ಬೆಂಗಳೂರು: ವರ್ಷದ ಹಿಂದೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಅಧ್ಯಕ್ಷರನ್ನು ನೇಮಕ ಮಾಡುವಾಗ ನಿಯಮಗಳನ್ನು ಪಾಲಿಸದೆ ರಾಜಕೀಯ ಒತ್ತಡಕ್ಕೆ ಮಣಿಯಲಾಗಿದೆ ಎಂಬ ಅಂಶ ಬಯಲಾಗಿದೆ.
ಸರ್ಕಾರ ಇತ್ತೀಚೆಗೆ ತಾರಾ ಅನುರಾಧಾ ಅವರನ್ನು ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಲು ಮುಂದಾದಾಗ ಒಂದಷ್ಟು ಕಾನೂನು ತೊಡಕು, ತಾಂತ್ರಿಕ ಸಮಸ್ಯೆ ಕಾರಣಕ್ಕೆ ತಡೆಹಿಡಿಯಲಾಗಿತ್ತು. ಹಾಗಿದ್ದರೆ, 2018ರಲ್ಲಿ ನಡೆದ ನೇಮಕ ಪ್ರಕ್ರಿಯೆ ಯಾವ ಆಧಾರದಲ್ಲಿ ಎಂದು ಕೆದಕಿದಾಗ ಹುಳುಕು ಬಯಲಾಗಿದೆ.
ಕೇಂದ್ರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧಿನಿಯಮ 2005ರ ಪರಿಚ್ಛೇದ 18ರ ಅನ್ವಯ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಯಮ 2010ರ ನಿಯಮ 3ರಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಡಾ. ಆಂಟೋನಿ ಸೆಬಾಸ್ಟಿಯನ್ ಅವರನ್ನು 2018ರ ಡಿ. 6ರಂದು 3 ವರ್ಷಗಳ ಅವಧಿಗೆ ನೇಮಕ ಮಾಡಲಾಗಿತ್ತು. ಈ ನೇಮಕಕ್ಕೆ ಮುನ್ನ2018ರ ನ.16ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು.
ಹುದ್ದೆಗೆ 2018ರ ಆ.14ರಂದು ಅರ್ಜಿ ಆಹ್ವಾನಿಸಲಾಗಿತ್ತು. ಒಟ್ಟು 45 ಅರ್ಜಿಗಳು ಬಂದಿದ್ದು, ಮೂರು ಅರ್ಜಿಗಳು ಅವಧಿ ಮುಗಿದ ನಂತರ ಸಲ್ಲಿಕೆಯಾಗಿತ್ತು. ನಂತರ ಅಧ್ಯಕ್ಷರು ಹಾಗೂ ಸದಸ್ಯರನ್ನು ಆಯ್ಕೆ ಮಾಡಲು ಸಮಿತಿ ರಚಿಸಲಾಯಿತು. ನ.16ರಂದು ಸಭೆ ಸೇರಿ ಆಯ್ಕೆಗೆ ಮಾನದಂಡ ನಿಗದಿ ಮಾಡಲಾಯಿತು. ಮಕ್ಕಳ ಹಕ್ಕುಗಳ, ಮಕ್ಕಳ ರಕ್ಷಣೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ 5 ವರ್ಷದ ಅನುಭವ ಮತ್ತು ಅರ್ಜಿ ದಿನಾಂಕಕ್ಕೆ ಅರ್ಜಿದಾರರು 62 ವರ್ಷ ಪೂರೈಸದವರನ್ನು ಅರ್ಹರೆಂದು ಪರಿಗಣಿಸಲು ನಿರ್ಧರಿಸಲಾಯಿತು. 19 ಅರ್ಜಿಗಳು ಅಧ್ಯಕ್ಷರ ಹುದ್ದೆಗೆ ಅರ್ಹವೆಂದೂ, 26 ಅನರ್ಹವೆಂದು ನಿರ್ಧರಿಸಲಾಯಿತು. ಮಕ್ಕಳ ಹಕ್ಕು, ಶಿಕ್ಷಣ, ಸಾಮಾಜಿಕ ಕ್ಷೇತ್ರ, ಸಮಾಜ ಸೇವೆ, ನ್ಯಾಯಾಂಗ ಕ್ಷೇತ್ರದಲ್ಲಿ ಸೇವೆ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ಅನುಭವ ಹೊಂದಿದವರನ್ನು ಪರಿಗಣಿಸಿ ಆಯ್ಕೆ ಮಾಡಲು ತೀರ್ವನಿಸಲಾಗಿತ್ತು.
ವಿಜಯವಾಣಿಗೆ ಲಭ್ಯವಾದ ಮಾಹಿತಿ ಪ್ರಕಾರ ಪ್ರಸ್ತುತ ಅಧ್ಯಕ್ಷರ ಹೆಸರು ಅಂತಿಮ ಪಟ್ಟಿಯಲ್ಲಿ ಇರಲೇ ಇಲ್ಲ. 19 ಅರ್ಹರ ಪೈಕಿ ಒಬ್ಬರು ದಾಖಲೆ ಕೊಟ್ಟಿರಲಿಲ್ಲ. ಉಳಿದ 18ರ ಪೈಕಿ ಮೂರು ಹೆಸರನ್ನು ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಆ ಮೂರು ಹೆಸರಲ್ಲಿ ಇವರು ಹೆಸರು ಇರಲಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.
ಅರ್ಹತಾ ಪಟ್ಟಿಯಲ್ಲಿ ಇದ್ದವರಿಗೆ ಅಚ್ಚರಿ
ಮಾಜಿ ಕೈಗಾರಿಕೆ ಸಚಿವರ ಒತ್ತಡಕ್ಕೆ ಮಣಿದು ಈ ನೇಮಕ ಮಾಡಲಾಗಿತ್ತು ಎನ್ನಲಾಗಿದೆ. ಇನ್ನೂ ಮಹತ್ವದ ವಿಚಾರವೆಂದರೆ ಮುಖ್ಯಮಂತ್ರಿ ಕಚೇರಿಯು ಇವರ ಹೆಸರನ್ನು ಮರುಪರಿಶೀಲಿಸುವಂತೆ ಅಂದಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೂಚಿಸಿತ್ತು. ಮಕ್ಕಳ ಹಕ್ಕು ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಇದ್ದವರೂ, ಈ ಹಿಂದೆ ಅಧ್ಯಕ್ಷರಾಗಿದ್ದವರ ಹೆಸರುಗಳು ಪಟ್ಟಿಯಲ್ಲಿತ್ತು. ಅಂತಿಮವಾಗಿ ಸರ್ಕಾರದ ತೀರ್ಮಾನ ಹೊರಬಿದ್ದಾಗ ಅರ್ಹತಾ ಪಟ್ಟಿಯಲ್ಲಿದ್ದವರು ಸಹ ಅಚ್ಚರಿ ಪಟ್ಟಿದ್ದರು. ಇದೀಗ ಮಹಿಳಾ ಮತ್ತು
ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ವಿಚಾರಿಸಿದರೆ, ಆ ಬಗ್ಗೆ ನಮಗೆ ಮಾಹಿತಿ ಇಲ್ಲ ಎನ್ನುತ್ತಾರೆ. ಆದರೆ, ಇದೀಗ ಅವರ ಕಾರ್ಯ ನಿರ್ವಹಣೆ ಬಗ್ಗೆ ಒಂದಷ್ಟು ದೂರು ಬಂದಿರುವ ಬಗ್ಗೆ ವಿವರಣೆ ನೀಡಿದ್ದಾರೆ. ಹಾಲಿ ಅಧ್ಯಕ್ಷರು ಹಾಜರಿ ನಿರ್ವಹಿಸಿಲ್ಲ, ಪ್ರವಾಸ ವೇಳಾಪಟ್ಟಿ ದಾಖಲಿಸಿಲ್ಲ, ರಜೆ ಹಾಕಿದರೂ ತಿಳಿಸುತ್ತಿಲ್ಲ, ಕಾರ್ಯಕ್ರಮಗಳಿಗೆ ಬಳಸಬೇಕಾದ ಯೂನಿಸೆಫ್ ಹಣವನ್ನು ಪ್ರವಾಸಕ್ಕಾಗಿ ವೆಚ್ಚ ಮಾಡಿದ್ದಾರೆ, ಇನ್ನೂ ಪ್ರಮುಖವಾಗಿ ಬೆಳಗ್ಗೆ 10ರಿಂದ 5ರವರೆಗೆ ಸಾರ್ವಜನಿಕರಿಗೆ ಲಭ್ಯರಿರಬೇಕೆಂದಿದೆ, ಅದನ್ನೂ ಪಾಲಿಸುತ್ತಿಲ್ಲ ಎಂಬ ದೂರುಗಳಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
