ಜಯಪುರ (ಚಿಕ್ಕಮಗಳೂರು ಜಿಲ್ಲೆ):ಸೇನೆಯಲ್ಲಿ ಕೆಲಸ ಮಾಡಿ ಅಪಾರ ಜನಮನ್ನಣೆ ಗಳಿಸಿದ್ದ ವ್ಯಕ್ತಿ, ಹಲವು ಪುರಸ್ಕಾರ, ಗೌರವ ಸನ್ಮಾನಗಳಿಗೆ ಪಾತ್ರನಾದ ‘ಯೋಧ’ ಈತ. ವೈದ್ಯಕೀಯ ರಜೆ ಮೇಲೆ ಊರಿಗೆ ಬಂದಿದ್ದ. ಈ ತಿಂಗಳಲ್ಲೇ ಜಮ್ಮು-ಕಾಶ್ಮೀರದ ಅನಂತ್‌ನಾಗ್‌ಗೆ ಕರ್ತವ್ಯಕ್ಕೆ ತೆರಳಬೇಕಿತ್ತು… ಆದರೆ ಈಗ ದಿಢೀರನೆ ‘ಕೃಷ್ಣನ ಜನ್ಮಸ್ಥಾನ’ ಸೇರಿದ್ದಾನೆ. ಯಾಕೆ ಅಂತೀರಾ?
ದೇಶ ಸೇವೆ ಮಾಡುತ್ತಿರುವ ವ್ಯಕ್ತಿಗೆ ಯಾಕೆ ಇಂಥ ಸ್ಥಿತಿ ಬಂತು ಎಂದು ಮರುಕ ಪಡಬೇಡಿ. ಈ ದೇಶ ಸೇವಕ ಇದುವರೆಗೆ ಹೇಳಿದ್ದು ಎಲ್ಲವೂ ಕಟ್ಟು ಕತೆ. ಸೇನೆ ಸೇರಬೇಕು ಎಂಬ ಕನಸು ಕಟ್ಟಿಕೊಂಡಿದ್ದರೂ ಗುರಿ ಸಾಧನೆಯಲ್ಲಿ ವಿಫಲನಾಗಿದ್ದ. ಕೇರಳದ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಅವನು ವಾಪಸ್ ಊರಿಗೆ ಬಂದಾಗ ಕಥೆ ಹೆಣೆದು ಜನರನ್ನು ನಂಬಿಸಿದ್ದ. ಹಾರ ತುರಾಯಿ ಪಡೆದು ಸನ್ಮಾನ ಮಾಡಿಸಿಕೊಂಡಿದ್ದ. ಅವನು ಹೇಳಿದ್ದ ಕತೆಗಳ ಬಣ್ಣ ಈಗ ಕಳಚಿದೆ. ಹಾಗಾಗಿ ಆತನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಕೊಪ್ಪ ತಾಲೂಕು ಕಲ್ಲಗುಡ್ಡೆಯ ನವೀನ್ (25)ಯುವಕನೇ ಈಗ ಖಳನಾಯಕ.
ಈತ ಮನೆಗೆ ಬಂದು ತುಂಬಾ ದಿನಗಳಾದರೂ ಸೇನಾ ಕರ್ತವ್ಯಕ್ಕೆ ಮರಳದಿರುವ ಬಗ್ಗೆ ಅನುಮಾನಗೊಂಡ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದಾಗ ಈತನ ನಿಜಬಣ್ಣ ಬಯಲಾಗಿದೆ.
ಆದರೂ ಈತ ಈಗ ವೈದ್ಯಕೀಯ ರಜೆ ಮೇಲಿದ್ದೇನೆ. ಮೇ 12ಕ್ಕೆ ಕರ್ತವ್ಯಕ್ಕೆ ಹೋಗಬೇಕಿದೆ. ಜಮ್ಮು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಗೆ ಪೋಸ್ಟಿಂಗ್ ಮಾಡಿದ್ದಾರೆ’ ಎಂದು ಹೇಳುತ್ತಿದ್ದಾನಂತೆ. ಆದರೂ, ಸತ್ಯಾಸತ್ಯ ಪರಿಶೀಲಿಸಲು ಪೊಲೀಸರು ಈತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ಕೇರಳದ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದವನು ಊರಿಗೆ ವಾಪಸ್ ಬಂದಾಗ ಯೋಧನಾಗಿ ಕೆಲಸ ಮಾಡುತ್ತಿರುವುದಾಗಿ ಕಥೆ ಕಟ್ಟಿದ್ದ. ತನ್ನ ಸಾಹಸಗಾಥೆಗಳ ಬಗ್ಗೆ ವರ್ಣರಂಜಿತವಾಗಿ ಹೇಳುತ್ತಿದ್ದ. ಈತನ ಬಣ್ಣದ ಮಾತುಗಳನ್ನು ನಂಬಿದ ಜನ, ಈ ಕುಗ್ರಾಮದಲ್ಲೊಬ್ಬ ಇಂತಹ ಯುವಕ ಹುಟ್ಟಿದ್ದೇ ಪುಣ್ಯ ಎಂದು ಭಾವಿಸಿ ಹಾರ ತುರಾಯಿ ಕೊಟ್ಟು ಸನ್ಮಾನಿಸಿದ್ದರು. ಪಾದಗಳಿಗೆ ಎರಗಿ ನಮಸ್ಕರಿಸಿದ್ದರು. ಸಮ್ಮಾನ ಪತ್ರ ನೀಡಿ ಆದರಿಸಿದ್ದರು. ಈ ಸಮ್ಮಾನ ಪತ್ರಗಳು ಈಗಲೂ ಈತನ ಮನೆಯ ಗೋಡೆ ಮೇಲೆ ನೇತಾಡುತ್ತಿವೆ.
ಶಾಲೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿರುವ ಈತನ ತಾಯಿಗೆ ಪಾಪ, ಹೆತ್ತಕರುಳಿಗೆ ಇದು ಯಾವುದೂ ಗೊತ್ತಿಲ್ಲ. ದೇಶ ಸೇವೆ ಮಾಡುತ್ತಿದ್ದಾನೆ ಎಂದು ಭಾವಿಸಿ ಪುತ್ರನ ಬಗ್ಗೆ ಹೆಮ್ಮೆ ಹೊಂದಿದ್ದರು. ಜನ ಪ್ರೀತಿಯಿಂದ ಹಾರ ಹಾಕಿ ಗೌರವಿಸಿದ್ದನ್ನು ನೋಡಿ ಜನ್ಮಸಾರ್ಥಕ ಎಂದು ಅವರ ಎದೆಯುಬ್ಬಿತ್ತು. ಆಕೆಗೂ ಈಗ ಬರಸಿಡಿಲು ಬಡಿದ ಅನುಭವ. ಮಗ ಮಾಡಿದ ಕೃತ್ಯಕ್ಕೆ ಆಕೆಗೀಗ ತಲೆತಗ್ಗಿಸುವ ಸ್ಥಿತಿ ಬಂದಿದೆ.
ಕೂದಲೆಳೆ ಅಂತರದಲ್ಲಿ ಪಾರಾಗಿದ್ದೆ!:‘2019ರ ಫೆಬ್ರವರಿ 14. ಜಮ್ಮು ಕಾಶ್ಮೀರದ ಉರಿ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಭಯಂಕರ ಶಬ್ದಕ್ಕೆ ಬೆಚ್ಚಿ ಬಿದ್ದು ಹಿಂದಿರುಗಿ ನೋಡಿದಾಗ ಬಾನೆತ್ತರಕ್ಕೆ ಬೆಂಕಿ, ಸೈನಿಕರ ಛಿದ್ರ ದೇಹಗಳು ಗಾಳಿಯಲ್ಲಿ ಹಾರಾಡುತ್ತಿದ್ದವು. ಸ್ಫೋಟ ಸಂಭವಿಸಿದ ಸ್ಥಳದಲ್ಲೇ ಇದ್ದ ನಾನು ಕೂದಲೆಳೆ ಅಂತರದಲ್ಲಿ ಪಾರಾಗಿದ್ದೆ. ನನ್ನೊಂದಿಗೆ ದೇಶ ಸೇವೆ ಮಾಡುತ್ತಿದ್ದ ಯೋಧರನ್ನು ಕಳೆದುಕೊಂಡ ಆ ಕ್ಷಣವನ್ನು ಹೇಗೆ ಮರೆಯಲಿ…’ ಎಂದು ಮೊಸಳೆ ಕಣ್ಣೀರು ಸುರಿಸಿದ್ದ. ಜನರು ಇದನ್ನು ನಂಬಿದ್ದರು.
ಒಬ್ಬೊಬ್ಬರ ಬಳಿ ಒಂದೊಂದು ಕಥೆ ಕಟ್ಟುತ್ತಿದ್ದ ನವೀನ್, ‘ಸಿಯಾಚಿನ್‌ನಲ್ಲಿ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ್ ಹಿಮಪಾತದಿಂದ ಹುತಾತ್ಮನಾದಾಗ ನಾನೂ ಆತನ ಜತೆಯಲ್ಲಿದ್ದೆ. ಅಂದು ನನ್ನ ಕಾಲು ಮುರಿಯಿತು, 8 ಜನರಲ್ಲಿ ಇಬ್ಬರು ಮಾತ್ರ ಬದುಕುಳಿದೆವು…’’ ಎಂದು ಸಾವನ್ನು ಗೆದ್ದು ಬಂದ ವೀರನಂತೆ ನಟಿಸಿದ್ದ.
ಕನಸು ನನಸಾಗಿರಲಿಲ್ಲ:ನವೀನ್‌ಗೆ ಯೋಧನಾಗುವ ಆಸೆ ಇತ್ತು. . ಆದರೆ ಆ ಗುರಿ ಸಾಧನೆಯಲ್ಲಿ ವಿಫಲನಾಗಿದ್ದ. ಕಾಲೇಜು ದಿನಗಳಲ್ಲಿ ಎನ್‌ಸಿಸಿ ಸೇರಿದ್ದ. ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆ ಬರೆದಿದ್ದರೂ ತೇರ್ಗಡೆಯಾಗಿರಲಿಲ್ಲ. ಕೆಲಸ ಸಿಗದ ಆತ ಕೇರಳದಲ್ಲಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆದರೆ ಇದಿನ್ನೂ ದೃಢಪಟ್ಟಿಲ್ಲ.
ಕ್ಯಾಪ್ಟನ್ ನವೀನ್‌ಗೆ ಗೌರವ:ಕಟ್ಟು ಕಥೆ ಹೆಣೆದು ಕ್ಯಾಪ್ಟನ್ ನವೀನ್ ಆಗಿದ್ದ ಅವನಿಗೆ ಸಮಾಜದಲ್ಲಿ ಗೌರವ ಸಿಗಲಾರಂಭಿಸಿತ್ತು. ಅಧಿಕಾರಿಗಳಿಗೆ ಫೋನ್ ಮಾಡಿ ಪರಿಚಯ ಮಾಡಿಕೊಂಡು ಕೆಲವು ಕೆಲಸಗಳಿಗೆ ಶಿಫಾರಸು ಮಾಡುತ್ತಿದ್ದ. ಸಮಾಜ ನೀಡುತ್ತಿದ್ದ ಗೌರವವನ್ನೇ ದುರ್ಬಳಕೆ ಮಾಡಿಕೊಂಡು ಶೋಕಿ ಮಾಡಲಾರಂಭಿಸಿದ್ದ. ದೇಶ ಸೇವೆ ಮಾಡಿದ ಬಗ್ಗೆ ಪತ್ರಿಕೆಗಳಲ್ಲಿ ಬರೆಯಲು ಮಾಹಿತಿ ಕೇಳಿದರೆ ದಯವಿಟ್ಟು ಬೇಡ ಎಂದು ನಯವಾಗಿಯೇ ತಿರಸ್ಕರಿಸುತ್ತಿದ್ದ. ನಾನು ಎನ್‌ಎಸ್‌ಜಿ ಕಮಾಂಡೋ ಆಗಿ ಆಯ್ಕೆಯಾಗುವ ಅವಕಾಶವಿದೆ. ಸಾಮಾಜಿಕ ಜಾಲತಾಣಗಳಲ್ಲಾಗಲಿ, ಪತ್ರಿಕೆಗಳಲ್ಲಾಗಲಿ ಫೋಟೋ ಪ್ರಕಟವಾಗಬಾರದು ಎಂದು ಹೇಳುತ್ತಿದ್ದ.

ನವೀನ್ ಯೋಧನಾಗಿ ಸೇವೆ ಸಲ್ಲಿಸಿದ ಬಗ್ಗೆ ಈ ಹಿಂದೆ ವಿಚಾರಣೆ ಮಾಡಿದಾಗ ಸತ್ಯ ಒಪ್ಪಿಕೊಂಡು, ಗೌರವಯುತವಾಗಿ ಬಾಳಲು ಒಂದು ಅವಕಾಶ ಕೊಡಿ ಎಂದು ಬೇಡಿಕೊಂಡಿದ್ದ. ಆದರೆ ಮತ್ತೆ ಹಳೇ ಚಾಳಿ ಮುಂದುವರಿಸಿದ್ದ. ಕಲ್ಲುಗುಡ್ಡೆ ಸರ್ಕಾರಿ ಶಾಲೆಯಲ್ಲಿ 15 ಜನ ಯುವಕರನ್ನು ಸೇರಿಸಿ ಸಭೆ ನಡೆಸಿರುವ ಮಾಹಿತಿ ಇದ್ದು, ಸತ್ಯ ಬಯಲಿಗೆ ತರಲು ಪೊಲೀಸರು ತನಿಖೆ ಮಾಡಬೇಕು.ಲಲಿತಾ, ಕೊಪ್ಪ ತಾಪಂ ಅಧ್ಯಕ್ಷೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + twelve =
Remember me
