ಬೆಂಗಳೂರು:ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಪದೇಪದೆ ಟೀಕಿಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡುವಂತೆ ವರಿಷ್ಠರನ್ನು ಒತ್ತಾಯಿಸಲು ರಾಜ್ಯ ಬಿಜೆಪಿ ಪದಾಧಿಕಾರಿಗಳು ತೀರ್ವನಿಸಿದ್ದಾರೆ.
ಪಕ್ಷದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬುಧವಾರ ನಡೆದ ಹೊಸ ಪದಾಧಿಕಾರಿಗಳ ಸಭೆಯಲ್ಲಿ ಯತ್ನಾಳ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಯತ್ನಾಳ್ ಅವರನ್ನು ಉಚ್ಚಾಟನೆ ಮಾಡದಿದ್ದರೆ ಪಕ್ಷ ತೀವ್ರ ಮುಜುಗರಕ್ಕೆ ಸಿಲುಕುತ್ತದೆ. ಲೋಕಸಭಾ ಚುನಾವಣೆಯನ್ನು ಎದುರಿಸುವುದು ಕಷ್ಟವಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಪದಾಧಿಕಾರಿಗಳು ಯತ್ನಾಳ್ ವಿರುದ್ಧ ಕಿಡಿಕಾರಿದ್ದಾರೆ. ಕಾಂಗ್ರೆಸ್​ನ ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯರ ಏಜೆಂಟರಂತೆ ಅವರು ಮಾತನಾಡುತ್ತಿದ್ದಾರೆ. ಯಾವಾಗ ಸರ್ಕಾರಕ್ಕೆ ಹಿನ್ನಡೆಯಾಗುತ್ತದೆಯೋ ಆಗ ಯತ್ನಾಳ್​ರನ್ನು ಪ್ರಚೋದಿಸಿ ಅವರಿಂದ ಪಕ್ಷದ ನಾಯಕತ್ವದ ವಿರುದ್ಧ ಹೇಳಿಕೆ ಕೊಡಿಸಲಾಗುತ್ತಿದೆ. ಯತ್ನಾಳ್ ಹೇಳಿಕೆ ಕೊಡುತ್ತಿದ್ದಂತೆ ಇವರ ಕಡತಗಳು ಕ್ಲಿಯರ್ ಆಗುತ್ತವೆ ಎಂದು ಬಹುತೇಕ ಪದಾಧಿಕಾರಿಗಳು ಟೀಕಾಪ್ರಹಾರ ನಡೆಸಿದ್ದಾರೆ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ.
ರಾಜ್ಯದಲ್ಲಿ ಪಕ್ಷ ಕಟ್ಟಿ ಅಧಿಕಾರಕ್ಕೆ ತಂದ ಯಡಿಯೂರಪ್ಪ ಅವರನ್ನು ಬಾಯಿಗೆ ಬಂದಂತೆ ಯತ್ನಾಳ್ ಟೀಕಿಸುತ್ತಾರೆ. ಪಕ್ಷದ ನಾಯಕತ್ವ ವಹಿಸಿದವರನ್ನು ಹೀನಾಯವಾಗಿ ಮಾತನಾಡುತ್ತಾರೆ. ವಿಜಯಪುರ ಜಿಲ್ಲೆಯಲ್ಲಿ ತಾವೊಬ್ಬರೇ ಇರಬೇಕೆಂಬ ಉದ್ದೇಶದಿಂದ ಪಕ್ಷದ ಆರು ಅಭ್ಯರ್ಥಿಗಳ ಸೋಲಿಗೆ ಕಾರಣರಾಗಿದ್ದಾರೆ. ಈ ಎಲ್ಲ ಅಂಶಗಳನ್ನು ವರಿಷ್ಠರ ಗಮನಕ್ಕೆ ತರಬೇಕೆಂದು ಪದಾಧಿಕಾರಿಗಳು ನಿರ್ಧರಿಸಿದ್ದಾರೆ.
ಯತ್ನಾಳ್ ನಡವಳಿಕೆ ಕುರಿತಂತೆ ಹೈಕಮಾಂಡ್​ಗೆ ಎಲ್ಲ ಪದಾಧಿಕಾರಿಗಳು ಸೇರಿ ಪತ್ರ ಬರೆಯಬೇಕು. ಅದರಲ್ಲಿ ಅವರನ್ನು ಉಚ್ಚಾಟನೆ ಮಾಡುವಂತೆ ಒತ್ತಾಯಿಸಬೇಕು. ವಿಜಯೇಂದ್ರ ದೆಹಲಿಗೆ ಹೋದಾಗ ವರಿಷ್ಠರನ್ನು ಕಂಡು ಇಲ್ಲಿನ ಪರಿಸ್ಥಿತಿ ವಿವರಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಮುಂದಿನ ದೆಹಲಿ ಭೇಟಿ ಸಂದರ್ಭದಲ್ಲಿ ಈ ಬಗ್ಗೆ ವರಿಷ್ಠರಿಗೆ ಮನವರಿಕೆ ಮಾಡಿಕೊಡುವುದಾಗಿ ವಿಜಯೇಂದ್ರ ಪದಾಧಿಕಾರಿಗಳಿಗೆ ಭರವಸೆ ನೀಡಿದರೆಂದು ಮೂಲಗಳು ತಿಳಿಸಿವೆ.
28 ಸ್ಥಾನ ಗೆಲ್ಲುವ ಸವಾಲು:ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಲೋಕಸಭಾ ಚುನಾವಣೆ ಎದುರಿಸುತ್ತಿದ್ದು, ರಾಜ್ಯದಲ್ಲಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ನಾವೆಲ್ಲರೂ ಸವಾಲಾಗಿ ಸ್ವೀಕಾರ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ನೂತನ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಅಮಲಿನಲ್ಲಿ ತೇಲುತ್ತಿದೆ. ಅದಕ್ಕೆ ತಕ್ಕ ಉತ್ತರ ಕೊಡಬೇಕು. ದೇಶದಲ್ಲಿ ಬಿಜೆಪಿ ಪರ ಅಲೆ ಇದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಬೇಕು. ನಮ್ಮ ವಿರೋಧಿಗಳನ್ನು ಹಗುರವಾಗಿ ಪರಿಗಣಿಸಬೇಡಿ ಎಂದರು. ಅತ್ಯಂತ ಪ್ರಮುಖ ಕಾಲಘಟ್ಟದಲ್ಲಿ ನಮಗೆಲ್ಲರಿಗೂ ರಾಜ್ಯ ಪದಾಧಿಕಾರಿಗಳಾಗಿ ಕೆಲಸ ಮಾಡುವ ಜವಾಬ್ದಾರಿ ಲಭಿಸಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಕನಸು ನನಸಾಗುತ್ತಿದೆ. ಅದೇ ಕಾಲಘಟ್ಟದಲ್ಲಿ ನಮಗೂ ಜವಾಬ್ದಾರಿ ಲಭಿಸಿದೆ. ಆದ್ದರಿಂದ ನಾವೆಲ್ಲರೂ ಹೊಣೆಯರಿತು ಕರ್ತವ್ಯ ನಿರ್ವಹಿಸಬೇಕು ಎಂದರು.
ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ. ರಾಜೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸುನೀಲ್ ಕುಮಾರ್, ಪಿ.ರಾಜೀವ್, ಪ್ರೀತಮ್ ಗೌಡ, ನಂದೀಶ್ ರೆಡ್ಡಿ ಸೇರಿ ನೂತನ ಪದಾಧಿಕಾರಿಗಳು ಇದ್ದರು.
ಯುವಜನರಿಗೆ ವಂಚಿಸುವ ಯುವನಿಧಿ:ಚುನಾವಣೆಗೆ ಮುನ್ನ ಕಾಂಗ್ರೆಸ್ ನೀಡಿದ್ದ ಭರವಸೆಯಂತೆ ಯುವನಿಧಿ ಅನುಷ್ಠಾನಕ್ಕೆ 10 ಸಾವಿರ ಕೋಟಿ ರೂ. ಮೀಸಲಿಡದೆ ಕೇವಲ 700 ಕೋಟಿ ರೂ. ಮೀಸಲಿಟ್ಟು ವಂಚಿಸಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದರು. ಯುವನಿಧಿ ಅನುಷ್ಠಾನ ವಿಳಂಬದ ಕುರಿತು ಬಿಜೆಪಿ ಟೀಕಿಸಿದ ಬಳಿಕ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಪ್ರಸಕ್ತ ವರ್ಷದವರಿಗೆ ಮಾತ್ರ ಎಂದು ಸೀಮಿತ ಮಾಡಿದ್ದಾರೆ. ಡಿಗ್ರಿ ಮತ್ತು ಡಿಪ್ಲೊಮಾ ಪಡೆದವರು 40 ಲಕ್ಷ ಜನರಿರುವುದು ಸರ್ಕಾರದ ಗಮನಕ್ಕಿಲ್ಲವೇ? ಎಂದರು. ಕೇವಲ ಮತಕ್ಕಾಗಿ ಪಂಚ ಗ್ಯಾರಂಟಿ ಜಾರಿ ಮಾಡಿದ್ದಾರೆ. ನಿಜವಾಗಿ ಗ್ಯಾರಂಟಿ ಅನುಷ್ಠಾನದಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ನೇಮಕಾತಿ ಆದೇಶ ಪತ್ರ:ರಾಜ್ಯ ಪದಾಧಿಕಾರಿಗಳಾಗಿ ಹೊಸದಾಗಿ ನೇಮಕಗೊಂಡಿರುವ ಮಾಜಿ ಸಚಿವರಾದ ಸುನೀಲ್ ಕುಮಾರ್, ಮುರುಗೇಶ ನಿರಾಣಿ, ಮಾಜಿ ಶಾಸಕರಾದ ಪಿ.ರಾಜೀವ್, ಪ್ರೀತಂ ಗೌಡ ಸೇರಿ ಎಲ್ಲರಿಗೂ ನೇಮಕಾತಿ ಆದೇಶವನ್ನು ಬಿ.ವೈ.ವಿಜಯೇಂದ್ರ ನೀಡಿದರು.
ಜಿಲ್ಲಾಧ್ಯಕ್ಷರ ನೇಮಕಕ್ಕೆ 60 ಜನರ ತಂಡ ಪ್ರವಾಸ:ಪಕ್ಷದ ಜಿಲ್ಲಾ ಅಧ್ಯಕ್ಷರು, ಪದಾಧಿಕಾರಿಗಳ ನೇಮಕ ಮಾಡುವ ಸಂಬಂಧ 60 ಜನರ ತಂಡವನ್ನು ರಚಿಸಲು ಬಿ.ವೈ.ವಿಜಯೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ತೀರ್ವನಿಸಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ತಿಳಿಸಿದರು. ಸಭೆ ಬಳಿಕ ಮಾತನಾಡಿ, ತಂಡವು ಏಕಕಾಲಕ್ಕೆ ಎರಡು ದಿನಗಳ ಕಾಲ ಪ್ರವಾಸ ಮಾಡಿ, ಎರಡ್ಮೂರು ದಿನದೊಳಗೆ ವರದಿ ನೀಡಲಿದೆ. ಪ್ರವಾಸ ಸಂದರ್ಭದಲ್ಲಿ ಈಗಿನ ಅಧ್ಯಕ್ಷರು, ಕಾರ್ಯಕರ್ತರು, ಸಂಸದರು, ಶಾಸಕರು, ಮಾಜಿ ಶಾಸಕರು, ಹಿರಿಯರ ಅಭಿಪ್ರಾಯ ಪಡೆದ ಬಳಿಕವೇ ಸಮಗ್ರವಾಗಿ ವರದಿ ನೀಡಲಿದೆ. ಬಳಿಕ ನೇಮಕ ಪ್ರಕ್ರಿಯೆ ನಡೆಯಲಿದೆ ಎಂದರು. ಪಕ್ಷದ ಇತ್ತೀಚಿನ ಎಲ್ಲ ಬೆಳವಣಿಗೆ ಕುರಿತು ಗಂಭೀರ ಚರ್ಚೆ ನಡೆದಿದೆ. ರಾಜ್ಯದಲ್ಲಿ ಪಕ್ಷದ ಘನತೆಗೆ ಚ್ಯುತಿ ಬರುವಂಥ ಚಟುವಟಿಕೆ, ಹೇಳಿಕೆಗಳನ್ನು ಪಕ್ಷ ಸಹಿಸುವುದಿಲ್ಲ. ಈ ಬಗ್ಗೆ ಕೇಂದ್ರದ ನಾಯಕರು ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎಂದರು.
ನಾಗರಹಾವಿಗೆ ತಲೆನೋವು ಬಂದಾಗ ತಲೆ ಚಚ್ಚಿಕೊಂಡು ಸಾಯುತ್ತದೆ. ಅದಕ್ಕೆ ಔಷಧ ಕೂಡ ಇದೆ. ಸೂಕ್ತ ಸಂದರ್ಭದಲ್ಲಿ ಔಷಧ ಕೊಡುತ್ತೇವೆ. ಈಗ (ಯತ್ನಾಳ್) ಅವರು ತಲೆ ನೋವು ಬಂದು ತಲೆ ಚಚ್ಚಿಕೊಳ್ಳುತ್ತಿದ್ದಾರೆ.
| ಎ.ಎಸ್.ನಡಹಳ್ಳಿ, ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ
ಪಕ್ಷದಲ್ಲಿದ್ದು ಬಾಯಿಗೆ ಬಂದಂತೆ ಮಾತಾಡುವವರ ಬಾಯಿಗೆ ಬೀಗ ಹಾಕಬೇಕಾದ ಅವಶ್ಯಕತೆ ಇದೆ. ಆಶಿಸ್ತು ಎಂದು ಗೊತ್ತಿದ್ದೂ ಮಾತಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ರಾಜ್ಯ ನಾಯಕರಿಗೆ ತಾಕತ್ತಿಲ್ಲ ಎಂದು ಅನ್ನಿಸುವ ಪರಿಸ್ಥಿತಿ ನಿರ್ವಣವಾಗಿದೆ. ಆದಷ್ಟು ಶೀಘ್ರ ಇದಕ್ಕೆ ಉತ್ತರ ಕಂಡುಕೊಳ್ಳದೇ ಇದ್ದರೆ ಪಕ್ಷದ ಚಟುವಟಿಕೆಗಳನ್ನು ಸರಾಗವಾಗಿ ಮುಂದುವರಿಸುವುದು ಕಷ್ಟ.
| ಡಿ.ವಿ.ಸದಾನಂದಗೌಡ ಕೇಂದ್ರದ ಮಾಜಿ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 9 =
Remember me
