
ಬೆಂಗಳೂರು:ಕರ್ತವ್ಯದಲ್ಲಿದ್ದಾಗ ಹುತಾತ್ಮರಾಗುವ ಪೊಲೀಸ್ ಕುಟುಂಬದವರಿಗೆ ನೀಡುವ ವಿಮಾ ಮೊತ್ತವನ್ನು ೨೦ ಲಕ್ಷದಿಂದ ೫೦ ಲಕ್ಷಕ್ಕೆ ಏರಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.
ಮೈಸೂರು ರಸ್ತೆಯ ಸಿಆರ್‌ಎ ಪ್ರಧಾನ ಕಚೇರಿಯ ಆವರಣದಲ್ಲಿ ಶನಿವಾರ ನಡೆದ ಪೊಲೀಸ್ ಸಂಸ್ಮರಣ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮರಿಗೆ ನಮನ ಸಲ್ಲಿಸಿ ಮಾತನಾಡಿದರು.
ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮೃತಪಟ್ಟರೇ ‘ವಿಶೇಷ ಗುಂಪು ವಿಮಾ ಯೋಜನೆ’ಯಡಿ ನೀಡಲಾಗುತ್ತಿದ್ದ ಮೊತ್ತವನ್ನು ೨೦ ಲಕ್ಷದಿಂದ ೫೦ ಲಕ್ಷ ರೂ.ಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಪೊಲೀಸ್ ವ್ಯವಸ್ಥೆ ಒಂದು ರಾಜ್ಯದ ಗೌರವವನ್ನು ಮತ್ತು ಜನಪ್ರಿಯತೆಯನ್ನು ಹೆಚ್ಚು ಮಾಡುವಲ್ಲಿ ಬಹಳ ಮಹತ್ತರವಾದ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ಕರ್ನಾಟಕ ಪೊಲೀಸ್ ಇಡೀ ದೇಶದಲ್ಲಿಯೇ ಉತ್ತಮ ಪೊಲೀಸ್ ಎಂಬ ಹೆಸರು ಪಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪೊಲೀಸರು ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವಾಗ ಅನೇಕ ಅಪಾಯಕಾರಿಯಾದ ಸನ್ನಿವೇಶ ಎದುರಿಸಬೇಕಾದ ಸಂದರ್ಭಗಳು ಬರುತ್ತವೆ. ಅಪಾಯದ ಜತೆಗೆ ಪ್ರಾಣವನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ದೇಶದಲ್ಲಿ ೨೦೨೨ ರ ಸೆಪ್ಟೆಂಬರ್ ೨೨ ರಿಂದ ೨೦೨೩ ರ ಆಗಸ್ಟ್ ೨೩ ರ ವರೆಗೆ ೧೮೯ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಕರ್ನಾಟಕ ರಾಜ್ಯದ ೧೬ ಸಿಬ್ಬಂದಿ ಮೃತಪಟ್ಟಿದ್ದಾರೆ. ಪ್ರಾಣತ್ಯಾಗ ಮಾಡಿದ ಪೊಲೀಸರಿಗೆ ಸರ್ಕಾರದ ಪರವಾಗಿ ಮತ್ತು ರಾಜ್ಯದ ಜನತೆಯ ಪರವಾಗಿ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ. ಅವರ ಕುಟುಂಬದ ಸದಸ್ಯರಿಗೆ ಸಾವಿನ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದರು.
ರಾಜ್ಯದ ಅಭಿವೃದ್ಧಿಗೂ ಕಾನೂನು ಸುವ್ಯವಸ್ಥೆಗೂ ಸಂಬಂಧವಿದೆ. ಕಾನೂನು ಸುವ್ಯವಸ್ಥೆ ಚೆನ್ನಾಗಿ ಇದ್ದರೆ ಎಲ್ಲ ಜನರು ನೆಮ್ಮದಿಯಿಂದ ಇದ್ದು, ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಇದರಿಂದ ಬಂಡವಾಳ ಹೂಡಿಕೆಯು ಹೆಚ್ಚಾಗುತ್ತದೆ. ಬಂಡವಾಳ ಹೂಡಿಕೆಯಾದರೆ ಉದ್ಯೋಗಗಳು ಸೃಷ್ಟಿಯಾಗುತ್ತದೆ. ಇದರಿಂದಾಗಿ ರಾಜ್ಯದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಹೀಗಾಗಿ ನಾವು ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಒತ್ತು ಕೊಡುವುದು ಅಗತ್ಯವಾಗಿದೆ ಎಂದು ಹೇಳಿದರು.
ಪೊಲೀಸರ ಮುಂದೆ ಹೊಸ ಸವಾಲು:ನಾಗರಿಕತೆ, ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ಹೊಸ ಹೊಸ ಸವಾಲುಗಳು ಪೊಲೀಸರಿಗೆ ಎದುರಾಗುತ್ತದೆ. ಇತ್ತೀಚೆಗೆ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದೆ. ಅವುಗಳನ್ನು ನಿಯಂತ್ರಿವುದು ಪೊಲೀಸರ ಜವಾಬ್ದಾರಿಯಾಗಿದೆ. ಪೊಲೀಸ್ ಠಾಣೆಗಳ ಉನ್ನತಿಕರಣಕ್ಕೆ (ಸೈಬರ್ ಎಕನಾಮಿಕ್ಸ್ ಆ್ಯಂಡ್ ನಾರ್ಕೋಟಿಕ್ಸ್) ರಾಜ್ಯ ಸರ್ಕಾರ ೫ ಕೋಟಿ ರೂ.ಮೀಸಲಿಟ್ಟಿದ್ದು, ಆ ಅನುದಾನ ಬಿಡುಗಡೆ ಮಾಡಲಾಗಿದೆ. ಸುಳ್ಳು ಸುದ್ದಿ ಹರಡಲು ಕಾರಣರಾದವರ ಮೇಲೆ ಕಠಿಣ ಕ್ರಮಕ್ಕೆ ತೆಗೆದುಕೊಳ್ಳುವುದು ಅತ್ಯವಶ್ಯಕ. ಸುಳ್ಳು ಸುದ್ದಿ ಹರಡುವ ವ್ಯಕ್ತಿಗಳು ಮತ್ತು ಜಾಲತಾಣಗಳನ್ನು ಮಟ್ಟ ಹಾಕಬೇಕು. ಇದಕ್ಕಾಗಿ ಫಾಸ್ಟ್ ಫ್ಯಾಕ್ಟ್ ಚಕ್ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಅದರ ಮೂಲಕ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣವಾದ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ತಿಳಿಸಿದರು.
ಆರೋಗ್ಯ ಭಾಗ್ಯ ಯೋಜನೆಗೆ ೧೦೦ ಕೋಟಿ ರೂ. ನಿಗದಿ:ಬೆಂಗಳೂರು ನಗರದಲ್ಲಿ ಹೆಚ್ಚುವರಿಯಾಗಿ ಐದು ಸಂಚಾರ ಪೊಲೀಸ್ ಠಾಣೆಗಳು ಮತ್ತು ಆರು ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ ೨೪೫೪ ಪೊಲೀಸ್ ಹುದ್ದೆ ಸೃಷ್ಟಿ ಮಾಡಲಾಗಿದೆ. ಪೊಲೀಸರು ಹೊಸ ವಾಹನಗಳನ್ನು ಖರೀದಿಸಲು ಸರ್ಕಾರ ೧೦೦ ಕೋಟಿ ರೂ.ಬಜೆಟ್‌ನಲ್ಲಿ ನಿಗದಿ ಮಾಡಲಾಗಿದೆ. ಗೃಹ-೨೦೨೫ ಯೋಜನೆಯಡಿ ೨೧೨೫ ಪೊಲೀಸ್ ವಸತಿ ಗೃಹಗಳಿಗಾಗಿ ಬಜೆಟ್‌ನಲ್ಲಿ ೪೫೦ ಕೋಟಿ.ರೂ ಅನ್ನು ನಿಗದಿ ಮಾಡಲಾಗಿದೆ. ಆರೋಗ್ಯ ಭಾಗ್ಯ ಯೋಜನೆಗೆ ೧೦೦ ಕೋಟಿ ರೂ. ಅನುದಾನ ಒದಗಿಸಲಾಗಿದೆ. ನಿವೃತ್ತ ಸಿಬ್ಬಂದಿಯ ಆರೋಗ್ಯ, ಚಿಕಿತ್ಸೆಗಾಗಿ ೨೫ ಕೋಟಿ ರೂ. ನಿಶ್ಚಿತ ಠೇವಣಿ ಇಡಲಾಗಿದೆ. ಪೊಲೀಸ್ ಸಿಬ್ಬಂದಿಯ ಮಕ್ಕಳ ಶಿಕ್ಷಣಕ್ಕಾಗಿ ೭ ಜಿಲ್ಲೆಗಳಲ್ಲಿ ೭ ಪೊಲೀಸ್ ಪಬ್ಲಿಕ್ ಶಾಲೆ ಆರಂಭಿಸಲಾಗುತ್ತಿದೆ. ಇವುಗಳ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ನಮ್ಮ ಸರ್ಕಾರ ಬದ್ದವಾಗಿದೆ. ಪೊಲೀಸ್ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುತ್ತಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಮತ್ತು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿ ಇತರರು ಇದ್ದರು.ಇದೇ ವೇಳೆ ಕಳೆದೊಂದು ವರ್ಷದಲ್ಲಿ ದೇಶದಾದ್ಯಂತ ಹುತಾತ್ಮರಾದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸ್ಮರಿಸಿ ನಮನ ಸಲ್ಲಿಸಲಾಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 1 =
Remember me
