ಬೆಂಗಳೂರು: ಇದೇ ತಿಂಗಳ 20ನೇ ತಾರೀಕಿನ ನಂತರ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ (ಐಟಿ, ಬಿಟಿ) ಶೇ. 50ರಷ್ಟು ಸಿಬ್ಬಂದಿ ಕಚೇರಿಗೆ ತೆರಳಿ ಕಾರ್ಯ ನಿರ್ವಹಿಸಲು ಅವಕಾಶ ಇರುತ್ತದೆ ಎಂದು ಐಟಿ, ಬಿಟಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.
ಐಟಿ- ಬಿಟಿ ಸಿಬ್ಬಂದಿಗೆ ಪಾಸ್‌, ಸಂಪರ್ಕ ಸಾರಿಗೆ, ಸ್ಕ್ರೀನಿಂಗ್‌, ಇಂಟರ್ನೆಟ್‌ ವ್ಯವಸ್ಥೆ ಸೇರಿದಂತೆ ಹಲವು ಪ್ರಮುಖ ವಿಚಾರ ಕುರಿತು ಐಟಿ-ಬಿಟಿ ಮುಖ್ಯಸ್ಥರೊಂದಿಗೆ ಶುಕ್ರವಾರ ವೀಡಿಯೋ ಕಾನ್ಫರೆನ್ಸ್ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು
“ಯಾವುದೇ ಹೊಸ ಕೆಲಸದ ಆರ್ಡರ್‌ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಕಂಪನಿ ಬಾಗಿಲು ಹಾಕುವುದು, ಅಥವಾ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದು ಸರಿ ಅಲ್ಲ. ಏಕೆಂದರೆ ಈಗ ಹೊಸ ಕೆಲಸ ಹುಡುಕಿಕೊಳ್ಳುವುದು ಕಷ್ಟವಾಗುತ್ತದೆ. ಕಂಪನಿ ಮುಚ್ಚುವ ಬದಲು ಸಂಬಳ ಕಡಿತ ಮುಂತಾದ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದು ಸೂಕ್ತ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಎಲ್ಲ ಕಂಪನಿಗಳು ಇದೇ ನಿಯಮ ಪಾಲಿಸಬೇಕು,”ಎಂದು ಅವರು ಹೇಳಿದರು.
ಸೋಂಕು ನಿರ್ವಹಣೆ:“ಕಚೇರಿಗಳು ಆರಂಭವಾದ ನಂತರ ಸಿಬ್ಬಂದಿಯಲ್ಲಿ ಸೋಂಕು ಕಂಡು ಬಂದರೆ ಪರಿಸ್ಥಿತಿ ಹೇಗೆ ನಿಭಾಯಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆದಿದ್ದು, ಈ ಸಂಬಂಧ ಸೂಕ್ತ ಮಾರ್ಗದರ್ಶನ ನೀಡುವಂತೆ ಕಂಪನಿಗಳ ಮುಖ್ಯಸ್ಥರು ಕೋರಿದ್ದಾರೆ. ಆರೋಗ್ಯ ಇಲಾಖೆ ಜತೆ ಮಾತುಕತೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡುವ ಭರವಸೆ ನೀಡಲಾಗಿದೆ. ಕಂಪನಿಗಳು ಸಹ ಸ್ವಚ್ಛತೆ, ಸಾಮಾಜಿಕ ಅಂತರ, ಸೋಂಕಿನ ತಪಾಸಣೆಯಂಥ ಕ್ರಮಗಳನ್ನು ಪಾಲಿಸಲು ಒಪ್ಪಿಕೊಂಡಿವೆ,”ಎಂದು ಅವರು ಹೇಳಿದರು.
“ನಿರ್ಬಂಧ ಸಡಿಲಿಕೆ ಆದ ಕೂಡಲೇ ಸೋಂಕು ಹರಡುವ ಸಾಧ್ಯತೆ ಹೆಚ್ಚಬಹುದು. ಇಷ್ಟು ದಿನ ಮುಂಜಾಗ್ರತೆ ವಹಿಸಿ ಸೋಂಕು ತಡೆಗಟ್ಟುವ ಪ್ರಯತ್ನ ಮಾಡಲಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಕರೊನಾ ಜತೆ ಬದುಕುವುದನ್ನು ಕಲಿಯಬೇಕಾಗುತ್ತದೆ. ಜನರಲ್ಲಿ ಸಹ ಈ ಬಗ್ಗೆ ಸಾಕಷ್ಟು ಅರಿವು ಮೂಡಿದೆ. ಜತೆಗೆ ತಪಾಸಣೆ ಹೆಚ್ಚಿಸಿ ಸೋಂಕು ಪತ್ತೆ ಆದರೆ, ಅಂಥವರನ್ನು ಚಿಕಿತ್ಸೆ ನೀಡುವ ಮೂಲಕ ಇನ್ನೂ ಪರಿಸ್ಥಿತಿ ನಿರ್ವಹಣೆ ಮಾಡಲಾಗುವುದು,”ಎಂದರು.
ಪಾಸ್‌ ವ್ಯವಸ್ಥೆ ಬೇಕಾಗದು“ಐಟಿ ಬಿಟಿ ಉದ್ಯೋಗಿಗಳಿಗೆ ಪಾಸ್‌ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. 20ನೇ ತಾರೀಕಿನ ನಂತರ ಕೆಲ ಅಗತ್ಯ ಸೇವೆಗಳ ಕಚೇರಿಗಳು ಮಾತ್ರ ಕಾರ್ಯ ನಿರ್ವಹಿಸಲಿದ್ದು, ಸರ್ಕಾರವೇ ಅದಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವುದು. ಉಳಿದಂತೆ ಬಂದ್‌ ಮುಂದುವರಿಯಲಿದೆ.ಟಾಕ್ಸಿ ಇರುವುದಿಲ್ಲ, ಮೆಟ್ರೊ ಸೇರಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರದು. ಸಾರ್ವಜನಿಕ ಸ್ಥಳಗಳು ಬಂದ್‌ ಆಗಿರುವುದರಿಂದ ಪಾಸ್‌ ವ್ಯವಸ್ಥೆ ಇರುವುದೇ ಅನುಮಾನ. ಬೈಕ್‌ನಲ್ಲಿ ಒಬ್ಬರು, ಕಾರಿನಲ್ಲಿ ಇಬ್ಬರು ಓಡಾಡಲು ಕೇಂದ್ರ ಗೃಹ ಇಲಾಖೆ ಅವಕಾಶ ಕಲ್ಪಿಸಿದೆ. ಅಂತಾರಾಜ್ಯ ಹಾಗೂ ಬೇರೆ ಜಿಲ್ಲೆಗೆ ಪ್ರಯಾಣದ ನಿರ್ಬಂಧ ಮುಂದುವರಿಯುವುದು. ಯಾವುದೇ ಮಾಲ್‌, ರೆಸ್ಟೋರೆಂಟ್‌, ಶಾಲೆ, ಕಾಲೇಜು ಇರುವುದಿಲ್ಲ. ಹಾಗಾಗಿ ಓಡಾಟ ಕಡಿಮೆಯೇ ಇರುತ್ತದೆ,”ಎಂದು ಹೇಳಿದರು.
ಸಾರಿಗೆ ವ್ಯವಸ್ಥೆ“ಟ್ಯಾಕ್ಸಿ ವ್ಯವಸ್ಥೆ ಇರದ ಕಾರಣ ಬಿಎಂಟಿಸಿ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಬಹುದು. ಸೋಂಕು ರಹಿತವಾಗಿಸಿದ ಬಸ್‌ಗಳನ್ನು ಸಿಬ್ಬಂದಿ ಪ್ರಯಾಣಕ್ಕೆ ಬಳಸಿಕೊಳ್ಳಬಹುದು. ಅಲ್ಲೂ ಸಹ ಶುಚಿತ್ವ, ಅಂತರ ಕಾಯ್ದುಕೊಳ್ಳುವ ನಿಯಮ ಪಾಲಿಸಲು ಮಾರ್ಗದರ್ಶನ ನೀಡಲಾಗುವುದು,”ಎಂದರು.
ಬೆಂಗಳೂರಿನ ಸಾಧನೆ ಬಗ್ಗೆ ಹೆಮ್ಮೆ“ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಹಕಾರದ ಬಗ್ಗೆ ಐಟಿ-ಬಿಟಿ ಕಂಪನಿಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಅದೇ ರೀತಿ ಕಂಪನಿಗಳು ಸಹ ತಮ್ಮ ಕೆಲಸ ಮುಂದುವರಿಸಿ, ಉತ್ತಮ ಸೇವೆ ನೀಡುವ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವುದು ಹೆಮ್ಮೆಯ ಸಂಗತಿ. ಬೇರೆ ಎಲ್ಲ ದೇಶಗಳ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರು ಈ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದೆ ಎಂಬ ಹೆಗ್ಗಳಿಕೆ ಇದೆ,”ಎಂದು ಅವರು ಹೇಳಿದರು.
ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌, ವಿಜಿಐಟಿಯ ಕ್ರಿಸ್‌ ಗೋಪಾಲಕೃಷ್ಣನ್‌, ಆಕ್ಸಲ್‌ ಪಾರ್ಟರ್‌ನ ಪ್ರಶಾಂತ್‌ ಪ್ರಕಾಶ್‌, ಏಬಲ್‌ ಇಂಡಿಯಾದ ಶ್ರೀಕುಮಾರ್‌ ಸೂರ್ಯನಾರಾಯಣ್‌, ಬಿಎಸ್‌ಎನ್‌ಎಲ್‌ನ ಪ್ರಕಾಶ್‌ ಗೋಪಾಲನಿ ಸೇರಿದಂತೆ ಐಟಿ-ಬಿಟಿ ಕ್ಷೇತ್ರದ ಪ್ರಮುಖರು ವೀಡಿಯೋ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡಿದ್ದರು.
ಬಿಪಿಎಲ್​ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೆ ಪ್ರತಿ ತಿಂಗಳಿಗೆ ತಲಾ 10 ಕಿಲೋ ಅಕ್ಕಿ ಮೂರು ತಿಂಗಳು- ನಾಳೆಯಿಂದಲೇ ವಿತರಣೆ ಎಂದ ಸಚಿವ ಗೋಪಾಲಯ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − ten =
Remember me
