| ಸದೇಶ್ ಕಾರ್ವಡ್ ಮೈಸೂರು
ನಾಡಿಗೆ ಆವರಿಸಿರುವ ಭೀಕರ ಬರಗಾಲ ದೂರವಾಗಲಿ ಎಂಬ ಪ್ರಾರ್ಥನೆಯೊಂದಿಗೆ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಅ.15ರಂದು ಪ್ರಾರಂಭಗೊಂಡ 414ನೇ ವರ್ಷದ ನಾಡಹಬ್ಬ ‘ದಸರಾ ಉತ್ಸವ’ ನವರಾತ್ರಿಗಳು ಕಳೆದು, ವಿಜಯದಶಮಿ ದಿನವಾದ ಮಂಗಳವಾರ ‘ಜಂಬೂಸವಾರಿ’ ಮೆರವಣಿಗೆಯೊಂದಿಗೆ ವೈಭವಯುತವಾಗಿ ಸಂಪನ್ನಗೊಂಡಿತು.
ಅರಮನೆಯ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 1.46ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಬಹುನಿರೀಕ್ಷಿತ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಮಧ್ಯಾಹ್ನ 2.04ಕ್ಕೆ ಸಚಿವರು, ಶಾಸಕರೊಂದಿಗೆ ಅರಮನೆ ಆವರಣಕ್ಕೆ ಆಗಮಿಸಿದರು. ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ತಾಯಿ ಶ್ರೀ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಅರಮನೆ ಆವರಣದಲ್ಲಿ ಸಂಜೆ 4.40ರಿಂದ 5 ಗಂಟೆ ಅವಧಿಯ ಶುಭ ಮೀನ ಲಗ್ನದಲ್ಲಿ ಗಣ್ಯರು ಪುಷ್ಪಾರ್ಚನೆ ಮಾಡಬೇಕಾಗಿತ್ತು. ಆದರೆ, ಸಂಜೆ 5.09ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರ ಗಣ್ಯರು ಪುಷ್ಪಾರ್ಚನೆ ನೆರವೇರಿಸುವ ಮೂಲಕ ‘ಚಿನ್ನದ ಅಂಬಾರಿ’ ಮೆರವಣಿಗೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವಿ.ವರಾಳೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಶಿವರಾಜ ತಂಗಡಗಿ, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಮೈಸೂರು ರಾಜಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಇದ್ದರು. ಪುಷ್ಪಾರ್ಚನೆ ನೆರವೇರಿಸುತ್ತಿದ್ದಂತೆಯೇ ಫಿರಂಗಿ ಮೂಲಕ 21 ಸುತ್ತು ಕುಶಾಲುತೋಪುಗಳನ್ನು ಸಿಡಿಸಲಾಯಿತು. ಈ ಸಂದರ್ಭ ರಾಷ್ಟ್ರಗೀತೆ ಮೊಳಗುತ್ತಿದ್ದಂತೆಯೇ ಅಂಬಾರಿ ಆನೆ ಅಭಿಮನ್ಯು ಸೊಂಡಿಲು ಎತ್ತಿ ಸೆಲ್ಯೂಟ್ ಹೊಡೆಯುವ ಮೂಲಕ ರಾಷ್ಟ್ರಗೀತೆಗೆ ಗೌರವ ಸಲ್ಲಿಸಿತು. ರಾಷ್ಟ್ರಗೀತೆ ಮುಕ್ತಾಯಗೊಂಡ ನಂತರ ಅಂಬಾರಿ ಹೊತ್ತು ಅಭಿಮನ್ಯು ಬನ್ನಿಮಂಟಪದ ಕಡೆಗೆ ಹೆಜ್ಜೆ ಹಾಕಲು ಪ್ರಾರಂಭಿಸಿದ. 5,300 ಕೆ.ಜಿ. ದೇಹತೂಕ ಹೊಂದಿರುವ 57 ವರ್ಷದ ಅಭಿಮನ್ಯು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿಯನ್ನು ಸತತ 4ನೇ ಬಾರಿ ಯಶಸ್ವಿಯಾಗಿ ಹೊತ್ತು ಸಾಗಿದ.
ಜಂಬೂಸವಾರಿಯಲ್ಲಿ ಗಜವೈಭವದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಗತವೈಭವ ಮರುಕಳಿಸಿತು. ಅಂಬಾರಿಯ ಮುಂಭಾಗ 200ಕ್ಕೂ ಹೆಚ್ಚು ಜನರು ರಾಜಪೋಷಾಕು ಧರಿಸಿ, ವಿವಿಧ ಲಾಂಛನ ಹಿಡಿದು ಹೆಜ್ಜೆ ಹಾಕಿದ್ದು ಈ ಬಾರಿಯ ವಿಶೇಷವಾಗಿತ್ತು. ಸಂಪ್ರದಾಯ ಮತ್ತು ರಾಜವೈಭವವನ್ನು ಕಣ್ಣಿಗೆ ಕಟ್ಟಿಕೊಡುವ ಉದ್ದೇಶದಿಂದ ಪ್ರಥಮ ಬಾರಿಗೆ ಇಂಥದೊಂದು ಪ್ರಯತ್ನ ನಡೆಯಿತು. ರಾಜರ ಆಳ್ವಿಕೆಯ ಕಾಲದಲ್ಲಿ ಜರುಗುತ್ತಿದ್ದ ಅಂಬಾರಿ ಮೆರವಣಿಗೆಯಲ್ಲಿ 20-30 ಕೆಜಿ ತೂಕದ ಪಂಚಲೋಹದಿಂದ ಮಾಡಿದ ಲಾಂಛನಗಳನ್ನು ಹಿಡಿದು ಸೈನಿಕರು ಸಾಗುತ್ತಿದ್ದರು. ಇದೇ ಮಾದರಿಯ ಲಾಂಛನ ಹಾಗೂ ವೇಷವನ್ನು ತೊಟ್ಟ ಜನರು ಸಾಗಿದ್ದು ಕಣ್ಮನ ತಣಿಸಿತು.
ಅರಮನೆಗೆ ಬಾರದ ಗಜಪಡೆಇದೇ ಪ್ರಥಮ ಬಾರಿಗೆ ಅರಮನೆಗೆ ಪೂರ್ಣ ಪ್ರಮಾಣದ ಗಜಪಡೆ ಆಗಮಿಸದೆ ವಿಜಯದಶಮಿ ಮೆರವಣಿಗೆ ಪ್ರಾರಂಭಗೊಂಡಿತು. ಪೊಲೀಸ್ ಹಾಗೂ ಅರಣ್ಯ ಇಲಾಖೆ ನಡುವಿನ ಸಮನ್ವಯ ಕೊರತೆಯಿಂದ ಮೆರವಣಿಗೆ ತಡವಾಗಿ ಪ್ರಾರಂಭಗೊಂಡಿತು. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಆನೆಗಳನ್ನು ಸಿದ್ಧಪಡಿಸುವ ಪರಿಕರ ಇದ್ದ ವಾಹನವನ್ನು ಅರಮನೆ ಆವರಣಕ್ಕೆ ಪೊಲೀಸರು ಬಿಡಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಆನೆಗಳನ್ನು ಸಿದ್ಧಪಡಿಸುವುದು ತಡವಾಯಿತು. ಹೀಗಾಗಿ, ವಿಜಯದಶಮಿ ಮೆರವಣಿಗೆ ಆನೆಗಳು ಇಲ್ಲದೆ ಮಧ್ಯಾಹ್ನ 2.31ಕ್ಕೆ ಕಲಾತಂಡಗಳ ಮೆರವಣಿಗೆಯೊಂದಿಗೆ ಪ್ರಾರಂಭಗೊಂಡಿತು. ಮೆರವಣಿಗೆಯನ್ನು ಮುನ್ನಡೆಸಬೇಕಾಗಿದ್ದ ನಿಶಾನೆ ಆನೆ ಅರ್ಜುನ ಆಗಮಿಸಿದಾಗ ಸಮಯ ಮಧ್ಯಾಹ್ನ 2.39 ಆಗಿತ್ತು. ಈ ಆನೆ ಅರಮನೆ ಆವರಣಕ್ಕೆ ತಡವಾಗಿ ಆಗಮಿಸಿ ಮೆರವಣಿಗೆಯನ್ನು ಸೇರಿಕೊಂಡಿತು.
ಮೈನವಿರೇಳಿಸಿದ ವಜ್ರಮುಷ್ಟಿಅಂಬಾವಿಲಾಸ ಅರಮನೆಯಲ್ಲಿ ಸಂಪ್ರದಾಯದಂತೆ ನಡೆದ ಪಾರಂಪರಿಕ ವಜ್ರಮುಷ್ಟಿ ಕಾಳಗದಲ್ಲಿ ಮೈಸೂರಿನ ಉಸ್ತಾದ್ ಬಾಲಾಜಿ ಅವರ ಶಿಷ್ಯ ಎಸ್.ಪ್ರದೀಪ್ ಜಟ್ಟಿ ಮತ್ತು ಚನ್ನಪಟ್ಟಣದ ಉಸ್ತಾದ್ ಪುರುಷೋತ್ತಮ್ ಜಟ್ಟಿ ಶಿಷ್ಯ ಪ್ರವೀಣ್ ಜಟ್ಟಿ ಹಾಗೂ ಚಾಮರಾಜನಗರದ ಉಸ್ತಾದ್ ಬಂಗಾರ ಜಟ್ಟಿ ಶಿಷ್ಯ ವೆಂಕಟೇಶ್ ಜಟ್ಟಿ ಮತ್ತು ಬೆಂಗಳೂರಿನ ಉಸ್ತಾದ್ ಕೃಷ್ಣ ಜಟ್ಟಿ ಶಿಷ್ಯ ಪ್ರಮೋದ್ ಜಟ್ಟಿ ನಡುವೆ ಕಾಳಗ ಏರ್ಪಟ್ಟಿತು. ಕಾಳಗದಲ್ಲಿ ರಕ್ತ ಚಿಮ್ಮಿದ ಕಾರಣ ಶುಭಸೂಚಕ ಎಂಬಂತೆ ಅಲ್ಲಿಗೆ ಮಂಗಳ ಹಾಡಲಾಯಿತು.

ಎದೆ ಝುಲ್ಲೆನಿಸಿದ ಏರ್ ಶೋದಸರಾ ಮಹೋತ್ಸವದ ಅಂಗವಾಗಿ ಸೋಮವಾರ ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಭಾರತೀಯ ವಾಯುಪಡೆಯ ಸೂರ್ಯಕಿರಣ ತಂಡದ ವಿಮಾನಗಳು ಮೂಡಿಸಿದ ಚಮತ್ಕಾರ ನೋಡುಗರನ್ನು ಮುದಗೊಳಿಸುವಲ್ಲಿ ಯಶಸ್ವಿಯಾದವು. ಆಗಸದಲ್ಲಿ ಲೋಹದ ಹಕ್ಕಿಗಳ ಚಮತ್ಕಾರ ನೋಡುಗರನ್ನು ಹುಬ್ಬೇರಿಸುವಂತೆ ಮಾಡಿತು.
ವಾಲಿದ ಅಂಬಾರಿಅಭಿಮನ್ಯು ಆನೆಯ ಬೆನ್ನಿನ ಮೇಲೆ ಚಿನ್ನದ ಅಂಬಾರಿಯನ್ನು ಸರಿಯಾಗಿ ಕಟ್ಟದ ಕಾರಣ ತುಸು ಎಡಕ್ಕೆ ವಾಲಿಕೊಂಡಿತ್ತು. ಅಂಬಾರಿಯೊಳಗಿನ ಶ್ರೀ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ನೆರವೇರಿಸುವ ಸಂದರ್ಭ ಅಂಬಾರಿ ಸರಿಯಾಗಿಯೇ ಇತ್ತು. ಆದರೆ, ಅರಮನೆ ಆವರಣ ದಾಟಿದ ನಂತರ ಎಡಕ್ಕೆ ವಾಲಿಕೊಳ್ಳಲು ಪ್ರಾರಂಭಿಸಿತು. ಆದರೆ, ಇದರಿಂದ ಮೆರವಣಿಗೆಗೆ ಯಾವುದೇ ರೀತಿಯ ವಿಘ್ನ ಎದುರಾಗಲಿಲ್ಲ.
ಯದುವೀರರಿಂದ ಬನ್ನಿ ಪೂಜೆವಜ್ರಮುಷ್ಟಿ ಕಾಳಗದ ಬಳಿಕ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅರಮನೆ ಅಂಗಳದಲ್ಲಿ ಮಂಗಳವಾರ ವಿಜಯಯಾತ್ರೆಯ ವಿಧಿವಿಧಾನಗಳನ್ನು ನೆರವೇರಿಸಿದರು. ಉತ್ತರ ದಿಕ್ಕಿನಲ್ಲಿರುವ ಭುವನೇಶ್ವರಿ ಅಮ್ಮನವರ ದೇಗುಲಕ್ಕೆ ತೆರಳಿ ಬನ್ನಿಮರಕ್ಕೆ ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಸಿ, ಬನ್ನಿ ಮಹಾಕಾಳಿಯಮ್ಮನ ಆಶೀರ್ವಾದ ಪಡೆದುಕೊಂಡರು. ಅಲ್ಲಿಂದ ಹೊರಟ ಯದುವೀರ, ವಿಜಯಯಾತ್ರೆ ಮುಂದುವರಿಸಿ ಅರಮನೆ ತಲುಪಿದರು. ಈ ಮೂಲಕ ರಾಜಮನೆತನದ ನವರಾತ್ರಿ ಪೂಜಾ ಕೈಂಕರ್ಯಗಳಿಗೆ ಅಂತಿಮ ತೆರೆ ಬಿತ್ತು.

ಮಂಗಳೂರು ದಸರಾ ಸಂಪನ್ನಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿ ಮಹೋತ್ಸವ ನವದುರ್ಗೆಯರ ಶೋಭಾಯಾತ್ರೆಯೊಂದಿಗೆ ಮಂಗಳವಾರ ಸಂಪನ್ನಗೊಂಡಿತು. ಕುದ್ರೋಳಿ ಕ್ಷೇತ್ರದಲ್ಲಿ ಅ.15ರಿಂದ ನವರಾತ್ರಿ ಆರಂಭಗೊಂಡು 10 ದಿನಗಳ ಪರ್ಯಂತ ವಿಶೇಷ ಧಾರ್ವಿುಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯ ಕಲಾಪಗಳ ಮೂಲಕ ಕ್ಷೇತ್ರವು ಎಲ್ಲರ ಗಮನ ಸೆಳೆಯಿತು. ಮಹಾಗಣಪತಿಯ ವಿಗ್ರಹಕ್ಕೆ ಪೂಜೆ ನೆರವೇರಿಸಿ ಶೋಭಾಯಾತ್ರೆಯ ಮುಂಚೂಣಿಯ ವಾಹನದಲ್ಲಿ ಇರಿಸಲಾಯಿತು. ಬಳಿಕ ಬ್ರಹ್ಮಶ್ರೀ ನಾರಾಯಣಗುರು, ಆದಿಶಕ್ತಿ, ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿಯರೊಂದಿಗೆ ಶಾರದಾ ಮಾತೆಯ ವಿಗ್ರಹಗಳ ಮೆರವಣಿಗೆ ಹಾದಿಯುದ್ದಕ್ಕೂ ಜನರ ಕಣ್ಮನ ಸೆಳೆಯಿತು. ಕೇರಳ ಶೈಲಿ ಕೊಡೆಗಳು, ಚೆಂಡೆ ಲಾರಿ ತುಂಬ ಕೇಕೆ ಹಾಕುವ ಹುಲಿವೇಷಗಳು, ಪುರಾಣ ಕಥೆಗಳ ಸಂದರ್ಭಗಳನ್ನು ವ್ಯಕ್ತಪಡಿಸುವ ಸ್ತಬ್ಧಚಿತ್ರ, ಬ್ಯಾಂಡ್​ಸೆಟ್​ಗಳು, ನೂರಕ್ಕೂ ಅಧಿಕ ವೇಷಭೂ ಷಣ, ವಾದ್ಯಮೇಳ ತಂಡ, ಭಜನಾ ತಂಡಗಳು, ಗೊಂಬೆ ಕುಣಿತದ ತಂಡಗಳು ಭಾಗವಹಿಸಿದ್ದವು. ವಿವಿಧೆಡೆ ಆರ್ಕೆಸ್ಟ್ರಾ ತಂಡಗಳು ಶೋಭಾಯಾತ್ರೆಯ ಹುರುಪು ಹೆಚ್ಚಿಸಿದವು. ಮಂಗಳೂರಿನ ಮಂಗಳಾದೇವಿ ದೇವಳದಲ್ಲಿಯೂ ನವರಾತ್ರಿ ಮಹೋತ್ಸವ ಮಂಗಳವಾರ ಸಮಾಪನಗೊಂಡಿತು.
ಜಂಬೂಸವಾರಿ ವೇಳೆ ಭದ್ರತಾ ವೈಫಲ್ಯ: ಅಭಿಮನ್ಯು ಬಳಿ ಹೋಗಲೆತ್ನಿಸಿದ ಮಂಗಳಮುಖಿಯರ ತಂಡ

ಜಂಬೂಸವಾರಿ ಮಾರ್ಗದಲ್ಲಿ ನೂಕುನುಗ್ಗಲು: ಜನರ ನಿಯಂತ್ರಣಕ್ಕೆ ಲಾಠಿ ಬೀಸಿದ ಪೊಲೀಸರು

ಬಿಕ್ಕಟ್ಟು: ಇಂಧನ ಕೊರತೆಯಿಂದ ದಿವಾಳಿಯ ಅಂಚಿನಲ್ಲಿರುವ ಪಾಕಿಸ್ತಾನ ಏರ್‌ಲೈನ್ಸ್, 26 ವಿಮಾನಗಳ ಹಾರಾಟ ರದ್ದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
