|ಶ್ರೀಕಾಂತ್ ಶೇಷಾದ್ರಿಬೆಂಗಳೂರು
ರಾಜಸ್ತಾನದಲ್ಲಿ ನಡೆದ ಎಐಸಿಸಿ ಚಿಂತನ ಶಿಬಿರದ ಬಳಿಕ ಕಾಂಗ್ರೆಸ್​ನಲ್ಲಿ ಹೊಸಹೊಸ ಚರ್ಚೆಗಳು ಆರಂಭವಾಗಿದ್ದು, ಪಕ್ಷದ ರಾಜ್ಯದಲ್ಲಿನ ಹಿರಿಯ ನಾಯಕರಿಗೆ ಒಳಗೊಳಗೇ ಸಂಕಟ ಶುರುವಾಗಿದೆ. ಪಕ್ಷಕ್ಕಾಗಿ ತ್ಯಾಗ ಮಾಡಿ ಎಂಬ ಎಐಸಿಸಿ ಸಂದೇಶ ವಿವಿಧ ಆಯಾಮಗಳಲ್ಲಿ ಚರ್ಚೆಯಾಗುತ್ತಿದ್ದು, ಒಂದೊಮ್ಮೆ ಕಠಿಣ ನಿರ್ಧಾರ ತೆಗೆದುಕೊಂಡರೆ ನಮ್ಮ ರಾಜಕೀಯ ಭವಿಷ್ಯದ ಕತೆ ಏನು ಎಂಬ ಆತಂಕ ಹಲವರಲ್ಲಿ ಕಾಡಲು ಆರಂಭವಾಗಿದೆ. ಯುವಕರಿಗೆ ಹಾಗೂ ಮಹಿಳೆಯರಿಗೆ ಪಕ್ಷದಲ್ಲಿ ಹೆಚ್ಚೆಚ್ಚು ಅವಕಾಶ ಸಿಗಬೇಕು, ಅಧಿಕಾರ ಹಾಗೂ ಪಕ್ಷದ ಜವಾಬ್ದಾರಿಯಲ್ಲಿ ಅವರೇ ಮುಂಚೂಣಿಯಲ್ಲಿ ಕಾಣಿಸಬೇಕೆಂದು ಉದಯಪುರ ಸಭೆಯಲ್ಲಿ ನಿರ್ಣಯವಾಗಿದೆ. ಈ ನಿರ್ಣಯ ಜಾರಿಗೊಳಿಸಲು ಇಷ್ಟರಲ್ಲೇ ರಾಜ್ಯದಲ್ಲೊಂದು ಸಮಿತಿಯೂ ರಚನೆಯಾಗುತ್ತಿದೆ.
ಪಕ್ಷಕ್ಕೆ ಪುನಶ್ಚೇತನ ನೀಡಲು ಕೆಲವು ಕಠಿಣ ನಿರ್ಧಾರ ಕೈಗೊಳ್ಳಲೇ ಬೇಕು ಹೊಸ ಮುಖಗಳಿಗೆ ಮುಂದೆ ಬಿಡಬೇಕೆಂಬ ನಿರ್ಣಯ ಅನುಷ್ಠಾನವಾಗಬೇಕೆಂದರೆ ಹಿರಿಯರೆನಿಸಿಕೊಂಡವರು ಹಿಂದೆ ಸರಿಯಲೇ ಬೇಕಾಗುತ್ತದೆ. ಈ ವಾದವನ್ನು ಒಪ್ಪಿಕೊಳ್ಳಲು ಪಕ್ಷದಲ್ಲಿ ಸಿದ್ಧರಿಲ್ಲ ಎಂಬುದು ತಕ್ಷಣಕ್ಕೆ ಕಾಣಿಸುತ್ತಿದೆ. ಇಷ್ಟು ವರ್ಷ ಪಕ್ಷದ ನೊಗಹೊತ್ತು, ಇನ್ನೇನು ಸರ್ಕಾರದ ಅಧಿಕಾರಕ್ಕೆ ಬರಬಹುದಾದ ಹಂತದಲ್ಲಿ ಹಿಂದೆ ಸರಿಸುವುದು ಸೂಕ್ತವಲ್ಲ ಎಂಬ ವಾದವಿದೆ. ಇದೇ ರೀತಿ ಕುಟುಂಬಕ್ಕೊಂದೇ ಟಿಕೆಟ್ ವಿಚಾರವಂತೂ ಹಲವು ನಾಯಕರನ್ನು ದಿಕ್ಕೆಡಿಸಿದೆ. ಡಿಕೆಶಿ ಹೇಳಿಕೆ ಮರ್ಮ: ಕಾಂಗ್ರೆಸ್​ನಲ್ಲಿರುವ ಪ್ರತಿಯೊಂದು ಸ್ಥಾನವನ್ನೂ 50 ವರ್ಷದೊಳಗಿನವರಿಗೆ ನೀಡಬೇಕೆಂಬ ಬಗ್ಗೆ ಸಂಕಲ್ಪ ಮಾಡಿದ್ದು, ಎಲ್ಲ ಹಿರಿಯ ನಾಯಕರು ತ್ಯಾಗಕ್ಕೆ ಸಿದ್ಧರಾಗಬೇಕೆಂದು ಕರೆಕೊಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಮುಂದಿನ ನಿರ್ಧಾರದ ಸುಳಿವು ನೀಡಿದ್ದಾರೆ.
ಯುವಕರು, ಮಹಿಳೆಯರು, ಹೊಸ ಮುಖಗಳಿಗೆ ಅವಕಾಶ ಕೊಡಬೇಕು, ಆದ್ದರಿಂದ ನನ್ನನ್ನೂ ಸೇರಿ ಪಕ್ಷದ ಎಲ್ಲ ಹಿರಿಯ ನಾಯಕರು ತ್ಯಾಗಕ್ಕೆ ಸಿದ್ಧರಾಗಿರಬೇಕು.
|ಡಿ.ಕೆ.ಶಿವಕುಮಾರ್ಕೆಪಿಸಿಸಿ ಅಧ್ಯಕ್ಷ
ಹಿಟ್​ಲಿಸ್ಟ್​ನಲ್ಲಿ ಯಾರು?:ಶಾಮನೂರು ಶಿವಶಂಕರಪ್ಪ (ದಾವಣಗೆರೆ), ಎಂ.ವೈ.ಪಾಟೀಲ್ (ಅಫಜಲಪುರ), ಆರ್.ವಿ.ದೇಶಪಾಂಡೆ (ಹಳಿಯಾಳ), ವೆಂಕಟರಮಣಪ್ಪ (ಪಾವಗಡ) ಹೆಸರು ಪಕ್ಷದಲ್ಲಿ ಚರ್ಚೆಯಾಗುತ್ತಿರುವ ಹಿಟ್​ಲಿಸ್ಟ್​ನಲ್ಲಿರುವ ಹಾಲಿ ಶಾಸಕರ ಹೆಸರು. ಇವರಲ್ಲದೇ ಟಿ.ಬಿ.ಜಯಚಂದ್ರ (ಶಿರಾ ವಿಧಾನಸಭಾ ಕ್ಷೇತ್ರ), ಎಸ್.ಆರ್​ಪಾಟೀಲ್ ಸೇರಿ ಹತ್ತಕ್ಕೂ ಹೆಚ್ಚು ಮಾಜಿ ಶಾಸಕರಿಗೆ ಪುನಃ ಟಿಕೆಟ್ ನೀಡುವ ಅವಕಾಶಗಳು ಕಡಿಮೆ ಎಂದು ಹೇಳಲಾಗುತ್ತಿದೆ. ಇವರಲ್ಲಿ ಯಾರಿಗೆ ಪುನಃ ಅವಕಾಶಕೊಡಬೇಕು ಎಂಬುದನ್ನು ಅಂತಿಮವಾಗಿ ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ.
ಬೆಂಗಳೂರು:ರಾಜ್ಯಸಭೆ ಹಾಗೂ ವಿಧಾನ ಪರಿಷತ್​ಗೆ ನಡೆಯುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಕಾಂಗ್ರೆಸ್ ದೆಹಲಿಯಲ್ಲಿ ಶನಿವಾರ ಸಭೆ ನಡೆಸಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಿ ಎಐಸಿಸಿ ಅಧ್ಯಕ್ಷರಿಗೆ ಶಿಫಾರಸು ಮಾಡಲಿದ್ದಾರೆ. ವಿಧಾನಪರಿಷತ್​ನ ಏಳು ಸ್ಥಾನಗಳ ಪೈಕಿ ಎರಡು ಸ್ಥಾನ ಗೆಲ್ಲುವಷ್ಟು ಸಾಮರ್ಥ್ಯ ಪಕ್ಷಕ್ಕಿದೆ. ಈ ಎರಡು ಸ್ಥಾನಗಳನ್ನು ಜಾತಿ ಆಧಾರದಲ್ಲಿ ಹಂಚಿಕೆ ಮಾಡಲಿದ್ದು, ಯಾರಿಗೆ ಅವಕಾಶ ಕೊಟ್ಟರೆ ಸೂಕ್ತ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಅದೇ ರೀತಿ ರಾಜ್ಯಸಭೆಯ ಒಂದು ಸ್ಥಾನದಲ್ಲಿ ಗೆಲ್ಲಲು ಪಕ್ಷಕ್ಕೆ ಸಾಧ್ಯವಿದೆ. ಹಾಲಿ ಸದಸ್ಯ ಜೈರಾಂ ರಮೇಶ್ ಅವರನ್ನೇ ಮುಂದುವರಿಸಬೇಕೇ ಅಥವಾ ರಾಜ್ಯದ ಚುನಾವಣೆ ದೃಷ್ಟಿಯಿಂದ ಬೇರೆಯವರಿಗೆ ಅವಕಾಶ ಕೊಡಬೇಕೆ ಎಂಬ ಬಗ್ಗೆ ಸಭೆಯಲ್ಲಿ ವಿಚಾರ ವಿನಿಮಯ ನಡೆಯಲಿದೆ. ಪರಿಷತ್​ನ ಎರಡು ಸ್ಥಾನಕ್ಕೆ ಬಿ.ಎಲ್.ಶಂಕರ್, ಸುದರ್ಶನ್ ಹೆಸರು ಮುಂಚೂಣಿಯಲ್ಲಿದೆ. ಇವರಿಬ್ಬರನ್ನು ಹೊರತುಪಡಿಸಿ ವಿ.ಎಸ್.ಉಗ್ರಪ್ಪ, ತಿಪ್ಪಣ್ಣ ಕಮಕನೂರು, ಐವಾನ್ ಡಿಸೋಜ, ನಿವೇದಿತ್ ಆಳ್ವಾ, ಜಬ್ಬಾರ್, ಮನ್ಸೂರ್ ತೀವ್ರ ಪ್ರಯತ್ನ ನಡೆಸಿದ್ದಾರೆ.
ಕಟ್ಟುಮಸ್ತಾದ ಯುವಕ ಸಾವಿಗೆ ಶರಣು; ಮನೆಯಲ್ಲೇ ಆತ್ಮಹತ್ಯೆ, ಕಾರಣ ನಿಗೂಢ..

ಕೆನಡಾದಲ್ಲಿ ಕನ್ನಡ ಮಾತು: ಚಂದ್ರ ಆರ್ಯರಿಗೆ ಭಾರಿ ಬೆಂಬಲ; ಹಿಂಬಾಲಕರ ಸಂಖ್ಯೆಯಲ್ಲಿ ಹೆಚ್ಚಳ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
