ಸಂದೀಪ್ ಸಾಲ್ಯಾನ್ ಬಂಟ್ವಾಳಸಮಗ್ರ ಕೃಷಿ ಪದ್ಧತಿ ಅನುಸರಿಸಿ ಕಡಿಮೆ ಬಂಡವಾಳದಲ್ಲಿ ಅಧಿಕ ಲಾಭ ಪಡೆಯಬಹುದು. ವ್ಯವಸ್ಥಿತ ಯೋಜನೆ ರೂಪಿಸಿಕೊಂಡರೆ ಲಭ್ಯವಿರುವ ಸ್ವಲ್ಪ ಜಾಗದಲ್ಲೂ ಹೈನುಗಾರಿಕೆ ಹಾಗೂ ಕೋಳಿ ಸಾಕಣೆ ಮೂಲಕ ಯಶಸ್ಸು ಕಂಡುಕೊಳ್ಳಬಹುದು ಎಂಬುದನ್ನು ಬಂಟ್ವಾಳ ತೆಂಕಬೆಳ್ಳೂರು ಗ್ರಾಮದ ಕಂಬದಬೆಟ್ಟುವಿನ ರೈತ ನಿರಂಜನ ಸೇಮಿತ ಸಾಧಿಸಿ ತೋರಿಸಿದ್ದಾರೆ.
ನಿರಂಜನ ಎಸ್ಸೆಸ್ಸೆಲ್ಸಿ ಬಳಿಕ ಕೃಷಿಯತ್ತ ಆಕರ್ಷಿತಗೊಂಡು ಪೂರ್ಣಕಾಲಿಕ ವೃತ್ತಿಯಾಗಿಸಿದ್ದಾರೆ. ಹಿರಿಯರಿಂದ ಬಳುವಳಿಯಾಗಿ ಬಂದ ಜಮೀನಿನಲ್ಲಿ ಅಡಕೆ, ತೆಂಗು, ಬಾಳೆ, ಕಾಳುಮೆಣಸು, ರಬ್ಬರ್, ತರಕಾರಿ ಬೆಳೆಸಿ ಉತ್ತಮ ಇಳುವರಿಯೊಂದಿಗೆ ಲಾಭ ಪಡೆಯುತ್ತಿದ್ದಾರೆ. ಅಡಕೆ ತೋಟದಲ್ಲೇ ವಾರ್ಷಿಕ 50 ಕ್ವಿಂಟಾಲ್ ಫಸಲು ಕೊಯ್ಯುತ್ತಾರೆ. ನಿರಂತರ 22 ವರ್ಷಗಳ ಕೃಷಿ ಪರಿಶ್ರಮದಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ.
ಮನೆಯಂಗಳದಲ್ಲೇ ಹಟ್ಟಿ:ನಿರಂಜನ ಸೇಮಿತ ಮನೆ ಮುಂಭಾಗ ಹಾಗೂ ಹಿಂಬದಿಯಲ್ಲಿ ದನದ ಎರಡು ಹಟ್ಟಿಗಳಿವೆ. ಗಿರ್, ಜೆರ್ಸಿ, ಎಚ್.ಎಫ್. ತಳಿಯ 11 ದನಗಳಿವೆ. ಪ್ರತಿದಿನ 30 ಲೀಟರ್ ಹಾಲು ಡೇರಿಗೆ ಸೇರುತ್ತದೆ. ಕೈಯಿಂದಲೇ ಹಾಲು ಕರೆಯುವ ಇವರು ಯಾಂತ್ರಿಕ ವಿಧಾನದಿಂದ ದೂರ. ದನದ ಸೆಗಣಿ ಗೋಬರ್ ಗ್ಯಾಸ್ ಆಗಿ ಬಳಕೆಯಾಗುತ್ತದೆ. ಸ್ಲರಿ ನೀರು ತೋಟಕ್ಕೆ ಹೋಗುತ್ತದೆ. ಗಂಜಳ ಹಾಗೂ ಸಾವಯವ ಗೊಬ್ಬರ ಪಡೆದ ಅಡಕೆ ತೋಟ ಸೊಂಪಾಗಿ ಬೆಳೆದಿವೆ.
ಕೃಷಿ ಅಭಿವೃದ್ಧಿ:ಅಡಕೆ, ತೆಂಗು, ಕಾಳುಮೆಣಸಿನೊಂದಿಗೆ ಪಪ್ಪಾಯ, ಮಾವು, ಚಿಕ್ಕು ಮೊದಲಾದ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ಅಲಸಂಡೆ, ಬೆಂಡೆ, ಬೂದುಗುಂಬಳ, ಸಿಹಿಕುಂಬಳ ತರಕಾರಿಗಳು ತೋಟದಲ್ಲಿವೆ. ಮನೆಯ ಎಡ ಪಾರ್ಶ್ವದಲ್ಲಿದ್ದ ಗುಡ್ಡ ಪ್ರದೇಶ ಸಮತಟ್ಟು ಮಾಡಿ ಅಡಕೆ ತೋಟ ಬೆಳೆಸಿದ್ದಾರೆ. ಗುಡ್ಡದಿಂದ ತೊರೆಯ ಮೂಲಕ ಹರಿದು ವ್ಯರ್ಥವಾಗುತ್ತಿದ್ದ ನೀರಿಗೆ ಕಿರು ಡ್ಯಾಂ ಕಟ್ಟಿ ಬಾವಿ, ಬೋರ್‌ವೆಲ್‌ಗಳಿಗೆ ನೀರಿಂಗಿಸುತ್ತಾರೆ. ನೀರು ತುಂಬಿರುವ ಈ ಕೆರೆಯಲ್ಲಿ ಮೀನು ಸಾಕುವ ಯೋಜನೆಯೂ ಇದೆ.
ಆಡು, ಕೋಳಿ ಸಾಕಣೆ:ದನದ ಹಟ್ಟಿಗೆ ತಾಕಿಕೊಂಡೇ ಆಡು ಹಾಗೂ ಕೋಳಿ ಗೂಡು ಇದೆ. ದೇಸಿ ಮತ್ತು ಹೈಬ್ರಿಡ್ ತಳಿ ಸೇರಿ 25 ಆಡುಗಳಿವೆ. ಆಡು ಗೂಡಿನ ಕೆಳಗೆ ಕೋಳಿ ಸಾಕಣೆ. ಆಡಿನ ಹಿಕ್ಕೆಗಳೊಂದಿಗೆ ಆಹಾರ ಕುಕ್ಕಿ ತಿನ್ನುವ ಸ್ವರ್ಣಧಾರ ಕೋಳಿಗಳಿದ್ದು ಪ್ರತ್ಯೇಕ ಸಾಮ್ರಾಜ್ಯ. ಇದರ ಪಕ್ಕ ನಾಟಿ ಕೋಳಿಗಳ ಗೂಡು. ಇವೆಲ್ಲಕ್ಕಿಂತಲೂ ವಿಶಿಷ್ಟವಾದುದು ಕೇರಳದ ಬಿವಿ 380 ತಳಿಯ ಕೋಳಿ ಸಾಕಣೆ. ಇದು ಗಂಡು ಕೋಳಿಯ ಸ್ಪರ್ಶವಿಲ್ಲದೆ ಎರಡು ವರ್ಷ ಮೊಟ್ಟೆ ಇಡುತ್ತದೆ. ಇದರ ಮೊಟ್ಟೆಗೆ ಭಾರಿ ಬೇಡಿಕೆ. ಇವರ ಮನೆಗೇ ಬಂದು ಖರೀದಿಸಿಕೊಂಡು ಹೋಗುತ್ತಾರೆ.
ರೈತರಿಗೆ ಮಾದರಿ:ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧ್ಯಯನ ಪ್ರವಾಸದ ಮೂಲಕ ಈಗಾಗಲೇ 400ಕ್ಕಿಂತಲೂ ಅಧಿಕ ರೈತರು ನಿರಂಜನ ಸೇಮಿತರ ಮನೆಗೆ ಭೇಟಿ ನೀಡಿದ್ದಾರೆ. ಒಂದೇ ಸೂರಿನಡಿ ಬಹುವಿಧದ ಕೃಷಿ ನೋಡುವ ಅವಕಾಶ ರೈತರದ್ದು. ನಿರಂಜನ ಸೇಮಿತ ಅವರ ಕೋಳಿ ಸಾಕಣೆಯಿಂದ ಪ್ರೇರಣೆ ಪಡೆದು 150ಕ್ಕಿಂತಲೂ ಅಧಿಕ ಮಂದಿ ಈ ಮಾದರಿಯಲ್ಲಿ ಕೋಳಿ ಸಾಕಣೆ ಆರಂಭಿಸಿದ್ದಾರೆ. ಹಲವು ವರ್ಷ ವಿದೇಶದಲ್ಲಿದ್ದ ಅವರ ಸಹೋದರ ಭಾಸ್ಕರ ಸೇಮಿತರು ಕರೊನಾ ಲಾಕ್‌ಡೌನ್ ಬಳಿಕ ಊರಿಗೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರೂ ಅಡಕೆ ತೋಟ ಅಭಿವೃದ್ಧಿಪಡಿಸುವುದರೊಂದಿಗೆ ದನ ಹಾಗೂ ಆಡು ಸಾಕಣೆ ಆರಂಭಿಸಿದ್ದಾರೆ. ನಿರಂಜನ ಸೇಮಿತರ ಪತ್ನಿ ಅಶ್ವಿನಿ ಸೇಮಿತ ಹಾಗೂ ಮಕ್ಕಳಾದ ಮಾನಸ್ ಹಾಗೂ ಪಾರ್ಥ ಕೂಡ ಕೃಷಿ ಕಾರ್ಯದಲ್ಲಿ ಸಹಕಾರ ನೀಡುತ್ತಿದ್ದಾರೆ. ತಾಲೂಕು ಮಟ್ಟದ ಸಮಗ್ರ ಕೃಷಿ ಪ್ರಶಸ್ತಿಗೆ ಆಯ್ಕೆಯಾಗಿರುವ ಇವರ ಕೃಷಿ ಕಾರ್ಯಗಳಿಗೆ ದಿಶಾ ಸಂಸ್ಥೆ ಹಾಗೂ ಬಡಗಬೆಳ್ಳೂರು ಹಾಲು ಉತ್ಪಾದಕರ ಸಹಕಾರ ಸಂಘ ಪ್ರೋತ್ಸಾಹಿಸುತ್ತಿದೆ.
ಸಮಗ್ರ ಕೃಷಿ ಅನುಸರಿಸಿದರೆ ಉತ್ತಮ ಇಳುವರಿಯೊಂದಿಗೆ ಒಳ್ಳೆಯ ಆದಾಯ ಪಡೆಯಲು ಸಾಧ್ಯವಿದೆ. ದನ ಸಾಕಣೆಯಿಂದ ಪ್ರತಿನಿತ್ಯ 30 ಲೀಟರ್ ಹಾಲು ಸಿಗುತ್ತಿದೆ. ಆಡು ಹಾಗೂ ಕೋಳಿ ಸಾಕಣೆಯೂ ಲಾಭದಾಯಕ.-ನಿರಂಜನ ಸೇಮಿತ, ಪ್ರಗತಿಪರ ಕೃಷಿಕ ಕಂಬದಬೆಟ್ಟು
ನಿರಂಜನ ಸೇಮಿತ ಅವರ ಕೃಷಿ ಕಾರ್ಯ ಇತರ ರೈತರಿಗೂ ಮಾದರಿ. ಸಮಗ್ರ ಕೃಷಿ ಪದ್ಧ್ದತಿಯಿಂದ ಉತ್ತಮ ಆದಾಯ ಪಡೆಯುತ್ತಿದ್ದಾರೆ. ಕೃಷಿ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಇತರ ರೈತರಿಗೆ ಪ್ರೇರಣೆ ನೀಡುತ್ತಿರುವ ಸೇಮಿತ ಅವರ ಕೃಷಿ ಕಾರ್ಯ ಚಟುವಟಿಕೆಯನ್ನು ಸರ್ಕಾರ, ಸಂಘ ಸಂಸ್ಥೆಗಳು ಗುರುತಿಸಿ ಪ್ರೋತ್ಸಾಹಿಸಬೇಕು.-ಮನೋಹರ ಶೆಟ್ಟಿ ನಡಿಕಂಬಳಗುತ್ತು, ಕಾರ್ಯದರ್ಶಿ, ರೈತಸಂಘ ಹಸಿರು ಸೇನೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನಿರಂಜನ ಸೇಮಿತ ಅವರ ಮನೆಗೆ ಕೃಷಿ ಅಧ್ಯಯನ ಪ್ರವಾಸ ಕೈಗೊಳ್ಳಲಾಗುತ್ತಿದೆ. ಕಡಿಮೆ ಬಂಡವಾಳದಲ್ಲಿ ಅಧಿಕ ಇಳುವರಿ ಹಾಗೂ ಲಾಭ ಪಡೆಯುವ ಇವರ ಕೃಷಿ ಕಾರ್ಯದ ಪ್ರೇರಣೆ ಪಡೆದು ಅನೇಕ ಮಂದಿ ರೈತರು ತಮ್ಮ ಮನೆಗಳಲ್ಲಿ ಸಮಗ್ರ ಕೃಷಿ ಅಳವಡಿಸಿಕೊಂಡಿದ್ದಾರೆ.-ಸಂದೇಶ್, ಸಿಎಚ್‌ಎಸ್‌ಸಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 13 =
Remember me
