ಬೆಂಗಳೂರು:ಭಾರಿ ಮಳೆಯಿಂದ ಉಂಟಾಗಿರುವ ಪ್ರವಾಹದ ಬಳಿಕ ಕಾಣಿಸಿಕೊಳ್ಳುವ ಸಾಂಕ್ರಾಮಿಕ ರೋಗಗಳನ್ನು ತಡೆಯುವುದಕ್ಕೆ ಹಾಗೂ ಕರೊನಾ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತಗಳು ಮುಂದಾಗಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೂಚಿಸಿದ್ದಾರೆ.
ವಿಧಾನಸೌಧದಲ್ಲಿ ಪ್ರವಾಹಪೀಡಿತ ಬಾಗಲಕೋಟೆ, ವಿಜಯಪುರ, ಕಲುಬುರಗಿ, ಯಾದಗಿರಿ, ಕೊಪ್ಪಳ, ಬೆಳಗಾವಿ ಜಿಲ್ಲಾಡಳಿತಗಳ ಜತೆ ವಿಡಿಯೋ ಕಾನ್ಪರೆನ್ಸ್ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಸಚಿವರು ಮಾತನಾಡಿದರು. ಪ್ರವಾಹದಲ್ಲಿ ಸಿಲುಕಿದ್ದ, ಹಾನಿಗೊಳಗಾದ 55 ಗ್ರಾಮಗಳ 23,250 ಮಂದಿಯನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ 155, ವಿಜಯಪುರ ಜಿಲ್ಲೆಯಲ್ಲಿ 27 ಗ್ರಾಮ ಜಲಾವೃತವಾಗಿವೆ. ವಿಜಯಪುರದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದರು.
ಕಾಳಜಿ ಕೇಂದ್ರದಲ್ಲಿ ಶುದ್ಧವಾದ ಕುಡಿಯುವ ನೀರು, ನೀರಿನ ಘಟಕ ಇಲ್ಲದ ಕಡೆ ಬಿಸಿನೀರು ಕೊಡಲು ತಿಳಿಸಲಾಗಿದೆ. ಬ್ಲಿಚಿಂಗ್ ಪೌಡರ್ ಸೇರಿ ಔಷಧಗಳ ಸಿಂಪಡಣೆ ಹಾಗೂ ಸ್ಯಾನಿಟೈಜೇಷನ್ ಮಾಡಲು ಸೂಚಿಸಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ಇರುವವರಿಗೆ ನೀಡಬೇಕಿರುವ ಆಹಾರದ ಬಗ್ಗೆ ರಾಜ್ಯ ಸರ್ಕಾರದಿಂದ ಮೆನು ನೀಡಲಾಗಿದೆ. ಕೇಂದ್ರಗಳ ಒಳಗೆ ಮತ್ತು ಹೊರಭಾಗದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು, ಪ್ರತಿದಿನ ರೋಗನಿರೋಧಕ ದ್ರಾವಣ ಸಿಂಪಡಿಸಬೇಕು, ಕೇಂದ್ರದಲ್ಲಿರುವ ಎಲ್ಲರ ಆರೋಗ್ಯ ತಪಾಸಣೆ ಮಾಡಬೇಕು ಮತ್ತು ಅವರಿಗೆ ಕೋವಿಡ್ ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ ತಜ್ಞರು ಅರಿವು ಮೂಡಿಸುವ ಕೆಲಸ ಮಾಡಲು ಆದೇಶಿಸಲಾಗಿದೆ ಎಂದು ವಿವರಿಸಿದರು.
ಹಿರಿಯ ನಾಗರಿಕರು, ಬಾಣಂತಿಯರು, ಗರ್ಭಿಣಿಯರು ಮತ್ತು ಮಕ್ಕಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಘಟಕ ಅಥವಾ ತಾಲೂಕು ಆಸ್ಪತ್ರೆಗಳಿಗೆ ಸ್ಥಳಾಂತರಿಸಿ ವಿಶೇಷ ಕಾಳಜಿಯಿಂದ ನೋಡಿಕೊಳ್ಳಬೇಕು. ಜ್ವರ ಹಾಗೂ ಇತರ ರೋಗಲಕ್ಷಣ ಇದ್ದವರಿಗೆ ತಕ್ಷಣ ಕೋವಿಡ್ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ಅಲ್ಲಿ ಎಲ್ಲರಿಗೂ ಮಾಸ್ಕ್ ವಿತರಿಸಬೇಕು, ಸ್ಯಾನಿಟೈಸರ್ ನೀಡುವ ಜತೆಗೆ ಶುಚಿತ್ವಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸುವಂತೆ ತಿಳಿಸಲಾಗಿದೆ ಎಂದರು.
ಡೆಂಘ, ಚಿಕೂನ್​ಗುನ್ಯಾ ನಿಯಂತ್ರಣ
ಕಳೆದ ವರ್ಷಗಳಿಗೆ ಹೋಲಿಸಿದರೆ ಡೆಂಘ, ಚಿಕೂನ್​ಗುನ್ಯಾ ಹಾಗೂ ಇತರ ಸಾಂಕ್ರಾಮಿಕ ರೋಗಗಳ ಹರಡುವಿಕೆ ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಕಡಿಮೆ ಪ್ರಮಾಣದಲ್ಲಿದೆ. ಕೋವಿಡ್ ಆತಂಕ ಇರುವ ಹಿನ್ನೆಲೆಯಲ್ಲಿ ವಿಶೇಷ ಗಮನಹರಿಸಿ ಪರಿಸ್ಥಿತಿ ನಿಭಾಯಿಸುವಂತೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ ಎಂದು ಸುಧಾಕರ್ ತಿಳಿಸಿದರು.
ಸೋಂಕು ಹೆಚ್ಚುವ ಆತಂಕ
ಮುಂದಿನ 2-3 ತಿಂಗಳು ಚಳಿಗಾಲದ ಜತೆಗೆ ಹಬ್ಬಗಳ ಹಿನ್ನೆಲೆ ಇರುವುದರಿಂದ ಕೋವಿಡ್ ಮತ್ತು ಸಾಂಕ್ರಾಮಿಕ ರೋಗಗಳ ಹರಡುವಿಕೆ ಪ್ರಮಾಣ ಹೆಚ್ಚಾಗುವ ಆತಂಕವಿದೆ. ಈ ಹಿಂದೆ ಕರೊನಾ ಅನ್ನು ಸಮರ್ಥವಾಗಿ ನಿಭಾಯಿಸಿದ್ದ ನೆರೆಯ ಕೇರಳ ರಾಜ್ಯದಲ್ಲಿ ಓಣಂ ಸಂದರ್ಭ ಕೈಗೊಂಡ ತಪ್ಪು ನಿರ್ಧಾರದಿಂದ ಸೋಂಕು ಹೆಚ್ಚಾಗಿದೆ. ಇದು ನಮಗೆ ಪಾಠವಾಗಿದ್ದು, ಕೆಲ ಕ್ರಮ ಜರುಗಿಸಲಾಗುತ್ತಿದೆ ಎಂದು ಸುಧಾಕರ್ ಹೇಳಿದರು.
ಸೇನೆ ನೆರವಿಗೆ ಕೃತಜ್ಞತೆ
ಪ್ರವಾಹದಿಂದ ಹಾನಿಗೀಡಾದ ಗ್ರಾಮ ಗಳಲ್ಲಿ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲು ಮತ್ತು ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ನೆರವಾಗಿರುವ ಸೇನೆಯ ಯೋಧರು, ಎನ್​ಡಿಆರ್​ಎಫ್ ಮತ್ತು ಎಸ್​ಡಿಆರ್​ಎಫ್ ಸಿಬ್ಬಂದಿಗೆ ಸಚಿವ ಡಾ.ಸುಧಾಕರ್ ಧನ್ಯವಾದ ಹೇಳಿದರು.
ಭೀಮೆ ಒಡಲು ಸೇರಿದ 155 ಹಳ್ಳಿ
ಕಲಬುರಗಿ: ಕಲಬುರಗಿ, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ಭೀಮೆ ರೌದ್ರಾವತಾರ ಸೋಮವಾರ ಮುಂದುವರಿದಿರುವ ಮಧ್ಯೆಯೇ ಮಹಾರಾಷ್ಟ್ರದಲ್ಲಿ ಮಳೆ ಕಡಿಮೆ ಆಗಿರುವ ಸಂತಸದ ಸುದ್ದಿಯೂ ಹೊರಬಿದ್ದಿದೆ. ಹೀಗಾಗಿ ಎಲ್ಲ ಅಂದುಕೊಂಡಂತೆ ಆದರೆ ಪ್ರವಾಹ ಕಡಿಮೆಯಾಗಿ ಜನಜೀವನ ಸಹಜ ಸ್ಥಿತಿಗೆ ಬರಬಹುದಾಗಿದೆ. ಭೀಮೆ ಒಡಲಿಗೆ ಸದ್ಯಕ್ಕೆ ಒಂದೊಂದೇ ಹಳ್ಳಿ ಸೇರುತ್ತಿವೆ. ಹೀಗಾಗಿ ಪ್ರವಾಹಕ್ಕೆ ಸಿಲುಕಿರುವ ಹಳ್ಳಿಗಳ ಸಂಖ್ಯೆ ಕಲಬುರಗಿ ಜಿಲ್ಲೆಯೊಂದರಲ್ಲೇ 155 ಎನ್ನಲಾಗುತ್ತಿದೆ. ಪಕ್ಕದ ಜಿಲ್ಲೆಗಳು ಸೇರಿ 200ಕ್ಕೂ ಹೆಚ್ಚು ಹಳ್ಳಿ ಜನರು ಪ್ರವಾಹ ಪ್ರವರಕ್ಕೆ ತತ್ತರಿಸಿದ್ದಾರೆ. ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್​ನಿಂದ 6.30 ಲಕ್ಷ ಕ್ಯೂಸೆಕ್ ನೀರು ನದಿಗೆ ಸೇರುತ್ತಿದ್ದರಿಂದ ಪ್ರವಾಹ ಉಲ್ಬಣಿಸಿದೆ. ಪರಿಣಾಮ ನೆರೆಪೀಡಿತ ಹಳ್ಳಿ ಜನರ ಬವಣೆ ಹೆಚ್ಚುತ್ತಲೇ ಸಾಗಿದೆ. ಈ ಮಧ್ಯೆ ಮತ್ತೆ ಎರಡು ದಿನ ಮಳೆಯಾಗಲಿದೆ ಎಂಬ ಮುನ್ಸೂಚನೆ ಭೀಮಾ ತೀರದ ಜನರ ಮುಖ ಕಪ್ಪಿಡುವಂತೆ ಮಾಡಿದೆ. ಇದಕ್ಕೆ ಪೂರಕ ಎನ್ನುವಂತೆ ಸೋಮವಾರ ಕಲಬುರಗಿ ನಗರ ಸೇರಿ ಜಿಲ್ಲೆಯ ವಿವಿಧೆಡೆ ಒಂದು ಗಂಟೆ ಮಳೆಯಾಗಿದೆ. 23 ಸಾವಿರ ಜನರನ್ನು ಕಾಳಜಿ ಕೇಂದ್ರಗಳಿಗೆ ಶಿಫ್ಟ್ ಮಾಡಿದ್ದು, ಕೇಂದ್ರಗಳಲ್ಲಿ ಕೆಲ ಅವ್ಯವಸ್ಥೆ ಇದೆ ಎಂಬ ದೂರುಗಳು ವ್ಯಾಪಕವಾಗಿವೆ. ಕಲಬುರಗಿ ಜಿಲ್ಲೆಯಲ್ಲಿ 140 ಕಾಳಜಿ ಕೇಂದ್ರ ಸ್ಥಾಪಿಸಿದ್ದು, 23 ಸಾವಿರ ನೆರೆ ಸಂತ್ರಸ್ತರು ಆಸರೆ ಪಡೆದಿದ್ದಾರೆ.
17 ಜಿಲ್ಲೇಲಿ ಯೆಲ್ಲೋ ಅಲರ್ಟ್
ಉತ್ತರಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆ ಭಾರಿ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಕರಾವಳಿ ಜಿಲ್ಲೆಗಳಲ್ಲಿ ಅ.21ರಿಂದ 24ರವರೆಗೆ ಯೆಲ್ಲೋ ಅಲರ್ಟ್, ದಕ್ಷಿಣ ಒಳನಾಡಿ ನಲ್ಲಿ ಅ.20ರಂದು ಯೆಲ್ಲೋ ಅಲರ್ಟ್ ಇರಲಿದೆ.
ಸಿಎಂ ವೈಮಾನಿಕ ಸಮೀಕ್ಷೆ ನಾಳೆ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅ.21ರಂದು ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ನೆರೆ ಹಾವಳಿ ಬಾಧಿತ ಪ್ರದೇಶದ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಬುಧವಾರ ಬೆಳಗ್ಗೆ 9.15ಕ್ಕೆ ಎಚ್​ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಹೊರಟು ಬಳ್ಳಾರಿ ಜಿಲ್ಲೆಯ ಜಿಂದಾಲ್ ತಲುಪುವರು. ಅಲ್ಲಿಂದ ಬೆಳಗ್ಗೆ 10.15ಕ್ಕೆ ವಾಯುಪಡೆ ಹೆಲಿಕಾಪ್ಟರ್ ಮೂಲಕ 11.45ಕ್ಕೆ ಕಲಬುರಗಿ ತಲುಪಿ, ಹಿರಿಯ ಅಧಿಕಾರಿಗಳ ಸಭೆ ಮಾಡಲಿದ್ದಾರೆ. ಮಧ್ಯಾಹ್ನ 12.45ಕ್ಕೆ ಅತಿವೃಷ್ಟಿ ಹಾಗೂ ನೆರೆಬಾಧಿತ ಪ್ರದೇಶಗಳ ಮತ್ತೊಂದು ಸುತ್ತಿನ ವೈಮಾನಿಕ ಸಮೀಕ್ಷೆ ನಡೆಸುವರು. ಮಧ್ಯಾಹ್ನ 2.50ಕ್ಕೆ ತಾಂತ್ರಿಕ ನಿಲುಗಡೆ ವೇಳೆ ವಿಜಯಪುರ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಬಿಎಸ್​ವೈ ಸಭೆ ನಡೆಸುವರು. ಮಧ್ಯಾಹ್ನ 3.30ಕ್ಕೆ 3ನೇ ಸುತ್ತಿನ ವೈಮಾನಿಕ ಸಮೀಕ್ಷೆ ನಡೆಸಿ ಸಂಜೆ 4.30ಕ್ಕೆ ಜಿಂದಾಲ್ ಏರ್​ಸ್ಟ್ರಿಪ್ ತಲುಪಿ, ಬೆಂಗಳೂರಿಗೆ ಮರಳಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
