ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜ್ಯದಲ್ಲಿ ಮಳೆ ಮತ್ತೆ ಅಬ್ಬರಿಸತೊಡಗಿದ್ದು, ಗುಡ್ಡಕುಸಿತ, ನದಿಗಳ ಪ್ರವಾಹ ಆತಂಕದ ವಾತಾವರಣ ಸೃಷ್ಟಿಸಿದೆ. ಕರಾವಳಿಯಲ್ಲಿ ಒಂದೆರಡು ದಿನಗಳ ಅಲ್ಪವಿರಾಮ ಪಡೆದಿದ್ದ ಮಳೆ ಸೋಮವಾರ ಸಂಜೆಯಿಂದ ನಿರಂತರ ಅಬ್ಬರಿಸಿದೆ. ಮಂಗಳೂರು, ಮೂಡುಬಿದಿರೆ ಹಾಗೂ ಕಡಬದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, 43 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ. ಬಂಟ್ವಾಳ, ಉಪ್ಪಿನಂಗಡಿ, ಬಂಟ್ವಾಳ ಸಮೀಪ ನೇತ್ರಾವತಿ ನದಿ ಅಪಾಯ ಮಟ್ಟ ಮೀರಿ ಹರಿದಿದೆ. ಫಲ್ಗುಣಿ ನದಿಯೂ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಮರವೂರು ಹಳೇ ಡ್ಯಾಂ ಮುಳುಗಡೆಯಾಗಿದೆ. ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳೆರಡು ಉಕ್ಕಿ ಹರಿದು ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗ ಸಂಗಮಿಸಿ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಯಿತು. ಉಡುಪಿ ಜಿಲ್ಲೆಯಲ್ಲಿ 50 ಮಿ.ಮೀ ಸರಾಸರಿ ಮಳೆಯಾಗಿದೆ. ಭಾರಿ ಗಾಳಿಯಿಂದ 21 ಮನೆಗಳಿಗೆ ಹಾನಿಯಾಗಿದೆ.
ರೆಡ್ ಅಲರ್ಟ್:ಕೊಡಗಿನಲ್ಲಿ 2018ರ ದುರಂತ ನೆನಪಿಸುವ ರೀತಿಯಲ್ಲಿ ಮಳೆಯಾಗುತ್ತಿದೆ. ಕಾವೇರಿ ಮತ್ತು ಹಾರಂಗಿ ಜಲಾನಯನ ಪ್ರದೇಶದಲ್ಲಿ ಮತ್ತೆ ಮಳೆ ಸುರಿಯುತ್ತಿದ್ದು, ನದಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೊಷಿಸಲಾಗಿದೆ.
ಭಾಗಮಂಡಲದಲ್ಲಿ ತ್ರಿವೇಣಿ ಸಂಗಮ ಪ್ರವಾಹದ ನೀರಿನಲ್ಲಿ ಮುಳುಗಿದೆ. ಭಾಗಮಂಡಲ-ನಾಪೋಕ್ಲು ಮತ್ತು ಭಾಗಮಂಡಲ-ಮಡಿಕೇರಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಭಗಂಡೇಶ್ವರ ದೇವಾಲಯದ ಮೆಟ್ಟಿಲುಗಳ ತನಕ ನೀರು ಬಂದಿದೆ. ಬೆಟಗೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಂಬಾರಕೊಪ್ಪ ರಸ್ತೆ ಬದಿ ಮಣ್ಣು ಕುಸಿದಿದ್ದು, ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಕೆ.ಆರ್.ಎಸ್. ಅಣೆಕಟ್ಟೆಯಿಂದ 1.20 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ಬೆಳಗೊಳ ಗ್ರಾಮ ಸಮೀಪವಿರುವ ಪ್ರವಾಸಿ ತಾಣ ಬಲಮುರಿ ಫಾಲ್ಸ್ ಜಲಾವೃತಗೊಂಡಿದ್ದು, ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಿ ಜಿಲ್ಲಾಡಳಿತ ಆದೇಶಿಸಿದೆ.

ಕೃಷ್ಣೆ, ಘಟಪ್ರಭೆ ನದಿಗಳ ಅಬ್ಬರ:ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ ಮತ್ತು ಘಟಪ್ರಭಾ ನದಿಗಳ ಪ್ರವಾಹ ಅಬ್ಬರ ಜೋರಾಗಿದೆ. ಘಟಪ್ರಭಾ ನದಿ ತೀರದ ಗ್ರಾಮಗಳ ಜನಜೀವನ ನಲುಗಿದೆ. ರಸ್ತೆ. ಸೇತುವೆಗಳು ಮುಳುಗಿದ್ದು, ಶಾಲೆ ಮೈದಾನಗಳು ಕೆರೆಯಂತಾಗಿ ಕೊಠಡಿಗಳಿಗೆ ನೀರು ನುಗ್ಗಿದೆ. ಮುಧೋಳ ತಾಲೂಕಿನ ಆರಕ್ಕೂ ಹೆಚ್ಚು ಶಾಲೆಗಳು ಜಲಾವೃತವಾಗಿವೆ. ಜಮಖಂಡಿ ತಾಲೂಕಿನಲ್ಲಿ ಕೃಷ್ಣಾ ನದಿ ಆರ್ಭಟದಿಂದಾಗಿ ನಾಲ್ಕೈದು ಶಾಲೆಗಳು ಜಲಾವೃತವಾಗಿವೆ. ಮಲಪ್ರಭಾ ನದಿ ತೀರದಲ್ಲೂ ಪ್ರವಾಹ ಭೀತಿ ಶುರುವಾಗಿದೆ. ನವಿಲುತೀರ್ಥ ಜಲಾಶಯದಿಂದ 5 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಪಾಯದ ಸುಳಿವು ನೀಡುತ್ತಿದೆ.
ಕಾರವಾರ:ಅಂಕೋಲಾ ತಾಲೂಕು ಶಿರೂರು ಗುಡ್ಡ ಕುಸಿತದ ಪರಿಣಾಮ ಗಂಗಾವಳಿ ನದಿಯಲ್ಲಿ ಸಿಲುಕಿರಬಹುದಾದ ಮೂವರ ಮೃತ ದೇಹಗಳು, ಲಾರಿ ಹಾಗೂ ಇತರ ಅವಶೇಷಗಳನ್ನು ತೆರವು ಮಾಡಲು ಆಗಸ್ಟ್ 3 ಹಾಗೂ 4 ರಂದು ಕಾರ್ಯಾಚರಣೆ ನಡೆಸಲು ಯೋಜನೆ ರೂಪಿಸಲಾಗಿದೆ. ಆಗಸ್ಟ್ 4ರಂದು ಅಮಾವಾಸ್ಯೆ ಇದ್ದು, ಸಮುದ್ರದಲ್ಲಿ ಉಬ್ಬರ-ಇಳಿತದ ಪರಿಣಾಮ ನದಿ ನೀರಿನ ಹರಿವು ನಿಧಾನವಾಗುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ಕೇರಳದಿಂದ ಡ್ರೆಜ್ಜಿಂಗ್ ಯಂತ್ರ ತಂದು ಕಾರ್ಯಾಚರಿಸಲು ಯೋಜಿಸಲಾಗಿದೆ ಎಂದು ಶಾಸಕ ಸತೀಶ ಸೈಲ್ ತಿಳಿಸಿದ್ದಾರೆ.
ಕೇರಳ ಸರ್ಕಾರದ ಸೂಚನೆಯಂತೆ ತ್ರಿಶೂರ್​ನ ಕೃಷಿ ಅಧಿಕಾರಿಗಳಾದ ಬಿಬಿನ್ ಸಿ. ಹಾಗೂ ಪ್ರದೀಶ್ ಅವರು ಅಗ್ರೋ ಡೆಡ್ಸ್ ಕ್ರಾಫ್ಟ್ ಡ್ರೆಜ್ಜಿಂಗ್ ಯಂತ್ರದ ತಯಾರಕ, ಆಪರೇಟರ್ ನಿತಿನ್ ಅವರೊಂದಿಗೆ ಮಂಗಳವಾರ ಆಗಮಿಸಿ ಗಂಗಾವಳಿಯಲ್ಲಿ ಸ್ಥಳ ಪರಿಶೀಲನೆ ನಡೆಸಿದರು.
ಕೃಷ್ಣಾ, ಘಟಪ್ರಭಾ, ಮಾರ್ಕಂಡೇಯ ನದಿಗಳ ಪ್ರವಾಹಕ್ಕೆ ಜಿಲ್ಲೆಯಲ್ಲಿ 42 ಗ್ರಾಮಗಳು ಜಲಾವೃತಗೊಂಡಿದ್ದು, ಕಾಳಜಿ ಕೇಂದ್ರಗಳಲ್ಲಿ 2,450 ಕುಟುಂಬಗಳು ಆಶ್ರಯ ಪಡೆದುಕೊಂಡಿವೆ. ಮತ್ತೊಂದೆಡೆ ಜಿಲ್ಲಾಡಳಿತ ಆರಂಭಿಸಿರುವ ಜಾನುವಾರು ಶಿಬಿರಗಳಲ್ಲಿ 10 ಸಾವಿರಕ್ಕೂ ಅಧಿಕ ಹಸು, ಎತ್ತು, ಎಮ್ಮೆ, ಕುರಿ, ಮೇಕೆ ರಕ್ಷಣೆ ಮಾಡಲಾಗಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರು ಬಿಡಲಾಗುತ್ತಿದೆ. ಮಂಗಳವಾರ ಕೃಷ್ಣಾ ನದಿಗೆ 2.90 ಲಕ್ಷ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಮತ್ತೊಂದೆಡೆ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿರುವುದರಿಂದ ನದಿ ದಡದ 42 ಗ್ರಾಮಗಳು ಜಲಾವೃತಗೊಂಡಿವೆ.

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣ ಮತ್ತೆ ಅಬ್ಬರಿಸುತ್ತಿದ್ದರಿಂದ ಭದ್ರಾ ಜಲಾಶಯ ಭರ್ತಿಯಾಗಿದೆ. ಜಲಾಶಯ ಗರಿಷ್ಠ ಮಟ್ಟ ತಲುಪುತ್ತಿದ್ದಂತೆ ಮಂಗಳವಾರ ನಾಲ್ಕು ಕ್ರಸ್ಟ್​ಗೇಟ್ ಮೂಲಕ 30 ಸಾವಿರ ಕ್ಯೂಸೆಕ್ ನೀರನ್ನು ಭದ್ರಾ ನದಿಗೆ ಹರಿಸಲಾಯಿತು. ತುಂಗಾ ಮತ್ತು ಭದ್ರಾ ಎರಡೂ ಡ್ಯಾಂ ಭರ್ತಿಯಾಗಿರುವುದರಿಂದ ತುಂಗಭದ್ರಾ ನದಿಯ ಹರಿವಿನ ಪ್ರಮಾಣ ಹೆಚ್ಚಾಗಿದೆ. ಶರಾವತಿ ನದಿಯಲ್ಲೂ ಹೆಚ್ಚಿನ ನೀರು ಬರುತ್ತಿರುವುದರಿಂದ ಲಿಂಗನಮಕ್ಕಿ ಅಣೆಕಟ್ಟೆ ತುಂಬಲು ಇನ್ನು 8 ಅಡಿ ಬಾಕಿ ಇದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ, ಶೃಂಗೇರಿ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಭದ್ರಾ ಮತ್ತು ತುಂಗಾ ನದಿಗಳಿಗೆ ಪ್ರವಾಹ ಬಂದಿದೆ. ಕಳಸದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಶೃಂಗೇರಿ ದೇವಸ್ಥಾನದ ಸುತ್ತಲೂ ತುಂಗಾ ನದಿ ದೊಡ್ಡ ಸಮುದ್ರದಂತೆ ಭಾಸವಾಗುತ್ತಿತ್ತು. ತೀರ್ಥಹಳ್ಳಿಯಲ್ಲಿ ಶ್ರೀರಾಮ ಮಂಟಪ ಮುಳುಗಡೆಯಾಗಿದೆ. ಕಳಸ ತಾಲೂಕಿನಾದ್ಯಂತ ಸುರಿದ ಮಹಾಮಳೆಗೆ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು ಅಲ್ಲಲ್ಲಿ ಭೂಕುಸಿತವಾಗಿದೆ. ರಸ್ತೆಗೆ ನದಿ ನೀರು ನುಗ್ಗಿ ಸಂಪರ್ಕ ಕಳೆದುಕೊಂಡು ಕಳಸ ತಾಲೂಕು ಅಕ್ಷರಶಃ ದ್ವೀಪದಂತಾಗಿದೆ. ಕಳಸ-ಕೊಟ್ಟಿಗೆಹಾರ ರಸ್ತೆ ಹೊರತುಪಡಿಸಿ ಉಳಿದೆಲ್ಲ ರಸ್ತೆ ಸಂಪರ್ಕ ಕಡಿತಗೊಂಡಿದೆ.ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ 6 ತಾಲೂಕು ಹಾಗೂ ಶಿವಮೊಗ್ಗ ಜಿಲ್ಲೆಯ ಮೂರು ತಾಲೂಕುಗಳ ಶಾಲೆಗಳಿಗೆ ಬುಧವಾರ ರಜೆ ನೀಡಲಾಗಿದೆ.
ಹಾಸನ ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದ ಎಡೆಬಿಡದೆ ಧಾರಾಕಾರ ಮಳೆ ಸುರಿಯುತ್ತಿದೆ. ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-75 ದೊಡ್ಡತಪ್ಪಲೆ ಗ್ರಾಮ ಸಮೀಪ ಮತ್ತೆ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಟ್ಯಾಂಕರ್, ಲಾರಿ, ಎರಡು ಕಾರುಗಳು ಸೇರಿ ಆರು ವಾಹನಗಳು ಮಣ್ಣಿನಡಿ ಸಿಲುಕಿ ಕೆಲಕಾಲ ಆತಂಕ ಮೂಡಿಸಿದವು. ವಾಹನದಲ್ಲಿದ್ದ ಎಲ್ಲರನ್ನು ರಕ್ಷಣೆ ಮಾಡಲಾಯಿತು. ಕಳೆದ ವಾರ ಸಹ ಇದೇ ಪ್ರದೇಶದಲ್ಲಿ ಭೂ ಕುಸಿತ ಸಂಭವಿಸಿ ಇಬ್ಬರು ಗಾಯಗೊಂಡಿದ್ದರು.

ತಾಲೂಕಿನ ಮಠಸಾಗರ- ಕೃಷ್ಣಪುರ ಸಂಪರ್ಕ ಸೇತುವೆಯ ಮೇಲೆ ಸುಮಾರು ಆರು ಅಡಿಯಷ್ಟು ನೀರು ಹರಿಯುತ್ತಿದ್ದು ಸಮೀಪದ ಅಡಕೆ ಹಾಗೂ ಕಾಫಿತೋಟ ಸಂಪೂರ್ಣ ಮುಚ್ಚಿಹೋಗಿದ್ದು ಕೊಟ್ಯಂತರ ರೂ. ನಷ್ಟ ಸಂಭವಿಸಿದೆ. ಸೇತುವೆ ಮುಳುಗಡೆಯಿಂದ ಕೃಷ್ಣಪುರ ಸೇರಿದಂತೆ ಮತ್ತೆರಡು ಗ್ರಾಮಗಳು ರಸ್ತೆ ಸಂಪರ್ಕವಿಲ್ಲದೆ ದ್ವೀಪಗಳಾಗಿವೆ. ಪಟ್ಟಣದಿಂದ ಹೆಬ್ಬಸಾಲೆ ಹಾಗೂ ಹೆನ್ನಲಿ ಗ್ರಾಮ ಸಂಪರ್ಕ ರಸ್ತೆ ಮತ್ತೆ ಮುಚ್ಚಿಹೋಗಿದೆ. ಅರಕಲಗೂಡು ಹಾಗೂ ಬೇಲೂರಿನಲ್ಲಿ ಮಳೆ ಸುರಿಯುತ್ತಿದ್ದು, ಕೆರೆ-ಕಟ್ಟೆಗಳು ಕೋಡಿ ಬಿದ್ದು ಜಮೀನಿಗೆ ನೀರು ನುಗ್ಗಿ ಬೆಳೆ ನಷ್ಟವಾಗಿದೆ. ಜತೆಗೆ ಹಲವು ಮನೆಗಳ ಗೋಡೆಗಳು ಕುಸಿದುಬಿದ್ದಿವೆ. ಹಲವು ರಸ್ತೆಗಳು, ಸೇತುವೆಗಳ ಮೇಲೆ ನೀರು ಹರಿಯುತ್ತಿದೆ. ಹೇಮಾವತಿ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಮಂಗಳವಾರ ಬೆಳಗ್ಗೆಯಿಂದ ಹೇಮಾವತಿ ಜಲಾಶಯದಿಂದ 1 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದ ನದಿ ಪಾತ್ರದ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.
ಪ್ರವಾಹ ಭೀತಿ:ಕೇರಳದಲ್ಲಿ ಸತತ ಮಳೆಯಿಂದ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದ್ದು, ಎರಡನೇ ಬಾರಿಗೆ ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದ ನದಿ ಪಾತ್ರದ ಜನರಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕೆಲ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಡೆಯಾಗಿದ್ದು, ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುವುದರಿಂದ ನದಿ ಪಾತ್ರದ ಜನರು ಸುರಕ್ಷತಾ ಸ್ಥಳಕ್ಕೆ ತೆರಳಲು ನೀರಾವರಿ ಅಧಿಕಾರಿಗಳು ಸೂಚಿಸಿದ್ದಾರೆ.
ಕೇರಳದ ವಯನಾಡು ಬಳಿ ಉಂಟಾಗಿರುವ ಭೀಕರ ಭೂಕುಸಿತದಿಂದ ಅನೇಕರು ಧಾರುಣ ಸಾವನ್ನಪ್ಪಿರುವ ಘಟನೆ ಆಘಾತ ಉಂಟು ಮಾಡಿದೆ. ಕರ್ನಾಟಕದಲ್ಲಿಯೂ ಅನೇಕ ಜಿಲ್ಲೆಗಳಲ್ಲಿ ಇದೇ ಸಮಸ್ಯೆ ಸೃಷ್ಟಿಯಾಗಿದೆ. ಈ ಬಗ್ಗೆ ಸಾರ್ವಜನಿಕರು ಬಹಳ ಎಚ್ಚರಿಕೆ ವಹಿಸಬೇಕು ಹಾಗೂ ರಾಜ್ಯ ಸರ್ಕಾರವೂ 24/7 ರಕ್ಷಣಾ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟು, ಅಪಾಯವಿರುವ ಸ್ಥಳಗಳಲ್ಲಿ ಅಧಿಕಾರಿಗಳನ್ನು ನಿಯೋಜಿಸಬೇಕು.
| ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ
ಹೈಕಮಾಂಡ್‌ಗೆ ಮುಡಾ, ವಾಲ್ಮೀಕಿ ಹಗರಣದ ವರದಿ ನೀಡಿದ ಸಿಎಂ, ಡಿಸಿಎಂ: ಸಭೆಯಲ್ಲಿ ಏನೇನು ಚರ್ಚೆ? ಇಲ್ಲಿದೆ ವಿವರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + nineteen =
Remember me
