ಮೈಸೂರು: ಕರೊನಾ ವೈರಸ್ ಹರಡುವ ಭೀತಿಯಿಂದ ಲಾಕ್​ಡೌನ್ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯದ ಕಾಡಂಚಿನಲ್ಲಿ ಮನುಷ್ಯನ ಕಾಟವಿಲ್ಲದೆ ವನ್ಯಜೀವಿಗಳು ನಿರ್ಭಯವಾಗಿ ತಿರುಗುತ್ತಿರುವುದು ಒಂದೆಡೆಯಾದರೆ, ಅವುಗಳ ಬೇಟೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಮತ್ತೊಂದು ಕಡೆ ಆತಂಕಕಾರಿ.
ಲಾಕ್​ಡೌನ್ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಹೊರಗಡೆ ಮನುಷ್ಯನ ಓಡಾಟ ಮತ್ತು ಅರಣ್ಯದ ಸುತ್ತಮುತ್ತ ವಾಹನ ಸಂಚಾರ ಕಡಿಮೆ ಇರುವುದರಿಂದ ಕಾಡುಪ್ರಾಣಿಗಳು ರಸ್ತೆ ಬದಿ ಹಾಗೂ ಜನವಸತಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ನವಿಲುಗಳು ಬೆಂಗಳೂರಿನ ಬೀದಿಬೀದಿಗಳಲ್ಲಿ ಕಾಣಿಸಿಕೊಂಡರೆ, ಜಿಂಕೆ ಮುಂತಾದವು ಎಲ್ಲೆಂದರಲ್ಲಿ ನಿರ್ಭೀತಿಯಿಂದ ಓಡಾಡುತ್ತಿದ್ದು, ಕೆಲವು ಕಡೆ ಕಾಡೆಮ್ಮೆ, ಆನೆಗಳು ಹೆದ್ದಾರಿಯಲ್ಲಿ ಓಡಾಡುತ್ತಿವೆ.
ಆದರೆ ಈ ಅವಕಾಶವನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕಳ್ಳಬೇಟೆಗಾರರು ಪ್ರಾಣಿಗಳ ಶಿಕಾರಿಯಲ್ಲಿ ತೊಡಗಿದ್ದು, ಕಳೆದ ಕೆಲವೇ ದಿನಗಳಲ್ಲೇ 6-7 ಪ್ರಕರಣಗಳು ಬೆಳಕಿಗೆ ಬಂದಿವೆೆ. ಮುಖ್ಯವಾಗಿ ಮಾರುಕಟ್ಟೆಯಲ್ಲಿ ಮಾಂಸ ಸಮರ್ಪಕವಾಗಿ ಸಿಗದ್ದರಿಂದ ಬೇಟೆ ಹೆಚ್ಚಾಗಿದೆ. ಜತೆಗೆ ಕಾವೇರುತ್ತಿರುವುದರಿಂದ ಕಾಳ್ಗಿಚ್ಚು ತಡೆಗೆ ಸಿಬ್ಬಂದಿ ನಿಯೋಜನೆಗೊಂಡಿರುವುದು ಬೇಟೆಗಾರರ ಇಂಥ ಆಟಾಟೋಪ ಹೆಚ್ಚಾಗಿದೆ ಎನ್ನಲಾಗಿದೆ.
ಗಸ್ತು ಹೆಚ್ಚಿಸಲು ಒತ್ತಾಯ
ಲಾಕ್​ಡೌನ್ ಅವಧಿಯಲ್ಲಿ ಕಳ್ಳಬೇಟೆ ತಡೆಗಟ್ಟಲು ಅರಣ್ಯ ಸಿಬ್ಬಂದಿ ಹೆಚ್ಚಿನ ಗಸ್ತು ತಿರುಗಬೇಕು. ವನ್ಯಜೀವಿಗಳಿಗೆ ಇಂಥ ಅವಕಾಶ ಸಿಗುವುದು ಕಡಿಮೆ. ಈಗಲೂ ಇಂಥ ಕೃತ್ಯ ನಡೆಸುವುದು ಸರಿಯಲ್ಲ. ವನ್ಯಜೀವಿಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ. ಜತೆಗೆ ಜನರೂ ತಮ್ಮ ಸುತ್ತಮುತ್ತ ಇಂಥ ಘಟನೆಗಳು ಕಂಡುಬಂದರೆ ಅರಣ್ಯ ಸಹಾಯವಾಣಿ(1926)ಗೆ
ಮಾಹಿತಿ ನೀಡಬೇಕು. ಲಾಕ್​ಡೌನ್ ಮತ್ತು ಮಾರುಕಟ್ಟೆಯಲ್ಲಿ ಮಾಂಸದ ಅಭಾವದಿಂದಲೂ ಈ ಚಟುವಟಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ವನ್ಯಜೀವಿಗಳ ಅಕ್ರಮ ಬೇಟೆ ತಡೆಯಲು ಮತ್ತು ಅಪರಾಧಿಗಳನ್ನು ಹಿಡಿಯಲು ಅಗತ್ಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ತಿಳಿಸಿದ್ದಾರೆ.
ಇತ್ತೀಚಿನ ಪ್ರಕರಣಗಳ ವಿವರ
ಪ್ರಕರಣ-1: ಇತ್ತೀಚೆಗೆ ಗುಂಡ್ಲುಪೇಟೆ ಬಫರ್ ವಲಯದಲ್ಲಿ ಬೇಟೆಗಾರನೊಬ್ಬ ಮೊಲ, ಕಾಡುಬೆಕ್ಕುಗಳನ್ನು ಬೇಟೆಯಾಡಿದ್ದು, ಆತನನ್ನು ಬಂಧಿಸುವಲ್ಲಿ ಗುಂಡ್ಲುಪೇಟೆ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಪ್ರಕರಣ-2: ಬನ್ನೇರುಘಟ್ಟ ವ್ಯಾಪ್ತಿಯಲ್ಲಿ ಜಿಂಕೆಯನ್ನು ಗುಂಡು ಹಾರಿಸಿ ಕೊಲ್ಲಲಾಗಿದೆ. ಅದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರಿಂದ ಬೇಟೆಗಾರರು ಪರಾರಿಯಾಗಿದ್ದಾರೆ. ಅವರು ಜಿಂಕೆಯನ್ನು ಕೊಂಡೊಯ್ಯಲು ಸಾಧ್ಯವಾಗಿಲ್ಲ. ದುಷ್ಕರ್ವಿುಗಳ ಪತ್ತೆಗೆ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.
ಪ್ರಕರಣ-3: ಚಿಕ್ಕಮಗಳೂರು ಜಿಲ್ಲೆ ಕಡೂರು ವ್ಯಾಪ್ತಿಯಲ್ಲಿ ದುಷ್ಕರ್ವಿುಗಳಿಂದ 80 ಕೆಜಿ ಕಡವೆ ಮಾಂಸ ಮತ್ತು ವಾಹನ ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ-4: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜಿಂಕೆಯನ್ನು ಬೇಟೆಯಾಡಿದ್ದ ಒಬ್ಬನನ್ನು ಅರಣ್ಯ ಸಿಬ್ಬಂದಿ ಬಂಧಿಸಿದ್ದು, ಮೂವರು ನಾಪತ್ತೆಯಾಗಿದ್ದಾರೆ.
ಪ್ರಕರಣ-5: ಶಿವಮೊಗ್ಗ ತಾಲೂಕಿನ ಕುಂಸಿ ಸಮೀಪದ ಕೆಂಪಿನಕೊಪ್ಪ ಗ್ರಾಮ ದಲ್ಲಿ 2 ಜಿಂಕೆಗಳನ್ನು ಭೇಟೆಯಾಡಿ, ಅದರ ಮಾಂಸ ಮಾರುತ್ತಿದ್ದ ಒಬ್ಬನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ನಾಲ್ವರು ಪರಾರಿಯಾಗಿದ್ದು, 2 ಜಿಂಕೆಗಳ ತಲೆಗಳು, 2 ಚರ್ಮ, 8 ಕಾಲುಗಳು ಪತ್ತೆಯಾಗಿವೆ ಎನ್ನಲಾಗಿದೆ.
ಪ್ರಕರಣ-6: ಬನ್ನೇರುಘಟ್ಟ ಅಭಯಾರಣ್ಯದ ಗೊಲ್ಲಹಳ್ಳಿ ಗುಡ್ಡ ಬಳಿ ಒಬ್ಬ ಕಳ್ಳಬೇಟೆಗಾರನನ್ನು ಶನಿವಾರ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ನಾಲ್ವರು ಜಿಂಕೆ ಹಾಗೂ ಮೊಲ ಬೇಟೆಗೆ ಹೊಂಚು ಹಾಕಿದ್ದರು ಎನ್ನಲಾಗಿದೆ.
ಪ್ರಕರಣ-7: ಚಿಕ್ಕಬಳ್ಳಾಪುರದ ಜಕ್ಕಲಮಡಗು-ಮೊಟ್ಲೂರು ಅರಣ್ಯ ಪ್ರದೇಶದಲ್ಲಿ ಕಾಡುಹಂದಿ, ಜಿಂಕೆ ಬೇಟೆಯಾಡಿದ ಐವರನ್ನು ಪೊಲೀಸರು ಬಂಧಿಸಿ, ಮಾಂಸ ವಶಪಡಿಸಿಕೊಂಡಿದ್ದಾರೆ.
ಗುರುಪ್ರಸಾದ್ ತುಂಬಸೋಗೆ
ನವಜಾತ ಶಿಶುವಿಗೆ ‘ಲಾಕ್​ಡೌನ್​’ ಎಂದು​ ಹೆಸರಿಟ್ಟ ದಂಪತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − five =
Remember me
