ಬೆಂಗಳೂರು:ಕರೊನಾ ಸೋಂಕಿತರೊಂದಿಗೆ ನೇರ ಸಂಪರ್ಕವಿಲ್ಲದಿದ್ದರೂ ಚಳಿ, ಜ್ವರ, ಉಸಿರಾಟದ ತೊಂದರೆ (ಐಎಲ್​ಐ), ನೆಗಡಿ,ಕೆಮ್ಮು (ಸಾರಿ) ಕಾರಣಗಳ ಮೂಲಕ ಸೋಂಕು ಪತ್ತೆಯಾಗುತ್ತಿರುವರ ಸಂಖ್ಯೆ ಬೆಂಗಳೂರಿನಲ್ಲಿ ಪೂರ್ಣ ರೂಪದಲ್ಲಿ ವರದಿಯಾಗದೆ ಸೋಂಕಿನ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಐಎಲ್​ಐ, ಸಾರಿಯಂತಹ ರೋಗಿಗಳ ವಿವರವನ್ನು ಸರ್ಕಾರದ ವೆಬ್​ಸೈಟ್​ಗೆ ಕಡ್ಡಾಯವಾಗಿ ಅಪ್​ಲೋಡ್ ಮಾಡಬೇಕೆಂಬ ನಿಯಮವನ್ನು ಅನೇಕ ಆಸ್ಪತ್ರೆಗಳು ಹಾಗೂ ಔಷಧ ಅಂಗಡಿಗಳು ಪಾಲನೆ ಮಾಡದಿರುವುದು ಒಂದು ಕಾರಣವಾದರೆ, ಅಂತಹ ರೋಗಿಗಳಿಂದ ಹಣ ಪಡೆದು ಆರೋಗ್ಯ ಸಿಬ್ಬಂದಿ ಕರೊನಾ ಪರೀಕ್ಷೆ ನಡೆಸದೆ ಕೈಬಿಡುತ್ತಿದ್ದಾರೆ. ಅಂತಿಮ ಹಂತದಲ್ಲಿ ಕರೊನಾ ಚಿಕಿತ್ಸೆಗೆ ಒಳಪಡುವ ಇಂತಹ ರೋಗಿಗಳು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗುತ್ತಿದ್ದಾರೆ. ಈ ಕುರಿತು ಕ್ರಮಕ್ಕೆ ಮುಂದಾಗಿರುವ ಸರ್ಕಾರ, ನಗರದ ಒಂದು ಮೆಡಿಕಲ್ ಸ್ಟೋರ್​ನಲ್ಲಿ ಮಾರಾಟ ಸ್ಥಗಿತಕ್ಕೆ ಆದೇಶಿಸಿದೆ.
ಪ್ರಾರಂಭದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದವರನ್ನಷ್ಟೇ ಪರೀಕ್ಷೆಗೊಳಪಡಿಸುತ್ತಿದ್ದ ಸರ್ಕಾರ, ಖಾಸಗಿ ಆಸ್ಪತ್ರೆಗಳಿಗೆ ಬರುವವರನ್ನೂ ಪರೀಕ್ಷೆಗೆ ಒಳಪಡಿಸಲು ಏಪ್ರಿಲ್​ನಲ್ಲಿ ನಿರ್ಧಾರ ಮಾಡಿತ್ತು. ಚಳಿ, ಜ್ವರ, ಉಸಿರಾಟದ ತೊಂದರೆಯಂತಹ ರೋಗಿಗಳು ಬಂದರೆ ಅವರ ಹೆಸರು, ದೂರವಾಣಿ ಸಂಖ್ಯೆ, ವಯಸ್ಸನ್ನು ಡಿಡಿಡಿ.kಟಞಛಿ.kಚ್ಟ್ಞಠಿಚkಚ.ಠಿಛ್ಚಿಜ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡುವುದನ್ನು ಕಡ್ಡಾಯ ಮಾಡಿತ್ತು. ಆಸ್ಪತ್ರೆಗಳ ಜತೆಗೆ ಮೆಡಿಕಲ್ ಸ್ಟೋರ್​ಗಳಲ್ಲಿ ಪ್ಯಾರಾಸಿಟಮಲ್, ಕೆಮ್ಮು ಕಷಾಯ ಪಡೆದವರ ಮಾಹಿತಿಯನ್ನೂ ಪ್ರತಿದಿನ ಈ ವರದಿಯನ್ನು ಅಪ್​ಲೋಡ್ ಮಾಡಲು ತಿಳಿಸಿತ್ತು. ಬೆಸ್ಕಾಂ ಸಿಬ್ಬಂದಿಯನ್ನು ಬಳಸಿಕೊಂಡು ಎಲ್ಲ ಆಸ್ಪತ್ರೆ, ಮೆಡಿಕಲ್ ಸ್ಟೋರ್​ಗಳಿಗೆ ವೆಬ್​ಸೈಟ್​ಗೆ ಅಪ್​ಲೋಡ್ ಮಾಡಲು ಲಾಗಿನ್ ಐಡಿ ಹಾಗೂ ಪಾಸ್​ವರ್ಡ್ ನೀಡಲಾಗಿದೆ.
ಅಂತಿಮ ಹಂತದ ಚಿಕಿತ್ಸೆ
ಕರೊನಾ ಸೋಂಕು ತಗುಲಿದ್ದರೂ ಅನೇಕರು ಸಾಮಾನ್ಯ ಮಾತ್ರೆಗಳನ್ನು ಪಡೆದು ಗುಣಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸೋಂಕು ತೀವ್ರಗೊಂಡಾಗ ಅನಿವಾರ್ಯವಾಗಿ ಪರೀಕ್ಷೆಗೆ ಒಳಪಡುತ್ತಾರೆ. ಸೋಂಕು ದೃಢಪಟ್ಟು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಆರಂಭಿಸುವ ವೇಳೆಗೆ ಸೋಂಕು ತೀವ್ರವಾಗಿರುತ್ತದೆ. ಇದರಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಕರೊನಾ ಪ್ರಾರಂಭಿಕ ಹಂತದಲ್ಲೆ ಪತ್ತೆಯಾದರೆ ಗುಣಮುಖವಾಗುವ ಪ್ರಮಾಣವೂ ಹೆಚ್ಚಾಗಿರುತ್ತದೆ. ಬೆಂಗಳೂರಿನಲ್ಲಿ ಶೇ.25 ಇಂತಹ ರೋಗಿಗಳು ಇರುವ ಅಂದಾಜಿದೆ ಎಂದು ಬಿಬಿಎಂಪಿಯ ಆರೋಗ್ಯಾಧಿಕಾರಿಯೊಬ್ಬರು ಹೇಳಿದ್ದಾರೆ.
ಅಪ್​ಲೋಡ್ ಮಾಡುವಲ್ಲಿ ವಿಫಲ
ಅನೇಕ ದೊಡ್ಡ ಹಾಗೂ ಸಣ್ಣ ಆಸ್ಪತ್ರೆಗಳು ಪ್ರಾಮಾಣಿಕವಾಗಿ ಮಾಹಿತಿಯನ್ನು ಅಪ್​ಲೋಡ್ ಮಾಡುತ್ತಿವೆ. ಆದರೆ, ಕೆಲ ಆಸ್ಪತ್ರೆಗಳಿಗೆ ಭೇಟಿ ನೀಡುವ ಪ್ರತಿಷ್ಠಿತರು, ತಮ್ಮ ಮಾಹಿತಿಯನ್ನು ಸರ್ಕಾರದ ವೆಬ್​ಸೈಟ್​ಗೆ ಅಪ್​ಲೋಡ್ ಮಾಡದಂತೆ ಮನವಿ ಹಾಗೂ ಒತ್ತಡ ಹೇರುತ್ತಿದ್ದಾರೆ. ತಮ್ಮ ಆಸ್ಪತ್ರೆಯ ರೋಗಿಗಳು ಬೇಸರಪಟ್ಟುಕೊಳ್ಳುತ್ತಾರೆ ಎಂಬ ಕಾರಣಕ್ಕೆ ಆಸ್ಪತ್ರೆಯವರು ನಮೂದಿಸುತ್ತಿಲ್ಲ. ಇನ್ನು, ಮಾಹಿತಿ ಅಪ್​ಲೋಡ್ ಮಾಡಲಾದ ರೋಗಿಗಳನ್ನು ಆರೋಗ್ಯ ಸಿಬ್ಬಂದಿ ಸಂರ್ಪಸುತ್ತಾರೆ. ಈ ವೇಳೆ ಸೋಂಕಿನ ಗುಣಲಕ್ಷಣ ಕಂಡುಬಂದರೆ ಮೊದಲಿಗೆ 7 ದಿನ ಮನೆಯಲ್ಲೆ ಕ್ವಾರಂಟೈನ್ ಮಾಡಬೇಕು. ನಂತರವೂ ಗುಣಲಕ್ಷಣ ಕಡಿಮೆ ಆಗದಿದ್ದರೆ ಕರೊನಾ ಪರೀಕ್ಷೆ ನಡೆಸಬೇಕು. ಆದರೆ, ಅನೇಕ ಆರೋಗ್ಯ ಸಿಬ್ಬಂದಿಗೆ ರೋಗಿಗಳು ಲಂಚ ನೀಡುತ್ತಿದ್ದಾರೆ. ತಮ್ಮನ್ನು ಕ್ವಾರಂಟೈನ್ ಮಾಡದಂತೆ ಮನವೊಲಿ ಸುತ್ತಿದ್ದಾರೆ ಎಂದು ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಭಯವೇ ಕಾರಣ
ಕರೊನಾ ಸೋಂಕು ತಗುಲಿದೆ ಎಂದು ಸುತ್ತಮುತ್ತಲಿನವರಿಗೆ, ಕುಟುಂಬಸ್ಥರಿಗೆ ಹಾಗೂ ಉದ್ಯೋಗ ಸ್ಥಳದಲ್ಲಿರುವವರಿಗೆ ತಿಳಿದರೆ ಅವಮಾನ ಎಂಬ ಆತಂಕ ಅನೇಕರಲ್ಲಿರುವುದೇ ಇದಕ್ಕೆ ಕಾರಣ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. ಯಾರಲ್ಲೇ ಕರೊನಾ ಪತ್ತೆಯಾದರೂ ಅವರನ್ನು ಕೀಳಾಗಿ ಕಾಣಬಾರದು. ಸಾಧ್ಯವಾದರೆ ಧೈರ್ಯ ತುಂಬಿ ಗುಣಮುಖರಾಗಲು ಉತ್ತೇಜಿಸಬೇಕು. ಇಲ್ಲದಿದ್ದಲ್ಲಿ ಅದೇ ರೋಗಿಗಳು ಹೊರಗಡೆ ಸಂಚರಿಸುತ್ತ ರೋಗವನ್ನು ಪಸರಿಸಲು ಕಾರಣವಾದಂತಾಗುತ್ತದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಮೆಡಿಕಲ್ಸ್ ಮಳಿಗೆಗೆ ನೋಟಿಸ್ ಜಾರಿ
ಎಲ್ಲ ವೈದ್ಯಕೀಯ ಸಂಸ್ಥೆಗಳು ಹಾಗೂ ಮೆಡಿಕಲ್ ಸ್ಟೋರ್​ಗಳಿಗೆ ಮಾಹಿತಿ ನೀಡಿದ್ದರೂ ಅಪ್​ಲೋಡ್ ಮಾಡದ ಕಾರಣಕ್ಕೆ ಬೆಂಗಳೂರಿನ ಮೆಡಿಕಲ್ ಸ್ಟೋರ್​ಗೆ ನೋಟಿಸ್ ಜಾರಿ ಮಾಡಿರುವ ಔಷಧ ನಿಯಂತ್ರಣ ಇಲಾಖೆ, 5 ದಿನ ಕಾಲ ಪರವಾನಗಿ ಅಮಾನತು ಮಾಡಿದೆ. ಮೇ 7ರಂದೇ ಲಾಗಿನ್ ಐಡಿ ಹಾಗೂ ಪಾಸ್​ವರ್ಡ್ ನೀಡಲಾಗಿದ್ದು, ಕರೆ ಮೂಲಕವೂ ಸೂಚನೆ ನೀಡಲಾಗಿತ್ತು. ಆದರೂ, ಇಲ್ಲಿವರೆಗೆ ಮಾಹಿತಿ ಅಪ್​ಲೋಡ್ ಮಾಡದಿರುವ ಕಾರಣಕ್ಕೆ ಔಷಧ ಮಾರಾಟ ಮಾಡಬಾರದು ಎಂದು ಬನಶಂಕರಿ ಎರಡನೇ ಹಂತದ ಕದಿರೇನಹಳ್ಳಿಯ ಸೌಜನ್ಯ ಮೆಡಿಕಲ್ಸ್​ಗೆ ಇಲಾಖೆ ಆದೇಶ ನೀಡಿದೆ.
| ರಮೇಶ ದೊಡ್ಡಪುರ
ವ್ಯಸನದ ಸುಳಿಗೆಸಿಲುಕದಿರಿ….!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − seven =
Remember me
