ಬೆಂಗಳೂರು: ಮೈತ್ರಿ ಸರ್ಕಾರದ ಪತನ, ಲೋಕಸಭೆ ಚುನಾವಣೆಯಲ್ಲಿ ಸೋಲಿನ ನಡುವೆಯೂ ತಳಮಟ್ಟದಿಂದ ಜೆಡಿಎಸ್ ಸಂಘಟಿಸಲೇಬೇಕೆಂದು ಎಚ್.ಡಿ.ದೇವೇಗೌಡರು ಟೊಂಕ ಕಟ್ಟಿ ನಿಂತಿದ್ದಾರೆ.
ಗೌಡರ ಈ ಕಾರ್ಯಕ್ಕೆ ಕಾರ್ಯಕರ್ತರು ಹಾಗೂ ಮೂರನೇ ಹಂತದ ನಾಯಕರಿಂದ ಸಿಕ್ಕ ಸ್ಪಂದನೆ, ಎರಡನೇ ಹಂತದ ನಾಯಕರಿಂದ ಸಿಗುತ್ತಿಲ್ಲ. ಶಾಸಕರು ದಿನೇದಿನೆ ಹೈಕಮಾಂಡ್ ಜತೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಪರಸ್ಪರರು ಒಟ್ಟಿಗೆ ಸೇರುತ್ತಿಲ್ಲ, ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತನಾಡುತ್ತಿಲ್ಲ. ಇದು ಸಂಘಟನೆಗೆ ದೊಡ್ಡ ಅಡ್ಡಿಯಾಗಿದೆ.
ಬಿಜೆಪಿ ಭರಾಟೆ, ಆಪರೇಷನ್ ಕಮಲದ ಅಬ್ಬರದಲ್ಲಿ ಜೆಡಿಎಸ್ ಕಾರ್ಯಕರ್ತರು ಕೊಚ್ಚಿ ಹೋಗಬಾರದೆಂದು ಖುದ್ದು ದೇವೇಗೌಡರೇ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಮುರಿದು ಬಿದ್ದ ನಂತರ ಬಹುತೇಕ ಶಾಸಕರು ಜೆ.ಪಿ. ಭವನದತ್ತ ಸುಳಿಯುತ್ತಿಲ್ಲ.
ಅತೃಪ್ತರ ಸಂಖ್ಯೆ ಹೆಚ್ಚಳ?: ಇನ್ನು, ಅಧಿಕಾರದಲ್ಲಿದ್ದಾಗ ತಮ್ಮನ್ನು ಕಡೆಗಣಿಸಲಾಯಿತು. ನಿಗಮ-ಮಂಡಳಿ ಸ್ಥಾನ ನೀಡದೆ ನಿರ್ಲಕ್ಷಿಸಲಾಯಿತು. ಕೊನೇ ಪಕ್ಷ ಕ್ಷೇತ್ರದ ಅಭಿವೃದ್ಧಿಗೂ ಅನುದಾನ ನೀಡಲಿಲ್ಲ ಎಂಬ ಕೊರಗು 2ನೇ ಹಂತದ ಅನೇಕ ನಾಯಕರಲ್ಲಿದೆ. ಈ ಕಾರಣಕ್ಕಾಗಿಯೇ ಮಾಜಿ ಸಿಎಂ
ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಶಾಸಕರು, ವಿಧಾನ ಪರಿಷತ್ ಸದಸ್ಯರು ಅಸಮಾಧಾನಗೊಂಡಿದ್ದಾರೆ. ಅತೃಪ್ತ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಮನವೊಲಿಸುವ ಕೆಲಸ ನಡೆದರೂ ಅದು ಪೂರ್ಣ ಪ್ರಮಾಣದಲ್ಲಿ ಫಲ ಕೊಟ್ಟಂತಿಲ್ಲ. ಬೃಹತ್ ಸಮಾವೇಶ, ರಾಷ್ಟ್ರೀಯ ಕಾರ್ಯಕಾರಿಣಿಗಳಲ್ಲಿ ಕೆಲವೇ ಕೆಲವು ನಾಯಕರು ಕಾಣಿಸಿಕೊಂಡದ್ದು ಪಕ್ಷದ ವರಿಷ್ಠರಲ್ಲಿ ಆತಂಕ ಉಂಟು ಮಾಡಿರುವುದು ಸುಳ್ಳಲ್ಲ. ಜೆಡಿಎಸ್ ಹಿರಿಯ ನಾಯಕ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಮೇಲ್ಮನೆಯ ಅತೃಪ್ತ ಸದಸ್ಯರು ಮೂರು ತಿಂಗಳ ಹಿಂದೆ ಸಭೆ ಸೇರಿ ತಮ್ಮ ಅಸಮಾಧಾನದ ಸಂದೇಶವನ್ನು ನೇರವಾಗಿ ಗೌಡರಿಗೆ ರವಾನಿಸಿದ್ದರು. ಇದರಿಂದ ಎಚ್ಚೆತ್ತ ಗೌಡರು ಕೆಲವು ಶಾಸಕರು ಹಾಗೂ ಮೇಲ್ಮನೆ ಸದಸ್ಯರನ್ನು ಆಹ್ವಾನಿಸಿ ಆಗಿರುವ ತಪ್ಪು ಒಪ್ಪಿಕೊಂಡದ್ದೂ ಅಲ್ಲದೆ, ನಿಮ್ಮ ಸಮಸ್ಯೆ ಅರ್ಥವಾಗಿದೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಪರಿಸ್ಥಿತಿ ಹಾಗಿತ್ತು. ನೀವು ಸಮಾಧಾನದಿಂದಿರಿ ಎಂದು ಸಂತೈಸಿದ್ದರು. ಆದರೂ ಜಿ.ಟಿ.ದೇವೇಗೌಡ ಇತ್ತೀಚೆಗೆ ನಡೆದ ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿ ಹೈಕಮಾಂಡ್​ಗೆ ಸಡ್ಡು ಹೊಡೆದಿದ್ದಾರೆ. ನಾಗಮಂಗಲದ ಶಾಸಕ ಸುರೇಶ್​ಗೌಡ ಬಹಿರಂಗ ಸಮಾವೇಶದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ಜೆಡಿಎಸ್ ನಾಯಕರಿಗೆ ಆಘಾತ ಉಂಟು ಮಾಡಿದ್ದಾರೆ. ಇನ್ನು, ಬಸವರಾಜ ಹೊರಟ್ಟಿ ಪದೇಪದೆ ವರಿಷ್ಠರ ವಿರುದ್ಧ ಅಸಮಾಧಾನವನ್ನು ಮಾಧ್ಯಮಗಳ ಮುಂದೆ ತೋಡಿಕೊಂಡಿದ್ದೂ ಆಗಿದೆ. ಈ ಎಲ್ಲ ಬೆಳವಣಿಗೆಗಳು ತಳಮಟ್ಟದಲ್ಲಿ ಪಕ್ಷ ಕಟ್ಟಲು ಕಂಟಕವಾಗಿವೆ.
ಭೋಜನ ಆಹ್ವಾನಕ್ಕೂ ಬರಲಿಲ್ಲ
ವಿಧಾನ ಪರಿಷತ್​ನ ಒಂದು ಸ್ಥಾನಕ್ಕೆ ಇತ್ತೀಚೆಗೆ ನಡೆದ ಚುನಾವಣೆಯ ಇಡೀ ದಿನ ಮಾಜಿ ಸಿಎಂ ಕುಮಾರಸ್ವಾಮಿ ವಿಧಾನಸೌಧದ ಜೆಡಿಎಸ್ ಶಾಸಕಾಂಗ ಕಚೇರಿಯಲ್ಲೇ ಕುಳಿತಿದ್ದರೂ ಬಂದು ಭೇಟಿ ಮಾಡಿ, ಆತ್ಮೀಯತೆಯಿಂದ ಮಾತನಾಡಿದ್ದು ಬೆರಳೆಣಿಕೆ ಶಾಸಕರು ಮಾತ್ರ. ಮತ್ತೆ ಕೆಲವರು ಕಾರಿಡಾರ್​ಗಳಲ್ಲಿ ಕಾಲ ಕಳೆದರೇ ವಿನಃ ಕುಮಾರಸ್ವಾಮಿಗೆ ಹೆಚ್ಚು ಹೊತ್ತು ಸಾಥ್ ಕೊಡಲಿಲ್ಲ. ಜೆಡಿಎಲ್​ಪಿ ದಿನ ಮಾಜಿ ಸಚಿವ ಎಚ್.ಡಿ.ರೇವಣ್ಣ ಶಾಸಕರು, ವಿಧಾನ ಪರಿಷತ್ ಸದಸ್ಯರನ್ನು ಭೋಜನಕ್ಕೆ ಆಹ್ವಾನಿಸಿದರೂ ಹಾಜರಾದವರ ಸಂಖ್ಯೆ ಬರೀ 12 ಮಂದಿ! ಖಾಸಗಿ ಹೋಟೆಲ್​ನಲ್ಲಿ ಇತ್ತೀಚೆಗೆ ಕರೆಯಲಾಗಿದ್ದ ಶಾಸಕಾಂಗ ಪಕ್ಷದ ಸಭೆಯಲ್ಲಿ 34 ಶಾಸಕರ ಪೈಕಿ 21, ವಿಧಾನ ಪರಿಷತ್ 16 ಸದಸ್ಯರ ಪೈಕಿ 6 ಮಂದಿ ಮಾತ್ರ ಹಾಜರಿದ್ದರು.
ವಿಲಾಸ ಮೇಲಗಿರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 5 =
Remember me
