ಮೃತ್ಯುಂಜಯ ಕಪಗಲ್ ಬೆಂಗಳೂರುಲೋಕಸಭೆ ಚುನಾವಣೆ ಬೆನ್ನಲ್ಲೇ ರಾಜ್ಯ ಸರ್ಕಾರಕ್ಕೆ ಸರ್ಕಾರಿ ನೌಕರರನ್ನು ಸಂತೃಪ್ತಿ ಪಡಿಸುವ ಅಗ್ನಿಪರೀಕ್ಷೆ ಎದುರಾಗಿದೆ. ಏಳನೇ ವೇತನ ಆಯೋಗದ ಶಿಫಾರಸು ಹಾಗೂ ವರದಿ ಜಾರಿಗೆ ನೌಕರರು ಬಿಗಿ ಪಟ್ಟು ಹಿಡಿದಿರುವುದರಿಂದ ಗುರುವಾರ (ಜು.4) ನಡೆಯಲಿರುವ ಸಚಿವ ಸಂಪುಟ ಸಭೆ ಮೇಲೆ ಇಡೀ ರಾಜ್ಯದ ದೃಷ್ಟಿ ನೆಟ್ಟಿದೆ. ಒಂದೊಮ್ಮೆ ತಮ್ಮ ಬೇಡಿಕೆ ಈಡೇರದಿದ್ದಲ್ಲಿ ಜು.7ರ ಕಾರ್ಯಕಾರಿಣಿಯಲ್ಲಿ ನೌಕರರು ಸರ್ಕಾರದ ವಿರುದ್ಧ ಕಹಳೆ ಮೊಳಗಿಸುವ ಸಾಧ್ಯತೆಯೂ ಗೋಚರಿಸಿದೆ. ಹಣಕಾಸು ಖಾತೆ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವೊಲಿಸಲು ಸರ್ಕಾರಿ ನೌಕರರರು ಸಮಾವೇಶ, ನಿಯೋಗದ ಭೇಟಿ, ನಿವೇದನೆಯಂತಹ ಎಲ್ಲ ಹಂತ ಪೂರ್ಣಗೊಳಿಸಿದ್ದಾರೆ. ಪ್ರತಿ ಭೇಟಿಯಲ್ಲೂ ಸಿದ್ದರಾಮಯ್ಯ ಭರವಸೆ ನೀಡುತ್ತಾರಾದರೂ ಎಂದು, ಯಾವಾಗ, ಎಷ್ಟು ? ಎಂಬ ಪ್ರಶ್ನೆಗಳಿಗೆ ನಿಖರ, ಸ್ಪಷ್ಟ ಉತ್ತರ ನೀಡಿಲ್ಲವೆಂಬ ಬೇಸರ ನೌಕರ ವೃಂದದಲ್ಲಿದೆ.
ಲೋಕಸಭೆ, ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ತೆರವಾಗಿ ತಿಂಗಳು ಸಮೀಪಿಸುತ್ತಿದೆ. ಆದರೂ ಆರ್ಥಿಕ ಇಲಾಖೆ ಮಟ್ಟದಲ್ಲಿ ಏನು ನಡೆಯುತ್ತಿದೆ ಎಂಬ ಸುಳಿವು ನೌಕರ ಸಮೂಹಕ್ಕೆ ಸಿಕ್ಕಿಲ್ಲ. ನಿವೃತ್ತ ಐಎಎಸ್ ಅಧಿಕಾರಿ ಸುಧಾಕರ್ ರಾವ್ ನೇತೃತ್ವದ ಏಳನೇ ವೇತನ ಆಯೋಗ ಶಿಫಾರಸುಗಳ ಸಹಿತ ವರದಿಯನ್ನು ಮಾ.16ಕ್ಕೆ ಸಲ್ಲಿಸಿದೆ. ಮೂಲ ವೇತನದಲ್ಲಿ ಶೇಕಡ 27.50 ವೇತನ ಹೆಚ್ಚಳ, ಕನಿಷ್ಠ ವೇತನ 17 ಸಾವಿರ ರೂ.ಗಳಿಂದ 27 ಸಾವಿರ ರೂ.ಗಳಿಗೆ ಸೇರಿ ಹಲವು ಶಿಫಾರಸುಗಳು ಈ ವರದಿಯಲ್ಲಿವೆ. ಬಿಜೆಪಿ ಸರ್ಕಾರವಿದ್ದಾಗ ಸಿಎಂ ಬಸವರಾಜ ಬೊಮ್ಮಾಯಿ ನೌಕರರ ಬೇಡಿಕೆಗೆ ಸ್ಪಂದಿಸಿ, ಏಳನೇ ವೇತನ ಆಯೋಗ ರಚಿಸಿದ್ದರು. ಜತೆಗೆ 2023ರ ಏಪ್ರಿಲ್​ನಿಂದ ಜಾರಿಯಾಗುವಂತೆ ಶೇ.17ರ ಮಧ್ಯಂತರ ಪರಿಹಾರ ಘೋಷಿಸಿ ಆದೇಶ ಹೊರಡಿಸಿದ್ದರು. ಏಳನೇ ವೇತನ ಆಯೋಗದ ಶಿಫಾರಸು ಪ್ರಕಾರ ಮಧ್ಯಂತರ ಪರಿಹಾರದಲ್ಲಿ ಶೇ.10.5ರಷ್ಟು ವಿಲೀನ ಮಾಡಿ ಶೇ.27.50ರಷ್ಟು ಮೂಲ ವೇತನ ಪರಿಷ್ಕರಿಸಬೇಕಾಗುತ್ತದೆ.
ಕ್ರೋಡೀಕರಣ ಸವಾಲು:ವರದಿ ಪ್ರಕಾರ ಮೂಲ ವೇತನ ಶೇ.27.50ರಷ್ಟು ಪರಿಷ್ಕರಿಸಿದರೆ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 17,440 ಕೋಟಿ ರೂ. ಹೆಚ್ಚುವರಿ ಭಾರ ಬೀಳುವ ಅಂದಾಜಿದೆ. ಸಿಎಂ ಸಿದ್ದರಾಮಯ್ಯ, 2024-25ರ ಬಜೆಟ್​ನಲ್ಲಿ ಏಳನೇ ವೇತನ ಆಯೋಗದ ಜಾರಿಗಾಗಿ 15 ಸಾವಿರ ಕೋಟಿ ರೂ. ಕಾದಿರಿಸಿದ್ದಾರೆ. ಮೂಲ ವೇತನ ಪರಿಷ್ಕರಣೆ, ಕನಿಷ್ಠ ವೇತನ 27 ಸಾವಿರ ರೂ.ಗಳಿಗೆ ಏರಿಸಿದರೆ ಹೆಚ್ಚುವರಿಯಾಗಿ ವಾರ್ಷಿಕ 7,408.79 ಕೋಟಿ ರೂ., ವಿವಿಧ ಭತ್ಯೆಗಳ ವೆಚ್ಚ ಭರಿಸಲು 3,791.43 ಕೋಟಿ ರೂ., ಪಿಎಫ್ ವಂತಿಗೆ 530.45, ಮರಣ ಹಾಗೂ ನಿವೃತ್ತಿ ಉಪದಾನ 1,083.56 ಕೋಟಿ ರೂ. ರಜೆ ನಗದೀಕರಣ ವೆಚ್ಚ 241.02 ಕೋಟಿ ರೂ. ಹೆಚ್ಚುವರಿಯಾಗಿ ಬೇಕಾಗುತ್ತದೆ. ಅಲ್ಲದೆ ನಿವೃತ್ತರ ಪಿಂಚಣಿ ಪರಿಷ್ಕರಣೆ, ಕುಟುಂಬ ಪಿಂಚಣಿ, ವೈದ್ಯಕೀಯ ಸೌಲಭ್ಯಕ್ಕೆ 1,255 ಕೋಟಿ ರೂ., ಅನುದಾನಿತ ಸಂಸ್ಥೆಗಳ ವೇತಾನುದಾನ 2,599.30 ಕೋಟಿ ರೂ. ಹೆಚ್ಚುವರಿಯಾಗಿ ಬೇಕಾಗಲಿದೆ ಎಂದು ಆರ್ಥಿಕ ಇಲಾಖೆ ಮೂಲಗಳು ಅಂದಾಜಿಸಿವೆ.
ಸಚಿವರ ಒಡಕು ಧ್ವನಿ:ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವೇತನ ಆಯೋಗದ ವರದಿ ಜಾರಿ ಬಗ್ಗೆ ಅನೌಪಚಾರಿಕ ಚರ್ಚೆಯಾಗಿದೆ. ಜಾರಿ ಬೇಡ, ಶಿಫಾರಸಿನಲ್ಲಿ ಕಡಿತ ಮಾಡಿ, ಪೂರ್ತಿ ಜಾರಿ ಸೂಕ್ತವೆಂದು ಒಡಕು ಧ್ವನಿ ಕೇಳಿಬಂದಿದ್ದರೆ, ಸಿಎಂ ಸಿದ್ದರಾಮಯ್ಯ ಎಲ್ಲವನ್ನೂ ಆಲಿಸಿ ಮೌನವಾಗಿದ್ದರು ಎನ್ನಲಾಗಿದೆ. ಪರಿಷ್ಕರಣೆಗೆ ಸಿಎಂ ಒಲವಿರುವ ಕಾರಣಕ್ಕೆ ಆರ್ಥಿಕ ಇಲಾಖೆ ಪರಿಷ್ಕರಣೆ ಫ್ರೇಮ್ ವರ್ಕ್ ಸಿದ್ಧ ಮಾಡುತ್ತಿದೆ. ಹೆಚ್ಚು, ಕಡಿಮೆ ಅಥವಾ ನೌಕರರ ಬೇಡಿಕೆಯಂತೆ ಶೇ.30ರಷ್ಟು ನೀಡಲಿದೆಯೆ ? ಇತ್ಯಾದಿ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರವಿಲ್ಲ ಎನ್ನುತ್ತವೆ ಮೂಲಗಳು.
ಸಭೆಯತ್ತ ಎಲ್ಲರ ಚಿತ್ತ: ಜು.4ರಂದು ನಡೆಯಲಿರುವ ಸಚಿವ ಸಂಪುಟ ಸಭೆಯತ್ತ ನೌಕರರ ಚಿತ್ತ ಹರಿದಿದೆ. ವೇತನ ಪರಿಷ್ಕರಣೆ ವಿಚಾರದಲ್ಲಿ ಸರ್ಕಾರ ಸಕಾರಾತ್ಮಕವಾಗಿದೆ ಎಂಬುದು ನೌಕರರ ವಲಯದ ಭಾವನೆಯಾಗಿದೆ.
ಜಾರಿ ಯಾವಾಗ?:ಏಳನೇ ವೇತನ ಆಯೋಗದ ವರದಿ ಜಾರಿ ಯಾವಾಗ ಎಂಬ ಪ್ರಶ್ನೆಗೆ ಸದ್ಯ ಉತ್ತರ ಲಭಿಸಿಲ್ಲ. ಶೇ.27.50ರ ಜತೆಗೆ ಶೇ.2.50 ಫಿಟ್ಮೆಂಟ್ ಸೇರಿಸಿ ಮೂಲ ವೇತನದಲ್ಲಿ ಶೇ.30ರಷ್ಟು ಪರಿಷ್ಕರಿಸಬೇಕು ಎನ್ನುವ ನೌಕರರ ಮೊರೆಗೆ ಸರ್ಕಾರ ತುಟಿ ಬಿಚ್ಚಿಲ್ಲ.
ಎಷ್ಟೆಷ್ಟು ಖರ್ಚಿದೆ?:ಏಳನೇ ವೇತನ ಆಯೋಗದ ವರದಿ ಜಾರಿಗೆ ಮುಂದಾದರೆ ವಾರ್ಷಿಕ ಹೆಚ್ಚುವರಿಯಾಗಿ ಒಟ್ಟು 20 ಸಾವಿರ ಕೋಟಿ ರೂ. ವೆಚ್ಚವಾಗಲಿದೆ. ಅಲ್ಲದೆ, ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ. ಕಾದಿರಿಸಿದ್ದು, ಹೆಚ್ಚುವರಿಯಾಗಿ ಎಂಟು ಸಾವಿರ ಕೋಟಿ ರೂ. ವೆಚ್ಚವಾಗುವ ಸಾಧ್ಯತೆ ನಿಚ್ಚಳವಾಗಿದೆ. ಅಂದರೆ ರಾಜ್ಯ ಸರ್ಕಾರಕ್ಕೀಗ ಒಟ್ಟಾರೆ 28 ಸಾವಿರ ಕೋಟಿ ರೂ. ಹೆಚ್ಚುವರಿ ಕ್ರೋಡೀಕರಣ, ಅಭಿವೃದ್ಧಿಗೆ ಆರ್ಥಿಕ ಸಂಪನ್ಮೂಲ ಒದಗಿಸುವ ದೊಡ್ಡ ಸವಾಲು ಎದುರಾಗಿದೆ.
ಹೋರಾಟಕ್ಕೆ ನೌಕರರು ಸಜ್ಜು:ಸರ್ಕಾರದ ವಿಳಂಬ ನೀತಿ ಮುಂದುವರಿದರೆ ಹೋರಾಟ ನಡೆಸಲು ನೌಕರರು ಸಜ್ಜಾಗಿದ್ದಾರೆ. ಈಗಾಗಲೇ ಎಚ್ಚರಿಕೆ ಸಂದೇಶ ರವಾನಿಸಿದ್ದು, ಜು.4ರ ಸಚಿವ ಸಂಪುಟ ಸಭೆ ನಿರ್ಧಾರ ನೋಡಿಕೊಂಡು ಮುಂದಿನ ಹೆಜ್ಜೆಯಿಡಲು ಚಿಂತನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿಣಿ ಜು.7ಕ್ಕೆ ನಿಗದಿಯಾಗಿದೆ.
| ಸಿ.ಎಸ್.ಷಡಾಕ್ಷರಿ ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 − 3 =
Remember me
