| ವಿನು ಗಂಗೆ
ನಮ್ಮ ಋಷಿಮುನಿಗಳು ತಪಸ್ಸು ಮಾಡುವಾಗ ಒಂಟಿ ಕಾಲಲ್ಲಿ ನಿಂತು ಕೈಗಳನ್ನು ಮೇಲೆತ್ತಿ ಮುಗಿದು ಕಣ್ಣು ಮುಚ್ಚಿಕೊಂಡು ‘ಓಂ ನಮಃ ಶಿವಾಯ’ ಎಂದು ಹೇಳುವ ಆ ಚಿತ್ರವನ್ನೊಮ್ಮೆ ನೆನಪಿಸಿಕೊಳ್ಳಿ. ಇದನ್ನು ವೃಕ್ಷಾಸನ ಎನ್ನುತ್ತಾರೆ. ಈ ಭಂಗಿಯಲ್ಲಿ ಕೆಲವು ಕ್ಷಣಗಳ ಕಾಲ ಇರಲು ಪ್ರಯತ್ನಿಸಿದಾಗ ಒಂದು ವಿಷಯ ಮನದಟ್ಟಾಗುತ್ತದೆ; ಈ ಭಂಗಿಯಲ್ಲಿ ವರ್ಷಗಟ್ಟಲೆ ಭಗವಂತನನ್ನು ಧ್ಯಾನಿಸಲು ಸಾಧ್ಯವಾದರೆ, ಭಕ್ತನೆದುರು ಭೂಮಿಗಿಳಿದು ಬರುವುದು ಬಿಟ್ಟು, ಭಗವಂತ ಬೇರೇನು ತಾನೇ ಮಾಡಲು ಸಾಧ್ಯ? ಎಂದು. ಈ ಹಠಯೋಗದಿಂದ ಉಂಟಾಗುವ ಏಕಾಗ್ರ ಶಾಂತಚಿತ್ತದ ಶಕ್ತಿಯನ್ನು ಕಂಡುಕೊಂಡ ಋಷಿಮುನಿಗಳು ಭಗವಂತನನ್ನು ಒಲಿಸಿಕೊಳ್ಳಲು ಈ ಮಾರ್ಗ ಅನುಸರಿಸಿದ್ದುದರಲ್ಲಿ ಆಶ್ಚರ್ಯವೇನಿಲ್ಲ. ಯೋಗದ ಶಕ್ತಿ ಅಂತಹದ್ದು.
ಸಾಮಾನ್ಯವಾಗಿ ಮನುಷ್ಯ ಹುಟ್ಟುವಾಗ ಉತ್ತಮ ಜೀವ ಚೈತನ್ಯದೊಂದಿಗೆ ಭೂಮಿಗೆ ಕಾಲಿರಿಸುತ್ತಾನೆ. ದಿನದಿಂದ ದಿನಕ್ಕೆ ಚೈತನ್ಯ ಏರುಗತಿಯಾಗಿ, ಬೆಳೆದು ಯೌವನಾವಸ್ಥೆಗೆ ತಲುಪುತ್ತಾನೆ. ಯೌವನಾವಸ್ಥೆಯಲ್ಲಿ ಕೆಲವು ಕಾಲ ಜೀವಚೈತನ್ಯ ಉನ್ನತ ಮಟ್ಟದಲ್ಲಿ ಇದ್ದು ನಂತರ ಇಳಿಗತಿಗೆ ಬರುತ್ತದೆ. ಈ ಇಳಿಗತಿ(descending rate) ನಿಧಾನವಾಗಿ ಇದ್ದರೆ ನಮ್ಮ ಆರೋಗ್ಯ ಬಹಳ ವರ್ಷಗಳ ಕಾಲ ಸುಸ್ಥಿತಿಯಲ್ಲಿರುತ್ತದೆ. ಇಳಿಗತಿ ವೇಗವಾಗಿದ್ದರೆ ಬೇಗನೆ ಕಾಯಿಲೆಗಳು ಹಾಗೂ ವೃದ್ಧಾಪ್ಯ ಬರುತ್ತದೆ. ಚಿರಯೌವನ ಯಾವ ಜೀವಿಗೂ ಇಲ್ಲ. ಆದರೆ ಚಿರಯೌವನಕ್ಕಾಗಿ ಮಾನವನ ಪ್ರಯತ್ನ ಹಿಂದಿನಿಂದಲೂ ನಡೆದೇ ಇದೆ. ಯೌವನಕ್ಕಾಗಿ ಹಪಹಪಿಸಿ ಮಗನಿಂದ ಯೌವನ ಪಡೆಯಲು ಯತ್ನಿಸಿದ ಯಯಾತಿ ಮಹಾರಾಜನ ಕತೆ ಕೂಡಾ ನಮ್ಮ ಪುರಾಣದಲ್ಲಿದೆ.
ವೃದ್ಧರು ಮಾತ್ರವಲ್ಲದೇ, ಮೂವತ್ತರ ನಂತರ ಮಹಿಳೆಯರು, ನಾನಾ ಕಾರಣದಿಂದ ಕೆಲವು ಚಿಕ್ಕ ವಯಸ್ಸಿನವರಲ್ಲಿ ಕೂಡಾ ಮೂಲಚಕ್ರದಲ್ಲಿ ಶಕ್ತಿ ಸಂಚಯ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ಚೈತನ್ಯ ಕೊರತೆಯಿಂದ ಕೆಳಗೆ ಕುಳಿತರೆ ಮೇಲೆ ಏಳಲು ಕಷ್ಟ. ಎದ್ದರೆ ಕೂರಲು ಕಷ್ಟ. ಕಣ್ಣು ಮಂಜಾಗುವುದು, ಮಂಡಿನೋವು, ಬೆನ್ನು ಉಳುಕು, ಗ್ಯಾಸ್ಟ್ರಿಕ್ ಇತ್ಯಾದಿ ಸಮಸ್ಯೆಗಳು ಇಣುಕುತ್ತವೆ. ಯೌವನಾವಸ್ಥೆಯ ನಂತರ ಜೀವಚೈತನ್ಯ ಇಳಿಕೆಯು ಸೃಷ್ಟಿ ನಿಯಮ ಆಗಿದ್ದರೂ ನಾವು ಅನೇಕರನ್ನು ವಯಸ್ಸಾದರೂ ಚಿಕ್ಕವರಂತೆ, ಚಿಕ್ಕವರಾದರೂ ವಯಸ್ಸಾದಂತೆ ಇರುವುದು ಕಾಣುತ್ತೇವೆ. ಇದು ಏಕೆ? ಅಂದರೆ ವಯಸ್ಸಾಗುವ ಪ್ರಕ್ರಿಯೆ ಕಡ್ಡಾಯವೇ ಆದರೂ ಅದರ ಗತಿಯಲ್ಲಿ ವ್ಯತ್ಯಾಸ ಇರುತ್ತದೆ. ಅಷ್ಟೇ ಅಲ್ಲ ಈ ಗತಿಯನ್ನು ವ್ಯತ್ಯಾಸ ಮಾಡುವ ಶಕ್ತಿ ಕೂಡಾ ನಮ್ಮ ಕೈಯಲ್ಲಿಯೇ ಇರುತ್ತದೆ. ನಾವು ಸೇವಿಸುವ ಆಹಾರ, ಜೀವನ ಕ್ರಮ ಹಾಗೂ ಮನಸ್ಸಿನ ಭಾವನೆಗಳು ನಮ್ಮ ಮೂಲಾಧಾರ ಚಕ್ರದ ಮೇಲೆ ಪ್ರಭಾವ ಬೀರುತ್ತದೆ. ಆಗ ನಮ್ಮ ಜೀವಚೈತನ್ಯದ ಅಂತಃಶಕ್ತಿ ವ್ಯತ್ಯಯವಾಗುತ್ತದೆ. ಮನೆಯಲ್ಲಿ ಕಸ ಸೇರುವ ಹಾಗೆ ಪ್ರತಿ ನಿತ್ಯ ನಮ್ಮ ನರನಾಡಿಗಳಲ್ಲಿ ಅಲ್ಲಲ್ಲಿ ಬೇಡದ ಶೇಖರಣೆ (Blockages) ಆಗುತ್ತವೆ. ಇದರಿಂದ ಸರಾಗ ರಕ್ತ ಪರಿಚಲನೆಗೆ, ನರವ್ಯೂಹಕ್ಕೆ ಅಡ್ಡಿಯಾಗಿ ವಿವಿಧ ಅಂಗಗಳಿಗೆ ಪೂರೈಕೆಯಾಗುವ ಆಮ್ಲಜನಕದಲ್ಲಿ ವ್ಯತ್ಯಯ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಯೋಗ, ಪ್ರಾಣಾಯಾಮ, ಧ್ಯಾನ ಇವನ್ನು ಪ್ರಾಚೀನ ಕಾಲದಿಂದಲೂ ಜೀವ ಚೈತನ್ಯ ಉದ್ದೀಪನಕ್ಕೆ ಬಳಸಿರುವುದು ಕಂಡುಬರುತ್ತದೆ. ಇವು ದೇಹದ ಪ್ರತಿಯೊಂದು ಕಣಕ್ಕೂ ವಿಪುಲ ಆಮ್ಲಜನಕ ದೊರೆಯುವಂತೆ ಮಾಡುವ ವಿಧಾನಗಳಾಗಿವೆ. ಇದರಿಂದ ಅಲ್ಲಲ್ಲಿ ಕಟ್ಟಿಕೊಂಡ ಅಡೆತಡೆಗಳನ್ನು ನಿವಾರಿಸಿ ಸುಗಮ ಪರಿಚಲನಾ ವ್ಯವಸ್ಥೆ ಮಾಡಿಕೊಡುವುದಲ್ಲದೇ ಸಂಗ್ರಹವಾದ ಕಲ್ಮಶವನ್ನು ದೇಹದಿಂದ ಹೊರಗೆ ಕಳಿಸಲು ಅನುವು ಮಾಡಿಕೊಟ್ಟು ಜೀವಕೋಶಗಳಲ್ಲಿ ಆಮ್ಲಜನಕ ಹಿಡಿದಿಡುವ ಸಾಮರ್ಥ್ಯ ಹೆಚ್ಚಿಸುತ್ತದೆ. ಪ್ರತಿ ಆಸನದಲ್ಲಿ ದೀರ್ಘ ಶ್ವಾಸ ತೆಗೆದುಕೊಳ್ಳುತ್ತಾ ನಮ್ಮ ಜೀವಕೋಶದ ಕಾರ್ಯಕ್ಷಮತೆ ಹೆಚ್ಚುತ್ತದೆ. ಎರಡು ಆಸನಗಳ ನಡುವಿನ ವಿಶ್ರಾಂತ ಸಮಯ ಧ್ಯಾನಸ್ಥ ಮನೋಸ್ಥಿತಿ ತರುತ್ತದೆ. ಪ್ರಾಣಾಯಾಮ ಪ್ರಾಣಕ್ಕೆ ಚೈತನ್ಯ ನೀಡಿದರೆ, ಧ್ಯಾನ ಮನಸ್ಸನ್ನು ಅಲೌಕಿಕ ಶಾಂತಸ್ಥಿತಿಗೆ ಕರೆದೊಯ್ಯುತ್ತದೆ. ಓಂಕಾರದ ಕಂಪನ ನಮಗೆ ಆಕರ್ಷಕ ನಿಲುವು ಹಾಗೂ ವ್ಯಕ್ತಿತ್ವಕ್ಕೆ ಒಂದು ಪ್ರಭಾವಲಯ ನೀಡುತ್ತದೆ.
ನನಗೆ ಸಣ್ಣವಳಾಗಿದ್ದಾಗ ಒಂದು ಭಾವನೆ ಇತ್ತು. ಅದೇನೆಂದರೆ ನಮಗೆ ಹುಷಾರು ತಪ್ಪಿದರೆ ಅಥವಾ ತಲೆ ಸುತ್ತಿ ಬೀಳುವಂತೆ ಆದರೆ ಯಾರಾದರೂ ಕಾಪಾಡುತ್ತಾರೆ. ಸುತ್ತ ಇರುವವರು ಸಹಾನುಭೂತಿ ತೋರುತ್ತಾರೆ ಎಂದು. ಈ ಭಾವನೆಗೆ ಬಹುಶಃ ಯಾವುದೋ ಸಿನಿಮಾ ಕಾರಣವಿರಬಹುದು; ನೆನಪಿಲ್ಲ. ಈ ಕಾರಣಕ್ಕೆ ನಾನು ಆಗಾಗ ಶಾಲೆಯಲ್ಲಿ ಪ್ರಾರ್ಥನೆ ಮಾಡುವಾಗ, ದೈಹಿಕ ಶಿಕ್ಷಣ ನೀಡುವಾಗ, ಕೆಲವೊಮ್ಮೆ ತರಗತಿಯಲ್ಲಿ ಕೂಡಾ ತಲೆ ಸುತ್ತಿದಂತಾಗಿ ಬೀಳಲು ತಯಾರಿರುತ್ತಿದ್ದೆ. ಮನಸ್ಸಿನಂತೆ ದೇಹ. ಆರೋಗ್ಯವಾಗಿಯೇ ಇದ್ದರೂ ಆಗಾಗ ಹೊಟ್ಟೆನೋವಿಗೆ ಒದ್ದಾಡುವುದೂ, ಬಸ್ಸು ಹತ್ತಿದೊಡನೇ ವಾಂತಿ ಮಾಡುವುದೂ ಸೇರಿದಂತೆ ಅನೇಕ ಅನಾರೋಗ್ಯದ ಲಕ್ಷಣಗಳಿದ್ದವು. ಇದೇ ಗೀಳು ಮುಂದುವರೆದು ನನ್ನ ಕಿಶೋರಾವಸ್ಥೆಯ ಜೀವನದಲ್ಲಿ ಅನೇಕ ದಿನಗಳ ಕಾಲ ಆಸ್ಪತ್ರೆಯ ಹಾಸಿಗೆಯಲ್ಲಿ ಗ್ಲೂಕೋಸ್ ಚುಚ್ಚಿಸಿಕೊಂಡು, ಇಂಜೆಕ್ಷನ್ ಹಾಕಿಸಿಕೊಂಡು ಕಳೆದಿದ್ದೇನೆ. ‘ರೋಗದ ಕೋಳಿ’ ಎಂದೇ ನನ್ನ ತಾಯಿ ಹೆಸರಿಟ್ಟಿದ್ದರು. ಒಮ್ಮೆತಾಯಿಯವರಿಗೆ ಯಾರೋ ಒಬ್ಬರು ‘ನಿಮ್ಮ ಮಗಳನ್ನು ಯೋಗ ಕಲಿಯಲು ಸೇರಿಸಿ, ಸಮಸ್ಯೆ ಪರಿಹಾರ ಆಗುತ್ತದೆ’ ಎಂದು ಹೇಳಿದರು. ಪ್ರತಿ ತಿಂಗಳೂ ತಪ್ಪದೆ ಆಸ್ಪತ್ರೆಗೆ ಸೇರಿಸಬೇಕಿದ್ದ ನನ್ನನ್ನು ತಾಯಿ ಯೋಗ ಕೇಂದ್ರಕ್ಕೆ ಸೇರಿಸಿದರು. ನಾನು ಎರಡೇ ದಿನದಲ್ಲಿ ಸಂಪೂರ್ಣ ಬದಲಾದೆ; ಎಂದೂ ನನ್ನನ್ನು ಯಾವ ಅನಾರೋಗ್ಯವೂ ಕಾಡಿರಲಿಲ್ಲ ಎಂಬಂತೆ! ಈ ಅನುಭವ ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡ ಅನೇಕರದ್ದು ಕೂಡಾ ಆಗಿರುತ್ತದೆ. ಅಂದಿನಿಂದ ಇಂದಿನವರೆಗೆ ಅದೇ ಆಸಕ್ತಿಯಿಂದ ಯೋಗ ನನ್ನನ್ನು ಆವರಿಸುತ್ತದೆ; ಮತ್ತಷ್ಟು ಹೊಸತನ್ನು ಕಲಿಯಲು ಪ್ರೇರೇಪಿಸುತ್ತದೆ.
ಸಾಮಾನ್ಯವಾಗಿ ಎಲ್ಲ ದೈಹಿಕ ಕಸರತ್ತುಗಳನ್ನು ಮಾಡುವಾಗ ಉಸಿರಾಟದ ವೇಗ ಹಾಗೂ ಹೃದಯ ಬಡಿತ ಹೆಚ್ಚಿ ಬಳಲಿಕೆಯಾಗುತ್ತದೆ. ಯುವ ಜನತೆಯನ್ನು ಆಕರ್ಷಿಸುವ ಜಿಮ್ ಏರೋಬಿಕ್ಸ್ ಇತರ ದೈಹಿಕ ಕಸರತ್ತುಗಳು ಆರೋಗ್ಯಕ್ಕಾಗಿ ಎಂದು ಹೇಳಲಾದರೂ ಮಾಂಸಖಂಡಗಳ ರೂಪಾಕಾರವೇ ಪ್ರಮುಖ ಉದ್ದೇಶವಾದಂತೆ ತೋರುತ್ತದೆ. ಇದರಿಂದ ರೂಪ, ಆಕಾರ ಸುಂದರವಾದರೂ ಮಾನಸಿಕ ಸ್ವಾಸ್ಥ್ಯ, ದೈಹಿಕ ಆರೋಗ್ಯಕ್ಕೆ ಎಷ್ಟರಮಟ್ಟಿಗೆ ಸಹಾಯವಾಗುತ್ತದೆ ಎನ್ನುವುದು ಪ್ರಶ್ನಾರ್ಹವಾಗಿದೆ. ಶುದ್ಧೀಕರಣ ಕ್ರಿಯೆ ಕಪಾಲಭಾತಿಯನ್ನು ಹೊರತುಪಡಿಸಿದರೆ ಯೋಗ, ಪ್ರಾಣಾಯಾಮ ಹಾಗೂ ಧ್ಯಾನ ನಿಧಾನಗತಿ ಉಸಿರಾಟ ತನ್ಮೂಲಕ ನಿಧಾನಗತಿ ಹೃದಯ ಬಡಿತಕ್ಕೆ ಒತ್ತು ನೀಡಿ ಆರೋಗ್ಯಕ್ಕೆ ಅಂದ-ಆಕಾರವನ್ನು ಮೀರಿದ ಆಯಾಮ ನೀಡುತ್ತದೆ. ಈ ಕಾರಣದಿಂದ ಯೋಗಾಭ್ಯಾಸದ ನಂತರ ದೇಹ ಲವಲವಿಕೆಯಿಂದಿರುತ್ತದೆಯೇ ಹೊರತು ಬಳಲಿಕೆಯಾಗುವುದಿಲ್ಲ. ನನ್ನ ಅನುಭವದಲ್ಲಿ ಯೋಗ ಎನ್ನುವುದು ಸೆಗಣಿ ಸಾರಿಸಿ ಅಂಗಳಕ್ಕೆ ರಂಗೋಲಿ ಹಾಕಿದ ಹಾಗೆಯೇ ಹೊರತು ಇರುವುದನ್ನು ಮರೆಮಾಚಿ ಸುಗಂಧ ದ್ರವ್ಯ ಸಿಂಪಡಿಸಿದಂತಲ್ಲ. ಚಿಗುರಿನ ಚಂದ ನಮ್ಮ ಒಳಗಿಂದ ಬರಬೇಕೇ ಹೊರತು ಒಣಗುತ್ತಿರುವ ಮರಕ್ಕೆ ತೂಗುಬಿಟ್ಟ ದೀಪಗಳಿಂದ ನಾವು ಚೆಂದ ಕಾಣುವುದಲ್ಲ. ಯೋಗ ನಮ್ಮನ್ನು ನಿರಂತರ ಚಿಗುರುವಂತೆ ಮಾಡುವ ಭಾರತದ ಪ್ರಾಚೀನ ಪದ್ಧತಿ.
ಯೋಗದಲ್ಲಿ ಹೇಳಲಾಗುವ ವಿವಿಧ ಪ್ರಾರ್ಥನೆಗಳು ವಿಶ್ವಶಾಂತಿಯನ್ನೇ ಗುರಿಯಾಗಿಸಿಕೊಂಡು ರೂಪಿಸಲ್ಪಟ್ಟಿವೆ. ಬ್ರಹ್ಮಾಂಡದ ಶಕ್ತಿ ಸಂಚಯಗಳಲ್ಲಿ ನಮಗೆ ಹತ್ತಿರವಾದ ಉದಯಸೂರ್ಯನಿಗೆ ಅಭಿಮುಖವಾಗಿ ಮಾಡುವ ಸೂರ್ಯನಮಸ್ಕಾರ ಸೇರಿದಂತೆ ಅನೇಕ ಕ್ರಿಯೆಗಳು ಪ್ರಕೃತಿಯಿಂದ ನಮಗೆ ಶಕ್ತಿ ಪಡೆದುಕೊಳ್ಳುವ ವಿಧಾನದಂತೆ ತೋರುತ್ತದೆ. ಪ್ರತಿ ನಿತ್ಯ ಮನೆಯನ್ನು ಗುಡಿಸಿ ಒರೆಸಿ ಸ್ವಚ್ಛವಾಗಿಡುವಂತೆ ದೇಹವನ್ನು ನಿತ್ಯ ಸ್ವಚ್ಛವಾಗಿರಿಸುವ ಪ್ರಕ್ರಿಯೆ ನಮ್ಮದಾಗಬೇಕು. ಸ್ವಚ್ಛತೆ ಎಂದರೆ ಸೋಪು, ಶಾಂಪೂ ಜಾಹೀರಾತಿನಲ್ಲಿ ತೋರಿಸುವಂತೆ ಬಾಹ್ಯ ಸ್ವಚ್ಛತೆ ಅಲ್ಲ; ಆಂತರಿಕ ಸ್ವಚ್ಛತೆ.
ಯೋಗ್ಯ ಗುರುವಿನ ಮಾರ್ಗದರ್ಶನದಲ್ಲಿ ಶ್ರದ್ಧೆಯಿಟ್ಟು ಕಲಿತು ಬದ್ಧತೆಯಿಂದ ಮಾಡುವ ಯೋಗ ತ್ವರಿತವಾಗಿ ಧನಾತ್ಮಕ ಪ್ರಭಾವ ತೋರುತ್ತದೆ. ಸರಿಯಾದ ಮಾರ್ಗದರ್ಶನ ಇಲ್ಲದೇ ಮಾಡುವ ಯೋಗ ಅಪಾಯಕಾರಿ ಕೂಡಾ ಹೌದು.
ಇತ್ತೀಚೆಗೆ ಯೋಗ ಶಿಕ್ಷಣ ಕೂಡ ವ್ಯಾಪಾರವಾಗಿದ್ದರೂ ಉಚಿತ ಅಥವಾ ಸಮಂಜಸ ಶುಲ್ಕ ಪಡೆದು ಯೋಗ ಶಿಕ್ಷಣ ನೀಡುವ ಸಂಘಸಂಸ್ಥೆಗಳೂ ಇವೆ. ಯೋಗ ಅನ್ನುವುದು ನಾಲ್ಕು ದಿನಗಳ ಜಾತ್ರೆ ಅಲ್ಲ, ಅತ್ಯಂತ ಆರೋಗ್ಯಕರ ನಿತ್ಯಕರ್ಮ ಗಳಲ್ಲೊಂದು ಎಂದು ಅಳವಡಿಸಿಕೊಂಡಾಗ ಯೋಗದ ಅನಿರ್ವಚನೀಯ ಆನಂದವನ್ನು ಜೀವನಪೂರ್ತಿ ಅನುಭವಿಸಬಹುದು. ಭಾರತದ ಈ ಅಸ್ಮಿತೆ ಎಲ್ಲೆಡೆ ಹರಡಿ ವಿಶ್ವಶಾಂತಿ ಹಾಗೂ ಆರೋಗ್ಯವಂತ ಸಮಾಜ ಸ್ಥಾಪನೆಯಾಗಲಿ.
(ಲೇಖಕರು ಇಂಜಿನಿಯರ್)
30 ದಿನ ರಜೆ ಕೊಡಿ, ಇಲ್ಲಂದ್ರೆ ಒತ್ತಡದಲ್ಲಿ ಏನಾದ್ರೂ ಆದ್ರೆ ನೀವೇ ಜವಾಬ್ದಾರಿ: ಎಸ್​ಪಿಗೆ ಡಿವೈಎಸ್​ಪಿ ಪತ್ರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
