ಕೆ.ಎನ್.ರಾಘವೇಂದ್ರ
ಮಂಡ್ಯ:ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ‘150 ಟಾರ್ಗೆಟ್’ ಹಾಗೂ ಹಳೇ ಮೈಸೂರಿನಲ್ಲಿ ‘ಕಮಲ’ ಅರಳಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಶುಕ್ರವಾರ ಸಕ್ಕರೆ ನಾಡು ಮಂಡ್ಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ನೇತೃತ್ವದಲ್ಲಿ ನಡೆದ ಜನಸಂಕಲ್ಪ ಯಾತ್ರೆ ಮೂಲಕ ಬಿಜೆಪಿ ರಣಕಹಳೆ ಮೊಳಗಿಸಿದೆ. ಮಂಡ್ಯದಲ್ಲಿ ಬಿಜೆಪಿಗೆ ಜನಬೆಂಬಲವಿಲ್ಲ ಎನ್ನುವ ಟೀಕೆಯ ನಡುವೆ ನಿರೀಕ್ಷೆಗೂ ಮೀರಿ ಸಾವಿರಾರು ಜನರನ್ನು ಸೇರಿಸುವ ಮೂಲಕ ವಿಪಕ್ಷಗಳ ವಿರುದ್ಧ ತೊಡೆ ತಟ್ಟಿದೆ. ಒಕ್ಕಲಿಗರ ಕೋಟೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಆರೋಪಗಳ ಸುರಿಮಳೆ ಸುರಿಸುವ ಮೂಲಕ ಮತದಾರರನ್ನು ಸೆಳೆಯುವ ಹಾಗೂ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸವನ್ನು ಷಾ ಮಾಡಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಅಧಿಕಾರ ಹಿಡಿಯಬೇಕಾದರೆ ಹಳೆಯ ಮೈಸೂರು ಭಾಗದಲ್ಲಿ ನೆಲೆ ಕಂಡುಕೊಳ್ಳಬೇಕಾಗಿದೆ. ಬೆಂಗಳೂರು ನಗರದಲ್ಲಿ ಕನಿಷ್ಠ 20 ಹಾಗೂ ಹಳೆಯ ಮೈಸೂರು ಭಾಗದ ಇತರೆಡೆ ಕನಿಷ್ಠ 35 ಕ್ಷೇತ್ರಗಳನ್ನು ಗೆಲ್ಲ್ಲದ್ದರೆ ಅಧಿಕಾರ ಕನಸಿನ ಮಾತಾಗುತ್ತದೆ. ಆದ್ದರಿಂದಲೇ ಈ ಭಾಗದ ಚುನಾವಣಾ ಜವಾಬ್ದಾರಿಯನ್ನು ಸ್ವತಃ ಅಮಿತ್ ಷಾ ಅವರೇ ಹೊತ್ತಿದ್ದಾರೆ. ಬೆಂಗಳೂರಿನಲ್ಲಿಯೂ ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಹಲವು ಸಭೆಗಳನ್ನು ನಡೆಸುವ ಮೂಲಕ ನೆಲೆ ಭದ್ರ ಮಾಡಲು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಕಾರ್ಯತಂತ್ರವನ್ನು ಷಾ ಅವರೇ ರೂಪಿಸಿದ್ದು, ಅದನ್ನು ಜಾರಿಗೊಳಿಸುವ ಹೊಣೆಯನ್ನು ರಾಜ್ಯ ನಾಯಕರಿಗೆ ನೀಡಿದ್ದಾರೆ.
ಮಂಡ್ಯವನ್ನು ಮೈಸೂರು ಭಾಗಕ್ಕೆ ಕೇಂದ್ರವನ್ನಾಗಿ ಮಾಡಿಕೊಂಡು ಜನಸಂಕಲ್ಪ ಯಾತ್ರೆ ಆಯೋಜಿಸಲಾಗಿತ್ತು. ರಾಷ್ಟ್ರಮಟ್ಟದ ಪ್ರಮುಖ ನಾಯಕರು ಭಾಗವಹಿಸುತ್ತಿರುವ ಮೊದಲ ಜನಸಂಕಲ್ಪ ಯಾತ್ರೆಯಾಗಿದ್ದ ಕಾರಣಕ್ಕೆ ರಾಜ್ಯಮಟ್ಟದ ನಾಯಕರಿಗೂ ಪ್ರತಿಷ್ಠೆಯಾಗಿತ್ತು. ಈ ಹಿನ್ನೆಲೆಯಲ್ಲಿ ವ್ಯವಸ್ಥಿತ ಕಾರ್ಯಕ್ರಮಕ್ಕೆ ಬೆಳಗ್ಗೆಯಿಂದಲೇ ಪಕ್ಷದ ಕಾರ್ಯಕರ್ತರ ದಂಡು ಹರಿದುಬಂತು. ಮಂಡ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದು ನಾಯಕರಲ್ಲೂ ಹುಮ್ಮಸ್ಸು ಹೆಚ್ಚಿಸಿತು.
ಸಮಾವೇಶದಲ್ಲಿ ಅಮಿತ್ ಷಾ ಸೇರಿ ಬಿಜೆಪಿಯ ನಾಯಕರು ಜೆಡಿಎಸ್ ಮತ್ತು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು. ಅಧಿಕಾರಕ್ಕೆ ಬಂದರೂ ಒಕ್ಕಲಿಗ ಸಮುದಾಯದ ನಾಯಕ ನಾಡಪ್ರಭು ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡಲಿಲ್ಲ. ಇಷ್ಟು ವರ್ಷಗಳ ಕಾಲ ಆ ಎರಡು ಪಕ್ಷವನ್ನು ಬೆಂಬಲಿಸಿದ್ದಕ್ಕೆ ಆಗಿರುವ ಅಭಿವೃದ್ಧಿ ಕೆಲಸವೇನಿಲ್ಲ ಎಂದು ಟೀಕಿಸಿದರಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನೀಡಿರುವ ಯೋಜನೆಗಳನ್ನು ವಿವರಿಸಿದರು. ಪ್ರಮುಖವಾಗಿ ಜಿಲ್ಲೆಯ ಭಾವನಾತ್ಮಕ ವಿಷಯ ಸಕ್ಕರೆ ಕಾರ್ಖಾನೆ, ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ ಕುರಿತು ಪ್ರಸ್ತಾಪಿಸಿದರು.
ಪ್ರತಿಮೆ ಸ್ಥಾಪನೆ: ಟಿಪ್ಪು ವಿರುದ್ಧ ಹೋರಾಟ ಮಾಡಿದ ಉರಿನಂಜೇಗೌಡ ಮತ್ತು ದೊಡ್ಡನಂಜೇಗೌಡ ನೆನಪಿಗಾಗಿ ಜಿಲ್ಲೆಯಲ್ಲಿ ಪ್ರತಿಮೆ ನಿರ್ಮಾಣ ಮಾಡುವ ಘೊಷಣೆ ಮಾಡಲಾಯಿತು.
ಜೆಡಿಎಸ್, ಕಾಂಗ್ರೆಸ್​ನಿಂದ ಕ್ರಿಮಿನಲ್​ಗಳ ಪೋಷಣೆ: ಕಾಂಗ್ರೆಸ್ ಮತ್ತು ಜೆಡಿಎಸ್ ಕ್ರಿಮಿನಲ್​ಗಳನ್ನು ಪೋಷಿಸುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಟೀಕಿಸಿದರು. ಜಾತಿವಾದಿಗಳು, ಅಪರಾಧಿಗಳಿಗೆ ಪ್ರೋತ್ಸಾಹ ಕೊಡುವ ಇವರಿಂದ ದೇಶದ ಉದ್ಧಾರ ಹೇಗೆ ಸಾಧ್ಯ? ಭ್ರಷ್ಟಾಚಾರದಲ್ಲಿ ಎರಡೂ ಪಕ್ಷಗಳು ಪಾಲು ಪಡೆದಿವೆ. ಕುಟುಂಬವಾದ ಮತ್ತು ಭ್ರಷ್ಟಾಚಾರಮುಕ್ತಕ್ಕಾಗಿ ಬಿಜೆಪಿಗೆ ಪೂರ್ಣ ಬಹುಮತ ನೀಡುವಂತೆ ಮಂಡ್ಯ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಮನವಿ ಮಾಡಿದರು.
ಹಳೇ ಮೈಸೂರು ಭಾಗದ ಜನರು ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವಕ್ಕೆ ಬೆಂಬಲ ಕೊಡಬೇಕಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಪಿಎಫ್​ಐನವರ 150 ಕೇಸ್​ಗಳನ್ನು ವಾಪಸ್ ಪಡೆಯಲಾಗಿತ್ತು. ಇದು ಎಂತಹ ಅನಾಹುತಕ್ಕೆ ಕಾರಣವಾಗಿದೆ ಎನ್ನುವುದು ಗೊತ್ತಿದೆ. ಆದರೆ, ನರೇಂದ್ರ ಮೋದಿ ಪಿಎಫ್​ಐ ಬ್ಯಾನ್ ಮಾಡಿದ್ದಾರೆ. ಭಾರತವನ್ನು ಸದೃಢವನ್ನಾಗಿಸಿ ದೇಶದ ಶಕ್ತಿಯನ್ನು ತೋರಿಸುವ ಕೆಲಸ ಮಾಡಲು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಕೋರಿದರು.
ಬಿಎಸ್​ವೈಗೆ ಬಹುಪರಾಕ್
ಜನಸಂಕಲ್ಪ ಯಾತ್ರೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಗೈರು ಎದ್ದು ಕಾಣುತ್ತಿತ್ತು. ಆದರೂ, ಜಿಲ್ಲೆಯ ಜನರು ಅವರ ಮೇಲಿನ ಅಭಿಮಾನ ವನ್ನು ವ್ಯಕ್ತಪಡಿಸಿದರು. ನಾಯಕರು ಬಿಎಸ್​ವೈ ಹಾಗೂ ಬಿ.ವೈ. ವಿಜಯೇಂದ್ರ ಹೆಸರು ಹೇಳುತ್ತಿದ್ದಂತೆ ಕಾರ್ಯಕರ್ತರು ಶಿಳ್ಳೆ, ಚಪ್ಪಾಳೆ ಮೂಲಕ ಜೈಕಾರ ಕೂಗುತ್ತಿದ್ದದ್ದು ಗಮನ ಸೆಳೆಯಿತು.
ಪ್ರಧಾನಿ ನರೇಂದ್ರ ಮೋದಿ ಆಡಳಿತ, ಅಮಿತ್ ಷಾ ಪರಿಶ್ರಮದ ಏಕತೆಯ ನಡೆ ಇಡೀ ವಿಶ್ವಕ್ಕೆ ಮಾದರಿ. ಕಾಶ್ಮೀರ, ನಕ್ಸಲೈಟ್ ಸಮಸ್ಯೆಯನ್ನು ಬಗೆಹರಿಸಿ ಅಖಂಡತೆಯಲ್ಲಿ ಏಕತೆ ತಂದಿದ್ದಾರೆ. ಗುಜರಾತ್​ನಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ದಾಖಲೆ ನಿರ್ವಿುಸಿದ್ದು, 2023ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನ ಇಲ್ಲ.| ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
ಬರಡು ನೆಲದಲ್ಲೂ ಕಮಲ ಅರಳಿಸುವುದು ಅಮಿತ್ ಷಾಗೆ ಗೊತ್ತಿದೆ. ಅದಕ್ಕಾಗಿಯೇ ಅವರನ್ನು ಚುನಾವಣಾ ಚಾಣಕ್ಯ ಎನ್ನುತ್ತಾರೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಕಾರ್ಯತಂತ್ರ ರೂಪಿಸುವ ಭಾಗವಾಗಿ ಷಾ ಭೇಟಿ ನೀಡಿದ್ದಾರೆ. ಅಸಾಧ್ಯ ಎನ್ನುವ ಪದ ಅವರ ಡಿಕ್ಷನರಿಯಲ್ಲೇ ಇಲ್ಲ. ಅವರು ಎಲ್ಲೇ ಹೋದರೂ ತಮ್ಮ ಚಾಣಾಕ್ಷತನದಿಂದ ಬಿಜೆಪಿಗೆ ಗೆಲುವು ತಂದುಕೊಡುತ್ತಾರೆ.| ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
