ಬೆಂಗಳೂರು:ಅಧಿಕ ರಕ್ತದೊತ್ತಡ, ಮಧುಮೇಹವನ್ನು ಕಾಯಿಲೆಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಮತ್ತು ಅವುಗಳಿದ್ದ ಕಾರಣಕ್ಕೆ ಕ್ಯಾನ್ಸರ್​ ಚಿಕಿತ್ಸೆಯ ವಿಮೆ ಹಣ ಪಾವತಿಸಲು ನಿರಾಕರಿಸುವಂತಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಗ್ರಾಹಕ ನ್ಯಾಯಾಲಯ, ಹಿರಿಯ ನಾಗರಿಕರೊಬ್ಬರಿಗೆ ಆರೋಗ್ಯ ವಿಮೆಯ ಹಣ ಪಾವತಿಸದ ಖಾಸಗಿ ವಿಮಾ ಕಂಪನಿಗೆ 1 ಲಕ್ಷ ರೂ. ದಂಡ ವಿಧಿಸಿದೆ. ಬೆಂಗಳೂರಿನ ಇಂದಿರಾ ನಗರದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಬೆಂಗಳೂರು ನಗರ 1ನೇ ಹೆಚ್ಚುವರಿ ಗ್ರಾಹಕ ನ್ಯಾಯಾಲಯ ಈ ಆದೇಶ ಮಾಡಿದೆ. ಜತೆಗೆ, ದೂರುದಾರರು ವಿಮಾ ಮಾಡಿಸಿರುವ ಸಂಪೂರ್ಣ 5 ಲಕ್ಷ ರೂ.ಗಳನ್ನು ವಾರ್ಷಿಕ ಶೇ.12 ಬಡ್ಡಿಸಹಿತ ಪಾವತಿಸುವಂತೆ ವಿಮಾ ಸಂಸ್ಥೆಗೆ ಆದೇಶಿಸಿದೆ.
ಪ್ರಕರಣವೇನು?:ದೂರುದಾರರು ತಮಗೆ, ಪತ್ನಿ ಹಾಗೂ ಇಬ್ಬರು ಪುತ್ರರಿಗೆ ಖಾಸಗಿ ವಿಮಾ ಸಂಸ್ಥೆಯೊಂದರಲ್ಲಿ ಆರೋಗ್ಯ ವಿಮೆ ಮಾಡಿಸಿದ್ದರು. 2018ರ ಮೇ ನಲ್ಲಿ ಅನಾರೋಗ್ಯಕ್ಕೀಡಾದ ದೂರುದಾರರು, ವೈದ್ಯಕಿಯ ತಪಾಸಣೆಗೊಳಪಟ್ಟಾಗ ಬೆವರಿನ ಗ್ರಂಥಿಯ ಕ್ಯಾನ್ಸರ್​ ಇರುವುದು ಪತ್ತೆಯಾಗಿತ್ತು. ದೂರುದಾರರ ಆರೋಗ್ಯ ವಿಮೆಯ ಅವಧಿ 2019ರ ನ.4ರವರೆಗೂ ಚಾಲ್ತಿಯಲ್ಲಿತ್ತು. ಖಾಸಗಿ ಕ್ಯಾನ್ಸರ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ದೂರುದಾರರು, ಹಲವು ಸುತ್ತಿನ ಕಿಮೋಥೆರಪಿಗೆ ಒಳಪಟ್ಟಿದ್ದರು. ಅದಕ್ಕಾಗಿ 11 ಲಕ್ಷ ರೂ. ವೆಚ್ಚವಾಗಿತ್ತು. ಚಿಕಿತ್ಸೆಯ ಬಳಿಕ ವಿಮಾ ಸಂಸ್ಥೆಗೆ ಮನವಿ ಸಲ್ಲಿಸಿ, ಚಿಕಿತ್ಸಾ ಮೊತ್ತಕ್ಕೆ ಪ್ರತಿಯಾಗಿ ವಿಮೆ ಮೊತ್ತ 5 ಲಕ್ಷ ರೂ. ಗಳ ಹಿಂಪಾವತಿಗೆ ಕೋರಿದ್ದರು. ಆದರೆ, ವಿಮಾ ಸಂಸ್ಥೆ ನಿರಾಕರಿಸಿದ ಕಾರಣ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
ಕಂಪನಿ ವಾದವೇನು?:ವಿಮಾ ಪಾಲಿಸಿ ತೆಗೆದುಕೊಳ್ಳುವಾಗ ಸಂದರ್ಭದಲ್ಲಿ ವಿಮಾ ದಾರರು ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ಇರುವುದನ್ನು ಮುಚ್ಚಿಟ್ಟಿದ್ದರು. ಅವರ ವೈದ್ಯಕಿಯ ದಾಖಲೆಗಳನ್ನು ಪರಶೀಲಿಸಿದಾಗ, ಕಳೆದ 10 ವರ್ಷಗಳಿಂದ ಅಧಿಕ ರಕ್ತದೊತ್ತಡ, 3 ವರ್ಷಗಳಿಂದ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂದಿದೆ. ಆದರೆ, ಈ ಎಲ್ಲ ವಿಚಾರಗಳನ್ನು ವಿಮಾ ಪಾಲಿಸಿ ಪಡೆಯುವಾಗ ಮುಚ್ಚಿಟ್ಟಿದ್ದಾರೆ. ಮೊದಲೇ ಇದ್ದ ರೋಗಗಳನ್ನು ಮುಚ್ಚಿಟ್ಟ ಸಂದರ್ಭದಲ್ಲಿ ಪಾಲಿಸಿ ನಿಯಮ ಪ್ರಕಾರ ವಿಮಾ ಹಣ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ, ಕ್ಯಾನ್ಸರ್​ಚಿಕಿತ್ಸೆ ವೆಚ್ಚದ ಹಣ ಹಿಂಪಾವತಿ ಸಾಧ್ಯವಿಲ್ಲ ಎಂದು ಸಂಸ್ಥೆ ತಿಳಿಸಿತ್ತು.
ಬಿಪಿ, ಶುಗರ್​ ರೋಗಗಳಲ್ಲವಿಮಾ ಕಂಪನಿಯ ವಾದ ತಳ್ಳಿ ಹಾಕಿರುವ ನ್ಯಾಯಾಲಯ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಯಾವುದೇ ರೀತಿಯ ರೋಗವಲ್ಲ. ಮಾನವನ ದೈಹಿಕ ಸ್ಥಿತಿಯಲ್ಲಾಗುವ ಬದಲಾವಣೆ ಅಷ್ಟೇ ಆಗಿದ್ದು, ದೂರುದಾರರಿಗೆ ಕ್ಯಾನ್ಸರ್​ ಬರಲು ಅವು ಕಾರಣವೂ ಅಲ್ಲ. ಸುಪ್ರೀಂಕೋರ್ಟ್​, ದೆಹಲಿ ಹೈಕೋರ್ಟ್​ ಮತ್ತು ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸಹ ಬಿಪಿ ಹಾಗೂ ಮಧುಮೇಹ ರೋಗಗಳಲ್ಲ ಎಂದು ಹಲವು ಪ್ರಕರಣಗಳಲ್ಲಿ ಸ್ಪಷ್ಟವಾಗಿ ಹೇಳಿವೆ. ಆದ್ದರಿಂದ, ವಿಮಾದಾರರ ಕ್ಯಾನ್ಸರ್​ ಚಿಕಿತ್ಸೆ ವೆಚ್ಚ ಪಾವತಿಸಲು ನಿರಾಕರಿಸುವುದು ನ್ಯಾಯಸಮ್ಮತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಸೇವಾ ನ್ಯೂನ್ಯತೆ ಎಸಗಿರುವ ಸಂಸ್ಥೆ, ದೂರುದಾರರಿಗೆ ಸಂಪೂರ್ಣ ವಿಮಾ ಮೊತ್ತ ಪಾವತಿಸುವ ಜತೆಗೆ, ಅವರು ಅನುಭವಿಸಿರುವ ಮಾನಸಿಕ ಹಾಗೂ ದೈಹಿಕ ಯಾತನೆಗೆ 1 ಲಕ್ಷ ರೂ. ಪರಿಹಾರ ಮತ್ತು ವ್ಯಾಜ್ಯದ ವೆಚ್ಚ 10 ಸಾವಿರ ರೂ. ಗಳನ್ನು ಪಾವತಿಸಬೇಕು ಎಂದು ಗ್ರಾಹಕ ನ್ಯಾಯಾಲಯ ಆದೇಶಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − thirteen =
Remember me
