|ರುದ್ರಣ್ಣ ಹರ್ತಿಕೋಟೆಬೆಂಗಳೂರು
ನೀರಾವರಿ ವಿಚಾರದಲ್ಲಿ ನೆರೆಯ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿ ತೋರುತ್ತಿರುವ ಇಚ್ಛಾಶಕ್ತಿ ಕರ್ನಾಟಕದಲ್ಲಿ ಕಾಣದ ಕಾರಣ ನೀರಾವರಿ ಯೋಜನೆಗಳು ಹಣದ ಹರಿವಿಲ್ಲದೇ ಸೊರಗುತ್ತಿವೆ. ಇದೇ ಗತಿಯಲ್ಲಿ ಸಾಗಿದರೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಇನ್ನಷ್ಟು ಹೊರೆ ಹೊರಬೇಕಾಗುತ್ತದೆ.
ರಾಜ್ಯದಲ್ಲಿ ಅನೇಕ ಯೋಜನೆಗಳು ಪ್ರಗತಿಯಲ್ಲಿದ್ದರೆ, ಇನ್ನು ಕೆಲವು ಹಣಕಾಸಿನ ಅಡಚಣೆಯಿಂದ ಒಂದು ಹೆಜ್ಜೆಯೂ ಮುಂದೆ ಹೋಗಿಲ್ಲ. ಬಜೆಟ್​ನಲ್ಲಿ ಘೋಷಣೆ ಮಾಡಿದ್ದ ಯೋಜನೆಗಳಿಗೂ ಹಣಕಾಸು ಬಿಡುಗಡೆಯಾಗಿಲ್ಲ. ಹಿಂದೆ ಐದು ವರ್ಷಗಳ ಕಾಲ ನೀರಾವರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರೇ ಈಗ ಮುಖ್ಯಮಂತ್ರಿ. ರಾಜ್ಯದ ಪ್ರತಿಯೊಂದು ಯೋಜನೆಗಳ ಒಳಹೊರಗು ಅವರಿಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದ ಅವರ ಚೊಚ್ಚಲ ಬಜೆಟ್​ನಲ್ಲಿ ನೀರಾವರಿ ಎಷ್ಟರ ಮಟ್ಟಿಗೆ ಆದ್ಯತೆಯ ವಲಯ ಆಗುತ್ತದೆ ಎಂಬ ಕುತೂಹಲ ರಾಜ್ಯದ ಜನರಲ್ಲಿದೆ. ಕಾಂಗ್ರೆಸ್ ನಡೆಸಿದ ಮೇಕೆದಾಟು ಪಾದಯಾತ್ರೆಯ
ಹಿನ್ನೆಲೆಯಲ್ಲಿ ನೋಡಿದಾಗ ನೀರಾವರಿ ಯೋಜನೆಗಳು ಹಣಕಾಸು ಹಾಗೂ ಇತರೆ ಕಾರಣಗಳಿಂದ ಸೊರಗುತ್ತಿರುವುದು ಕಂಡುಬರುತ್ತದೆ. ನ್ಯಾಯಾಲಯದ ಮುಂದಿರುವ ಪ್ರಕರಣಗಳನ್ನು ಬಿಟ್ಟು ಉಳಿದ ಯೋಜನೆಗಳಿಗೂ ನ್ಯಾಯ ಸಿಗದ ಸ್ಥಿತಿ ಉಂಟಾಗಿದೆ.
ಯೋಜನೆಗಳ ಮಂಜೂರಾತಿಗೂ ಬಜೆಟ್​ಗೂ ತಾಳೆಯಾಗುತ್ತಿಲ್ಲ. ಪ್ರತಿ ವರ್ಷ 17-18 ಸಾವಿರ ಕೋಟಿ ರೂ. ಮಾತ್ರ ಮೀಸಲಿಡುತ್ತಿದ್ದೇವೆ. ಆದರೆ ಕೆಲಸ ನಡೆದಿರುವ ಯೋಜನೆಗಳಿಗೆ 1.05 ಲಕ್ಷ ಕೋಟಿ ರೂ. ಬೇಕು. ಒಟ್ಟಾರೆ ಯೋಜನೆಗಳಿಗೆ 2.35 ಲಕ್ಷ ಕೋಟಿ ರೂ. ಅಗತ್ಯವಿದೆ. ಸಂಪನ್ಮೂಲ ಕ್ರೋಡೀಕರಣವೂ ಕಷ್ಟವಾಗುತ್ತಿದೆ. ಆದ್ದರಿಂದಲೇ ಕೆಲವು ಯೋಜನೆಗಳನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡುವ ಪ್ರಯತ್ನ ನಡೆದಿದೆ. ಅಂತಾರಾಜ್ಯ ವಿವಾದಗಳು, ಭೂ ಸ್ವಾಧೀನ ಹಾಗೂ ಆರ್ಥಿಕ ಕೊರತೆಯಿಂದ ಯೋಜನೆಗಳು ತಡವಾಗುತ್ತಿವೆ. ಸಮಸ್ಯೆ ಪರಿಹಾರದ ಯತ್ನಗಳು ನಡೆದಿವೆ.
|ಗೋವಿಂದ ಕಾರಜೋಳಜಲ ಸಂಪನ್ಮೂಲ ಸಚಿವ
· ಕೆಲಸ ನಡೆದಿರುವ ಯೋಜನೆಗಳಿಗೆ 1.05 ಲಕ್ಷ ಕೋಟಿ ರೂ.
· ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡರೆ 1.30 ಲಕ್ಷ ಕೋಟಿ ರೂ.
· ಯೋಜನೆಗಳೆಲ್ಲ ಜಾರಿಯಾದರೆ ಹೆಚ್ಚುವರಿ 20 ಲಕ್ಷ ಹೆಕ್ಟೇರ್ ನೀರಾವರಿ
ರಾಜ್ಯದಲ್ಲಿ ಅನೇಕ ಯೋಜನೆಗಳು ಕುಂಟುತ್ತಾ ಸಾಗುತ್ತಿವೆ. ಜಾರಿಯಲ್ಲಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸುಮಾರು 1.05 ಲಕ್ಷ ಕೋಟಿ ರೂ.ಗಳ ಅಗತ್ಯವಿದೆ. ಹೊಸದಾಗಿ ಘೋಷಣೆ ಮಾಡಿರುವ ಯೋಜನೆಗಳನ್ನು ಅನುಷ್ಠಾನಕ್ಕೆ ಕೈಗೆತ್ತಿಕೊಂಡರೆ ತಕ್ಷಣಕ್ಕೆ ಸುಮಾರು 1.30 ಲಕ್ಷ ಕೋಟಿ ರೂ.ಗಳ ಅಗತ್ಯವಿದೆ. ಅಂದರೆ ರಾಜ್ಯ ಸರ್ಕಾರದ ಬಜೆಟ್​ನಷ್ಟು ಮೊತ್ತ ನೀರಾವರಿ ಯೋಜನೆಗಳಿಗೇ ಬೇಕಾಗುತ್ತದೆ. ಇಷ್ಟು ಮೊತ್ತ ಖರ್ಚು ಮಾಡಿದರೆ ಸುಮಾರು 20 ಲಕ್ಷ ಹೆಕ್ಟೇರ್​ನಷ್ಟು ಭೂಮಿಯನ್ನು ಹೊಸದಾಗಿ ನೀರಾವರಿಗೆ ಒಳಪಡಿಸಬಹುದಾಗಿದೆ. ಯೋಜನೆಗಳು ಜಾರಿಯಾಗಲು ಭೂಸ್ವಾಧೀನ ಮಾಡಿ ಪುನರ್ವಸತಿ ಕಲ್ಪಿಸಬೇಕಾಗುತ್ತದೆ. ಕಳೆದ ಎರಡು ವರ್ಷಗಳಿಂದ ಸರ್ಕಾರ ಹಣಕಾಸು ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲ. ಕರೊನಾ ಹಾಗೂ ಇತರೆ ಕಾರಣಗಳಿಂದ ಯೋಜನೆ ಪ್ರಗತಿ ಕುಂಟುತ್ತಿದೆ. ಇದರೆ ಜತೆಗೆ ಬಾಕಿ ಬಿಲ್​ಗಳ ಪ್ರಮಾಣ ಹೆಚ್ಚುತ್ತಿದ್ದು ಗುತ್ತಿಗೆದಾರರಲ್ಲಿಯೂ ನಿರಾಸಕ್ತಿ ಬೆಳೆಯುತ್ತಿದೆ.
ಮೇಕೆದಾಟು ಯೋಜನೆ ಈಗ ನ್ಯಾಯಾಲಯದ ಮುಂದಿದೆ. ಕಾಂಗ್ರೆಸ್ ಸರ್ಕಾರ 2017ರಲ್ಲಿ ಮಾಡಿದ ಡಿಪಿಆರ್ ಪ್ರಕಾರ 5912 ಕೋಟಿ ರೂ. ಗಳಿದ್ದ ಯೋಜನೆ ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 9000 ಕೋಟಿ ರೂ.ಗಳಾಯಿತು. ಈಗ ಮತ್ತೆ ಡಿಪಿಆರ್ ಮಾಡಿದರೆ ಇನ್ನಷ್ಟು ಹೆಚ್ಚಾಗುತ್ತದೆ. 10 ಹಳ್ಳಿ ಹಾಗೂ 12 ಸಾವಿರ ಎಕರೆ ಭೂಮಿ ಮುಳುಗಡೆಯಾಗುತ್ತದೆ. 67 ಟಿಎಂಸಿ ನೀರು ಸಂಗ್ರಹಿಸಿ ಕುಡಿಯುವ ನೀರು ಒದಗಿಸುವ ಯೋಜನೆ ಇದು. ತಮಿಳುನಾಡಿನ ವಿರೋಧವಿದೆ. ಕೇಂದ್ರ ಅರಣ್ಯ ಇಲಾಖೆ ಅನುಮತಿ ಸಹ ಸಿಕ್ಕಿಲ್ಲ.
ಕರ್ನಾಟಕ-ಗೋವಾ ನಡುವೆ ವಿವಾದ ಇರುವ ಮಹದಾಯಿ ವ್ಯಾಪ್ತಿಯ ಯೋಜನೆ ಇದಾಗಿದೆ. ಕಳಸಾ-ಬಂಡೂರಿಗೆ 1989ರಲ್ಲಿಯೇ ಗೋವಾ ಆಕ್ಷೇಪ ಎತ್ತಿತ್ತು. 2010ರಲ್ಲಿ ಮಹದಾಯಿ ನ್ಯಾಯಾಧಿಕರಣ ರಚನೆಯಾಗಿದೆ. ಕಣಕುಂಬಿ ಬಳಿ ಅಣೆಕಟ್ಟು ಕಟ್ಟಿ ಏತನೀರಾವರಿ ಮೂಲಕ ಕಳಸಾ ನಾಲೆಯಿಂದ 1.72 ಟಿಎಂಸಿ ನೀರನ್ನು ಬೆಳಗಾವಿಗೆ ತರುವುದು. ನೆರ್ಸೆ ಗ್ರಾಮದ ಬಳಿ ಅಣೆಕಟ್ಟು ಕಟ್ಟಿ ಬಂಡೂರಿ ನಾಲೆಯಿಂದ ಧಾರವಾಡ, ಗದಗ ಜಿಲ್ಲೆಗಳಿಗೆ 2.18 ಟಿಎಂಸಿ ನೀರು ತರುವುದು ಯೋಜನೆ. 2018ರ ಫೆಬ್ರವರಿಯಲ್ಲಿ ಅರಣ್ಯ ಇಲಾಖೆ ಅನುಮತಿ ನಂತರ ಯೋಜನೆ ಜಾರಿ ಎಂಬ ಷರತ್ತು ವಿಧಿಸಲಾಗಿದೆ. 2000ದಲ್ಲಿ 90 ಕೋಟಿ ರೂ.ಗಳಿದ್ದ ಯೋಜನಾ ವೆಚ್ಚ 2020ಕ್ಕೆ 1677.30 ಕೋಟಿ ರೂ.ಗಳಿಗೆ ತಲುಪಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಚುನಾವಣಾ ಪ್ರಣಾಳಿಕೆಯಲ್ಲಿ ಮಹತ್ವ ನೀಡಿದ್ದ ಯೋಜನೆ. ಆದರೆ ಎರಡೂ ಪಕ್ಷಗಳು ನೀಡಿದ್ದ ಭರವಸೆ ಈಡೇರಿಸಿಲ್ಲ. ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 519.6 ಮೀಟರ್​ನಿಂದ 524.256 ಮೀಟರ್​ಗೆ ಎತ್ತರಿಸುವುದು. ಆ ಮೂಲಕ 100 ಟಿಎಂಸಿ ನೀರು ಹೆಚ್ಚುವರಿ ಸಂಗ್ರಹ ಮಾಡುವುದು. ಇದಕ್ಕಾಗಿ 60 ಸಾವಿರ ಎಕರೆ ಭೂಮಿ ಸ್ವಾಧೀನ ಮಾಡಬೇಕಾಗಿದೆ. 27 ಹಳ್ಳಿಗಳು ಸ್ಥಳಾಂತರ ಆಗಬೇಕಾಗಿದೆ. ಬಾಗಲಕೋಟೆ, ರಾಯಚೂರು, ಯಾದಗಿರಿ, ಕಲಬುರಗಿ, ವಿಜಯಪುರ, ಕೊಪ್ಪಳ ಜಿಲ್ಲೆಗಳಿಗೆ ಅನುಕೂಲವಾಗುವ ಯೋಜನೆ ಇದಾಗಿದೆ. ಆರಂಭದಲ್ಲಿ 16 ಸಾವಿರ ಕೋಟಿ ರೂ.ಗಳಿದ್ದ ಯೋಜನಾ ವೆಚ್ಚ ಈಗ 60,000 ಕೋಟಿ ರೂ.ಗಳನ್ನು ದಾಟಿದೆ. ಕೃಷ್ಣಾ ನ್ಯಾಯಾಧಿಕರಣದಲ್ಲಿ ಮಂಜೂರಾಗಿರುವ ನೀರನ್ನು ಬಳಸಿಕೊಳ್ಳಬೇಕಿದೆ.
ಎರಡು ಹಂತದಲ್ಲಿ ಅನುಷ್ಠಾನವಾಗಬೇಕಾದ ಯೋಜನೆ. ಮೊದಲ ಹಂತದಲ್ಲಿ ತುಂಗಾದಿಂದ ಭದ್ರಾಕ್ಕೆ 17.40 ಟಿಎಂಸಿ ನೀರು ತರುವುದು. ಎರಡನೇ ಹಂತದಲ್ಲಿ 29.90 ಟಿಎಂಸಿ ನೀರು ತರುವುದು. ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳ 2.25 ಲಕ್ಷ ಹೆಕ್ಟೇರ್ ನೀರಾವರಿಗೆ ಒಳಪಡಿ ಸಲು 367 ಕೆರೆ ತುಂಬಿಸುವುದು. 2008 ರಲ್ಲಿ 500 ಕೋಟಿ ರೂ.ಗಳಿದ್ದ ಯೋಜನಾ ವೆಚ್ಚ ಈಗ 16,125 ಕೋಟಿ ರೂ.ಗೇರಿದೆ. ಈವರೆಗೆ 4565 ಕೋಟಿ ರೂ. ವೆಚ್ಚವಾಗಿದೆ. ಅಂತಾರಾಜ್ಯ ಸಮಸ್ಯೆ ಇಲ್ಲ. ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ಇದೆ.
ಬರಪೀಡಿತ ಜಿಲ್ಲೆಗಳಿಗೆ ನೀಡುವ ಯೋಜನೆ ಇದಾಗಿದೆ. 8 ವರ್ಷದಿಂದ ಕುಂಟುತ್ತ ಸಾಗುತ್ತಿದೆ. 24.01 ಟಿಎಂಸಿ ನೀರನ್ನು ಕುಡಿಯುವ ನೀರಿನ ಸಲುವಾಗಿ ತರಲಾಗುತ್ತದೆ. ಈ ಯೋಜನೆಯ ಮೊದಲ ಹಂತಕ್ಕೆ 3527.17 ಕೋಟಿ ರೂ.ಗಳು ಹಾಗು ಎರಡನೇ ಹಂತಕ್ಕೆ 9385.17 ಕೋಟಿ ರೂ.ಗಳ ಅಗತ್ಯವಿದೆ ಎಂದು 2014ರಲ್ಲಿ ಅಂದಾಜು ಮಾಡಲಾಗಿತ್ತು. ಆದರೆ ಯೋಜನಾ ವೆಚ್ಚ ಹೆಚ್ಚಾಗುತ್ತದೆ. ಇದರಿಂದ 12,702 ಎಕರೆ ನೀರಾವರಿ ಆಗುತ್ತದೆ.
ಅವಿಭಜಿತ ಮೈಸೂರು ಜಿಲ್ಲೆಗಾಗಿ 1980 ರಲ್ಲಿ ರೂಪಿಸಿದ್ದ ಯೋಜನೆ ಕಬಿನಿ ಎರಡನೇ ಹಂತ. ತಮಿಳುನಾಡಿಗೆ ಹರಿಯುವ ನೀರನ್ನು ಬಿಟ್ಟು 60 ಟಿಎಂಸಿ ನೀರನ್ನು ಬಳಸಿಕೊಂಡು 4000 ಎಕರೆ ನೀರಾವರಿ ಮಾಡಬಹುದಾಗಿದೆ. ಈ ಯೋಜನೆಗೆ ತಮಿಳುನಾಡಿನ ವಿರೋಧವಿದೆ.
ಹಾಸನ ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಹೋಬಳಿ ಗಳಿಗೆ ಕುಡಿಯುವ ನೀರು ನೀಡುವುದು. ಆದರೆ ಹಣಕಾಸಿನ ಕೊರತೆ ಇದೆ.
ಮಾರ್ಕಂಡೇಯ ಯೋಜನೆ, ಗುತ್ತಿ, ರಂದೊಳ್ಳಿ, ಪಣಗುತ್ತಿಗಳಲ್ಲಿ ಭೂ ಸ್ವಾಧೀನ ಆಗಬೇಕಾಗಿದೆ. ಮುಂಡರಗಿಯ ಸಿಂಗಟಾಲೂರು ಬಲದಂಡೆ, ಬಬಲೇಶ್ವರ ಏತ ನೀರಾವರಿ, ಮುಳವಾಡ ಏತ ನೀರಾವರಿ, ತುಂಗಾ ಮೇಲ್ದಂಡೆಯ ಮೂಲಕ ಶಿವಮೊಗ್ಗ ಜಿಲ್ಲೆ ಕೆರೆಗಳನ್ನು ತುಂಬಿಸುವುದು, ತುಪ್ಪರಿಹಳ್ಳ, ಕೆಸಿ ವ್ಯಾಲಿ, ಮಲಪ್ರಭಾ, ಗೊಂದಿಹಳ್ಳ, ಕರಗಡ, ಮಳಟೂರು ಏತಾ ನೀರಾವರಿ, ನವಲಿ ಬಳಿ ಸಮಾುನಾಂತರ ಜಲಾಶಯ. ಕೃಷ್ಣಾದಲ್ಲಿಯೇ 40 ವಿವಿಧ ಯೋಜನೆಗಳು ಜಾರಿಯಾಗಬೇಕಾಗಿದೆ.
ನದಿ ಜೋಡಣೆ:ಗೋದಾವರಿ-ಮಹಾನದಿ-ಕೃಷ್ಣಾ- ಕಾವೇರಿ ನದಿ ಜೋಡಣೆಯಲ್ಲಿ 1980ರಲ್ಲಿ 283 ಟಿಎಂಸಿ ಇದ್ದು, 2010ರಲ್ಲಿ ಕರ್ನಾಟಕದ ಪಾಲು ರದ್ದಾಗಿದೆ. ಅದನ್ನು ಪಡೆದರೆ ಸುಮಾರು 40 ಟಿಎಂಸಿ ಸಿಗಬಹುದು. ಅದನ್ನು ಪಡೆದು ಅನುಷ್ಠಾನ ಮಾಡುವ ಪ್ರಯತ್ನ ಮಾಡಬೇಕಾಗಿದೆ.
ಬೇಡ್ತಿ- ವರದಾ, ಬೇಡ್ತಿ-ಅಘನಾಶಿನಿ, ಕಾರ್ಯಸಾಧ್ಯತಾ ವರದಿ ಸಿದ್ಧವಾಗಬೇಕಾಗಿದೆ. ರಾಜ್ಯಕ್ಕೆ ಅನುಕೂಲವಾಗುವ ಕೃಷ್ಣಾ-ಪೆನ್ನಾರ್, ಬೇಡ್ತಿ -ವರದಾ 0.60 ಲಕ್ಷ ಹೆಕ್ಟೇರ್ ನೀರಾವರಿ, ನೇತ್ರಾವತಿ-ಹೇಮಾವತಿ 0.34 ಲಕ್ಷ ಹೆಕ್ಟೇರ್ ನೀರಾವರಿ ಆಗುವ ಯೋಜನೆಗಳ ಕಡೆ ಗಮನ ಹರಿಸಬೇಕಾಗಿದೆ.

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × two =
Remember me
