ಶ್ರೀ ಶಂಭುನಾಥ ಸ್ವಾಮೀಜಿಜಗದ ಮಹಾಪರಿವರ್ತನೆಯ ಕಾಲದಲ್ಲಿ ಅನಿವಾರ್ಯದ ಮಹತ್ವವನ್ನು ಅರಿತು ಗಿರಿಗೆ ಗುರುವಾಗಿ ಬಂದು ಜಗದ್ಗುರು, ಪೀಠಾಧಿಪತಿ ಎಂಬ ಲೌಕಿಕ ಪ್ರತಿಷ್ಠೆಯನ್ನು ತಲೆಗೇರಿಸಿಕೊಳ್ಳದೆ, ಜ್ಞಾನ ಮತ್ತು ಕರ್ಮಗಳನ್ನು ನಂಬಿ, ಜಗದ ಏಳಿಗೆಯ ಬಯಸಿ, ಸುಧಾರಣೆಗಳ ಮೂಲಕವೇ ಮಠ ಕಟ್ಟಿ ಅನ್ನ- ಅಕ್ಷರ-ಆರೋಗ್ಯ ಎಂಬ ಆಧುನಿಕ ಅಭಿವೃದ್ಧಿಪಥದ ಬೆಳಕು ಹರಡಿ ಜನೋಪಕಾರಿಯಾಗಿದ್ದ ಚೇತನರೂಪವೇ ನಮ್ಮ ಗುರು ಶ್ರೀಬಾಲಗಂಗಾಧರನಾಥ ಮಹಾಸ್ವಾಮಿಗಳು.
ಅಕ್ಷರದ ಹಸಿರು ಕಾಣದೆ ನಿಶ್ಪಲವಾಗಿದ್ದ ಗ್ರಾಮೀಣದ ಲಕ್ಷೋಪಲಕ್ಷ ಮಕ್ಕಳ ಎದೆಯಲ್ಲಿ ಅಕ್ಷರ ಬಿತ್ತಿ ಫಲದಾಯಿಯಾಗಿಸಿದ ಧೀಮಂತ ಛಲಗಾರ. ನೆಲದ ಮೇಲೆ ನೇಗಿಲಗೆರೆ ಎಳೆಯುತ್ತಿದ್ದ ರೈತಾಪಿ ಮಕ್ಕಳಿಂದ ಅಕ್ಷರ ಬರೆಸಿದ್ದು ಎಂದಿಗೂ ಯಾರಿಂದಲೂ ಸಮನಾಗದ ಸಾಧನೆಯದು. ಪರಶಿವನ ಆದಿಯಾಗಿ ಸಾವಿರಾರು ಜನ ಸಿದ್ಧಪುರುಷರ ತಪಃಶಕ್ತಿ ಇರುವ ಪುಣ್ಯಕ್ಷೇತ್ರ, ಸಿದ್ಧ-ಸಾಧನೆ-ಸತ್ಯ-ನಿಷ್ಠೆಗಳ ಪ್ರತೀಕವಾದ ಉರಿಗದ್ದುಗೆ ಸೇರಿದಂತೆ ಕಾಲಭೈರವಾರಾಧನಾ ಕೇಂದ್ರವು ನಾಥ ಸಂಪ್ರದಾಯದ ಹೆಗ್ಗುರುತಾದ ಇತಿಹಾಸ ಪ್ರಸಿದ್ಧ ಶ್ರೀಮಠಕ್ಕೆ ಎಪ್ಪತ್ತೊಂದನೆಯ ಗುರುಗಳಾಗಿ ಇವರು ಚುಕ್ಕಾಣಿ ಹಿಡಿದದ್ದು ನಮ್ಮ ಭಾಗ್ಯ.
ನಾಥಪಂಥದ ಮಹಾಗುರು ಗೋರಖನಾಥರ ತತ್ವ-ದರ್ಶನ ಮತ್ತು ಯೋಗ ತಂತ್ರಮಾರ್ಗದ ಅನುಯಾಯಿತ್ವದ ಜತೆಗೆ ಕಾಲಮಾನಕ್ಕೆ ತಕ್ಕಂತೆ ಜಗದ ಏಳಿಗೆಗೆ ಬೇಕಾದ ಹಸಿವು ನೀಗುವ, ವಿದ್ಯೆ ನೀಡುವ, ಆರೋಗ್ಯ ಕಾಯುವ ಆಧುನಿಕ ಅಭಿವೃದ್ಧಿ ಜತೆಗೆ ತಂತ್ರಜ್ಞಾನದ ಮಂತ್ರವನ್ನು ಜಪಿಸಿ ನಮ್ಮ ಗುರುಗಳು ಮಹಾಸಂಸ್ಥಾನವನ್ನು ಕಟ್ಟಿದ ಪರಿ ಸೋಜಿಗ.
ಮನುಷ್ಯ ಚಿರಂಜೀವಿಯಾಗಲಾರ! ಆದರೆ, ಆತನ ಧ್ಯೇಯ ಮತ್ತು ಕಾರ್ಯಗಳು ಉತ್ತಮವಾಗಿದ್ದಲ್ಲಿ ಚಿರಸ್ಥಾಯಿಯಾಗುತ್ತಾನೆ. ಮಹಾಗುರುಗಳು ಪೀಠಕ್ಕೆ ಬಂದು ಐವತ್ತು ಸಂವತ್ಸರಗಳ ಕಾಲವಾಯಿತು. ಭೌತಿಕವಾಗಿ ನಮ್ಮಿಂದ ದೂರವಾದರೂ ಅವರ ಕಾರ್ಯ, ಪ್ರಭಾವ, ಆಶೀರ್ವಾದದ ಮೂಲಕ ನಮ್ಮಲ್ಲಿ ಜೀವಂತವಾಗಿದ್ದಾರೆ. ಜತೆಗೆ ಅವರ ಅಭಿವೃದ್ಧಿಯ ಹೆದ್ದಾರಿಯನ್ನು ನಮ್ಮೆಲ್ಲರ ಎದುರಿಟ್ಟು ಆಕಾಶದಷ್ಟು ಅವಕಾಶ ಕೊಟ್ಟು ಎಲ್ಲ ಧಾವಂತಗಳಾಚೆಗೂ ನಮ್ಮನ್ನು ಜೀವಂತವಾಗಿಟ್ಟಿದ್ದಾರೆ.
ಪೂಜ್ಯರು ನಮಗೆ ಎಲ್ಲ ಅನುಕೂಲಗಳನ್ನು ಒದಗಿಸಿದ್ದರೂ ಅನೇಕ ಘಟನಾವಳಿಗಳನ್ನು, ಕಥೆಗಳನ್ನು ಹೇಳಿ ಎಚ್ಚರಿಸುತ್ತಿದ್ದರು. ವಿಶೇಷವಾಗಿ ಅವರು ಹೇಳುತ್ತಿದ್ದ ಮಹಾಭಾರತದ ಕೃಷ್ಣ ಹಾಗೂ ಕರ್ಣನ ಸಂಭಾಷಣೆ ನಮಗೆ ಇಂದಿಗೂ ನೆನಪಾಗುತ್ತದೆ.
ಕೃಷ್ಣ:ಯಾವ ವ್ಯಕ್ತಿ ಸಮಾಜಕ್ಕಾಗಿ ಬದುಕುವನೋ ಆತನಿಗೆ ಸ್ವಯಂ ಲಾಭವಾಗುತ್ತದೆ. ಆದರೆ, ಯಾವ ವ್ಯಕ್ತಿ ತನಗಾಗಿ ಮಾತ್ರ ಬದುಕುವನೋ ಅವನು ತನಗೂ ಹಾಗೂ ಸಮಾಜಕ್ಕೂ ನಷ್ಟ ಮಾಡುತ್ತಾನೆ.
ಕರ್ಣ:ಈ ಸಮಾಜಕ್ಕೆ ಎಷ್ಟು ನಷ್ಟ ಅಧರ್ವಿುಯರಿಂದ ಆಗುವುದೋ ಅದಕ್ಕಿಂತ ಹೆಚ್ಚು ಧರ್ಮ ಅರಿತವರ ನಿಷ್ಕ್ರಿಯತೆಯಿಂದ ಆಗುತ್ತದೆ. ಈ ಪಾಪವು ನನ್ನ ಮೇಲೆಯೂ ಇದೆ. ಮುಂದುವರಿದು ಗುರುಗಳು ಸದಾ ಹೇಳುತ್ತಿದ್ದದ್ದು ಕರ್ಮಯೋಗದ ಕುರಿತು. ಕರ್ಮಯೋಗವೆಂದರೆ ಶ್ರೀಗಳ ನೋಟದಲ್ಲಿ ಧ್ಯಾನಸ್ಥರಾಗಿ ಪೂಜೆ ಮಾಡುವುದಲ್ಲ, ನಿಷ್ಕಾಮ ಕ್ರಿಯಾಶೀಲತೆ. ಉದಾಹರಣೆಗೆ ಒಂದು ಜ್ವಾಜ್ವಲ್ಯ ಹಣತೆ ಎನ್ನುತ್ತಿದ್ದರು. ಅಂತೆಯೇ ಬದುಕಿದ್ದರು.
ವಿದ್ಯಾವಂತರು ಹೃದಯ ಶ್ರೀಮಂತರೂ ಆಗಬೇಕು: ‘ಈ ಸಮಾಜಕ್ಕೆ ವಿದ್ಯೆಯಷ್ಟೇ ಕರುಣೆಯೂ ಅಗತ್ಯವಿದೆ. ಹೃದಯವಂತಿಕೆ ಇಲ್ಲದ ವಿದ್ಯಾವಂತನು ಮೃಗಕ್ಕಿಂತಲೂ ಕ್ರೂರನಾಗುತ್ತಾನೆ. ದೇಶ ಪರ್ಯಟನೆ ಮಾಡಿ ವಿದೇಶ ವಿಹಾರ ಮಾಡಿಯೂ ಮಾನವತೆಯ ಸೆಲೆ ಇಲ್ಲದಾತ ಈ ಸಮಾಜಕ್ಕೆ ಘಾತುಕನಾಗುತ್ತಾನೆ’.
ನಾವು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಒಮ್ಮೆ ಶ್ರೀಗಳು ಸಾವಿರಾರು ಜನ ಭಕ್ತರನ್ನುದ್ದೇಶಿಸಿ ಹೇಳಿದ ಈ ಮಾತು ನಮಗೆ ಸದಾ ಎಚ್ಚರಿಕೆಯ ಗಂಟೆ ಮತ್ತು ಧ್ಯೇಯವಾಕ್ಯವಾಗಿದೆ. ಶ್ರೀಗಳು ಪಟ್ಟಾಭಿಷಿಕ್ತರಾದ ಸುದಿನವನ್ನು ಮುತ್ತಿನ ಪಲ್ಲಕ್ಕಿಯ ಮೆರವಣಿಗೆಯಲ್ಲಿ ಮೈಮರೆಯದೆ ಅವರ ಬಹುಪ್ರೀತಿಯ ನೆಲಮೂಲದ ಜಾನಪದ ಕಲಾ ಉತ್ಸವಕ್ಕಾಗಿ ಮುಡುಪಿಟ್ಟು ತಮ್ಮ ಪಟ್ಟಾಭಿಷೇಕ ಸಂದರ್ಭದ ಸಂತಸದ ಜತೆಗೆ ಜಾನಪದ ಕಲಾವಿದರಿಗೂ ಒಂದು ಸಾರ್ಥಕ ವೇದಿಕೆ, ಗೌರವ, ಸಂಭಾವನೆ ನೀಡಿ ಕಲಾರಾಧನೆಗೆ ದುಡಿದ ರೈತಾಪಿ ಜಗದ್ಗುರುಗಳು ಶ್ರೀಬಾಲಗಂಗಾಧರನಾಥ ಸ್ವಾಮೀಜಿ. ನಂತರ, ರಾಮನಗರದಲ್ಲಿ ‘ಜನಪದ ಲೋಕ’ದ ನಿರ್ಮಾಣ ಮತ್ತು ಬೆಳವಣಿಗೆಯಲ್ಲಿ ಮಹಾಪಾತ್ರ ವಹಿಸಿದರು.
‘ಪ್ರೀತಿಯೇ ಧರ್ಮ’ ಎಂಬ ನಂಬಿಕೆ ನನಗೆ ಮುಖ್ಯವಾಗಿತ್ತು. ಇದನ್ನು ನಾ ಕಲಿತದ್ದು ಹಳ್ಳಿಯಿಂದ; ಪ್ರೀತಿ ಎನ್ನುವುದೇ ಧರ್ಮ, ಎಂದಿಗೂ ಆ ಮಾರ್ಗವೇ ಸತ್ಯ, ಮಾನವೀಯತೆ ಮತ್ತು ಸೇವೆ ಇವುಗಳೇ ನಮ್ಮ ಧ್ಯೇಯ. ಇದು ನಮ್ಮ ಗುರುಗಳು ನಂಬಿ ಪಸರಿಸಿದ ಪಾಲನಾವಾಕ್ಯ.
‘ಹುಟ್ಟು ಹುಲ್ಲಾದರೂ, ಬದುಕು ಬಿದಿರಾಗಲಿ’ ಇದು ನಮ್ಮ ಜನಪದರ ಆಶಯ. ಇವರು ಬರೀ ಬಿದಿರಾಗಲಿಲ್ಲ ಬಂಗಾರದ ಹೆಬ್ಬಿದಿರಾದರು, ಕಾರುಣ್ಯದ ಕೊಳಲಾದರು, ಸಾಧನೆಗಳಿಂದಲೇ ಭೋರ್ಗರೆದ ಶಾಂತಚಿತ್ತ ಸಂತ ನಮ್ಮ ಗುರುಗಳು. ಎಂದೋ ಯಾರೋ ಕಟ್ಟಿದ ಗೋಪುರಕ್ಕೆ ಕಳಶವಾದವರಲ್ಲ, ಸ್ವತಃ ಗೋಪುರ ಕಟ್ಟಿ ಕಳಶಪ್ರಾಯವಾದವರು. ಅವರು ಗಿರಿಯೆಂಬ ಗೋಪುರದ ಸಾಧನಾ ಕಳಶ. ಇಂತಹ ಪರಮ ಪೂಜ್ಯ ಮಹಾಗುರುಗಳು ಇಳೆಯಿಂದ ಮೈಕಳೆದು ಹನ್ನೊಂದು ವರುಷಗಳಾದವು, ಇದು ನಮಗೆಂದೂ ನಿವಾರಣೆಯಾಗದ ಯಾತನೆ. ಅವರ ಕಾರುಣ್ಯ ಪ್ರೇಮ ಸದಾ ಎಲ್ಲರ ಮೇಲೆಯೂ ಇರಲೆಂದು ಬಯಸುತ್ತ… ಮತ್ತೆ ಅವತರಿಸಿ ಬಾ ಗುರುವೇ ಎಂದು ಬೇಡುತ್ತೇನೆ.
(ಲೇಖಕರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಸನ ಮತ್ತು ಕೊಡಗಿನ ಕಾರ್ಯದರ್ಶಿಗಳು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
