|ಮೃತ್ಯುಂಜಯ ಕಪಗಲ್ಬೆಂಗಳೂರು
ಕರದಾತರ ನಿಷ್ಠೆ, ಉದ್ಯಮ-ವಹಿವಾಟು ವಲಯದಲ್ಲಿ ಎಲ್ಲಿಲ್ಲದ ಲಯ, ಸೋರಿಕೆ ನಿಯಂತ್ರಣ, ವಸೂಲಿಯಲ್ಲಿ ದಕ್ಷತೆಯು ರಾಜ್ಯದ ರಾಜಸ್ವ ಸಂಗ್ರಹಣೆಯನ್ನು ಫಲಭರಿತಗೊಳಿಸಿದೆ. ಕರೋನೋತ್ತರ ಕಾಲಘಟ್ಟವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬೊಕ್ಕಸದ ಬಲ ಸಾಥ್ ನೀಡಿದ್ದು, ನಿರೀಕ್ಷೆ ಮೀರುವ ಆಶಾಭಾವನೆ ಕಟ್ಟಿಕೊಟ್ಟಿದೆ.
ಪ್ರಸಕ್ತ ಆರ್ಥಿಕ ವರ್ಷ (2022-23)ದ ನವೆಂಬರ್ ಅಂತ್ಯದವರೆಗೆ ವಿವಿಧ ತೆರಿಗೆ ರೂಪದಲ್ಲಿ ಆದಾಯ ಸಂಗ್ರಹ ಒಂದು ಲಕ್ಷ ಕೋಟಿ ರೂ.ಗಳಿಗೆ ಸಮೀಪಿಸಿದೆ. ತುಟ್ಟಿ ದಿನಗಳೇ ಆಗಿದ್ದರೂ ಸಾಲುಗಟ್ಟಿ ಬಂದ ಹಬ್ಬ-ಹರಿದಿನಗಳು, ಮದುವೆ-ಉತ್ಸವಗಳಿಗೆ ಜನ ಕೈಬಿಟ್ಟು ಖರ್ಚು ಮಾಡುತ್ತಿದ್ದು, ಜನರ ಕೈಯ್ಯಲ್ಲಿ ಹಣ ಓಡಾಡುತ್ತಿರುವುದಕ್ಕೆ ನಿದರ್ಶನ.
ಕರೊನಾ ದುಃಸ್ವಪ್ನವನ್ನು ಮರೆಯುವ ಜನರ ತವಕವೂ ಹಬ್ಬ ಆಚರಣೆ ಕಳೆಗಟ್ಟಿಸಿದೆ. ದುಡಿಮೆಗೆ ಲಭಿಸುತ್ತಿರುವ ವಿಪುಲ ಅವಕಾಶಗಳು ಜನ-ಸಾಮಾನ್ಯರಲ್ಲಿ ಧೈರ್ಯ ತುಂಬಿದೆ. ಅತಿವೃಷ್ಟಿ, ಪ್ರವಾಹ ಕಾಡಿರದಿದ್ದರೆ ಈ ಚಟುವಟಿಕೆಗಳು ಇನ್ನಷ್ಟು ಚುರುಕಾಗುತ್ತಿದ್ದವು ಎಂಬ ಆರ್ಥಿಕ ತಜ್ಞರ ವಿಶ್ಲೇಷಣೆಗೆ ಇಲಾಖೆ ಅಧಿಕಾರಿಗಳು ದನಿಗೂಡಿಸುತ್ತಾರೆ.
ಒಲಿದ ಅದೃಷ್ಟ ಲಕ್ಷ್ಮಿ:ಬೊಮ್ಮಾಯಿ ಮಂಡಿಸಿದ ಚೊಚ್ಚಲ ಬಜೆಟ್​ನಲ್ಲಿ 1,26,882.76 ಕೋಟಿ ರೂ. ಸಂಗ್ರಹದ ಗುರಿ ನಿಗದಿಪಡಿಸಿದ್ದು, ಕಳೆದ ಎಂಟು ತಿಂಗಳಲ್ಲಿ (ಏಪ್ರಿಲ್-ನವೆಂಬರ್) ವಿವಿಧ ಮೂಲಗಳಿಂದ ಒಟ್ಟು 98,405.24 ಕೋಟಿ ರೂ. ಖಜಾನೆಗೆ ಜಮೆಯಾಗಿದೆ. ಹಣಕಾಸು ವರ್ಷ ಪೂರ್ಣಗೊಳ್ಳಲು ಇನ್ನೂ ನಾಲ್ಕು ತಿಂಗಳು ಉಳಿದಿವೆ. ಬಜೆಟ್ ಅಂದಾಜು ಗುರಿ ದಾಟುವ ವಿಶ್ವಾಸವನ್ನು ಆರ್ಥಿಕ ಇಲಾಖೆ ಮೂಲಗಳು ವ್ಯಕ್ತಪಡಿಸಿವೆ.
ಚುನಾವಣೆ ವರ್ಷದಲ್ಲಿ ಬಿಜೆಪಿ ಸರ್ಕಾರಕ್ಕೆ ಅದೃಷ್ಟ ಲಕ್ಷ್ಮಿ ಒಲಿದಿದ್ದಾರೆ. ತುಂಬಿ ತುಳುಕುತ್ತಿರುವ ಖಜಾನೆಯು ಉದಾರ ಕೊಡುಗೆ ನೀಡುವುದಕ್ಕೆ ಒತ್ತಾಸೆಯಾಗಿದೆ. ಈಗಾಗಲೆ ಬಜೆಟ್ ಹೊರತಾಗಿ ಹಲವು ‘ಜನಪ್ರಿಯ ಯೋಜನೆ’ಗಳನ್ನು ಬೊಮ್ಮಾಯಿ ಪ್ರಕಟಿಸಿದ್ದು, ಜನರ ಓಲೈಕೆಗೆ ಮತ್ತಷ್ಟು ಯೋಜನೆಗಳನ್ನು ಘೋಷಿಸಿದರೂ ಅಚ್ಚರಿಯಿಲ್ಲ.
ನವೋತ್ಸಾಹ:ನಿರ್ಮಾಣ, ತಯಾರಿಕೆ, ದಿನಬಳಕೆ, ರಫ್ತು, ಆಟೋಮೊಬೈಲ್, ಇಂಧನ ಮುಂತಾದ ಆದ್ಯತಾ ವಲಯಗಳ ನವೋತ್ಸಾಹವು ಆರ್ಥಿಕತೆ ವೃದ್ಧಿಗೆ ಪ್ರಧಾನ ಕಾರಣ. ವಿದೇಶಿ ನೇರ ಬಂಡವಾಳ ಆಕರ್ಷಣೆಯಲ್ಲಿ ಕರ್ನಾಟಕ ಪ್ರಥಮ, ಉದ್ಯಮ-ಹೂಡಿಕೆದಾರರ ಆಸಕ್ತಿ, ಪೂರಕ ವಾತಾವರಣ, ನಿಯಮಗಳ ಸರಳೀಕರ ಇತ್ಯಾದಿಗೆ ಒತ್ತು ನೀಡಿದ್ದರಿಂದ ಸಕಾರಾತ್ಮಕ ವಾತಾವರಣ ಸೃಷ್ಟಿಸಿದೆ. ಬೊಮ್ಮಾಯಿ ಸಲಹೆಯಂತೆ ಆರ್ಥಿಕ ಸಂಪನ್ಮೂಲ ಕ್ರೋಡೀಕರಣದಲ್ಲಿ ಹೊಸ ಮೂಲಗಳ ಶೋಧನೆ, ಇಲಾಖೆಯಲ್ಲಿ ಕಟ್ಟುನಿಟ್ಟಿನಲ್ಲಿ ಕ್ರಮ, ವಸೂಲಿಯಲ್ಲಿ ಸಾಧಿಸಿದ ದಕ್ಷತೆ ನಿರೀಕ್ಷಿತ ಫಲಿತಾಂಶ ನೀಡಿವೆ ಎಂದು ಇಲಾಖೆ ಮೂಲಗಳು ಹೇಳಿವೆ.
ಅನುಷ್ಠಾನ ಮಂದ:ಆರ್ಥಿಕತೆ ಬಲವರ್ಧಿಸಿದ್ದರೂ ವಿಶ್ವ ಬ್ಯಾಂಕ್ ಹಾಗೂ ಏಷ್ಯಾ ಅಭಿವೃದ್ಧಿ ಬ್ಯಾಂಕ್ ನೆರವಿನ ಯೋಜನೆಗಳ ಅನುಷ್ಠಾನ ಮಂದಗತಿಯಲ್ಲಿ ಸಾಗಿರುವುದು ಗಮನಾರ್ಹ. ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಹೆಚ್ಚಿಸಲು ಸಿಎಂ ಬೊಮ್ಮಾಯಿ ಒತ್ತು ನೀಡಿದ್ದಾರೆ. ಆದರೆ ಕ್ಷೇತ್ರ ಕಾರ್ಯದಲ್ಲಿ ಹೇಳಿಕೊಳ್ಳುವಂತಹ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಅಕ್ಟೋಬರ್ ಅಂತ್ಯದವರೆಗಿನ ಮಾಹಿತಿ ಪ್ರಕಾರ ವಿಶ್ವಬ್ಯಾಂಕ್, ಎಡಿಬಿ ನೆರವಿನ ಯೋಜನೆಗಳ ಒಟ್ಟಾರೆ ಆರ್ಥಿಕ ಗುರಿ ಪೈಕಿ ಶೇ.22.67 ಪ್ರಗತಿ ಸಾಧಿಸಲಾಗಿದೆ.
ಪ್ರಸಕ್ತ ಹಣಕಾಸು ವರ್ಷಕ್ಕೆ ಹಂಚಿಕೆ ಮಾಡಿರುವ 4,521.43 ಕೋಟಿ ರೂ.ಗಳಲ್ಲಿ 833.25 ಬಿಡುಗಡೆಯಾಗಿದ್ದರೆ, 1,023.64 ಕೋಟಿ ರೂ. ವೆಚ್ಚವಾಗಿದೆ. ಎಡಿಬಿ ನೆರವಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ ಮೂರ (ಕೆಶಿಪ್-3)ರಡಿ ಶೇ.21.21, ಇಂಧನ ದಕ್ಷತೆಗಾಗಿ ವಿದ್ಯುತ್ ವಿತರಣಾ ಯೋಜನೆ ಶೇ.31, ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆ ಹಂತ-3, ಕರ್ನಾಟಕ ನಗರ ನೀರು ಪೂರೈಕೆ ಆಧುನೀಕರಣ ಶೇ.7.73, ವಿಶ್ವ ಬ್ಯಾಂಕ್ ಸಹಾಯದ ಜಲಾನಯನ ಪ್ರದೇಶಗಳ ಪುನಶ್ಚೇತನ ಶೇ.25, ಸಮಗ್ರ ಮತ್ತು ಸುಸ್ಥಿರ ಜಲಸಂಪನ್ಮೂಲ ನಿರ್ವಹಣೆ ಯೋಜನೆ ಶೇ.24.17 ಹಾಗೂ ಅಣೆಕಟ್ಟೆಗಳ ಪುನಶ್ಚೇತನ ಮತ್ತು ಸುಧಾರಣೆ ಯೋಜನೆಯಡಿ ಶೇ.14.95ರಷ್ಟು ಆರ್ಥಿಕ ಪ್ರಗತಿ ಸಾಧಿಸಲಾಗಿದೆ.
ಸಮಜಾಯಿಷಿ:ಆಡಳಿತಾತ್ಮಕ, ತಾಂತ್ರಿಕ ಅನುಮೋದನೆಗಳು ಸಕಾಲಕ್ಕೆ ದೊರೆಯುತ್ತಿದ್ದು, ಅಭಿವೃದ್ಧಿ ಕೆಲಸಗಳು ನಿರೀಕ್ಷಿತ ವೇಗದಲ್ಲಿವೆ ಎಂದು ಉನ್ನತಾಧಿಕಾರಿಯೊಬ್ಬರು ಸಮಜಾಯಿಷಿ ನೀಡಿದ್ದಾರೆ. ಬಾಹ್ಯಾನುದಾನದ ಯೋಜನೆಗಳ ಭೌತಿಕ ಹಾಗೂ ಆರ್ಥಿಕ ಪ್ರಗತಿ ತಾಳೆಯಾಗದು. ಕಾಮಗಾರಿ ಅನುಷ್ಠಾನ ಆಧರಿಸಿ ಭೌತಿಕ ಪ್ರಗತಿ ದಾಖಲಾಗುತ್ತದೆ. ಮುಗಿದ ಕಾಮಗಾರಿಗೆ ಬಿಲ್ ಸಲ್ಲಿಕೆ, ವಿವಿಧ ಹಂತದ ಪರಿಶೀಲನೆ, ಅನುಮೋದನೆ, ಪಾವತಿ ಪ್ರಕ್ರಿಯೆಗೆ ಕಾಲಾವಕಾಶ ಹಿಡಿಯುತ್ತದೆ. ಇದರಿಂದಾಗಿ ಭೌತಿಕ-ಆರ್ಥಿಕ ಪ್ರಗತಿಯ ವಾಸ್ತವಿಕ ಅಂಕಿ-ಅಂಶಗಳಲ್ಲಿ ವ್ಯತ್ಯಾಸ ಸಹಜವೆಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕರೊನಾ ಕರಿನೆರಳು ಹಿನ್ನೆಲೆಗೆ ಸರಿದು ಉದ್ಯಮ-ವಾಣಿಜ್ಯಿಕ ಚಟುವಟಿಕೆಗಳು ಮುಖ್ಯವಾಹಿನಿಗೆ ಬಂದಿವೆ. ಜನರ ಕೈಯಲ್ಲಿ ಹಣ ಓಡಾಟ, ಸಾಲುಗಟ್ಟಿದ ಮದುವೆ-ಜಾತ್ರೆ, ಹಬ್ಬಗಳು, ಸೋರಿಕೆಗೆ ಕಡಿವಾಣ ಹಾಕಿದ್ದರಿಂದ ಆದಾಯ ಶೇಖರಣೆ ಸುಧಾರಣೆಯಾಗಿದೆ.
|ಬಿ.ಟಿ.ಮನೋಹರ್ತೆರಿಗೆ ತಜ್ಞ.
ಖಜಾನೆ ತುಂಬಿದ ಬಗೆ:ಏಪ್ರಿಲ್​ನಿಂತ ನವೆಂಬರ್​ವರೆಗೆ ಸಾಧಿಸಿದ ತೆರಿಗೆ ಸಂಗ್ರಹದ ಅಂಕಿ-ಅಂಶಗಳು (ಕೋಟಿ ರೂ.ಗಳಲ್ಲಿ) ;ವಾಣಿಜ್ಯ:ಸಾಧನೆ- 62,366.27 (ಈ ಪೈಕಿ ಜಿಎಸ್​ಟಿ 48,951.17, ತೈಲ ಮಾರಾಟ- 12,524.02 ಸೇರಿದೆ) ಗುರಿ- 72,011. ಕಳೆದ ವರ್ಷ ಇದೇ ಅವಧಿಯಲ್ಲಿ 68,618 ಕೋಟಿ ರೂ. ಸಂಗ್ರಹವಾಗಿತ್ತು.ಅಬಕಾರಿ:ಸಾಧನೆ- 19,540.21, ಗುರಿ- 29,000.ನೋಂದಣಿ ಮತ್ತು ಮುದ್ರಾಂಕ ಶುಲ್ಕ:ಸಾಧನೆ- 10,856.54, ಗುರಿ- 15,000.ಮೋಟಾರು ವಾಹನ:ಸಾಧನೆ- 5,640, ಗುರಿ- 8,006.69.
ದೇಶದಲ್ಲಿ ಟ್ರೆಂಡಿಂಗ್​ನಲ್ಲಿದೆ ‘ಹಾರ್ಟ್ ಅಟ್ಯಾಕ್’; ಅದರ ಬಗ್ಗೆಯೇ ಮಾತಾಡುತ್ತಿದ್ದಾರೆ ಹಲವರು!

ಡಾ.ಬ್ರೋಗೆ ಹತ್ತು ಲಕ್ಷ ಸಬ್​ಸ್ಕ್ರೈಬರ್ಸ್; ‘ದೇವರ’ ಬಗ್ಗೆ ಏನಂದ್ರು ಗಗನ್ ಶ್ರೀನಿವಾಸ್?; ಇಲ್ಲಿದೆ ಫಸ್ಟ್ ರಿಯಾಕ್ಷನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
