ಬೆಂಗಳೂರು:ನಗರದ ಕೆಂಗೇರಿ ಬಳಿಯ ರಾಮಸಂದ್ರದ ನಿರ್ಜನ ಪ್ರದೇಶದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಹಿಳೆ ಶವದ ಗುರುತು ಪತ್ತೆಹಚ್ಚಿದ ಕೆಂಗೇರಿ ಪೊಲೀಸರು ಮೃತಳ ಪತಿ ಮತ್ತು ಆತನ ಸ್ನೇಹಿತನನ್ನು ಬಂಧಿಸಿದ್ದಾರೆ.
ಕೆಂಗೇರಿ ಉಪನಗರದ ಸನ್ ಸಿಟಿ ನಿವಾಸಿ ನಗೀನಾ ಖಾನಂ (32) ಮೃತ ಮಹಿಳೆ. ಈಕೆಯ ಪತಿ ಜೆಸಿಬಿ ಚಾಲಕ ಮೊಹಮ್ಮದ್ ಮಂಜೂರ್ ಅಹ್ಮದ್ ಹಣಗಿ ಹಾಗೂ ಈತನ ಸ್ನೇಹಿತ ದೊಡ್ಡಬಳ್ಳಾಪುರ ತಾಲೂಕು ಸೊಣ್ಣೇನಹಳ್ಳಿಯ ಜೆಸಿಬಿ ಚಾಲಕ ಎಚ್. ಪ್ರಜ್ವಲ್ ಬಂಧಿತರು.
ನಗೀನಾ ಶೀಲದ ಬಗ್ಗೆ ಶಂಕೆಯಿಂದ ಮೊಹಮ್ಮದ್, ತನ್ನ ಗೆಳೆಯ ಪ್ರಜ್ವಲ್ ಜತೆ ಸೇರಿ ಕೊಲೆ ಮಾಡಿ ಬೆಂಕಿ ಹಚ್ಚಿದ್ದ. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್ ಸಿ. ವಸಂತ್, ಪಿಎಸ್‌ಐ ಎನ್. ನಾಗರಾಜ್, ಅಂಬಿಕಾ ನೇತೃತ್ವದ ತಂಡ ತಾಂತ್ರಿಕ ಮಾಹಿತಿ ಆಧರಿಸಿ ಶವದ ಗುರುತು ಪತ್ತೆ ಆರೋಪಿಗಳನ್ನು ಬಂಧಿಸಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಮೊಹಮ್ಮದ್, ನೌಕರಿ ಅರಸಿ ನಗರಕ್ಕೆ ಬಂದಿದ್ದ. ಬೆಂಗಳೂರಿನ ನಗೀನಾಳನ್ನು ಪ್ರೀತಿಸಿ ಮದುವೆ ಆಗಿದ್ದ. ಇದು ಇಬ್ಬರಿಗೂ ಎರಡನೇ ಮದುವೆ. ಪರಸ್ಪರ ಒಪ್ಪಿಗೆ ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿ ಸನ್ ಸಿಟಿಯಲ್ಲಿ ನೆಲೆಸಿದ್ದರು.
ಮೊದಲ ಗಂಡನಿಂದ ಜನಿಸಿದ್ದ ಇಬ್ಬರು ಮಕ್ಕಳ ಪೈಕಿ ಒಬ್ಬಾತ ನಗೀನಾ ಜತೆಗಿದ್ದ. ಮತ್ತೊಂದು ಮಗು ತಂದೆ ಜೊತೆಗಿದ್ದ. ಖಾಸಗಿ ಕಂಪನಿಯಲ್ಲಿ ನಗೀನಾ, ಕ್ಲೀನಿಂಗ್ ಕೆಲಸ ಮಾಡುತ್ತಿದ್ದಳು. ಮೊಹಮ್ಮದ್ ಜೆಸಿಬಿ ಚಾಲಕನಾಗಿದ್ದ.
ಇದನ್ನೂ ಓದಿ:ರಾಜಧಾನಿಯಲ್ಲೇ ಪತ್ತೆಯಾಯ್ತು ಮಹಿಳೆಯ ಸುಟ್ಟು ಕರಕಲಾದ ದೇಹ!; ಇನ್ನೂ ಪತ್ತೆಯಾಗದ ಗುರುತು..
ಇತ್ತೀಚಿಗೆ ಬೇರೊಬ್ಬನ ಜತೆಗೆ ನಗೀತಾಗೆ ಅಕ್ರಮ ಸಂಬಂಧ ಇರುವುದಾಗಿ ಆರೋಪಿಸಿ ಮೊಹಮ್ಮದ್ ಜಗಳ ಮಾಡುತ್ತಿದ್ದ. ಕೊನೆಗೆ ತನ್ನ ಆತ್ಮೀಯ ಸ್ನೇಹಿತ ಪ್ರಜ್ವಲ್ ಬಳಿ ಮೊಹಮ್ಮದ್ ತನ್ನ ಪತ್ನಿ ಬಗ್ಗೆ ದೂರು ನೀಡಿ ಆಕೆಯ ಕೊಲೆ ಮಾಡುವ ವಿಷಯ ಪ್ರಸ್ತಾಪಿಸಿದ್ದ. ಅದಕ್ಕೆ ಪ್ರಜ್ವಲ್ ಸಾಥ್ ಕೊಟ್ಟಿದ್ದ.
ಜು.1ರ ರಾತ್ರಿ ನಗೀನಾಗೆ ಕರೆ ಮಾಡಿದ ಮೊಹಮ್ಮದ್, ರಾಮಸಂದ್ರದ ನಿರ್ಜನ ಪ್ರದೇಶದಲ್ಲಿ ಕುಡಿದು ಬಿದ್ದಿದ್ದೇನೆ. ಬಂದು ಕರೆದುಕೊಂಡು ಹೋಗು ಎಂದು ಹೇಳಿದ್ದ. ನಗೀನಾ, ಪತಿಯನ್ನು ಕರೆತರಲು ದ್ವಿಚಕ್ರ ವಾಹನದಲ್ಲಿ ಹೋಗಿದ್ದಾಳೆ. ನಗೀನಾ ಬಂದಾಗ ಗಲಾಟೆ ತೆಗೆದ ಪತಿ, ನನಗೆ ನೀನು ಮೋಸ ಮಾಡಿದ್ದಿ ಎಂದು ಕೂಗಾಡಿ ಹಲ್ಲೆ ಮಾಡಿದ್ದ. ಸ್ಥಳದಲ್ಲಿದ್ದ ಪ್ರಜ್ವಲ್ ಜತೆ ಸೇರಿ ಮೊಹಮ್ಮದ್, ಪತ್ನಿಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ.
ಆನಂತರ ಶವದ ಗುರುತು ಸಿಗಬಾರದು ಎಂದು ನಗೀನಾ ಬಂದಿದ್ದ ಸ್ಕೂಟರ್​ನಲ್ಲೇ ಹೋಗಿ ಪೆಟ್ರೋಲ್ ತಂದು ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಜುಲೈ 3ರಂದು ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳ ಪರಿಶೀಲನೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಸಿಪಿ ಲಕ್ಷ್ಮಣ್ ನಿಂಬರಗಿ ಮತ್ತು ಕಾರ್ಯಾಚರಣೆಯಲ್ಲಿ ತೊಡಗಿದ್ದ ಪೊಲೀಸ್ ತಂಡ.
ಪತ್ತೆಯಾದ ಶವ ಪೂರ್ತಿ ಸುಟ್ಟು ಕರಕಲಾದ್ದರಿಂದ ಸಾವಿಗೀಡಾದವಳ ಗುರುತು ಪತ್ತೆ ಮಾಡುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಬಹುತೇಕ ಠಾಣೆಗಳಲ್ಲಿ ಕಾಣೆಯಾದವರ ವಿವರ ಪಡೆದು ಪರಿಶೀಲನೆ ನಡೆಸಿದಾಗ ಮೃತಪಟ್ಟವಳೊಂದಿಗೆ ಹೋಲಿಕೆ ಆಗುತ್ತಿರಲಿಲ್ಲ. ಅಲ್ಲಿಗೆ ಮೃತ ಮಹಿಳೆ, ಬಡ ಅಥವ ಮಧ್ಯಮ ವರ್ಗದ ಮಹಿಳೆ ಇರಬೇಕೆಂದು ಮಹಿಳಾ ಪಿಜಿಗಳು, ಕಾಲೇಜು, ಹಾಸ್ಟೆಲ್ ಮತ್ತು ಖಾಸಗಿ ಕಂಪನಿಗಳಲ್ಲಿ ಹುಡುಕಾಟ ನಡೆಸಿದ್ದರು. ಅಲ್ಲಿಗೆ ಮೂರು ಮಹಿಳೆಯರು ಕೆಲಸಕ್ಕೆ ಗೈರು ಆಗಿರುವ ವಿಷಯ ತಿಳಿದು ಅವರ ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ಇಬ್ಬರು ಸಂಪರ್ಕ ಸಿಕ್ಕರೆ ನಗೀನಾ ಮೊಬೈಲ್ ಆಫ್ ಇತ್ತು. ಇದೇ ವೇಳೆ ರಾಮಸಂದ್ರದ ಸುತ್ತಮುತ್ತಲ ಸಿಸಿ ಕ್ಯಾಮರಾ ಮತ್ತು ಪೆಟ್ರೋಲ್ ಬಂಕ್ ಪರಿಶೀಲನೆ ನಡೆಸಿದಾಗ ಅಲ್ಲಿ ಪಾಸಾಗಿದ್ದ ಒಂದು ಕಾರು ಎಷ್ಟು ಹೊತ್ತಾದರೂ ಬರುವುದಿಲ್ಲ. ಬದಲಿಗೆ ಸ್ಕೂಟರ್ ಬಂದಿರುತ್ತೆ.
ಜತೆಗೆ ಪೆಟ್ರೋಲ್ ಬಂಕ್‌ನಲ್ಲಿ ಕ್ಯಾಪ್ ಧರಿಸಿ ಇಬ್ಬರು 3 ಲೀಟರ್ ಪೆಟ್ರೋಲ್ ಖರೀದಿ ಮಾಡಿದ ದೃಶ್ಯ ಲಭ್ಯವಾಗಿತ್ತು. ಅವರ ಬಗ್ಗೆ ಪರಿಶೀಲನೆ ನಡೆಸಿದಾಗ ಬಾರ್‌ನಲ್ಲಿ ಮದ್ಯ ಖರೀದಿಸಿ ಫೋನ್ ಪೇ ನಲ್ಲಿ ಹಣ ಪಾವತಿ ಮಾಡಿದ್ದರು. ಆ ಮೊಬೈಲ್ ಫೋನ್​ ನಂಬರ್‌ಗೂ ಮತ್ತು ಕೆಲಸಕ್ಕೆ ಗೈರಾಗಿದ್ದ ನಗೀನಾ ಮೊಬೈಲ್ ಫೋನ್​ ನಂಬರ್‌ಗೂ ಸಂಪರ್ಕ ಲಭ್ಯವಾಗಿತ್ತು.ಈ ಎಲ್ಲ ಮಾಹಿತಿ ಆಧರಿಸಿ ನಗೀನಾ ಮನೆ ಬಳಿಗೆ ಹೋದಾಗ ದಂಪತಿ ಕಾಣೆಯಾಗಿರುವ ವಿಷಯ ತಿಳಿದು ಮೃತಳ ಪಾಲಕರನ್ನು ಪತ್ತೆ ಮಾಡಿ ಶವ ತೋರಿಸಿದಾಗ ಗುರುತು ಪತ್ತೆ ಆಯಿತು. ನಗೀನಾ ಕೈಯಲ್ಲಿದ್ದ ಎರಡು ಬೆಳ್ಳಿ ಉಂಗುರನ್ನು ಗುರುತಿಸಿದ್ದರು. ಕೊನೆಗೆ ಪತಿಯೇ ಕೃತ್ಯ ಎಸಗಿರುವುದು ಖಚಿತವಾಗಿ ಮೈಸೂರಿನಲ್ಲಿ ಪ್ರಜ್ವಲ್‌ನನ್ನು ಬಂಧಿಸಿದರೆ ಮತ್ತೊಂದು ತಂಡ ವಿಜಯಪುರದಲ್ಲಿ ಮೊಹಮ್ಮದ್‌ನನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಈ ಮಧ್ಯೆ ತಮ್ಮ ಗುರುತು ಸಿಗಬಾರದು ಎಂದು ಪತಿ ಮಹಮ್ಮದ್ ತಲೆ ಬೋಳಿಸಿಕೊಂಡಿದ್ದ. ಅದಾಗ್ಯೂ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಕಾರು ಚಲಾಯಿಸುತ್ತಿರುವಾಗಲೇ ಹೃದಯಾಘಾತ; ಹೊಲಕ್ಕೆ ನುಗ್ಗಿದ ವಾಹನ, 29 ವರ್ಷದ ಇಂಜಿನಿಯರ್ ಸಾವು..

https://www.vijayavani.net/actor-satish-had-meals-with-food-delivery-boys-and-assured-free-tickets-for-movie/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
