|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಮಾಹಿತಿ ತಂತ್ರಜ್ಞಾನವನ್ನು ಬೆಂಗಳೂರಿನಿಂದ ಹೊರಗೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆಯನ್ನಿಟ್ಟಿರುವ ರಾಜ್ಯ ಸರ್ಕಾರ, ಉದ್ಯೋಗಗಳ ಸೃಷ್ಟಿ ಹಾಗೂ ಐಟಿ ರಫ್ತಿನ ವಿಸ್ತರಣೆಗೆ ಕಾರ್ಯತಂತ್ರ ರೂಪಿಸಿದೆ.
ಪ್ರತಿವರ್ಷ ಇಂಜಿನಿಯರಿಂಗ್ ಪದವಿ ಮುಗಿಸಿ ಹೊರಬರುವ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 1 ಲಕ್ಷದಷ್ಟಿದೆ. ಅದರಲ್ಲಿ ಶೇ.60 ವಿದ್ಯಾರ್ಥಿಗಳು ನಿರುದ್ಯೋಗಿಗಳೇ ಆಗಿರುತ್ತಾರೆ. ಅಂತಹವರಿಗಾಗಿ ಉದ್ಯೋಗ ಸೃಷ್ಟಿಸುವ ಮೂಲಕ ಮಾಹಿತಿ ತಂತ್ರಜ್ಞಾನದ ವಿವಿಧ ವಲಯಗಳಲ್ಲಿರುವ ಉದ್ಯೋಗಾವಕಾಶಗಳ ಕಂದಕಗಳನ್ನು ಮುಚ್ಚುವುದು ಸರ್ಕಾರ ಉದ್ದೇಶವಾಗಿದೆ.
ಮಾಹಿತಿ ತಂತ್ರಜ್ಞಾನ ಉದ್ಯಮಗಳು ಕೇವಲ ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿದ್ದು, ಇವುಗಳನ್ನು ಬೆಂಗಳೂರಿನಿಂದ ಹೊರಗಡೆ ತೆಗೆದುಕೊಂಡು ಹೋಗಲು ಸರ್ಕಾರ ಹಲವು ವರ್ಷಗಳಿಂದ ಪ್ರಯತ್ನ ನಡೆಸಿದೆ. ಆ ಪ್ರಯತ್ನ ಈಗ ನಿಧಾನವಾಗಿ ಫಲ ನೀಡಲಾರಂಭಿಸಿದೆ. ಮೊದಲು ಮಾಹಿತಿ ತಂತ್ರಜ್ಞಾನ ಎಂದರೆ ಅಮೆರಿಕಾ ಎನ್ನುವುದು ನಂತರ ಬೆಂಗಳೂರು ಆಯಿತು. ಅದನ್ನು ಈಗ ಬೆಂಗಳೂರಿನಿಂದ ಹೊರಗಡೆಗೆ ತೆಗೆದುಕೊಂಡು ಹೋಗುವ ಪ್ರಯತ್ನ ಆರಂಭವಾಗಿದೆ. ಐಟಿ ಕ್ಷೇತ್ರವನ್ನು ಬೆಳೆಸುವ ಉದ್ದೇಶದಿಂದಲೇ ಸರ್ಕಾರ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸ್ಥಾಪಿಸಿದೆ. ಐಟಿ ಉದ್ಯಮಿಗಳು ಹಾಗೂ ಸರ್ಕಾರದ ನಡುವೆ ಸೇತುವೆಯಂತೆ ಈ ಸಂಸ್ಥೆ ಕೆಲಸ ಮಾಡುತ್ತಿದೆ. ಸರ್ಕಾರ ಈಗ ದೊಡ್ಡ ಗುರಿ ಹಾಕಿಕೊಂಡು ಅದರ ಸಾಕಾರಕ್ಕೆ ಕಾರ್ಯತಂತ್ರ ರೂಪಿಸಿದೆ.
ಐಟಿ ರಫ್ತು ಎಷ್ಟಿದೆ:ರಾಜ್ಯದ ಐಟಿ ರಫ್ತು 75 ಬಿಲಿಯನ್ ಡಾಲರ್​ನಷ್ಟಿದೆ. ದೇಶದ ಒಟ್ಟಾರೆ ಐಟಿ ರಫ್ತಿನಲ್ಲಿ ರಾಜ್ಯದ ಪಾಲು ಹೆಚ್ಚಿದೆ. ವಾರ್ಷಿಕ ಬೆಳವಣಿಗೆ ಶೇ.95 ಇರುತ್ತದೆ. ಈಗ ಬೆಂಗಳೂರಿನ ಹೊರಭಾಗದಿಂದ ಐಟಿ ರಫ್ತು 1.2 ಬಿಲಿಯನ್ ಡಾಲರ್​ಗಳಿದೆ. ಅದನ್ನು ಹೆಚ್ಚಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಸರ್ಕಾರದ ಗುರಿ ಏನು:ಮುಂದಿನ ಐದು ವರ್ಷಗಳಲ್ಲಿ ಬೆಂಗಳೂರಿನ ಹೊರಗಡೆ 5 ಬಿಲಿಯನ್ ಡಾಲರ್ ರಫ್ತು ಹಾಗೂ 5 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಇದ್ದರೆ, ಅದನ್ನು ಮುಂದಿನ ಹತ್ತು ವರ್ಷಗಳಿಗೆ ದ್ವಿಗುಣಗೊಳಿಸಲು ಬೇಕಾದ ವೇದಿಕೆಯನ್ನು ಸರ್ಕಾರ ಸಜ್ಜುಗೊಳಿಸುತ್ತಿದೆ.
ಕಂದಕ ಎಲ್ಲೆಲ್ಲಿ:ಡಿಜಿಟಲ್ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್, ಅನಿಮೇಷನ್, ಸೈಬರ್ ಸೆಕ್ಯೂರಿಟಿ ಹೀಗೆ ವಿವಿಧ ವಲಯಗಳಲ್ಲಿ ಲಕ್ಷಾಂತರ ಜನರ ಅಗತ್ಯ ಇದೆ. ಉತ್ತಮ ಕೌಶಲ್ಯ ಪಡೆದವರಿಗೆ ಈ ವಲಯಗಳಲ್ಲಿ ಉದ್ಯೋಗಗಳು ಸಿಗುತ್ತವೆ. ಆದ್ದರಿಂದ ಯುವ ಸಮೂಹವನ್ನು ಸಜ್ಜುಗೊಳಿಸುವುದು ಸರ್ಕಾರ ಯೋಜನೆ ಹಾಕಿಕೊಂಡಿದೆ. ಆದ್ದರಿಂದಲೇ ಬೆಂಗಳೂರಿನ ಹೊರಗಡೆಗೂ ಐಟಿ ಕ್ಷೇತ್ರ ಬೆಳೆಸುವ ಕಾರ್ಯತಂತ್ರವನ್ನು ಕೆಡಿಇಎಂ ಮೂಲಕ ಮಾಡುತ್ತಿದೆ.
ಕೆಡಿಇಎಂ ಏನು ಮಾಡುತ್ತಿದೆ:ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಐಟಿ ಕ್ಷೇತ್ರದ ವಿಸ್ತರಣೆಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಜತೆ ಬಯೋ ಟೆಕ್ನಾಲಜಿ, ಜಿಸಿಸಿಗಳ ಸ್ಥಾಪನೆ, ಎಲೆಕ್ಟ್ರಾನಿಕ್ಸ್ ಕ್ಷೇತ್ರದ ವಿಸ್ತರಣೆ. ಸ್ಟಾರ್ಟಪ್​ಗಳಿಗೆ ಪೂರಕವಾದ ವಾತಾವರಣ ಸೃಷ್ಟಿ, ಉತ್ತಮ ಗುಣಮಟ್ಟದ ಕೌಶಲಪಡೆದವರನ್ನು ಗುರುತಿಸುವುದು ಸೇರಿ ಐದು ವಲಯಗಳಲ್ಲಿ ಕೆಲಸ ಮಾಡುತ್ತಿದೆ.
ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಕೆಡಿಇಎಂ ಕ್ಲಸ್ಟರ್​ಗಳನ್ನು ಅಭಿವೃದ್ದಿಪಡಿಸುವ ಕೆಲಸವನ್ನು ಮಾಡುತ್ತಿದೆ. ಈಗಾಗಲೇ ಮೂರು ಕ್ಲಸ್ಟರ್​ಗಳನ್ನು ಸ್ಥಾಪಿಸಿದ್ದು, ನಾಲ್ಕನೇ ಕ್ಲಸ್ಟರ್ ಸಿದ್ಧವಾಗುತ್ತಿದೆ. ಇನ್ನೂ ಮೂರು ಕ್ಲಸ್ಟರ್​ಗಳನ್ನು ಸ್ಥಾಪನೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಪ್ರತಿ ಕ್ಲಸ್ಟರ್​ಗೂ ಪ್ರತ್ಯೇಕವಾಗಿಯೇ ಬ್ರಾಂಡಿಂಗ್ ಮಾಡಲಾಗುತ್ತಿದೆ.
ಹೊರಗಡೆಗೂ ಬರುತ್ತಿರುವ ಕಂಪೆನಿಗಳು: ಕೆಡಿಇಎಂ ಪ್ರಯತ್ನದ ಫಲವಾಗಿ 25 ಕಂಪೆನಿಗಳು ಬೆಂಗಳೂರಿನಿಂದ ಹೊರಗಡೆ ಸ್ಥಾಪನೆಯಾಗಿವೆ. ಮೈಸೂರಿನಲ್ಲಿ ಐಬಿಎಂ, ಹಿಂದೂಜಾ ಬಂದಿದ್ದರೆ, ಹುಬ್ಬಳ್ಳಿ, ಮಂಗಳೂರಿಗೂ ಕೆಲವು ಕಂಪೆನಿಗಳು ಆರಂಭವಾಗುತ್ತಿವೆ. ಇದರ ಜತೆಗೆ ಬೆಂಗಳೂರಿನಿಂದ ಹೊರಗಡೆ ಸ್ಥಾಪನೆಯಾಗುವ ಉದ್ದಿಮೆಗಳಿಗೆ ಹೆಚ್ಚಿನ ರಿಯಾಯಿತಿ, ಪ್ರೋತ್ಸಾಹ ಕೊಡಿಸುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ.
ಬೆಂಗಳೂರನ್ನು ಮೀರಿ ರಾಜ್ಯದ ವಿವಿಧೆಡೆ ಮಾಹಿತಿ ತಂತ್ರಜ್ಞಾನ ವಿಸ್ತಾರವಾಗಿ ಬೆಳೆಯಬೇಕೆಂದು ಸರ್ಕಾರ ಉದ್ದೇಶಿ ಸಿದೆ. ಅದಕ್ಕಾಗಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ನಮ್ಮ ಪ್ರಯತ್ನ ಸಾಕಾರವಾಗುವ ಹಂತಕ್ಕೆ ಬರುತ್ತಿದೆ. ಇದರಿಂದ ಆಯಾ ಭಾಗದ ಯುವಕರಿಗೆ ಉದ್ಯೋಗದ ಅವಕಾಶಗಳು ಲಭ್ಯವಾಗುತ್ತವೆ.
| ಡಾ. ಸಿ.ಎನ್. ಅಶ್ವತ್ಥನಾರಾಯಣ ಐಟಿ,ಬಿಟಿ ಸಚಿವ
ಹೊಸ ದೇಶಗಳಿಂದಲೂ ಆಸಕ್ತಿ:ರಾಜ್ಯದಿಂದ ಮಾಹಿತಿ ತಂತ್ರಜ್ಞಾನದ ಸೇವೆ ಪಡೆಯುವ ದೇಶಗಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಅಮೆರಿಕ ಮಾತ್ರವಲ್ಲದೇ ಯೂರೋಪ್ ರಾಷ್ಟ್ರಗಳು, ಜಪಾನ್, ಕೊರಿಯಾ ಮೊದಲಾದ ದೇಶಗಳು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್​ನಲ್ಲಿ ಆಸಕ್ತಿ ತೋರಿಸಿವೆ.
ಎಷ್ಟು ಕಂಪನಿಗಳ ಗುರಿ?:ಬೆಂಗಳೂರು ಹೊರಗಡೆ ಉದ್ಯೋಗ ಮತ್ತು ರಫ್ತು ಮಾಡುವ ಗುರಿಯನ್ನು ಸಾಧಿಸಬೇಕಾದರೆ ಕನಿಷ್ಠ 5 ಸಾವಿರ ಉದ್ದಿಮೆಗಳು ಹಾಗೂ 100 ಜಿಸಿಸಿಗಳು ಸ್ಥಾಪನೆಯಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಕೆಇಡಿಎಂ ಹೂಡಿಕೆದಾರರಿಗೆ ಒಂದು ವೇದಿಕೆಯನ್ನು ಸೃಷ್ಟಿಸಲಿದೆ.
ಕೇಂದ್ರಿಕೃತ ವಾಗಿರುವ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನವನ್ನು ಬೇರೆ ಬೇರೆ ಕಡೆ ತೆಗೆದುಕೊಂಡು ಹೋಗುವ ಉದ್ದೇಶ ಹೊಂದಿದ್ದೇವೆ. ಅದಕ್ಕಾಗಿ ಕ್ಲಸ್ಟರ್​ಗಳನ್ನು ಸ್ಥಾಪಿಸಿ ಪ್ರತ್ಯೇಕ ಬ್ರಾಂಡಿಂಗ್ ಮಾಡಲಾಗುತ್ತಿದೆ. ಅದಕ್ಕಾಗಿಯೇ ಸ್ಥಾಪನೆಯಾಗಿರುವ ಕೆಡಿಇಎಂ ಸಾಕಷ್ಟು ಪ್ರಯತ್ನ ಮಾಡಿದೆ.
|ಬಿ.ವಿ. ನಾಯ್ಡುಅಧ್ಯಕ್ಷ, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್
ಯಾವ ಕ್ಲಸ್ಟರ್​ನಲ್ಲಿ ಏನು ಬ್ರಾಂಡಿಂಗ್:ಮೈಸೂರಿನಲ್ಲಿ ಸೈಬರ್ ಸೆಕ್ಯೂರಿಟಿ, ಮಂಗಳೂರಿನಲ್ಲಿ ಫಿನ್​ಟೆಕ್, ಹುಬ್ಬಳ್ಳಿಯಲ್ಲಿ ಅಗ್ರಿಟೆಕ್, ಬೆಳಗಾವಿಯಲ್ಲಿ ಇಂಜಿನಿಯರಿಂಗ್ ಟೆಕ್ನಾಲಜಿ, ಶಿವಮೊಗ್ಗ, ಕಲಬುರಗಿ, ತುಮಕೂರು ಕ್ಲಸ್ಟರ್ ಇನ್ನೂ ಸಿದ್ಧವಾಗಬೇಕಾಗಿದೆ.
ಒಂದೂವರೆ ವರ್ಷದ ಮಗನನ್ನೇ ಮಾರಿದ ತಾಯಿ; ನಾಲ್ಕೂವರೆ ವರ್ಷ ಹುಡುಕಾಡಿ ಪುತ್ರನನ್ನು ಪತ್ತೆ ಮಾಡಿ ಪಡೆದ ತಂದೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
