ಬೆಂಗಳೂರು:ರಾಜಧಾನಿಯ ತ್ಯಾಜ್ಯನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳಿಗೆ ಹರಿಸುವ ಮುನ್ನ ಕಡ್ಡಾಯವಾಗಿ 3 ಹಂತದ ಸಂಸ್ಕರಣೆಗೆ ಒಳಪಡಿಸಿದ ಬಳಿಕವಷ್ಟೇ ಹರಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಶಾಶ್ವತ ನೀರಾವರಿ ಹೋರಾಟ ಸಮಿತಿಯು ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಈ ಸಂಬಂಧ ಹೋರಾಟ ಸಮಿತಿಯ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ನೇತೃತ್ವದ ನಿಯೋಗವು ಶನಿವಾರ ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿ ಮನವಿಪತ್ರ ಅರ್ಪಿಸಿತು.
ಇಡೀ ರಾಜ್ಯದಲ್ಲೇ ಶಾಶ್ವತ ಬರಪೀಡಿತ ಜಿಲ್ಲೆಗಳೆಂದು ಹಣೆಪಟ್ಟಿ ಹೊಂದಿರುವ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ಇದರಿಂದ ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿಗೆ ತತ್ವಾರ ಇದೆ. ಅಂತರ್ಜಲದಲ್ಲಿ ಫ್ಲೋರೈಡ್​​, ನೈಟ್ರೇಟ್​​ ಜತೆಗೆ ಯುರೇನಿಯಂ ಹಾಗೂ ಆರ್ಸೆನಿಕ್​ ಅಂತಹ ವಿಷಕಾರಿ ಅಂಶಗಳು ಸೇರಿ ಕುಡಿಯಲು ನೀರಿಲ್ಲದ ಪರಿಸ್ಥಿತಿ ಉದ್ಭವಿಸಿದೆ. ಹೀಗಿದ್ದರೂ, ಸರ್ಕಾರ ತ್ಯಾಜ್ಯನೀರನ್ನು 3 ಹಂತದಲ್ಲಿ ಸಂಸ್ಕರಿಸದೆ ಹಾಗೆಯೇ ಹರಿಯಬಿಟ್ಟಿರುವುರಿಂದ ವಿವಿಧ ಸಮಸ್ಯೆಗಳು ಉದ್ಭವಿಸಿದೆ. ಇದನ್ನು ಪರಿಗಣಿಸಿ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದು ನಿಯೋಗವು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿತು.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೋರಾಟ ಸಮಿತಿಯ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ, ರಾಜ್ಯಪಾಲರು ನಮ್ಮ ಮನವಿ ಪತ್ರ ಸ್ವೀಕರಿಸಿ ಮೂರು ಜಿಲ್ಲೆಯ ಜನರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರು ವಿಚಾರವಾಗಿ ನಾಗರಿಕರು ಎದುರಿಸುತ್ತಿರುವ ಸಮಸ್ಯೆ ಗಮನಿಸಿ ಸರ್ಕಾರಕ್ಕೆ ಕೆಲವೊಂದು ಸಲಹೆ-ಸೂಚನೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ಸಂಸ್ಕರಣೆಗೆ ಅನುದಾನ ಮೀಸಲಿಡಲಿ:
ರಾಜಧಾನಿಯಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯನೀರು ಸಂಸ್ಕರಿಸಿ ಕೆ.ಸಿ.ವ್ಯಾಲಿ ಹಾಗೂ ಎಚ್‌ಎನ್ ವ್ಯಾಲಿ ಯೋಜನೆ ಮೂಲಕ ಮೂರು ಜಿಲ್ಲೆಗಳ ಹಲವು ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಇದರಿಂದ ಇತ್ತೀಚಿಗೆ ಅಂತರ್ಜಲ ಮಟ್ಟ ಸ್ವಲ್ಪ ಸುಧಾರಿಸಿದ್ದರೂ, ಸಂಪೂರ್ಣವಾಗಿ ಸಂಸ್ಕರಿಸದೆ ಹಾಗೆಯೇ ನೀರು ಹರಿಸುತ್ತಿರುವುದರಿಂದ ಹೊಸ ಸಮಸ್ಯೆಗಳು ಉಂಟಾಗಿವೆ. ಮುಖ್ಯವಾಗಿ ನೀರು ತುಂಬಿಸಿರುವ ಕೆರೆಗಳಲ್ಲಿನ ಮಲೀನ ನೀರನ್ನು ಜಾನುವಾರುಗಳು ಕುಡಿಯುತ್ತಿಲ್ಲ. ಜನರು ಕೂಡ ಕುಡಿಯುವ ಉದ್ದೇಶಕ್ಕೆ ಬಳಸದಂತಾಗಿದೆ. ಜತೆಗೆ ಕೃಷಿ ಚಟುವಟಿಕೆಗೂ ಪೂರಕವಾಗಿಲ್ಲ.
2013ರಲ್ಲೇ ಕೇಂದ್ರದ ನಗರಾಭಿವೃದ್ಧಿ ಸಚಿವಾಲಯ ರೂಪಿಸಿರುವ ಕೊಳಚೆ ಹಾಗೂ ಒಳಚರಂಡಿ ಸಂಸ್ಕರಣಾ ವ್ಯವಸ್ಥೆಗಳ ಕೈಪಿಡಿಯಲ್ಲಿ ಅಡಕಗೊಂಡಿರುವ ಮಾರ್ಗಸೂಚಿಯಂತೆ ತ್ಯಾಜ್ಯನೀರನ್ನು ಕಡ್ಡಾಯವಾಗಿ 3 ಹಂತದಲ್ಲಿ ಸಂಸ್ಕರಿಸಿದ ನಂತರವಷ್ಟೇ ಬಳಕೆಗೆ ಹರಿಸಬೇಕಿದೆ. ಆದರೆ, ಪ್ರಸ್ತುತ ಎರಡು ಹಂತದ ಸಂಸ್ಕರಣೆ ಮಾತ್ರ ನಡೆದಿದ್ದು, ಮೂರನೇ ಹಂತದ ಸಂಸ್ಕರಣೆಗೆ ಬೇಕಾದ ಸಲಕರಣೆ ಹಾಗೂ ಇತ್ಯಾದಿ ಕಾರ್ಯಕ್ಕೆ ಸದ್ಯದಲ್ಲೇ ಮಂಡನೆಯಾಗಲಿರುವ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂದು ಆಂಜನೇಯರೆಡ್ಡಿ ಒತ್ತಾಯಿಸಿದರು.
ನಿಯೋಗದಲ್ಲಿ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಡಾ. ಡಿ.ಕೆ.ರಮೇಶ್, ಮಳ್ಳೂರು ಹರೀಶ್, ವಿಜಯ ಬಾವರೆಡ್ಡಿ, ಬಿ.ನಾರಾಯಣಸ್ವಾಮಿ, ಜಿ.ರಾಜಣ್ಣ, ಎಚ್.ಪ್ರಕಾಶ್ ಹಾಗೂ ಇತರರು ಇದ್ದರು.
ವಿಧಾನಸಭಾ ಚುನಾವಣೆಗೂ ಮುನ್ನ ಆಗಿನ ಸಿಎಂ ಬಸವರಾಜ ಬೊಮ್ಮಾಯಿ ತೃತೀಯ ಹಂತದ ಶುದ್ಧೀಕರಿಸಿದ ನೀರನ್ನು ಹರಿಸಲು ಭರವಸೆ ನೀಡಿದ್ದರು. ಸರ್ಕಾರ ಬದಲಾದ ಕಾರಣ ಆ ಭರವಸೆ ಹಾಗೆಯೇ ಉಳಿದುಕೊಂಡಿದೆ. ಹಾಲಿ ಕಾಂಗ್ರೆಸ್ ಸರ್ಕಾರದ ಸಿಎಂ, ಡಿಸಿಎಂ ಈ ವಿಚಾರದಲ್ಲಿ ಗಂಭೀರತೆ ಪರಿಗಣಿಸಿ ಸಂಸ್ಕರಣೆ ಕಾರ್ಯಕ್ಕೆ ಅನುದಾನ ಮೀಸಲಿಟ್ಟು ಬರಪೀಡಿತ ಜಿಲ್ಲೆಗಳ ಜನರಿಗೆ ಜೀವಜಲ ಒದಗಿಸುವ ಕೆಲಸ ಮಾಡಲಿ.– ಆರ್.ಆಂಜನೇಯ ರೆಡ್ಡಿ, ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + fourteen =
Remember me
