ಡಾ.ಶಲ್ವಪ್ಪಿಳ್ಳೈ ಅಯ್ಯಂಗಾರ್ಪ್ರಪಂಚದ ಪ್ರಾಚೀನತಮ ಹಬ್ಬಗಳು ಎಂದರೆ ಭಾರತದ ಹಬ್ಬಗಳು. ಇವುಗಳು ತಮ್ಮದೇ ಆದ ಪೌರಾಣಿಕ ಹಾಗೂ ಋತುಮಾನದ ಹಿನ್ನೆಲೆ, ತತ್ವಗಳು, ಮಾನವೀಯ ಮೌಲ್ಯಗಳು, ಪರಿಸರ ಸಂರಕ್ಷಣೆ, ವೈಜ್ಞಾನಿಕ ಮನೋಭಾವ ಒಳಗೊಂಡಿದ್ದು, ತಮ್ಮ ವಿಶಿಷ್ಟ ಸಂದೇಶವನ್ನು ಜಗತ್ತಿಗೆ ನೀಡುತ್ತವೆ. ಇವುಗಳಲ್ಲಿ ಹತ್ತು ದಿನಗಳ ಹಬ್ಬವಾದ ದಸರಾ ವೈಭವೋಪೇತ ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಸಹಸ್ರಮಾನಗಳ ಕಾಲದಿಂದಲೂ ಆಚರಿಸಲ್ಪಡುತ್ತಿದೆ. ಆದ್ದರಿಂದಲೇ ಯುನೆಸ್ಕೋ 2008ರಲ್ಲಿ ಈ ದಸರಾ ಹಬ್ಬದ ಆಚರಣೆಯ ಕಲಾ ಪ್ರಕಾರಗಳನ್ನು ವಿಶ್ವದ ಮಾನವೀಯತೆಯ ಅಮೂರ್ತ ಪರಂಪರೆ ಎಂದು ಗುರುತಿಸಿದೆ. ಹೀಗೆ ಒಂದು ಹಬ್ಬದ ಆಚರಣೆಯೇ ಮಾನವೀಯ ಮೌಲ್ಯಗಳ ಸಾರ ಎಂದು ಗುರುತಿಸಿರುವುದು ಭಾರತೀಯರಿಗೆ ಹೆಮ್ಮೆಯೇ ಸರಿ. ಈ ಹಬ್ಬದ ಮುಖ್ಯ ಸಂದೇಶ ಎಂದರೆ ‘ಒಳ್ಳೆಯದು ಯಾವಾಗಲೂ ಜಯಿಸುತ್ತದೆ, ಒಳ್ಳೆಯದನ್ನೇ ಆಚರಿಸು’.
ಶರದೃತುವಿನ ಆಶ್ವಯುಜ ಮಾಸದ ಶುಕ್ಲಪಕ್ಷದ ಪಾಡ್ಯದಿಂದ ನವಮಿಯವರೆಗೆ ಆಚರಿಸಲ್ಪಡುವ ಒಂಬತ್ತು ದಿನಗಳ ದೇವಿಯ ಆರಾಧನೆಯನ್ನು ನವರಾತ್ರಿ ಎಂದೂ, ಹತ್ತನೆಯ ದಿನ ಅಂದರೆ ದಶಮಿಯ ಶ್ರೀದೇವಿಯ ಮತ್ತು ಶ್ರೀರಾಮನ ವಿಜಯೋತ್ಸವ ಆಚರಣೆಯನ್ನು ವಿಜಯದಶಮಿ ಎಂದೂ ಕರೆಯಲಾಗುತ್ತದೆ. ಒಟ್ಟಾಗಿ ಸೇರಿ ಒಂಬತ್ತು ರಾತ್ರಿಗಳು ಮತ್ತು ಹತ್ತನೇ ಹಗಲು ಅಥವಾ ಹತ್ತು ಹಗಲುಗಳು ದಶಹರಾ ಅಪಭ್ರಂಶದಲ್ಲಿ ದಸರಾ ಆಗಿದೆ. ‘ಕೆಟ್ಟ ವಿಷಯಗಳ ಮೇಲೆ ಒಳ್ಳೆಯ ಮೌಲ್ಯಗಳ ವಿಜಯವೇ’ ಈ ಹಬ್ಬದ ಆಚರಣೆಯ ಮೂಲ.
ಆಚರಣೆ ಹೇಗೆ?:ಈ ಹಬ್ಬವನ್ನು ಹೇಗೆ ಆಚರಿಸಬೇಕು ಎಂಬುದರ ಬಗ್ಗೆ ಭಾರತೀಯ ಧರ್ಮಗ್ರಂಥಗಳಾದ ನಿರ್ಣಯಸಿಂಧು ಮತ್ತು ಧರ್ಮಸಿಂಧುವಿನಲ್ಲಿ ವಿವರಿಸಲಾಗಿದೆ. ಒಂಬತ್ತು ದಿನಗಳ ಕಾಲ ಶರದೃತುವಿನಲ್ಲಿ ಆಚರಿಸುವುದರಿಂದ ಇದನ್ನು ಶರನ್ನವರಾತ್ರಿ ಎಂದು ಕರೆದು ಈ ಸಮಯದಲ್ಲಿ ದೇವಿ ಆರಾಧನೆಗೆ ಮಹತ್ವ ನೀಡಲಾಗಿದೆ. ಇದು ನಿಜಾರ್ಥದಲ್ಲಿ ಎಲ್ಲದರಲ್ಲೂ ಶಕ್ತಿ ರೂಪದಲ್ಲಿರುವ ಪ್ರಕೃತಿ ಮಾತೆಯ ಆರಾಧನೆಯಾಗಿದೆ. ಆದ್ದರಿಂದಲೇ ಈ ನವರಾತ್ರಿಗಳಲ್ಲಿಯೂ ಶಕ್ತಿ ಸ್ವರೂಪಿಣಿಯರಾದ ದುರ್ಗಾ, ಮಹಾಲಕ್ಷ್ಮೀ, ಮಹಾಕಾಳಿ, ಮಹಾಸರಸ್ವತಿಯರ ವಿವಿಧ ರೂಪಗಳನ್ನು ಪ್ರಮುಖವಾಗಿ ಆರಾಧಿಸಲಾಗುತ್ತದೆ. ಅಂದರೆ ಸ್ತ್ರೀ ದೇವತೆಗಳನ್ನು ಮಾತೃಸ್ವರೂಪದಲ್ಲಿ ಪೂಜಿಸಲಾಗುತ್ತದೆ.
ಇನ್ನು ಈ ನವರಾತ್ರಿ ಮತ್ತು ವಿಜಯದಶಮಿಯನ್ನು ಸೇರಿಸಿ ಹತ್ತು ದಿನಗಳ ಕಾಲದ ಉತ್ಸವವನ್ನಾಗಿ ಆಚರಿಸುವುದು ಪ್ರಮುಖವಾಗಿ ರೂಢಿಯಲ್ಲಿದೆ. ಮೊದಲನೆಯ ದಿನ ಘಟಸ್ಥಾಪನೆ ಮಾಡಿ ದೇವಿಯ ಶಕ್ತಿಗಳ ವಿವಿಧ ಮಂತ್ರ ಜಪ, ಪುರಾಣಗಳ ಪಠಣ, ಕುಮಾರಿ ಪೂಜೆ, ಸರಸ್ವತಿ ಪೂಜೆ, ಸುಹಾಸಿನಿ ಪೂಜೆ, ವ್ರತ, ತಪೋನುಷ್ಠಾನ, ಉಪವಾಸ ಇತ್ಯಾದಿಗಳನ್ನು ಆಚರಿಸಲಾಗುತ್ತದೆ. ಹತ್ತನೇ ದಿನದ ವಿಜಯದಶಮಿ ಆಚರಣೆಯನ್ನು ಅಪರಾಜಿತಾ ದೇವಿಯ ಪೂಜೆಯನ್ನಾಗಿ ಅಂದರೆ ವಿಜಯಲಕ್ಷ್ಮೀ ದೇವಿಯ ಪೂಜೆಯಾಗಿ ಆಚರಿಸುವ ಸಂಪ್ರದಾಯವನ್ನು ನಾವು ಕಾಣುತ್ತೇವೆ. ಈ ದಸರಾ ಆಚರಣೆಯು ಕೇವಲ ಶಕ್ತಿಯ ದೇಗುಲಗಳಲ್ಲಿ ಮಾತ್ರವಲ್ಲದೆ, ಶಾಕ್ತರು, ವೈಷ್ಣವರು, ಶೈವರು, ಗಾಣಪತ್ಯರು, ಸೌರರು, ಕೌಮಾರರು ಎಂಬ ಎಲ್ಲ ಆರು ಪಂಥಗಳಲ್ಲಿಯೂ ಆಚರಿಸುವುದನ್ನು ನಾವು ಕಾಣಬಹುದು. ಆಯಾ ಪಂಥದವರು ತಮ್ಮ ದೇವತೆಗಳ ವಿಜಯದ ದಿನವನ್ನಾಗಿ ಈ ನವರಾತ್ರಿಯನ್ನು ಆಚರಿಸುತ್ತಾರೆ.
ಆಚರಣೆಯ ಮೂಲ:ದುರ್ಗಾ ಎಂದರೆ ಭಕ್ತರ ದುರ್ಗತಿಯನ್ನು ನಾಶ ಮಾಡುವವಳು ಎಂದರ್ಥ. ಈ ದುರ್ಗಾ ದೇವಿಯ ಸ್ತುತಿಗಳು ನಮಗೆ ವೇದದಲ್ಲಿಯೇ ಕಂಡುಬರುತ್ತವೆ. ಇವಳನ್ನು ದುರ್ಗಾಲಕ್ಷ್ಮೀ, ವಿಷ್ಣುದುರ್ಗಾ ಎಂದು ಸಹ ಕರೆಯಲಾಗಿದೆ. ಪುರಾಣಗಳಲ್ಲಿ ನಮಗೆ ಮಹಿಷಾಸುರ ಮರ್ದಿನಿಯ ಕಥೆಗಳು ಹೆಚ್ಚು ವಿವರಣಾತ್ಮಕವಾಗಿ ವರ್ಣಿಸಲ್ಪಟ್ಟಿವೆ. ರಂಭಾಸುರನ ಮಗನಾದ ಮಹಿಷಾಸುರನು ಒಂದು ಹೆಣ್ಣಿನಿಂದ ಮಾತ್ರ ಸಾವು ಬರಲಿ ಎಂಬ ವರ ಬಲದಿಂದ ಕೊಬ್ಬಿ ದೇವ ಮತ್ತು ಮನುಷ್ಯರಿಗೆ ತೊಂದರೆ ನೀಡುತ್ತಾ ಅವರೆಲ್ಲರನ್ನೂ ಲೋಕಭ್ರಷ್ಟರನ್ನಾಗಿ ಮಾಡಿದ. ಇದರಿಂದ ನೊಂದ ದೇವತೆಗಳು ತ್ರಿಮೂರ್ತಿಗಳಲ್ಲಿ ತಮ್ಮನ್ನು ಕಾಪಾಡುವಂತೆ ಮೊರೆಯಿಟ್ಟರು. ಆಗ ತ್ರಿಮೂರ್ತಿಗಳ ಸ್ವರೂಪವಾಗಿ ಆದಿಶಕ್ತಿಯು ಆವಿರ್ಭವಿಸಿದಳು. ಅವಳಿಗೆ ತ್ರಿಮೂರ್ತಿಗಳು ಮತ್ತು ಎಲ್ಲ ದೇವತೆಗಳು ತಮ್ಮ ತಮ್ಮ ಶಕ್ತಿಗಳನ್ನು ನೀಡಿದರು. ಈ ಸಮಯದಲ್ಲಿ ಆದಿಶಕ್ತಿಯ ದೇವ ಗಣದ ಮೇಲೆ ಮಹಿಷಾಸುರನ ಅಧಿಪತ್ಯದಲ್ಲಿ, ಚಂಡಮುಂಡರು, ಶುಂಭನಿಶುಂಭರು, ರಕ್ತಬೀಜಾಸುರ ಮುಂತಾದ ಆಸುರಿ ಶಕ್ತಿಗಳು ಯುದ್ಧ ಮಾಡಿದವು. ಯುದ್ಧದಲ್ಲಿ ಪಾರ್ವತಿ ಶಕ್ತಿಯು ಚಂಡಮುಂಡರನ್ನು ವಧೆ ಮಾಡಿ ಚಾಮುಂಡೇಶ್ವರಿಯಾದಳು. ಶುಂಭನಿಶುಂಭರನ್ನು ಸರಸ್ವತಿಯು ಸಂಹಾರ ಮಾಡಿ ಮಹಾಸರಸ್ವತಿಯಾದಳು. ಮಹಾಲಕ್ಷ್ಮೀಯು ಮಹಿಷಾಸುರನನ್ನು ಮರ್ದಿಸಿ ಮಹಿಷಾಸುರಮರ್ದನಿಯಾಗಿ, ನಂತರ ಮೂರು ಶಕ್ತಿಗಳು ಒಟ್ಟಾಗಿ ಒಬ್ಬಳೇ ಚಂಡಿ – ಜಗಜ್ಜನನಿ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟರು. ಇದು ಮಾರ್ಕಂಡೇಯ, ದೇವಿಭಾಗವತ ಮುಂತಾದ ಪುರಾಣಗಳಲ್ಲಿ ಇರುವ ಜಗಜ್ಜನನಿಯ ಅವತಾರದ ಕಥೆಯಾಗಿದೆ. ಈ ಕಥೆಯು ವಿಶೇಷವಾಗಿ ಮಾರ್ಕಂಡೇಯ ಪುರಾಣದ ದುರ್ಗಾಸಪ್ತಶತಿಯಲ್ಲಿ ವರ್ಣಿಸಲ್ಪಟ್ಟಿದೆ. ಅಂದಿನಿಂದ ಆ ದೇವಿಯ ಹೆಸರಲ್ಲಿ, ಮಹಿಷ ಎಂಬ ಅಜ್ಞಾನ ಮತ್ತು ಅಹಂಕಾರಗಳಿಂದ ನಮ್ಮನ್ನು ದೂರೀಕರಿಸಿ ಸನ್ಮಾರ್ಗ ನೀಡುವಂತೆ ಪೂಜೆಗಳನ್ನು ಆಚರಿಸಲಾಗುತ್ತಿದ್ದು ಅದೇ ನವರಾತ್ರಿ ಉತ್ಸವವಾಗಿದೆ.
ನವರಾತ್ರಿಯಲ್ಲಿ ದೇವಿ ಪೂಜೆ ಏಕೆ ವಿಶೇಷವಾಗಿದೆ ಎಂಬುದನ್ನು ದೇವಿ ಮಹಾತ್ಮ್ಯದಲ್ಲಿಯೇ ಹೇಳಲಾಗಿದೆ. ಶರದೃತುವಿನಲ್ಲಿ ಪ್ರತಿವರ್ಷ ಯಾರು ದೇವಿಯ ಪೂಜೆ, ಅವಳ ಮಹಾತ್ಮೆ, ದೇವಿಯು ಮಹಿಷಾಸುರ, ಚಂಡ-ಮುಂಡ, ಶುಂಭ-ನಿಶುಂಭ-ರಕ್ತಬೀಜಾಸುರರನ್ನು ಸಂಹಾರ ಮಾಡಿದ ಕಥೆಯನ್ನು ಕೇಳುತ್ತಾರೋ ಅವರಿಗೆ ಸರ್ವಸಂಕಟಗಳೂ ತೊಲಗಿ, ಧನ, ಧಾನ್ಯ- ಸುಪುತ್ರಾದಿ ಸಕಲ ಇಷ್ಟಾರ್ಥಗಳು ನೆರವೇರುತ್ತವೆ. ಆದ್ದರಿಂದ ಭಾರತದಲ್ಲಿ ಈ ದೇವಿ ಉಪಾಸನೆಯನ್ನು ಮುಖ್ಯವಾಗಿ ಶಾಕ್ತರು ತಾಂತ್ರಿಕ ಪದ್ಧತಿಗಳಲ್ಲಿ ಆಚರಿಸುತ್ತಾರೆ. ದಕ್ಷಿಣ ಭಾರತದಲ್ಲಿ ಹೆಚ್ಚು ವೈದಿಕಾರಾಧನೆ ಪ್ರಚಲಿತದಲ್ಲಿದೆ.
ರಾಮಾಯಣದ ಹಿನ್ನೆಲೆ:ಇನ್ನು ವಿಜಯದಶಮಿ ಆಚರಣೆಗೆ ರಾಮಾಯಣದ ಹಿನ್ನೆಲೆಯಿದ್ದು, ಶ್ರೀರಾಮನು ರಾವಣಾಸುರನನ್ನು ವಧಿಸಿದ ದಿನವನ್ನಾಗಿ ವಿಜಯದಶಮಿ ಉತ್ಸವ ಆಚರಿಸಲಾಗುತ್ತದೆ. ವೈಷ್ಣವ ದೇವಾಲಯಗಳಲ್ಲಿ 10 ದಿನಗಳ ಕಾಲ ವಿವಿಧ ಪುರಾಣ, ರಾಮಾಯಣ ಪಾರಾಯಣ ಮಾಡಿ ವಿಜಯದಶಮಿಯಂದು ರಾಮ ಪಟ್ಟಾಭಿಷೇಕವನ್ನು ಮಾಡಿ ಉತ್ಸವ ದೇವರಿಗೆ ಜಂಬೂಸವಾರಿ ಅಥವಾ ವಿಜಯದಶಮಿ ಕುದುರೆ ವಾಹನದ ಉತ್ಸವವನ್ನು ಬನ್ನಿಯ ಮಂಟಪದವರೆಗೆ ಮಾಡುತ್ತಾರೆ. ಶೈವ ದೇವಾಲಯಗಳಲ್ಲಿ ಶಿವನ ಪುರಾಣಗಳನ್ನು ಪಾರಾಯಣ ಮಾಡಿ, ವಿಜಯದಶಮಿಯಂದು ಸೀಮೋಲ್ಲಂಘನ ಮಾಡಿ ಬನ್ನಿ ಮುಡಿಯುತ್ತಾರೆ.
ಈ ನವರಾತ್ರಿಯ ಸಂದರ್ಭದಲ್ಲಿ ಸರಸ್ವತಿ ಪೂಜೆ, ಕಾಲರಾತ್ರಿ ಪೂಜೆ, ದುರ್ಗಾಷ್ಟಮಿ ಪೂಜೆ, ಆಯುಧ ಪೂಜೆ, ಸೀಮೋಲ್ಲಂಘನ ಮುಂತಾದ ವಿಧಿವಿಧಾನಗಳು ಇದ್ದು ಇದಕ್ಕೂ ಪೌರಾಣಿಕ ಮೂಲಗಳಿವೆ. ಅವುಗಳೆಂದರೆ ಮೂಲಾ ನಕ್ಷತ್ರದಲ್ಲಿ ಸರಸ್ವತಿ ದೇವಿಯ ಆವಿರ್ಭಾವವಾದ್ದರಿಂದ ಅಂದು ಪೂಜೆ, ಕಾಲರಾತ್ರಿಯಾಗಿ ಅಂದು ಮಹಿಷಾಸುರ ಸಂಹಾರವಾದ್ದರಿಂದ ಕಾಳರಾತ್ರಿ ಪೂಜೆಯ ದಿನದಂದು ಮಹಿಷಾಸುರ ಸಂಹಾರ ಮಾಡಿ ಅಂದು ದೇವಿಗೆ ಬಲಿ ನೀಡಲಾಗುತ್ತದೆ. ದುಗಾಷ್ಟಮಿಯ ದಿನ ದುರ್ಗೆ ಅಸುರರನ್ನು ಸಂಹಾರ ಮಾಡಿದ ದಿನವಾದ್ದರಿಂದ ದುರ್ಗಾಪೂಜೆ ಹೋಮಗಳು ಮತ್ತು ಪಾಂಡವರು ಗೋಗ್ರಹಣ ಕಾಲದಲ್ಲಿ ತಮ್ಮ ಆಯುಧಗಳನ್ನು ಬನ್ನಿಮರದಿಂದ ಮರಳಿ ಪಡೆದು ದುರ್ಗೆಯ ಅನುಗ್ರಹವನ್ನು ಪಡೆದ ದಿನವಾದ್ದರಿಂದ ಅಂದು ಆಯುಧಗಳ ಪೂಜೆ ಮತ್ತು ವಿಜಯದಶಮಿಯಂದು ಯುದ್ಧ ಗೆದ್ದುದ್ದರಿಂದ ಗೋಗ್ರಹಣ ಮುಗಿದು ಗೋಮೋಚನವಾದ ದಿನ, ರಾವಣನನ್ನು ರಾಮ ನಿಗ್ರಹಿಸಿದ ದಿನ ಮತ್ತು ಅಪರಾಜಿತೆಯಾದ ತಾಯಿಯನ್ನು ವಿಜಯಲಕ್ಷ್ಮೀಯನ್ನು ಒಲಿಸಿಕೊಳ್ಳುವ ದಿನವಾದ್ದರಿಂದ ಅದು ರಾಜರಿಗೆ ಪ್ರಶಸ್ತವಾದ ಸೀಮೋಲ್ಲಂಘನ. ಬನ್ನಿ ಮಹಾಕಾಳಿಯ ಅನುಗ್ರಹಕ್ಕಾಗಿ ಬನ್ನಿಮರದ ಪೂಜೆ ಮತ್ತು ವಿಜಯದಶಮಿಯ ಯಾತ್ರೆಗಳನ್ನು ಮಾಡಲಾಗುತ್ತದೆ.
ದುರ್ಗಾ, ಮಹಿಷಮರ್ದಿನಿಯ ಶಿಲ್ಪಗಳು ಗುಪ್ತರ, ಕದಂಬರ, ಚಾಲುಕ್ಯರ, ಗಂಗರ, ಪಲ್ಲವರ, ರಾಷ್ಟ್ರಕೂಟ, ಚೋಳ, ಹೊಯ್ಸಳ ಮುಂತಾದವರ ಕಾಲಘಟ್ಟದಲ್ಲೇ ಕಂಡುಬರುತ್ತವೆ. ಆದ್ದರಿಂದ ಆ ಕಾಲದಲ್ಲಿ ದಸರಾ ಆಚರಿಸುತ್ತಿದ್ದರು ಎಂದು ಭಾವಿಸಬಹುದು. ಆದರೆ, ವಿಜಯನಗರ ಕಾಲದಲ್ಲಿ ದಸರಾ ಉತ್ಸವದ ವೈಭವವನ್ನು ಹಲವಾರು ವಿದೇಶಿಯರು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ವಿದೇಶಿ ಯಾತ್ರಿಕರಾದ ಇಟಲಿಯ ನಿಕೊಲೊ ಡಿ-ಕೌಂಟಿ, ಪರ್ಶಿಯಾದ ಅಬ್ದುಲ್ ರಜಾಕ್, ಇಟಲಿಯ ಡೊಮಿಂಗೋ ಪಯಾಸ್ ವಿಜಯನಗರದ ದಸರೆಯ ವೈಭವವನ್ನು ವರ್ಣಿಸಿದ್ದಾರೆ. ಅಬ್ದುಲ್ ರಜಾಕ್ ಇಮ್ಮಡಿ ದೇವರಾಯನ ಸಾ.ಶ. 1443ರ ದಸರಾ ಉತ್ಸವದ ಬಗ್ಗೆ ವಿವರಣೆ ನೀಡಿದ್ದಾನೆ. ಪೋರ್ಚುಗೀಸ್ ಪ್ರವಾಸಿ ಫರ್ನಾವೋ ನ್ಯೂನಿಜ್ ಮಹಾನವಮಿಯ ಬಗ್ಗೆ ಬರೆದಿದ್ದಾನೆ. ಡೊಮಿಂಗೋ ಪಯಾಸ್ ಸಾ.ಶ. 1520ರಲ್ಲಿ ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ದೊರೆ ಶ್ರೀಕೃಷ್ಣದೇವರಾಯನ ದಸರಾ ಮೆರವಣಿಗೆಯ ವೈಭವವನ್ನು ಮನಮುಟ್ಟುವಂತೆ ತೆರೆದಿಟ್ಟಿದ್ದಾನೆ. ಹಂಪಿಯ ವಿಜಯದಶಮಿ ದಿಬ್ಬದಲ್ಲಿ ದಿನವೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಅವನ್ನು ರಾಜ ಮತ್ತು ಪರಿವಾರದವರು ಹೇಗೆ ವೀಕ್ಷಿಸುತ್ತಿದ್ದರು ಎಂಬುದನ್ನು ವಿವರಿಸಿದ್ದಾನೆ.
ಮೈಸೂರಿನ ದಸರಾ ಇಂದು ವಿಶ್ವವಿಖ್ಯಾತವಾಗಿದೆ. ಇದು ವಿಜಯನಗರದ ದಸರಾ ಪರಂಪರೆಯ ಮುಂದುವರಿದ ಭಾಗವಾಗಿದ್ದು ಮೈಸೂರು ಅರಸರಾಗಿದ್ದ ರಾಜ ಒಡೆಯರ್ ಅವರು ಶ್ರೀರಂಗಪಟ್ಟಣದಲ್ಲಿ ಸಾ.ಶ. 1610 ರಲ್ಲಿ 10 ದಿನಗಳ ದಸರಾ ಉತ್ಸವವನ್ನು ಆರಂಭಿಸಿದರು. ಸಾ.ಶ.1648 ರಲ್ಲಿ ರಣಧೀರ ಕಂಠೀರವ ನರಸರಾಜ ಒಡೆಯರ್ ಅವರ ಕಾಲದಲ್ಲಿ ನಡೆದ ದಸರಾ ವಿವರಣೆಯ ಪ್ರತಿ ಅಂಶವನ್ನು ಗೋವಿಂದವೈದ್ಯನು ತನ್ನ ಕಂಠೀರವ ನರಸರಾಜ ವಿಜಯದಲ್ಲಿ ದಾಖಲಿಸಿದ್ದಾನೆ. ಶ್ರೀರಂಗಪಟ್ಟಣದ ಪತನದ ನಂತರ ಮೈಸೂರಿನಲ್ಲಿ ಶ್ರೀಮುಮ್ಮಡಿ ಕೃಷ್ಣರಾಜ ಒಡೆಯರ್ ದಸರಾ ಉತ್ಸವವನ್ನು 30.09.1799 ರ ಸೋಮವಾರ ಆರಂಭಿಸಿದರು. ವಿಜಯದಶಮಿ ಮೆರವಣಿಗೆ 08.09.1799 ರಂದು ನಡೆಯಿತು. ಇಂದಿಗೂ ಮೈಸೂರಿನಲ್ಲಿ ವಿಜೃಂಭಣೆಯಿಂದ ಮೈಸೂರು ದಸರಾ ನಡೆಯುತ್ತಿದೆ. ಹೀಗೆ 414ನೇ ದಸರಾ ಮಹೋತ್ಸವ ಮೈಸೂರಿನಲ್ಲಿ ನಡೆಯುತ್ತಾ ಬರುತ್ತಿದೆ.
(ಲೇಖಕರು ಮುಖ್ಯಸ್ಥರು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + sixteen =
Remember me
