| ಶಿವಾನಂದ ಹಿರೇಮಠ ಗದಗನ್ಯಾಯಾಲಯ ಪ್ರಕ್ರಿಯೆಯಲ್ಲಿ ಹೊಸತನಕ್ಕೆ ಒಗ್ಗಿಕೊಳ್ಳುವ ಮತ್ತು ಕಾನೂನು ವ್ಯವಸ್ಥೆಯಲ್ಲಿ ಸ್ವದೇಶಿತನ ಅಳವಡಿಸುವ ನಿಟ್ಟಿನಲ್ಲಿ ದೇಶದಲ್ಲಿ ಜುಲೈ 1ರಿಂದ ನೂತನ ಕಾನೂನು ವ್ಯವಸ್ಥೆ ಜಾರಿಗೆ ಬರಲಿದೆ. ದೇಶದಲ್ಲಿ ಒಂದೊಂದೆ ಬ್ರಿಟಿಷ್ ಕುರುಹುಗಳನ್ನು ಬದಲಾಯಿಸುತ್ತಿರುವ ಕೇಂದ್ರದ ಮಹತ್ವದ ಹೆಜ್ಜೆಗಳಲ್ಲಿ ಕಾನೂನು ವ್ಯವಸ್ಥೆಯೂ ಒಂದಾಗಿದೆ. ಸ್ವದೇಶಿತನ ಮತ್ತು ವಿಕಸಿತ ಭಾರತದ ಆಶಯವನ್ನು ನ್ಯಾಯಾಂಗ ವ್ಯವಸ್ಥೆಯಲ್ಲಿ ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ 2023ರಲ್ಲಿ ಮಸೂದೆ ಅನುಮೋದನೆಗೊಂಡಿತ್ತು.
ತುರ್ತು ನ್ಯಾಯದಾನ ಒದಗಿಸಲು ಚಾರ್ಜ್​ಶೀಟ್ ಸಲ್ಲಿಕೆ ಅವಧಿ, ವಿಚಾರಣೆ ನಂತರ ತೀರ್ಪು ನೀಡುವ ಅವಧಿಯನ್ನು ಹೊಸ ವ್ಯವಸ್ಥೆಯಲ್ಲಿ ಕಡಿತಗೊಳಿಸಲಾಗಿದೆ. ನೂತನ ವಿಧೇಯಕದಲ್ಲಿ ಹೊಸ ಕಾನೂನು ಉಲ್ಲೇಖಗಳು, ವ್ಯಾಖ್ಯಾನಗಳು ಹಾಗೂ 46ಕ್ಕೂ ಅಧಿಕ ಸೆಕ್ಷನ್​ಗಳನ್ನು ಬದಲಾಯಿಸಿರುವ ಕೇಂದ್ರ ಸರ್ಕಾರ, ಐಪಿಸಿ ಬದಲಾಗಿ ಬಿಎನ್​ಎಸ್, ಸಿಆರ್​ಪಿಸಿ ಬದಲಾಗಿ ಜಾರಿಗೆ ತಂದಿರುವ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆಯಲ್ಲಿ ಆರೋಪಿ ಬಿಡುಗಡೆ, ಫೋಕ್ಸೋ ಸಂಬಂಧಿತ ವರದಿ ಸಲ್ಲಿಕೆ, ಎಲೆಕ್ಟ್ರಾನಿಕ್ ಉಪಕರಣ ಮೂಲಕ ಸಮನ್ಸ್ ತಲುಪಿಸುವುದು ಸೇರಿದಂತೆ ಹಲವು ಮಹತ್ವದ ಬದಲಾವಣೆ ತರಲಾಗಿದೆ. ಈ ಮೂಲಕ ಭಾರತ ನ್ಯಾಯಾಂಗ ವ್ಯವಸ್ಥೆಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿ ಆಗಲಿದೆ.
ಏನಿದು ವಿಧೇಯಕ?:ಕಾನೂನು ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಾಗಿ ಕೇಂದ್ರ ಸರ್ಕಾರ 2023ರಲ್ಲಿ ನೂತನ ವಿಧೇಯಕವನ್ನು ಅಂಗೀಕರಿಸುವ ಮೂಲಕ ಬ್ರಿಟಿಷ್ ಕಾಲದ ಇಂಡಿಯನ್ ಪೀನಲ್ ಕೋಡ್ (ಭಾರತೀಯ ದಂಡ ಸಂಹಿತೆ/ಐಪಿಸಿ) ಮತ್ತು ದಂಡ ಪ್ರಕ್ರಿಯಾ ಸಂಹಿತೆ (ಸಿಆರ್​ಪಿಸಿ)ಗೆ ಇತಿಶ್ರೀ ಹೇಳಿದೆ. ಬದಲಾಗಿ ಭಾರತೀಯ ನ್ಯಾಯ
ಸಂಹಿತೆ(ಬಿಎನ್​ಎಸ್) ಹಾಗೂ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ (ಬಿಎನ್​ಎಸ್​ಎಸ್) ಜಾರಿಗೆ ತಂದಿದೆ. ಕ್ಷಿಪ್ರ ತನಿಖೆ, ವಿಚಾರಣೆ, ತುರ್ತು ನ್ಯಾಯದಾನ ಒದಗಿಸುವ ನಿಟ್ಟಿನಲ್ಲಿ ಸಮನ್ಸ್ ಜಾರಿ, ಚಾರ್ಜ್​ಶೀಟ್ ಸಲ್ಲಿಕೆ, ತೀರ್ಪು ಬರೆಯುವ ಸಮಯ, ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆಯುವುದು ಸೇರಿದಂತೆ ಹಲವು ವಿಷಯಗಳಲ್ಲಿ ವಿಳಂಬ ಪ್ರಕ್ರಿಯೆ ಜರುಗದಂತೆ ಹೊಸ ಸೆಕ್ಷನ್​ಗಳನ್ನು ಅಳವಡಿಸಲಾಗಿದೆ. ಈ ಬಗ್ಗೆ ಎಲ್ಲ ರಾಜ್ಯದ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಜುಲೈ 1ರಿಂದ ದಾಖಲಾಗುವ ಪ್ರಕರಣಗಳಿಗೆ ಹೊಸ ಸೆಕ್ಷನ್​ಗಳನ್ನು ಬರೆಯಲಾಗುತ್ತದೆ.
ಪೊಲೀಸ್ ತನಿಖಾ ವಿಷಯಗಳಲ್ಲೂ ಮಹತ್ವದ ಬದಲಾವಣೆ ಮಾಡಲಾಗಿದೆ. ಸೆಕ್ಷನ್ 190ರಲ್ಲಿ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳದೆ ಆರೋಪಿಯಿಂದ ಭದ್ರತೆ ಪಡೆದುಕೊಂಡು ಬಿಡುಗಡೆ ಮಾಡುವ ಸಂದರ್ಭದಲ್ಲಿ ‘ಆರೋಪಿ ಪೊಲೀಸ್ ಕಸ್ಟಡಿಯಲ್ಲಿ ಇಲ್ಲ’ ಎಂದು ದಂಡಾಧಿಕಾರಿಯು ವರದಿಯನ್ನು ನಿರಾಕರಿಸುವಂತಿಲ್ಲ ಎಂದು ತಿಳಿಸಲಾಗಿದೆ.
ತೀರ್ಪು ಅವಧಿ ಕಡಿತ :ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆಯಲ್ಲಿ ಜಡ್ಜ್​ಮೆಂಟ್ ವಿಚಾರವಾಗಿ ತಿಳಿಸಲಾಗಿದೆ. ಈ ಮೊದಲಿನ ಸಿಆರ್​ಪಿಸಿಯಲ್ಲಿ ಸೆಶನ್ಸ್ ಪ್ರಕರಣಗಳಲ್ಲಿ ತೀರ್ಪು ನೀಡುವ 60 ದಿನದ ಅವಧಿಯನ್ನು 30 ದಿನಕ್ಕೆ ಕಡಿತಗೊಳಿಸಲಾಗಿದೆ. 30 ದಿನಗಳ ಒಳಗಾಗಿ ಅಥವಾ 45 ದಿನ ಮೀರದಂತೆ ತೀರ್ಪು ನೀಡಬೇಕು ಎಂದು ತಿಳಿಸಲಾಗಿದೆ. ಆರೋಪಿ ಜೈಲಿನಲ್ಲಿ ಇದ್ದರೆ ತೀರ್ಪು ಕೇಳಲು ಆರೋಪಿಯನ್ನು ನ್ಯಾಯಾಲಯಕ್ಕೆ ಕರೆತರಲು ಸೂಚಿಸಲಾಗಿದೆ.
ವಿಚಾರಣೆ ಪ್ರಕ್ರಿಯೆ:ಬಿಎನ್​ಎಸ್​ಎಸ್​ನಲ್ಲಿ ಆರೋಪಿ ವಿಚಾರಣೆಗೆ ಹಾಜರಾಗುವ ಪ್ರಕ್ರಿಯೆಯಲ್ಲಿ ವಿನಾಯಿತಿ ನೀಡಲಾಗಿದೆ. ಕೋರ್ಟ್ ಅನುಮತಿ ಪಡೆದ ಆರೋಪಿ ತಾನು ಇದ್ದಲ್ಲಿಂದಲೇ ಆಡಿಯೋ ಮತ್ತು ವಿಡಿಯೋ ಮೂಲಕ ವಿಚಾರಣೆಗೆ ಹಾಜರಾಗಬಹುದು ಅಥವಾ ವಕೀಲರ ಮುಖಾಂತರ ಸರ್ಕಾರ ಗೊತ್ತುಪಡಿಸಿದ ಸ್ಥಳದಿಂದ ಹಾಜರಾಗಬಹುದು. ಕೋವಿಡ್ ಸಂದರ್ಭದಲ್ಲಿ ಈ ವ್ಯವಸ್ಥೆ ಇತ್ತು. ಸಿಆರ್​ಪಿಸಿಯಲ್ಲಿ ಈ ಅನುಕೂಲತೆ ಇರಲಿಲ್ಲ.
ಮುಂದೆ ಈ ಕಾನೂನುಗಳು ಇನ್ನಿಲ್ಲ
. ಭಾರತೀಯ ದಂಡ ಸಂಹಿತೆ
. ಅಪರಾಧ ದಂಡಪ್ರಕ್ರಿಯಾ ಸಂಹಿತೆ
. ಭಾರತೀಯ ಸಾಕ್ಷ್ಯ ಕಾಯಿದೆ
. ಭಾರತೀಯ ನ್ಯಾಯ ಸಂಹಿತೆ 2023
. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023
. ಭಾರತೀಯ ಸಾಕ್ಷ್ಯ ಅಧಿನಿಯಮ 2023
. ನಡೆದಿರುವ ಅಪರಾಧದ ಬಗ್ಗೆ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದು.
. ಆನ್​ಲೈನ್ ಮೂಲಕವೂ ದೂರು ಸಲ್ಲಿಕೆಗೆ ಅವಕಾಶ
. ಹೇಯ ಅಪರಾಧ ನಡೆದ ಸ್ಥಳದ ಕಡ್ಡಾಯ ಚಿತ್ರೀಕರಣ
. ಕಾನೂನು ಬದಲಿಗೆ ಸಂಬಂಧಿಸಿದ ಮೂರು ಮಸೂದೆಗಳಿಗೆ 2023ರ ಡಿಸೆಂಬರ್ 21ರಂದು ಸಂಸತ್ ಅನುಮೋದನೆ ನೀಡಿತು.
. 2023ರ ಡಿ.25ರಂದು ರಾಷ್ಟ್ರಪತಿ ದ್ರೌಪದಿ ಮುಮು ಮಸೂದೆಗಳಿಗೆ ಅಂಕಿತ ಹಾಕಿದರು.
. ಹೊಸ ಕ್ರಿಮಿನಲ್ ಕಾನೂನು ದೇಶದ ಅಪ ರಾಧ ನ್ಯಾಯ ವ್ಯವಸ್ಥೆಯನ್ನು ವಸಾಹತು ಕಾಲದ ಜಡತ್ವದಿಂದ ಹೊರತಂದು ಸಂಪೂರ್ಣವಾಗಿ ನವೀಕರಿಸುತ್ತದೆ.
. ಪ್ರತ್ಯೇಕತೆಯ ಘೋಷಣೆ, ಸಶಸ್ತ್ರ ಪ್ರತಿರೋಧ, ವಿಧ್ವಂಸಕ ಚಟುವಟಿಕೆ, ಪ್ರತ್ಯೇಕತಾವಾದಿ ಚಟುವಟಿಕೆ ಅಥವಾ ಸಾರ್ವಭೌಮತೆಗೆ ಧಕ್ಕೆ ತರುವುದನ್ನು ಅಪರಾಧ ಎಂದು ಭಾರತೀಯ ನ್ಯಾಯ ಸಂಹಿತೆಯು ವರ್ಗೀಕರಿಸಿದ್ದು, ದೇಶದ್ರೋಹ ಕುರಿತ ಕಾನೂನನ್ನು ಹೊಸ ಸ್ವರೂಪದಲ್ಲಿ ಪರಿಚಯಿಸಲಿದೆ.
. ಎಲ್ಲ ಆಸ್ಪತ್ರೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳಲ್ಲಿ ಸಂತ್ರಸ್ತರಿಗೆ ಉಚಿತ ಪ್ರಥಮ ಚಿಕಿತ್ಸೆ ಅಥವಾ ವೈದ್ಯಕೀಯ ಚಿಕಿತ್ಸೆ ಖಾತರಿ ಪಡಿಸಲಾಗಿದೆ.
. ಆರೋಪಿ ಮತ್ತು ಸಂತ್ರಸ್ತರು 14 ದಿನಗಳ ಒಳಗಾಗಿ ಎಫ್​ಐಆರ್, ಪೊಲೀಸ್ ವರದಿ, ಚಾರ್ಜ್​ಶೀಟ್, ತಪ್ಪೊಪ್ಪಿಗೆ ಹೇಳಿಕೆಗಳು ಮತ್ತು ಇತರ ದಾಖಲೆಗಳ ಪ್ರತಿಗಳನ್ನು 14 ದಿನಗಳ ಒಳಗಾಗಿ ಪಡೆದುಕೊಳ್ಳಲು ಅರ್ಹರು.
ಬಲವಂತವಿಲ್ಲ:ಯಾವುದೇ ಪ್ರಕರಣದಲ್ಲಿ ವ್ಯಕ್ತಿಯನ್ನು ಸಾಕ್ಷಿಕರಿಸುವ ಸಂದರ್ಭದಲ್ಲಿ ಸಮನ್ಸ್ ಜಾರಿ ಮಾಡುವಾಗ, ಆ ವ್ಯಕ್ತಿಯು 60 ವರ್ಷ ಮೇಲ್ಪಟ್ಟಿದ್ದರೆ ಅಥವಾ 15 ವರ್ಷಕ್ಕಿಂತ ಕಡಿಮೆ ಇದ್ದರೆ (ಮಹಿಳೆ, ಅಂಗವಿಕಲ ಅಥವಾ ದುರ್ಬಲ) ಅವರಿಗೆ ಠಾಣೆ ಅಥವಾ ನಿಗದಿ ಪಡಿಸಿದ ಸ್ಥಳಕ್ಕೆ ಬರಬೇಕೆಂದು ಪೊಲೀಸರು ಒತ್ತಾಯಿಸುವಂತಿಲ್ಲ ಎಂದು ನಾಗರಿಕ ಸುರಕ್ಷತಾ ಸಂಹಿತೆಯಲ್ಲಿ ಸೂಚಿಸಲಾಗಿದೆ. ಈ ಮೊದಲಿನ ಸಿಆರ್​ಪಿಸಿಯಲ್ಲಿ ಈ ನಿಯಮ ಇರಲಿಲ್ಲ.
ಶೂನ್ಯ ಎಫ್​ಐಆರ್ :ಶೂನ್ಯ ಎಫ್​ಐಆರ್ ವ್ಯವಸ್ಥೆಯ ಮೂಲಕ ಒಬ್ಬ ವ್ಯಕ್ತಿಯು ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಬಹುದು. ಇದು ಕಾನೂನು ಪ್ರಕ್ರಿಯೆಗಳನ್ನು ಆರಂಭಿಸುವಲ್ಲಿ ವಿಳಂಬವನ್ನು ತಪ್ಪಿಸುತ್ತದೆ ಮತ್ತು ಅಪರಾಧದ ತಕ್ಷಣ ವರದಿಯನ್ನು ಖಚಿತ ಪಡಿಸುತ್ತದೆ. ಅಲ್ಲದೆ, ಹೊಸ ಕಾನೂನಿನ ಅಡಿಯಲ್ಲಿ ಸಂತ್ರಸ್ತರು ಎಫ್​ಐಆರ್​ನ ಉಚಿತ ಪ್ರತಿ ಪಡೆದುಕೊಳ್ಳಲಿದ್ದಾರೆ.
ಚಾರ್ಜ್​ಶೀಟ್:ಈ ಮೊದಲು ಪ್ರಕರಣದ ಚಾರ್ಜ್​ಶೀಟ್ ಸಲ್ಲಿಸಲು ಪೊಲೀಸ ರಿಗೆ 90 ದಿನಗಳವರೆಗೆ ಅವಕಾಶ ನೀಡಲಾಗಿತ್ತು ಮತ್ತು ದಸ್ತಾವೇಜು ಮೂಲಕವೇ ಸಲ್ಲಿಸಬೇಕಿತ್ತು. ಹೊಸ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆಯಲ್ಲಿ (ಬಿಎನ್​ಎಸ್​ಎಸ್) 90 ದಿನಗಳನ್ನು ಕಡಿತಗೊಳಿಸಿ 60 ದಿನಕ್ಕೆ ಇಳಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ(ಬಿಎನ್​ಎಸ್) ಕಲಂ 64, 65, 66, 67, 68, 71 ಹಾಗೂ 4, 6, 8, 10, ಪೋಕ್ಸೋ ಪ್ರಕರಣಗಳಿಗೆ ಈ ನಿಯಮ ಅನ್ವಯವಾಗಲಿದೆ. ಡಿಜಿಟಲ್ ಮಾಧ್ಯಮದ ಮೂಲಕವೂ ವರದಿ ಸಲ್ಲಿಸ ಬಹುದಾಗಿದೆ. ಸಮನ್ಸ್ ಕೂಡ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಸಲ್ಲಿಸಬಹುದು. ಆತ್ಮಹತ್ಯೆ ವರದಿಯನ್ನು 24 ಗಂಟೆಗಳ ಒಳಗಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್​ಗೆ ಸಲ್ಲಿಸಬೇಕು.
ಎಸ್​ಪಿಗೆ ವಿಶೇಷಾಧಿಕಾರ :ದಂಡ ಪ್ರಕ್ರಿಯಾ ಸಂಹಿತೆಯಲ್ಲಿದ್ದ ಕೆಲ ನ್ಯಾಯಾಲಯಗಳನ್ನು ರದ್ದುಗೊಳಿಸಿ, ಬಿಎನ್​ಎಸ್​ಎಸ್ನಲ್ಲಿ ಸೆಶನ್ ಜಡ್ಜ್, ಜೆಎಂಎಫ್​ಸಿ, ಎಫ್​ಎಂಎಫ್​ಸಿ, ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ವ್ಯವಸ್ಥೆ ಮುಂದು ವರಿಯಲಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸ್ಪೆಷಲ್ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಹುದ್ದೆ ನೀಡುವುದನ್ನು ಕಲಂ 15ರಲ್ಲಿ ತಿಳಿಸಿದೆ.
ಶಿಕ್ಷೆ ನೀಡುವುದಕ್ಕಿಂತಲೂ ನ್ಯಾಯ ನೀಡುವುದು ನಮ್ಮ ಉದ್ದೇಶವಾಗಿದೆ. ಹೊಸ ಕಾನೂನಿನಲ್ಲಿ ಭಯೋತ್ಪಾದನೆಗೆ ಸ್ಪಷ್ಟ ವ್ಯಾಖ್ಯಾನ ನೀಡಲಾಗಿದೆ. ದೇಶದ್ರೋಹದ ಕಾನೂನು ರದ್ದುಪಡಿಸಲಾಗಿದ್ದು, ‘ಸರ್ಕಾರದ ವಿರುದ್ಧದ ಅಪರಾದಗಳು’ ಎನ್ನುವ ಹೊಸ ಸೆಕ್ಷನ್ ಜಾರಿಗೆ ತರಲಾಗಿದೆ.
| ಅಮಿತ್ ಷಾ ಕೇಂದ್ರ ಗೃಹ ಸಚಿವ
ಹೊಸ ಕ್ರಿಮಿನಲ್ ಕಾಯ್ದೆ ಅನ್ವಯ ಸಂತ್ರಸ್ತರು ದೂರಿನ ಸಂಪೂರ್ಣ ಮಾಹಿತಿ ಪಡೆಯುವ ಅಧಿಕಾರ ಹೊಂದಿದ್ದಾರೆ. ಎಫ್​ಐಆರ್ ಉಚಿತ ಪ್ರತಿ ಪಡೆಯಲು ಅರ್ಹರು. 90 ದಿನಗಳಲ್ಲಿ ತನಿಖೆಯ ಪ್ರಗತಿಯನ್ನು ಸಂತ್ರಸ್ತರಿಗೆ ತಿಳಿಸುವುದು ಪೊಲೀಸರಿಗೆ ಕಡ್ಡಾಯ.
| ಶೈಲಜಾ ಕೃಷ್ಣ ನಾಯಕ್ , ಪಬ್ಲಿಕ್ ಪ್ರಾಸಿಕ್ಯೂಟರ್
ಐಪಿಸಿ, ಸಿಆರ್​ಪಿಯತನಿಖೆಯಲ್ಲಿ ಮಾನವ ಹಸ್ತಕ್ಷೇಪ, ದಾಖಲೆ, ಸಾಕ್ಷ್ಯಗಳು ಹೆಚ್ಚಾಗಿತ್ತು. ಹೊಸ ಕಾಯ್ದೆಯಲ್ಲಿ ಎಲೆಕ್ಟ್ರಾನಿಕ್, ಡಿಜಿಟಲ್ ಸಾಕ್ಷ್ಯ ಕಡ್ಡಾಯವಾಗಿದೆ. ಸಾಕ್ಷ್ಯ ಇದ್ದರಷ್ಟೇ ಆರೋಪಪಟ್ಟಿ ಸಲ್ಲಿಸಬೇಕು.
| ಮಹೇಶ್ ವೈದ್ಯ. ಕಾನೂನು ಸಲಹೆಗಾರರು, ಸಿಐಡಿ
ಜೈಲಲ್ಲಿ ದರ್ಶನ್‌ ಭೇಟಿಯಾದ ನಟಿ ರಕ್ಷಿತಾ, ಪ್ರೇಮ್ ದಂಪತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
