|ಆನಂದ ಅಂಗಡಿಹುಬ್ಬಳ್ಳಿಹುಬ್ಬಳ್ಳಿ-ಧಾರವಾಡ ಸೆಂಟ್ರಲ್ (ಹಳೆಯ ಹುಬ್ಬಳ್ಳಿ ಗ್ರಾಮೀಣ) ವಿಧಾನಸಭೆ ಕ್ಷೇತ್ರವು ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ವಿಶೇಷತೆ ಹೊಂದಿದೆ. ಆದರೆ, ಇಬ್ಬರೂ ಮುಖ್ಯಮಂತ್ರಿಗಳು ಅಲ್ಪಾವಧಿ ಆಡಳಿತ ನಡೆಸಿದ್ದಾರೆ ಎಂಬುದು ಗಮನಾರ್ಹ. ಜಗದೀಶ ಶೆಟ್ಟರ್ ಬಿಟ್ಟರೆ ಬೇರೆ ಆಕಾಂಕ್ಷಿಗಳ ಹೆಸರು ಬಿಜೆಪಿಯಿಂದ ಕೇಳಿ ಬರುತ್ತಿರಲಿಲ್ಲ. ಇದೇ ಮೊದಲ ಬಾರಿಗೆ ಹೊಸ ಆಕಾಂಕ್ಷಿಗಳು ಹುಟ್ಟಿಕೊಂಡಿರುವುದು ಕಣದಲ್ಲಿ ಕುತೂಹಲ ಕೆರಳಿಸಿದೆ.
ಈ ಕ್ಷೇತ್ರದಿಂದ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಎಸ್.ಆರ್. ಬೊಮ್ಮಾಯಿ 1988-89ರವರೆಗೆ ಹಾಗೂ ಜಗದೀಶ ಶೆಟ್ಟರ್ 2012-13ರಲ್ಲಿ ಸಿಎಂ ಆಗಿದ್ದರು. ಜಗದೀಶ ಶೆಟ್ಟರ್ ಸತತ 6 ಬಾರಿ ಗೆದ್ದಿದ್ದು, ಇದೀಗ 7ನೇ ಬಾರಿಯೂ ಕಣಕ್ಕಿಳಿದು ವಿಜಯ ಸಾಧಿಸುವ ಹುಮ್ಮಸ್ಸಿನಲ್ಲಿದ್ದಾರೆ.
ಕುತೂಹಲದ ಅಂಶವೆಂದರೆ, ಶೆಟ್ಟರ್ ವಿರುದ್ಧ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎದುರಾಳಿ ಪಕ್ಷದ ಬಹುತೇಕ ಅಭ್ಯರ್ಥಿಗಳು ಬಿಜೆಪಿಗೆ ಸೇರಿದ್ದಾರೆ. ಬಸವರಾಜ ಬೊಮ್ಮಾಯಿ, ಶಂಕರಣ್ಣ ಮುನವಳ್ಳಿ, ಡಾ. ಮಹೇಶ ನಾಲವಾಡ, ರಾಜಣ್ಣ ಕೊರವಿ ಈ ಪೈಕಿ ಪ್ರಮುಖರು. ಸಂಘಟನಾತ್ಮಕವಾಗಿ ಬಿಜೆಪಿ ಈ ಕ್ಷೇತ್ರದಲ್ಲಿ ಪ್ರಬಲವಾಗಿದೆ. ಸದಸ್ಯತ್ವ ಅಭಿಯಾನದಲ್ಲಿ ಅತಿ ಹೆಚ್ಚು ಸದಸ್ಯರನ್ನು ನೋಂದಣಿ ಮಾಡುವ ಮೂಲಕ ರಾಜ್ಯದಲ್ಲಿಯೇ ಈ ಕ್ಷೇತ್ರ ಪ್ರಥಮ ಸ್ಥಾನದಲ್ಲಿತ್ತು. ಈ ಅಂಶಗಳು ಶೆಟ್ಟರ್ ಅವರಿಗೆ ಪ್ಲಸ್ ಆಗುತ್ತಲೇ ಬಂದಿವೆ.
ಏಳನೇ ಬಾರಿಯೂ ತಾವೇ ಅಭ್ಯರ್ಥಿ ಎಂದು ಜಗದೀಶ ಶೆಟ್ಟರ್ ಹೇಳಿಕೊಂಡಿದ್ದಾರೆ. ಬೇರೆ ಕ್ಷೇತ್ರಕ್ಕೆ ಹೋಗುವ ಪ್ರಶ್ನೆ ಇಲ್ಲವೇ ಇಲ್ಲ ಎಂದು ಪುನರುಚ್ಚರಿಸಿದ್ದಾರೆ. ಶೆಟ್ಟರ್ ಈ ರೀತಿ ಹೇಳಿಕೊಳ್ಳುವುದಕ್ಕೂ ಸಕಾರಣವಿದೆ. ‘ ಜಗದೀಶ ಶೆಟ್ಟರ್ ಅವರಿಗೆ ರಾಜ್ಯಪಾಲ ಸ್ಥಾನ ನೀಡಲಾಗುತ್ತಿದೆ, ಬೇರೆ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹೈಕಮಾಂಡ್ ಸೂಚಿಸಲಿದೆ’ ಎಂಬಿತ್ಯಾದಿ ಮಾತುಗಳು ಹರಿದಾಡುತ್ತಿವೆ. ಪುತ್ರ ಸಂಕಲ್ಪ ಶೆಟ್ಟರ್ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟು ರಾಜಕೀಯ ಭವಿಷ್ಯ ಕಟ್ಟಿಕೊಡಲಿದ್ದಾರೆ ಎನ್ನುವ ಮಾತೂ ಕೇಳಿ ಬಂದಿತ್ತು. ಆದರೆ, ಇವೆಲ್ಲ ಗಾಳಿಮಾತು ಎನ್ನುವ ಮೂಲಕ ಶೆಟ್ಟರ್ ನಿಲುವು ಸ್ಪಷ್ಟ ಪಡಿಸಿದ್ದಾರೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರೂ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನುವ ಸುದ್ದಿ ಬಲವಾಗಿ ಸದ್ದು ಮಾಡಿದೆ. ಶೆಟ್ಟರ್ ಅಭ್ಯರ್ಥಿ ಆಗದೇ ಹೋದಲ್ಲಿ ತಾವೂ ಆಕಾಂಕ್ಷಿ ಎಂದು ಉದ್ಯಮಿ ವಿ.ಎಸ್.ವಿ. ಪ್ರಸಾದ ಹೇಳಿದ್ದಾರೆ.
ಎದುರಾಳಿ ಕಾಂಗ್ರೆಸ್ ಸಹ ಕ್ಷೇತ್ರದಲ್ಲಿ ಸಂಘಟನಾತ್ಮಕವಾಗಿ ಪ್ರಬಲವಾಗಿದೆ. ಹಾಗಂತ ಶೆಟ್ಟರ್ ಅವರನ್ನು ಸೋಲಿಸಲು ಆಗಿಲ್ಲ. ಈ ಬಾರಿ ರಜತ ಉಳ್ಳಾಗಡ್ಡಿಮಠ ಕ್ಷೇತ್ರದಲ್ಲಿ ರಚನಾತ್ಮಕ ಹೋರಾಟ, ಕಾರ್ಯಕ್ರಮಗಳ ಮೂಲಕ ಸಂಚಲನ ಮೂಡಿಸಿದ್ದಾರೆ. ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ (ಸಂಬಂಧಿ) ರಜತ ಬೆನ್ನಿಗಿದ್ದಾರೆ. ಮಾಜಿ ಮೇಯರ್ ಅನಿಲ ಪಾಟೀಲ, ಸದಾನಂದ ಡಂಗನವರ, ಗಿರೀಶ ಗದಿಗೆಪ್ಪಗೌಡರ, ಸತೀಶ ಮೆಹರವಾಡೆ, ಫಾರುಕ್ ಅಬುನವರ, ಮೆಹಬೂಬ ಪಾಷಾ ಹಾಗೂ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಕಾಂಗ್ರೆಸ್ ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಕ್ಷೇತ್ರದಲ್ಲಿ ಜೆಡಿಎಸ್ ಅಷ್ಟಕ್ಕಷ್ಟೇ. ರಾಜು ನಾಯಕವಾಡ, ತುಳಸಿಕಾಂತ ಖೋಡೆ, ಸಿದ್ದುಮಹಾಂತ ಒಡೆಯರ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. 1989ರಲ್ಲಿ ಕಾಂಗ್ರೆಸ್​ನಿಂದ ಜಿ.ಆರ್. ಸಾಂಡ್ರಾ ಗೆಲುವು ಸಾಧಿಸಿದ್ದೇ ಕೊನೆಯದ್ದು. ಅದರ ನಂತರ ಸತತವಾಗಿ ಈ ಕ್ಷೇತ್ರ ಬಿಜೆಪಿ ಹಿಡಿತದಲ್ಲಿದೆ ಎನ್ನುವುದು ಗಮನಾರ್ಹ.

ಶೆಟ್ಟರ್ ಪ್ಲಸ್- ಮೈನಸ್
+ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದ್ದು, ಕಾರ್ಯಕರ್ತರ ಪಡೆ ಸಂಘಟನೆಯಲ್ಲಿ ನಿರಂತರವಾಗಿ ಸಕ್ರಿಯವಾಗಿದೆ
+ ಚುನಾವಣೆ ಇಲ್ಲದ ಸಮಯದಲ್ಲಿಯೂ ಸಂಘಟನಾತ್ಮಕ ಚಟುವಟಿಕೆ ನಿಂತಿಲ್ಲ.
+ ಬಸವರಾಜ ಬೊಮ್ಮಾಯಿ ಆಡಳಿತದಲ್ಲಿ ಶೆಟ್ಟರ್ ಸಚಿವ ಸ್ಥಾನ ಪಡೆಯಲು ನಿರಾಕರಿಸಿ, ಕ್ಷೇತ್ರಕ್ಕಾಗಿ ಹೆಚ್ಚಿನ ಸಮಯ ಮೀಸಲಿಟ್ಟರು.
+ ಶೆಟ್ಟರ್ ಹುಬ್ಬಳ್ಳಿಯಲ್ಲಿ ಇದ್ದಾಗ ಜನರಿಗೆ ಸರಳವಾಗಿ ಸಿಗುತ್ತಾರೆ.
– ಬಿಆರ್​ಟಿಎಸ್ ಶೆಟ್ಟರ್ ಕನಸಿನ ಯೋಜನೆ ಆಗಿತ್ತು. ಆದರೆ, ಈ ಯೋಜನೆ ಜನರಿಗೆ ಅನುಕೂಲಕ್ಕಿಂತ ಅನನುಕೂಲವೇ ಆಯಿತು.
– ಎಲ್ಲ ವಾರ್ಡ್​ಗಳಿಗೆ ನಿರಂತರ ನೀರು ಯೋಜನೆ ಇನ್ನೂ ವಿಸ್ತರಣೆಯಾಗಿಲ್ಲ.
ಜಾತಿ ಲೆಕ್ಕಾಚಾರಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಲಿಂಗಾಯತ (ಶೇ. 17.54) ಹಾಗೂ ಮುಸ್ಲಿಂ (ಶೇ. 17.61) ಮತದಾರರು ಸಮನಾಗಿದ್ದಾರೆ. ಪರಿಶಿಷ್ಟ ಜಾತಿ (ಶೇ. 11.56), ಮರಾಠಾ (ಶೇ. 8.15), ಬ್ರಾಹ್ಮಣ (ಶೇ. 9.15) ಮತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವವರು ಜಯ ಗಳಿಸುವುದು ಖಚಿತ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 15 =
Remember me
