| ಮೇಧಾ ಪ್ರಹ್ಲಾದಾಚಾರ್ಯ ಜೋಶಿಭಾದ್ರಪದ ಶುಕ್ಲ ನವಮಿಯಂದು ದಾಸಶ್ರೇಷ್ಠರಾದ, ದಾಸ ಚತುಷ್ಟಯರಲ್ಲೊಬ್ಬರಾದ, ಕರ್ಣಾಟಕದ ಹರಿದಾಸ ಪರಂಪರೆಯಲ್ಲಿ ತಮ್ಮ ಅಸಾಮಾನ್ಯ ಕೃತಿಗಳಿಂದ ಅಮರರಾದ, ಹರಿದಾಸ ಸಾಹಿತ್ಯಕ್ಕೆ ಮಾಣಿಕ್ಯದಂತಿರುವ ಶ್ರೀಜಗನ್ನಾಥದಾಸರ ಆರಾಧನೆ. ಹರಿದಾಸ ಸಾಹಿತ್ಯಕ್ಕೆ ಭದ್ರಬುನಾದಿ ಹಾಕಿದ ಮಹಾನುಭಾವರಲ್ಲಿ ಜಗನ್ನಾಥದಾಸರು ಒಬ್ಬರು.
ರಾಯಚೂರು ಪ್ರಾಂತ್ಯದ ನರಸಿಂಹಾಚಾರ್ಯ ಮತ್ತು ಲಕ್ಷ್ಮಮ್ಮ ದಂಪತಿಗಳಲ್ಲಿ ಜನಿಸಿ ಶ್ರೀನಿವಾಸಾಚಾರ್ಯರಾದರು. ಶ್ರೀ ವರದೇಂದ್ರ ತೀರ್ಥರಲ್ಲಿ ಸಕಲ ಶಾಸ್ತ್ರಗಳನ್ನು ಆಳವಾಗಿ ಅಧ್ಯಯನ ಮಾಡಿ ಚತುಃಶಾಸ್ತ್ರ ವಿದ್ವಾಂಸರಾದರು.
ಗುರು ಅನುಗ್ರಹ:ಒಮ್ಮೆ ಭೃಗು ಋಷಿಗಳ ಅಂಶ ಸಂಭೂತರಾದ ಶ್ರೀವಿಜಯದಾಸರು ಮಾನ್ವಿಗೆ ಆಗಮಿಸಿದರು. ಹರಿದಾಸ ಸಂಕೀರ್ತನೆಯಲ್ಲಿ ತೊಡಗಿದ ಅವರು ಮಧ್ಯಾಹ್ನ ತೀರ್ಥ ಪ್ರಸಾದಕ್ಕೆಂದು ಶ್ರೀನಿವಾಸಾಚಾರ್ಯರನ್ನು ಕರೆಕಳಿಸಿದರು. ಮಹಾನ್ ವಿದ್ವಾಂಸರಾದ ಶ್ರೀನಿವಾಸಾಚಾರ್ಯರು ಏನೋ ಕಾರಣಾಂತರಗಳಿಂದ ಉದರಬಾಧೆಯಾಗಿದೆ ಬರಲು ಸಾಧ್ಯವಿಲ್ಲ ಎಂದು ಮರು ಹೇಳಿಕಳಿಸುತ್ತಾರೆ. ವಿಜಯದಾಸರು ಆಗಲಿ ಹರಿಚಿತ್ತ ಎಂದು ಹೇಳುತ್ತಾರೆ. ಕೆಲವೇ ಕ್ಷಣಗಳಲ್ಲಿ ಶ್ರೀನಿವಾಸಾಚಾರ್ಯರು ಭಯಂಕರ ಹೊಟ್ಟೆ ನೋವಿನಿಂದ ಬಳಲುತ್ತಾರೆ. ಮಂತ್ರಾಲಯ ಪ್ರಭುಗಳ ಸೇವೆ ಮಾಡುತ್ತಾರೆ. ರಾಯರು ಸ್ವಪ್ನದಲ್ಲಿ ಬಂದು ವಿಜಯದಾಸರ ಆಮಂತ್ರಣ ಮೀರಿದ್ದಕ್ಕೆ ಅವರ ಬಳಿಗೇ ಹೋಗಿ ಕ್ಷಮೆ ಕೇಳಿ ಎಂದು ಆಜ್ಞೆ ಮಾಡುತ್ತಾರೆ.
ತಕ್ಷಣವೇ ವಿಜಯದಾಸರಲ್ಲಿಗೆ ಹೋಗಿ ಕ್ಷಮೆ ಕೇಳಿ ಶಿಷ್ಯರಾಗುತ್ತಾರೆ. ಈ ಉದರಬಾಧೆಯ ಪರಿಹಾರಕ್ಕಾಗಿ ನಮ್ಮ ಶಿಷ್ಯರಾದ ಗೋಪಾಲದಾಸರ ಬಳಿ ಹೋಗಿ ಎಂದು ಕಳಿಸಿಕೊಡುತ್ತಾರೆ. ಗೋಪಾಲದಾಸರು ಶ್ರೀನಿವಾಸಾಚಾರ್ಯರಿಗಾಗಿ ಧನ್ವಂತರಿಯ ವಿಶೇಷ ಉಪಾಸನೆಯನ್ನು ಮಾಡುತ್ತಾರೆ. ನಿತ್ಯ ದೇವರಿಗೆ ನಿವೇದಿಸಿದ ಒಂದು ಜೋಳದ ಭಕ್ಕರಿ (ರೊಟ್ಟಿ)ಯನ್ನು ಕೊಡುತ್ತಾರೆ. ಎನ್ನ ಭಿನ್ನಪ ಕೇಳು ಧನ್ವಂತ್ರಿ ದಯಮಾಡು ಎಂದು ಪ್ರಾರ್ಥಿಸುತ್ತಾರೆ. ಮುಂದೆ ಕೆಲವೇ ದಿನಗಳಲ್ಲಿ ಶ್ರೀನಿವಾಸಾಚಾರ್ಯರು ಮೊದಲಿಗಿಂತಲೂ ಚೈತನ್ಯಭರಿತರಾಗುತ್ತಾರೆ. ತಿಮ್ಮಪ್ಪನ ಸನ್ನಿಧಿಯಲ್ಲಿ ಪ್ರಾರ್ಥಿಸಿ ಶ್ರೀನಿವಾಸಾಚಾರ್ಯರಿಗೆ ತಮ್ಮ ಜೀವನದ ಇಪ್ಪತ್ತು ವರ್ಷಗಳ ಆಯುಷ್ಯವನ್ನೇ ಧಾರೆ ಎರೆದ ಮಹಾನುಭಾವರು ಗೋಪಾಲದಾಸರು. ಅವರ ಆಜ್ಞೆಯಂತೆ ಪಂಡರಪುರಕ್ಕೆ ಹೋಗಿ ಪಾಂಡುರಂಗನ ದರ್ಶನ ಪಡೆಯುತ್ತಾರೆ. ಚಂದ್ರಭಾಗೆಯಲ್ಲಿ ಮಿಂದು ಮೇಲೇಳುವಾಗ ಅವರ ಬಲಭಾಗಕ್ಕೆ ಒಂದು ಶಿಲೆ ಸಿಗುತ್ತದೆ. ಅದರ ಮೇಲೆ ಜಗನ್ನಾಥ ವಿಠಲ ಎಂಬ ಅಂಕಿತ ಬರೆದಿರುತ್ತದೆ. ಆ ಶಿಲೆಯನ್ನು ಶಿರದ ಮೇಲಿಟ್ಟುಕೊಂಡು, ‘ಎಂದು ಕಾಂಬೆನೋ ಪಾಂಡುರಂಗ ಮೂರುತಿಯಾ’ ಎಂದು ಕೊಂಡಾಡುತ್ತ ಶ್ರೀನಿವಾಸಾಚಾರ್ಯರು ಶ್ರೀ ಜಗನ್ನಾಥದಾಸರಾಗುತ್ತಾರೆ.
‘ರತುನ ದೊರಕಿತಲ್ಲ (ವಿಜಯದಾಸರೆಂಬ) ಎನಗೆ ದಿವ್ಯ. ಗೋಪಾಲದಾಸರಾಯಾ ನಿನ್ನಯ ಪಾದ ನಾ ಪೊಂದಿದೆ’ ಎಂದು ಹೀಗೆ ವಿಜಯದಾಸ ಗೋಪಾಲದಾಸರ ಅನನ್ಯ ಉಪಕಾರವನ್ನು ಸ್ಮರಿಸಿ ಕೊಂಡಾಡಿದ್ದಾರೆ. ಮಂತ್ರಾಲಯ ಪ್ರಭುಗಳಾದ ರಾಯರ ಅನನ್ಯ ಭಕ್ತರು ಶ್ರೀಜಗನ್ನಾಥದಾಸರು. ರಾಯರ ಮೇಲೆ ಅನೇಕ ಪದ್ಯಗಳನ್ನು ರಚಿಸಿದ್ದಾರೆ.
ತತ್ತ್ವಜ್ಞಾನ ಸೇವೆ:ವ್ಯಾಸ ಮಧ್ವರ ವಾಂಗ್ಮಯಗಳನ್ನು ತಿಳಿಯುವ ಪ್ರಯಾಸ ದೇವತೆಗಳು ಸಹ ಮಾಡುತ್ತಿರುವಾಗ ಜನಸಾಮಾನ್ಯರಿಗೆ ತತ್ತ್ವಜ್ಞಾನದ ಪ್ರಚಾರ ಹೇಗೆ ಎಂದು ಚಿಂತಿಸಿ ಸಮಸ್ತ ಸಮಾಜಕ್ಕೆ ಸಾಧನೆಯ ಗ್ರಂಥವನ್ನು ರಚಿಸಿದರು. ಅದುವೇ ಶ್ರೀಹರಿಕಥಾಮೃತಸಾರವೆಂಬ ಮೇರು ಕೃತಿ. ವೇದ, ಉಪನಿಷತ್ತುಗಳು, ರಾಮಾಯಣ, ಮಹಾಭಾರತ ಮತ್ತು ಸಕಲ ಪುರಾಣಗಳ ಸಾರಭೂತವಾಗಿ ಹರಿ ಕಥೆಗಳನ್ನು ಅಮೃತದಂತೆ ಸಮಸ್ತ ಸಮಾಜಕ್ಕೆ ನೀಡಿ ಉಪಕಾರ ಮಾಡಿದ್ದಾರೆ. ಗ್ರಂಥದ ರಚನೆಯಲ್ಲಿ ಅನೇಕ ವಿಘ್ನಗಳು ಬಂದಾಗ ಗಣಪತಿಯನ್ನು ಪ್ರಾರ್ಥಿಸಿ ಶ್ರೀವಿಘ್ನೕಶ್ವರ ಸಂಧಿಯನ್ನು ರಚಿಸಿದರು. ಸವಣೂರಿನಲ್ಲಿ ನೆಲೆಸಿದ ಶ್ರೀಸತ್ಯಬೋಧತೀರ್ಥರ ಕಂಡು ಪ್ರಾರ್ಥಿಸಿ ಮುಂದಿನ ಸಂಧಿಗಳನ್ನೆಲ್ಲ ಅಲ್ಲಿಯೇ ರಚಿಸಿದರು. ಹೀಗೆ ಸತ್ಯಬೋಧರ ಅನುಗ್ರಹದಿಂದ ಭಾಮಿನಿ ಷಟ್ಪದಿಯಲ್ಲಿ 32 ಸಂಧಿಗಳಿಂದ ಕೂಡಿದ ಮೇರುಗ್ರಂಥ ಶ್ರೀಹರಿಕಥಾಮೃತಸಾರದ ರಚನೆ ಪೂರ್ಣಗೊಂಡಿತು ಎಂದು ಅವರ ಚರಿತ್ರೆಯಲ್ಲಿ ಉಲ್ಲೇಖಗೊಂಡಿದೆ. ಜಗನ್ನಾಥದಾಸರು ಗುರುಕಾಣಿಕೆಯಾಗಿ ತಮ್ಮ ಗೋಪಾಳದ ಬುಟ್ಟಿಯನ್ನು ಶ್ರೀಸತ್ಯಬೋಧರಿಗೆ ಕೊಟ್ಟರು. ಅನುಗ್ರಹರೂಪವಾಗಿ ಸತ್ಯಬೋಧರ ಪಾದುಕೆಗಳನ್ನೂ ಪಡೆದರು. ಆ ಪಾದುಕೆಗಳು ಇಂದಿಗೂ ಮಾನ್ವಿಯಲ್ಲಿವೆ. ಸತ್ಯಬೋಧರ ಮೇಲೆ ಸ್ತೋತ್ರ ಹಾಗೂ ಪದ್ಯಗಳನ್ನು ರಚಿಸಿದ್ದಾರೆ.
ಸಂಸ್ಕೃತದ ಶಾಸ್ತ್ರೀಯ ಗ್ರಂಥಗಳಿಗೆ ಬೇರೆ ಭಾಷೆಗಳಲ್ಲಿ ವ್ಯಾಖ್ಯಾನ ಇರುವುದು ಸಾಮಾನ್ಯ. ಆದರೆ, ಒಂದು ಕನ್ನಡದ ಗ್ರಂಥಕ್ಕೆ ಸಂಸ್ಕೃತದಲ್ಲಿ ವ್ಯಾಖ್ಯಾನವಿರುವ ಮೇರು ಗ್ರಂಥ ಹರಿಕಥಾಮೃತಸಾರ.
ಹರಿಕಥಾಮೃತಸಾರಕ್ಕೆ ಅನೇಕ ಭಾಷೆಗಳಲ್ಲಿ ವ್ಯಾಖ್ಯಾನಗಳಿವೆ. ಸುಲಭವಾಗಿ ಜಿಹ್ವೆಗೆ ನಿಲುಕದ ಗಂಭೀರ ಸಾಹಿತ್ಯ ಹರಿಕಥಾಮೃತಸಾರದ್ದು. ಇದರ ನಿತ್ಯ ಪಾರಾಯಣ ಸರ್ವಸಿದ್ಧಿಗೆ ಕಾರಣ. ಸಾಂಸಾರಿಕ ಜೀವನದಲ್ಲಿಯೇ ಇದ್ದು ಅದನ್ನು ಗೆದ್ದು ತೋರಿಸುವ ಮರ್ಮವನ್ನು ಬಹಳ ಸುಂದರವಾಗಿ ಉಪದೇಶಿಸಿದ್ದಾರೆ.
ಮಹಾನ್ ವಿದ್ವಾಂಸರಾದ ಜಗನ್ನಾಥದಾಸರು ಶಾಸ್ತ್ರದ ಜಟಿಲ ಪ್ರಮೇಯಗಳನ್ನೆಲ್ಲ ಅರ್ಥೈಸುವ ತತ್ತ್ವಸುವ್ವಾಲಿಯನ್ನು ರಚಿಸಿದರು. ನರಸಿಂಹ ದೇವರು, ಪ್ರಾಣದೇವರು ಮೊದಲಾಗಿ ನವಬೃಂದಾವನ ಗುರುಗಳು ಹೀಗೆ ಎಲ್ಲ ಗುರುಗಳನ್ನೂ ಕುರಿತು ಅನೇಕ ಪದ್ಯಗಳನ್ನು ರಚಿಸಿದ್ದಾರೆ.
ಹುಟ್ಟಿದ ಮನುಷ್ಯ ಬದುಕನ್ನು ಸಾರ್ಥಕಗೊಳಿಸುವುದು ಹೇಗೆ? ಎಂದು ತಿಳಿಸಲು ಫಲವಿದು ಬಾಳ್ದುದಕೆ ಎಂಬ ಕೀರ್ತನೆಯನ್ನು ಹೇಳಿದರು. ನಮ್ಮ ಹರಿದಾಸ ಸಾಹಿತ್ಯ ವ್ಯಾಸ ಸಾಹಿತ್ಯಕ್ಕೆ ಬಿಂಬ ಪ್ರತಿಬಿಂಬದಂತೆ. ಎಲ್ಲ ವಿದೇಶಿಯ ತತ್ವಜ್ಞಾನಿಗಳು ಸಹ ಇದಕ್ಕೆ ಶರಣಾಗಿದ್ದಾರೆ. ಜಗನ್ನಾಥದಾಸರು ಹೇಳಿದ ‘ವಿಸ್ಮರಣೆಯೇ ನರಕ. ಸ್ಮೃತಿಯೇ ಸ್ವರ್ಗ ’ ಎಂಬ ಸಂದೇಶವನ್ನೇ, ಗ್ರೀಕ್ ತತ್ವಜ್ಞಾನಿ ಸಾಕ್ರಟೆಸ್ kಟಡ್ಝಿಛಿಛಜಛಿ ಜಿಠ ಡಜ್ಟಿಠ್ಠಿಛಿ, ಜಿಜ್ಞಟ್ಟಚ್ಞ್ಚ ಜಿಠ ಡಜ್ಚಿಛಿ’ ಎಂದು ಹೇಳಿದನು.
ಈಶನಲಿ ವಿಜ್ಞಾನ, ಭಗವದ್ದಾಸರಲಿ ಸದ್ಭಕ್ತಿ, ವಿಷಯನಿರಾಸೆ, ಈ ಸಮಸ್ತ ಪ್ರಾಣಿಗಳಲಿ ರಮೇಶನಿಹನೆಂದರಿತು, ಅವರಭಿಲಾಷೆಗಳ ಪೂರೈಸುವುದೆ ಮಹಯಜ್ಞ ಹರಿಪೂಜೆ – ಎಂಬ ಸಮಷ್ಟಿ ದೃಷ್ಟಿಕೋನವನ್ನು ಜಗತ್ತಿಗೆ ಸಾರಿದ ಮಹಾನುಭಾವರು. ಬೃಹಸ್ಪತ್ಯಾಚಾರ್ಯರ ಅಂಶ ಸಂಭೂತರೆನೆಸಿದ ಶ್ರೀಜಗನ್ನಾಥದಾಸರು ತಮ್ಮ 81ನೇ ವಯಸ್ಸಿನಲ್ಲಿ ತಮ್ಮ ಸ್ವಗ್ರಾಮ ಮಾನವಿಯಲ್ಲಿ ದೇಹತ್ಯಾಗ ಮಾಡಿದರು.
ಜಲಜೇಷ್ಟ ನಿಭಾಕಾರಂ ಜಗದೀಶ ಪದಾಶ್ರಯಮ್
ಜಗತೀತಲ ವಿಖ್ಯಾತಂ ಜಗನ್ನಾಥಗುರುಂ ಭಜೇ||
ಕೇಂದ್ರ ಸರ್ಕಾರದಿಂದ ಹೊಸ ಪ್ರಶಸ್ತಿ ಘೋಷಣೆ; ರಾಷ್ಟ್ರೀಯ ಬಾಹ್ಯಾಕಾಶ ದಿನದಂದೇ ಪ್ರದಾನ: ಇಲ್ಲಿದೆ ವಿವರ..

ಸೂಕ್ತ ಎಚ್ಚರಿಕೆ ವಹಿಸದಿದ್ದರೆ ಮುಂದಿನ ಕೆಲವು ವರ್ಷಗಳಲ್ಲಿ 7.6 ಕೋಟಿ ಸಾವು ಸಾಧ್ಯತೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × five =
Remember me
