ಬೆಂಗಳೂರು:ಬರಕ್ಕೆ ನೆರವು, ತೆರಿಗೆ ಪಾಲು ಹಂಚಿಕೆಯಲ್ಲಿ ಆಗಿರುವ ಅನ್ಯಾಯ ಕುರಿತು ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದ ರಾಜ್ಯ ಸರ್ಕಾರ, ಇದೀಗ ರಾಜ್ಯಪಾಲರ ಮೂಲಕವೂ ವಿಧಾನಮಂಡಲದಲ್ಲಿ ಕೇಂದ್ರದ ವಿರುದ್ಧ ಆಕ್ರೋಶ ದಾಖಲು ಮಾಡಿದೆ. ಜತೆಗೆ ಗ್ಯಾರಂಟಿಗಳು ಜನರ ನೆರವಿಗೆ ಬಂದಿವೆ ಎಂದು ಬಲವಾಗಿ ಸಮರ್ಥಿಸಿಕೊಂಡಿದೆ.
ನ್ಯಾಯ ಹಾಗೂ ಧರ್ಮದ ರೀತಿ ಸಿಗಬೇಕಾದ ಪಾಲು ಪಡೆಯಲು ಎಲ್ಲ ಪ್ರಯತ್ನಗಳನ್ನು ಸರ್ಕಾರ ಮಾಡುತ್ತದೆ ಎಂದು ಹೇಳುವ ಮೂಲಕ ಕೇಂದ್ರದ ವಿರುದ್ಧ ತನ್ನ ಹೋರಾಟವನ್ನು ಜೀವಂತವಾಗಿಟ್ಟಿದೆ.
ಅತಿ ಹೆಚ್ಚು ತೆರಿಗೆ ಕೊಡುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದರೂ ಪಾಲು ಪಡೆಯುವ ವಿಚಾರದಲ್ಲಿ 10ನೇ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ನಮಗೆ ನ್ಯಾಯ ಮತ್ತು ನ್ಯಾಯಯುತವಾಗಿ ಸಿಗಬೇಕಾದ ಪಾಲು ಪಡೆಯಲು ಸರ್ಕಾರವು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಥಾವರಚಂದ್ ಗೆಹಲೋತ್ ತಿಳಿಸಿದರು. ರಾಜ್ಯದ ಐದು ಕೋಟಿ ಜನ ಮಧ್ಯಮ ವರ್ಗದ ಸ್ಥಿತಿಗೆ ಏರುವುದು ಜಾಗತಿಕ ದಾಖಲೆಯಾಗಿದೆ ಎಂದರು.
ಗ್ಯಾರಂಟಿ ಯಶಸ್ಸಿನ ಬಣ್ಣನೆ:ಗ್ಯಾರಂಟಿಗಳು ದೇಶಕ್ಕೆ ಮಾದರಿಯಾಗಿವೆ. ಬಡವರಿಗೆ ಯೋಜನೆಗಳು ಸಾಂತ್ವನ ಒದಗಿಸಿವೆ. ಸರ್ಕಾರ ನಡೆ-ನುಡಿಗಳನ್ನು ಒಂದಾಗಿಸಿಕೊಂಡು ಕೆಲಸ ಮಾಡುತ್ತಿದೆ. ಆರ್ಥಿಕ ಅಸಮಾನತೆಯಿಂದ ಅಶಕ್ತರಾಗಿರುವ ಜನತೆಯ ಬದುಕಿಗೆ ಗ್ಯಾರಂಟಿಗಳು ಸಾಕಾಗುವುದಿಲ್ಲ ಎನ್ನುವ ಅರಿವು ಸರ್ಕಾರಕ್ಕಿದೆ. ಗ್ಯಾರಂಟಿಗಳಿಂದ 2 ಕೋಟಿಗೂ ಅಧಿಕ ಕುಟುಂಬಗಳು ಬಡತನ ರೇಖೆಗಿಂತ ಮಧ್ಯಮ ವರ್ಗದ ಸ್ಥಿತಿಗೆ ಏರುತ್ತಿವೆ ಎಂದು ರಾಜ್ಯಪಾಲರು ತಿಳಿಸಿದರು.
ಜಿಎಸ್​ಟಿ ಸಂಗ್ರಹ ದೇಶದಲ್ಲೇ ಪ್ರಥಮ:ನನ್ನ ಸರ್ಕಾರ ಭವಿಷ್ಯದತ್ತ ದೃಷ್ಟಿ ನೆಟ್ಟಿದೆ. ಎಂಟು ತಿಂಗಳಲ್ಲಿ 77,000 ಕೋಟಿ ರೂ.ಗೂ ಹೆಚ್ಚು ಬಂಡವಾಳ ಹರಿದು ಬಂದಿದೆ. ಜನವರಿ ಅಂತ್ಯದವರೆಗೆ ಜಿಎಸ್​ಟಿ ಸಂಗ್ರಹಣೆಯ ಬೆಳವಣಿಗೆ ದರವು ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಬರಗಾಲವಿದ್ದರೂ ರಸ್ತೆ, ನೀರು, ಶಿಕ್ಷಣ, ಆರೋಗ್ಯ, ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಕೈಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ದಾಖಲಾರ್ಹ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸುತ್ತಿದೆ ಎಂದು ತಿಳಿಸಿದರು.
ಹೊಸ ಶಿಕ್ಷಣ ನೀತಿ ಮಾದರಿ:ನಾವು ಹೊಸ ಶಿಕ್ಷಣ ನೀತಿ ರೂಪಿಸುತ್ತಿದ್ದೇವೆ. ಕರ್ನಾಟಕದ ರಾಜ್ಯ ಶಿಕ್ಷಣ ನೀತಿಯು ಈಗಾಗಲೆ ರಾಜ್ಯವು ಸಾಧಿಸಿರುವ ಶೈಕ್ಷಣಿಕ ಪ್ರಗತಿಯೊಂದಿಗೆ ಈ ಕಾಲದ ಮತ್ತು ಭವಿಷ್ಯದ ಅಗತ್ಯಗಳಿಗೆ ಪೂರಕವಾಗಿ ಶಿಕ್ಷಣ ನೀಡುವ ಹೊಸ ಸಾಧ್ಯತೆಗಳನ್ನು ತೆರೆದಿದಡಲಿದೆ. ರಾಜ್ಯ ಸರ್ಕಾರ ಎಂಟು ತಿಂಗಳಲ್ಲಿ ಖಾಲಿ ಹುದ್ದೆಗಳ ನೇಮಕಕ್ಕೆ ಆದ್ಯತೆ ನೀಡಿದೆ. 16 ಸಾವಿರ ಜನ ನೇಮಕಗೊಂಡು ತರಬೇತಿಯಲ್ಲಿದ್ದಾರೆ ಎಂದು ಗೆಹಲೋತ್ ತಿಳಿಸಿದರು.
ಅಗಲಿದ ಗಣ್ಯರಿಗೆ ಸಂತಾಪ:ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ನಾಗನಗೌಡ ಕಂದಕೂರು ಮತ್ತು ವಿಮರ್ಶಕ ಪ್ರೊ.ಅಮೃತ ಸೋ ಮೇಶ್ವರ ಅವರಿಗೆ ವಿಧಾನಸಭೆ ಸಂತಾಪ ಸೂಚಿ ಸಿತು. ಸಭಾಧ್ಯಕ್ಷ ಯು.ಟಿ ಖಾದರ್ ಅವರ ಸಂತಾಪ ನಿರ್ಣ ಯಕ್ಕೆ ಪೂರಕವಾಗಿ ಸಿಎಂ ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿ ಹಲವು ಶಾಸಕರು ನುಡಿನಮನ ಸಲ್ಲಿಸಿದರು. ಬಳಿಕ ಮೃತರ ಗೌರವಾರ್ಥ ಒಂದು ನಿಮಿಷ ಮೌನ ಆಚರಿಸಲಾಯಿತು. ಇತ್ತೀಚೆಗೆ ನಿಧನರಾದ ಮಾಜಿ ಶಾಸಕರಾದ ಮಾರುತಿರಾವ್ ಡಿ.ಮಾಲೆ, ಎಸ್.ಎ.ಜಿದ್ದಿ, ಹಿರಿಯ ಗಾಂಧಿವಾದಿ ಚನ್ನಮ್ಮ ಹಳ್ಳಿಕೇರಿ, ಸಾಹಿತಿ ಡಾ. ಅಮೃತ ಸೋಮೇಶ್ವರ್ ಹಾಗೂ ಜಾನಪದ ಕಲಾವಿದ ಗುರುಲಿಂಗಪ್ಪ ಶಿವಲಿಂಗಪ್ಪ ಕರಡಿ ಅವರಿಗೆ ಪರಿಷತ್​ನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮುಗ್ಗರಿಸಿದ ಮುಖ್ಯಮಂತ್ರಿ:ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಪ್ರಧಾನ ಮೆಟ್ಟಿಲುಗಳ ಮೇಲೆ ಮುಗ್ಗರಿಸಿದ ಪ್ರಸಂಗ ನಡೆ ಯಿತು. ಜಂಟಿ ಅಧಿವೇಶನದಲ್ಲಿ ಭಾಷಣ ಮುಗಿಸಿದ ರಾಜ್ಯಪಾಲರನ್ನು ಬೀಳ್ಕೊಡಲು ಆಗಮಿಸುತ್ತಿದ್ದ ವೇಳೆ ಆಯತಪ್ಪಿ, ರಾಜ್ಯಪಾಲರ ಮೇಲೆ ಬೀಳುವ ಪರಿಸ್ಥಿತಿ ಎದುರಾಯಿತು. ಸಿಎಂ ಮುಗ್ಗರಿಸಿದ್ದನ್ನು ಕಂಡ ಭದ್ರತಾ ಸಿಬ್ಬಂದಿ ನೆರವಿಗೆ ಬಂದರು.
ಜೈಶ್ರೀರಾಮ್ ಘೋಷಣೆ…:ರಾಜ್ಯಪಾಲರ ಭಾಷಣ ಆರಂಭಕ್ಕೂ ಮುನ್ನ ಬಿಜೆಪಿ ಸದಸ್ಯರು ಕೇಸರಿ ಶಾಲು ಹಾಕಿಕೊಂಡು ಪಾಲ್ಗೊಂಡರು. ರಾಜ್ಯಪಾಲರ ಭಾಷಣ ಮುಗಿಯುತ್ತಿದ್ದಂತೆ ಬಿಜೆಪಿ ನಾಯಕರು ಜೈ ಶ್ರೀರಾಮ್ ಕೂಗಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ಜೈ ಭೀಮ್ ಜೈ ಸಂವಿಧಾನ ಎಂದು ಘೊಷಣೆ ಕೂಗಿದರು.
4,38,34,143 ಫಲಾನುಭವಿಗಳಿಗೆ ಆಹಾರ ಭದ್ರತೆ ಒದಗಿಸಲಾಗಿದೆ.
ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಬಾಯಲ್ಲಿ ಸುಳ್ಳು ಹೇಳಿಸಿದ್ದಲ್ಲದೆ ಬಿಜೆಪಿಯ ಯೋಜನೆಗಳನ್ನು ತಮ್ಮದೇ ಯೋಜನೆಯಾಗಿ ಬಿಂಬಿಸಿಕೊಂಡಿದೆ. ಐದು ಗ್ಯಾರಂಟಿ ಪೈಕಿ ಯುವನಿಧಿ ಇನ್ನೂ ನಿರುದ್ಯೋಗಿಗಳ ಕೈ ಸೇರಿಲ್ಲ. ಬರ ಪರಿಹಾರವನ್ನು ಕಂತು ಕಂತಾಗಿ ನೀಡುವುದು ತಪ್ಪು. ನಾವು 25 ಸಾವಿರ ರೂ. ಪರಿಹಾರ ಕೇಳಿದ್ದರೆ, ಆ ವಿಷಯವನ್ನು ಪ್ರಸ್ತಾಪಿಸಿಲ್ಲ.
| ಆರ್.ಅಶೋಕ್ ವಿಧಾನಸಭೆ ಪ್ರತಿಪಕ್ಷ ನಾಯಕ
ಸುಳ್ಳುಗಳ ಕಂತೆಯಿಂದ ಕೂಡಿರುವ ರಾಜ್ಯಪಾಲರ ಭಾಷಣ ಅತ್ಯಂತ ನೀರಸ. ಅಧಿಕಾರಕ್ಕೆ ಬಂದಾಗಿನಿಂದ ಸರ್ಕಾರ ಗ್ಯಾರಂಟಿಗಳ ಸುತ್ತ ಗಿರಕಿ ಹೊಡೆಯುವುದು ಬಿಟ್ಟರೆ ಇನ್ನಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಗ್ಯಾರಂಟಿಗಳನ್ನೂ ಸರಿಯಾಗಿ ಜಾರಿ ಮಾಡಲಾಗದೆ ಸರ್ಕಾರ ಗೊಂದಲದಲ್ಲಿ ಮುಳುಗಿದೆ. ವಿವಿಧ ದರಗಳನ್ನು ಏರಿಸುವ ಮೂಲಕ ಸರ್ಕಾರ ರಾಜ್ಯದ ಭವಿಷ್ಯಕ್ಕೆ ಮಾರಕವಾಗಿದೆ.
| ಬಿ.ವೈ. ವಿಜಯೇಂದ್ರ ಶಾಸಕ
ರಾಜ್ಯಪಾಲರ ಭಾಷಣದಲ್ಲಿ ಉಪ್ಪು-ಹುಳಿ-ಖಾರ ಏನೂ ಇಲ್ಲ. ಇದೊಂದು ಜಾಹೀರಾತುಗಳಿಂದ ನಡೆಯುತ್ತಿರುವ ಸರ್ಕಾರ. ರಾಜ್ಯಪಾಲರ ಭಾಷಣ ಸರ್ಕಾರದ ಮುಂದಿನ ವರ್ಷದ ನೀಲಿನಕ್ಷೆ ಹಾಗೂ ಸಾಧನೆಗಳ ನೋಟವನ್ನು ಕೊಡಬೇಕು. ಅದನ್ನು ಮಾಡದ ಕೆಲಸಗಳ ಬಗ್ಗೆ ಡಂಗೂರ ಹೊಡೆಯುವ ಕೆಲಸ ಅಷ್ಟೇ ಆಯಿತು.
| ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ
ಇಂತಹ ಸಪ್ಪೆ, ನಿರಾಸೆಯ ಭಾಷಣ ಯಾವತ್ತೂ ಕೇಳಿರಲಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿರುವ ಜನವಿರೋಧಿ ಸರ್ಕಾರ ಇರುವುದನ್ನು ತೋರಿಸುತ್ತದೆ. ರಾಜ್ಯಪಾಲರ ಭಾಷಣದಲ್ಲಿ ಸರ್ಕಾರದ ಸಾಧನೆ ಕಾಣಿಸುವುದಿಲ್ಲ. ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಕೆಲಸ ಮಾಡಿದ್ದಾರೆ.
| ಬಸವರಾಜ ಬೊಮ್ಮಾಯಿ ಮಾಜಿ ಸಿಎಂ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 3 =
Remember me
