲು ಇಂಧನ ದರವನ್ನು ಹೆಚ್ಚಿಸಲಾಗುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್​ಟಿ ವ್ಯಾಪಿಗೆ ತಂದರೆ ದರ ಕಡಿಮೆಯಾಗಲಿದೆ.
|ಕೆ.ಎಂ.ಬಸವೇಗೌಡಅಖಿಲ ಕರ್ನಾಟಕ ಪೆಟ್ರೋಲಿಯಂ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ.
ಇರಾನ್​ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳದಂತೆ ಅಮೆರಿಕ ನಿರ್ಬಂಧ ಹೇರಿದೆ. ಆ ನಿರ್ಬಂಧವನ್ನು ತೆರವುಗೊಳಿಸಿದರೆ ದೇಶದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಸರಾಸರಿ 30-40 ರೂ.ಇಳಿಸಬಹುದು.
|ಎ. ತಾರಾನಾಥಅಖಿಲ ಕರ್ನಾಟಕ ಪೆಟ್ರೋಲಿಯಂ ವ್ಯಾಪಾರಿಗಳ ಒಕ್ಕೂಟ ಸದಸ್ಯ
ರಾಜ್ಯ, ಮಲೇಷ್ಯಾ ಸರ್ಕಾರಗಳ ನಡುವಿನ ಗೊಂದಲದಿಂದ ಒಂದು ವರ್ಷದಿಂದ ಪಾಮ್ ಆಯಿಲ್ ಬರುತ್ತಿಲ್ಲ. ಈಗ ಇಂಡೊನೇಷ್ಯಾ ಒಂದೇ ರಾಜ್ಯ ಸೇರಿ ದೇಶದ ಎಲ್ಲ ಕಡೆಗೆ ಸರಬರಾಜು ಮಾಡಬೇಕಿರುವುದರಿಂದ ಬೇಡಿಕೆ ಹೆಚ್ಚಾಗುತ್ತಿದೆ.
| ಎಪಿಎಂಸಿ ಸಗಟು ಮಳಿಗೆ ವ್ಯಾಪಾರಿ
ಜೂ. 14ರ ಬಳಿಕವೂ ಲಾಕ್​ಡೌನ್​ ಮುಂದುವರಿಯುತ್ತಾ?: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಲೆಕ್ಕಾಚಾರ ಏನು?

ಕಸದ ರಾಶಿ ಬಳಿ ಹಿರಿಯ ನಟಿ ಬಿ. ಜಯಾ ಶವ; ಅಸಲಿಗೆ ಅಲ್ಲಿ ನಡೆದಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − four =
Remember me
