|ರುದ್ರಣ್ಣ ಹರ್ತಿಕೋಟೆಬೆಂಗಳೂರು
ರಾಜ್ಯಗಳಿಗೆ ಕೇಂದ್ರ ಸರ್ಕಾರ ನೀಡುವ ಜಿಎಸ್​ಟಿ ಪರಿಹಾರ ಕೊನೆಯಾಗಿದ್ದು, ಮುಂದುವರಿಸುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಳ್ಳದಿರುವುದು ರಾಜ್ಯಕ್ಕೆ ಕಳವಳ ಮೂಡಿಸಿದೆ. ಮುಂದಿನ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮದ ಭಯ ಆವರಿಸಿದೆ. ಜಿಎಸ್​ಟಿ ಪರಿಹಾರ ಜೂನ್ ಅಂತ್ಯಕ್ಕೆ ನಿಲ್ಲುತ್ತದೆ ಎಂಬುದು ಗೊತ್ತಿದ್ದರೂ ಚಂಡೀಗಢದಲ್ಲಿ ನಡೆದ ಜಿಎಸ್​ಟಿ ಮಂಡಳಿ ಸಭೆ ಯಾವುದೇ ನಿರ್ಧಾರ ಮಾಡಿಲ್ಲ. ಅಲ್ಲದೆ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯ ಗಳೇ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳಬೇಕೆಂದು ಹೇಳಿರುವುದರಿಂದ ಪರಿಹಾರ ನಿಲ್ಲುವ ಸಾಧ್ಯತೆ ನಿಚ್ಚಳ. ಆದರೂ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತ್ರ ಆಗಸ್ಟ್​ನಲ್ಲಿ ನಡೆಯುವ ಸಭೆಯ ಬಗ್ಗೆ ಆಶಾಭಾವನೆ ಹೊಂದಿದ್ದಾರೆ. ಜಿಎಸ್​ಟಿ ಬಂದ ನಂತರ ಹೆಚ್ಚಿನ ತೆರಿಗೆ ವಿಧಿಸುವುದಕ್ಕೆ ಅವಕಾಶವಿಲ್ಲ. ಇದರ ಜತೆಗೆ, ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳಿಗೆ ಅನುದಾನ ಕಡಿಮೆಯಾಗಿ ರಾಜ್ಯದ ಮೇಲೆ ಹೊರೆ ಹೆಚ್ಚಿದೆ. ಬದ್ಧ ವೆಚ್ಚಗಳು ಹೆಚ್ಚಾಗಿದ್ದು, ಇದರೊಂದಿಗೆ ಜಿಎಸ್​ಟಿ ಪರಿಹಾರ ಸ್ಥಗಿತವಾದರೆ ಕಡುಕಷ್ಟ ಎದುರಾಗಲಿದೆ.
ಈ ವರ್ಷಕ್ಕೆ ಅಷ್ಟು ಸಮಸ್ಯೆ ಇಲ್ಲ:ಚುನಾವಣೆ ವರ್ಷವಾಗಿರುವ ಈ ವರ್ಷ ರಾಜ್ಯಕ್ಕೆ ಅಷ್ಟು ಸಮಸ್ಯೆ ಕಾಡುವುದಿಲ್ಲ. ಕಳೆದ ವರ್ಷ ಸರ್ಕಾರ 17 ಸಾವಿರ ಕೋಟಿ ರೂ. ಹೆಚ್ಚುವರಿ ಸಾಲ ಮಾಡಿದೆ. ಕಳೆದ ವರ್ಷ ಬಜೆಟ್​ನಲ್ಲಿ 67 ಸಾವಿರ ಕೋಟಿ ರೂ. ಸಾಲ ಮಾಡುವ ಗುರಿ ಹೊಂದಲಾಗಿತ್ತು. ಆ ನಂತರ ಅದನ್ನು 63 ಸಾವಿರ ಕೋಟಿ ರೂ.ಗಳಿಗೆ ಪರಿಷ್ಕರಣೆ ಮಾಡಲಾಯಿತು. ಆದರೆ, ಮಾರ್ಚ್ ಅಂತ್ಯಕ್ಕೆ ಮಾಡಿರುವ ಸಾಲದ ಮೊತ್ತ 80 ಸಾವಿರ ಕೋಟಿ ರೂ.ಗಳನ್ನು ಮೀರಿದೆ. ಆದ್ದರಿಂದ ಈ ಹಣಕಾಸು ವರ್ಷದಲ್ಲಿ ಪರಿಹಾರ ನಿಂತರೂ ಸಮಸ್ಯೆ ಅಷ್ಟಾಗಿ ಕಾಡುವುದಿಲ್ಲ. ಮುಂದಿನ ವರ್ಷ ಬರಲಿರುವ ಹೊಸ ಸರ್ಕಾರಕ್ಕೆ ಸವಾಲು ಎದುರಾಗಲಿದೆ. ರಾಜಸ್ವ ಕೊರತೆ ಹೆಚ್ಚಾದರೆ ಸಾಲ ಸಹ ಜಾಸ್ತಿಯಾಗಿ ಬಂಡವಾಳ ವೆಚ್ಚ ಕಡಿಮೆಯಾಗುತ್ತದೆ. ಈ ವರ್ಷ 14,699 ಕೋಟಿ ರೂ.ಗಳ ರಾಜಸ್ವ ಕೊರತೆ ಇದೆ.
ದೊಡ್ಡ ಹೊರೆಗಳಿವೆ:ರಾಜ್ಯ ಸರ್ಕಾರದ ಮುಂದೆ ದೊಡ್ಡ ಆರ್ಥಿಕ ಹೊರೆಗಳಿವೆ. ಈಗಾಗಲೇ ಬದ್ಧ ವೆಚ್ಚಗಳು 1 ಲಕ್ಷ ಕೋಟಿ ರೂ. ಸಮೀಪಿಸಿದೆ. ಸರ್ಕಾರಿ ನೌಕರರು ಕೇಂದ್ರ ಮಾದರಿ ವೇತನಕ್ಕೆ ಪಟ್ಟು ಹಿಡಿದಿದ್ದಾರೆ. ಇದಕ್ಕೆ ಒಪ್ಪಿದರೆ, ವಾರ್ಷಿಕ 17 ಸಾವಿರ ಕೋಟಿ ರೂ.ಗಳ ಹೆಚ್ಚುವರಿ ಮೊತ್ತ ಬೇಕು. ಜತೆಗೆ, ಚುನಾವಣೆಯ ವರ್ಷದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹೆಚ್ಚಾಗಿ ತೆಗೆದುಕೊಳ್ಳಬೇಕಾಗಿದೆ. ಪ್ರತಿ ಶಾಸಕರ ಕ್ಷೇತ್ರಕ್ಕೆ ತಲಾ 100 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆ ನಡೆದಿದೆ. ಹೀಗಾಗಿಯೇ ಮುಂದಿನ ವರ್ಷದಿಂದ ಸಂಕಷ್ಟ ಎದುರಾಗುತ್ತದೆ ಎನ್ನುತ್ತಾರೆ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳು.
ಎಷ್ಟಿದೆ ಬಾಕಿ?:ಸರ್ಕಾರದಿಂದ ವಿವಿಧ ವಲಯಗಳಿಗೆ ನೀಡಿರುವ ಸಾಲ 28,847 ಕೋಟಿ ರೂ.ಗಳಿದ್ದರೆ, ಅದಕ್ಕೆ ಬರಬೇಕಾಗಿರುವ ಬಡ್ಡಿ ವಾರ್ಷಿಕ 356.47 ಕೋಟಿ ರೂ.ಗಳಷ್ಟಾಗುತ್ತದೆ. ಸರ್ಕಾರ ವಿವಿಧ ಸಂಸ್ಥೆಗಳಲ್ಲಿ ಮಾಡಿರುವ ಹೂಡಿಕೆ 67,816 ಕೋಟಿ ರೂ.ಗಳಿದೆ. ಸರ್ಕಾರ ನೀಡಿರುವ ಗ್ಯಾರಂಟಿ 26,679.31 ಕೋಟಿ ರೂ.ಗಳಿದ್ದು, ವಾರ್ಷಿಕ 150.51 ಕೋಟಿ ರೂ.ಗಳ ಬಡ್ಡಿ ಪಾವತಿಸಬೇಕಾಗಿದೆ. ಇದರ ವಸೂಲಿಗೆ ಗಮನ ಹರಿಸಿದೆ.
ತೆರಿಗೆ ಬಾಕಿ:ಸರ್ಕಾರಕ್ಕೆ ಬರಬೇಕಾಗಿರುವ ತೆರಿಗೆಯಲ್ಲಿ ವಿವಿಧ ವಲಯಗಳಲ್ಲಿ 19,657 ಕೋಟಿ ರೂ. ಬಾಕಿ ಉಳಿದಿದೆ. ‘ಕರ ಸಮಾಧಾನ’ ಯೋಜನೆ ಜಾರಿಗೆ ತಂದರೂ ವಸೂಲಿ ಆಗುತ್ತಿಲ್ಲ. ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿವೆ.
ಎಷ್ಟು ಬರುತ್ತಿತ್ತು ಪರಿಹಾರ?:ಕೇಂದ್ರ ಸರ್ಕಾರ 2017 ರಲ್ಲಿ ಜಿಎಸ್​ಟಿ ಜಾರಿಗೊಳಿಸಿ ಮುಂದಿನ 5 ವರ್ಷ ತೆರಿಗೆ ಸಂಗ್ರಹಣೆ ನಷ್ಟಕ್ಕೆ ಪರಿಹಾರ ನೀಡುವುದಾಗಿ ತಿಳಿಸಿತ್ತು. ಅದರಂತೆ, ರಾಜ್ಯಕ್ಕೆ ಪ್ರತಿ ವರ್ಷ 16 ರಿಂದ 18 ಸಾವಿರ ಕೋಟಿ ರೂ.ಗಳ ಪರಿಹಾರ ಸಿಗುತ್ತಿತ್ತು. ಜೂ.30ಕ್ಕೆ ಪರಿಹಾರ ನಿಂತಿದೆ. ಇಷ್ಟು ದೊಡ್ಡ ಮೊತ್ತವನ್ನು ರಾಜ್ಯ ಸರಿದೂಗಿಸಿಕೊಳ್ಳುವುದು ಸಾಧ್ಯವಿಲ್ಲದಂತಾಗಿದೆ.

ಸರಿಯಾದ ಪಾಲು ಸಿಗುತ್ತಿಲ್ಲ:ರಾಜ್ಯದಲ್ಲಿ ಸಂಗ್ರಹವಾಗುವ ಆದಾಯ ತೆರಿಗೆ ಸೇರಿದಂತೆ ಎಲ್ಲ ರೀತಿಯ ತೆರಿಗೆಯಲ್ಲಿ ರಾಜ್ಯಗಳಿಗೆ ಶೇ.42ರಷ್ಟು ವಾಪಾಸ್ ಬರಬೇಕು. ರಾಜ್ಯದಿಂದ ಎಲ್ಲ ರೀತಿಯ ತೆರಿಗೆಗಳು 2 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುತ್ತದೆ. ಆದರೆ, ತೆರಿಗೆ ಪಾಲು ಅಷ್ಟು ಪ್ರಮಾಣದಲ್ಲಿ ಬರುತ್ತಿಲ್ಲ. ಜಿಎಸ್​ಟಿ ದರಗಳನ್ನು ಹೆಚ್ಚಿಸಿರುವುದು ರೈತರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗಗಳ ಮೇಲೆ ಪರಿಣಾಮ ಬೀರುತ್ತಿದೆ. ನಿರ್ಮಾಣ ಕ್ಷೇತ್ರದಲ್ಲಿ ಕೆಲಸಗಳು ನಿಂತು ಹೋಗುವ ಸಾಧ್ಯತೆಗಳಿವೆ.
ಜಿಎಸ್​ಟಿ ಪರಿಹಾರ ಕುರಿತು ಆಗಸ್ಟ್​ನಲ್ಲಿ ನಡೆಯುವ ಮಂಡಳಿ ಸಭೆಯಲ್ಲಿ ಅಂತಿಮ ನಿರ್ಧಾರವಾಗಲಿದೆ. ಮೊನ್ನೆ ನಡೆದ ಸಭೆಯಲ್ಲಿ ಚರ್ಚೆ ನಡೆದಿದೆ. ಜಿಎಸ್​ಟಿ ಕಾನೂನು ಸಮಿತಿಯು ಕಾನೂನು ತೊಡಕು ನಿವಾರಣೆಗೆ ಎಲ್ಲ ಕ್ರಮ ತೆಗೆದುಕೊಂಡಿದೆ. ಫಿಟ್​ವೆುಂಟ್ ಸಮಿತಿ ಶಿಫಾರಸುಗಳನ್ನು ಅಂಗೀಕರಿಸಲಾಗಿದೆ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಹೆಚ್ಚುತ್ತಿದೆ ಸಾಲದ ಹೊರೆ:ಸರ್ಕಾರ ಮಾಡುತ್ತಿರುವ ಸಾಲದ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. 2023ರ ಮಾರ್ಚ್ ಅಂತ್ಯಕ್ಕೆ ರಾಜ್ಯದ ಸಾಲ 5.18 ಲಕ್ಷ ಕೋಟಿ ರೂ.ಗಳಿಗೆ ತಲುಪಲಿದೆ. ಸಾಲ ಮಾಡಿ ತುಪ್ಪ ತಿನ್ನುವಂತಹ ಪರಿಸ್ಥಿತಿ ಎದುರಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 7 =
Remember me
