ಬೆಂಗಳೂರು:ಜಾತ್ಯತೀತ ಜನತಾದಳದ ರಾಷ್ಟ್ರೀಯ ಕಾರ್ಯಕಾರಿಣಿ ಮತ್ತು ರಾಷ್ಟ್ರೀಯ ಪರಿಷತ್ ಸಭೆ ಅ.27-28ರಂದು ರಾಜಧಾನಿ ಬೆಂಗಳೂರಿನಲ್ಲಿ ಇರುವ ಪಕ್ಷದ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ನಡೆಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.
ಇಂದು ಸುದ್ದಿಗಾರರ ಜತೆ ಮಾತನಾಡುತ್ತ ಈ ವಿಷಯ ತಿಳಿಸಿದ ಅವರು, ಕಾರ್ಯಕಾರಿಣಿ ಸಭೆಯಲ್ಲಿ ಕರ್ನಾಟಕವೂ ಸೇರಿ 13 ರಾಜ್ಯಗಳಿಂದ ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರು ಭಾಗಿಯಾಗಲಿದ್ದಾರೆ ಎಂದರು.
ಈ ಕಾರ್ಯಕಾರಿಣಿ ಸಭೆಯಲ್ಲಿ ರಾಷ್ಟ್ರ-ರಾಜ್ಯದ ರಾಜಕೀಯ ಬೆಳವಣಿಗೆ, ಆರ್ಥಿಕ ವಿಚಾರಗಳು, ಕೋಮುಸಂಘರ್ಷದ ವಿಷಯಗಳನ್ನು ಚರ್ಚಿಸಲಾಗುವುದು. ಎರಡೂ ದಿನಗಳ ಸಭೆಯಲ್ಲಿ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ಎಂದು ಅವರು ಹೇಳಿದರು.
ಪಂಚರತ್ನ ರಥಯಾತ್ರೆ ನ. 1ರಂದು ಪ್ರಾರಂಭ ಆಗಲಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ರಥಯಾತ್ರೆ ಆರಂಭ ಮಾಡಲಾಗುವುದು. ಅದಕ್ಕೂ ಮೊದಲು ಗುರುವಾರ ಬೆಳಗ್ಗೆ ಬೆಂಗಳೂರಿನ ಗವಿಗಂಗಾಧರ ದೇವಸ್ಥಾನದಲ್ಲಿ ಒಂದು ರಥಕ್ಕೆ ಪೂಜೆ ನಡೆಸಲಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.
1994ರಲ್ಲಿ ಹೆಚ್.ಡಿ.ದೇವೇಗೌಡರು ಕುರುಡುಮಲೆಯಿಂದಲೇ ಚುನಾವಣಾ ಪ್ರಚಾರ ಆರಂಭ ಮಾಡಿದ್ದರು. ಆಗ ಅವರು ಅಮೋಘ ಬಹುಮತ ಗಳಿಸಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿದ್ದರು. ಈಗ ನಾವೂ ಅಲ್ಲಿಂದಲೇ ಪಂಚರತ್ನ ರಥಯಾತ್ರೆ ಆರಂಭ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು. ಮುಂದಿನ ವಿಧಾನಸಭೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನ. 1ರ ಸಾರ್ವಜನಿಕ ಸಮಾರಂಭದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದೂ ಅವರು ತಿಳಿಸಿದರು.
ನ.1ರಿಂದ 5ರವರೆಗೆ ಕೋಲಾರ ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳಲ್ಲಿ ರಥಯಾತ್ರೆ ನಡೆಯಲಿದೆ. ನ.6ರಿಂದ 10ರವರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ, 11ರಿಂದ 13ರವರೆಗೆ ಬೆಂಗಳೂರು ಗ್ರಾಮಾಂತರ, 14ರಿಂದ 23ರವರೆಗೆ ತುಮಕೂರು, 24ರಿಂದ 30ರವರೆಗೆ ಹಾಸನ, ಡಿ.1ರಂದು ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಹಾಗೂ ಡಿ.2ರಿಂದ 5ರವರೆಗೆ ರಾಮನಗರ ಜಿಲ್ಲೆಯಲ್ಲಿ ರಥಯಾತ್ರೆ ಸಂಚಾರ ಮಾಡಲಿದೆ ಎಂದು ಅವರು ಮಾಹಿತಿ ನೀಡಿದರು.
ಒಟ್ಟು 35 ದಿನಗಳ ಕಾಲ ನಡೆಯುವ ಮೊದಲ‌ ಹಂತದ ರಥ ಯಾತ್ರೆಯಲ್ಲಿ ಅನೇಕ ಹಳ್ಳಿ, ಪಟ್ಟಣಗಳನ್ನು ತಲುಪುತ್ತೇವೆ. ಉದ್ಯೋಗ, ಶಿಕ್ಷಣ, ನೀರಾವರಿ, ಕೃಷಿ, ಆರೋಗ್ಯ, ಮಹಿಳಾ ಮತ್ತು ಯುವಜನ ಸಬಲೀಕರಣ ಕುರಿತಂತೆ ರೂಪಿಸಿರುವ ಪಂಚರತ್ನ ಯೋಜನೆ ಇದಾಗಿದೆ ಎಂದು ಅವರು ಹೇಳಿದರು.
ಹೊಸ ವರುಷದ ಜನವರಿ ತಿಂಗಳಲ್ಲಿ ಮೈಸೂರಿನ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಪೂಜೆ ನಡೆಸಿ ಆ ಭಾಗದಲ್ಲಿ ಪಂಚರತ್ನ ರಥಯಾತ್ರೆ ಆರಂಭ ಮಾಡಲಾಗುವುದು. ಮುಖ್ಯವಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ದೊಡ್ಡ ಸಮಾವೇಶ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದೇವೆ. ಜನವರಿ ನಂತರ ಜಿ.ಟಿ.ದೇವೇಗೌಡರು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದರು ಅವರು.
ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕ್ರಮಗಳಿಗೂ ನಮ್ಮ ಕಾರ್ಯಕ್ರಮಗಳಿಗೂ ವ್ಯತ್ಯಾಸ ಇದೆ. ಯಾವ ನಾಯಕರ ಬಗ್ಗೆಯೂ ನಾವು ಟೀಕೆ ಮಾಡಲ್ಲ. ನಮ್ಮದು ನಿಂದನಾ ಯಾತ್ರೆ ಅಲ್ಲ. ಜನರಿಗೆ ನಮ್ಮ ಕಾರ್ಯಕ್ರಮಗಳ ಬಗ್ಗೆ ತಿಳಿಸುತ್ತೇವೆ. ಭಾರತ್ ಜೋಡೋ ಕಾರ್ಯಕ್ರಮದ ಬಗ್ಗೆ ಯಾವುದೇ ಆತಂಕ ಇಲ್ಲ. ನಮ್ಮ ರಥಯಾತ್ರೆ ವಿನೂತನವಾಗಿ ಇರಲಿದೆ. ಅಭಿವೃದ್ಧಿಗೆ ಪೂರಕವಾಗಿ ಇರಲಿದೆ. ಒಟ್ಟು 120 ಕ್ಷೇತ್ರಗಳಿಗೆ ಪ್ರವಾಸ ಮಾಡುತ್ತೇವೆ. ಮಾರ್ಚ್ 15ರ ವರೆಗೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ನಾನು ಪಂಚರತ್ನ ರಥಯಾತ್ರೆ ಆರಂಭ ಮಾಡುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸುವುದು ಕಷ್ಟ. ಈ ಬಗ್ಗೆ ವಿಧಾನಸಭಾಧ್ಯಕ್ಷರಿಗೆ ಮಾಹಿತಿ ನೀಡುತ್ತೇನೆ. ನನ್ನ ಪರವಾಗಿ ನಮ್ಮ ಪಕ್ಷದ ಶಾಸಕರು ಅಧಿವೇಶನದಲ್ಲಿ ಭಾಗವಹಿಸುತ್ತಾರೆ. ಸಮಯ ಬಹಳ ಕಡಿಮೆ ಇದೆ. ಚುನಾವಣೆಗೂ ಸಿದ್ದರಾಗಬೇಕಿದೆ. ಪಂಚರತ್ನ ಕಾರ್ಯಕ್ರಮದಲ್ಲಿ ನಾನು ಹೆಚ್ಚು ತೊಡಗಿಸಿಕೊಳ್ಳುತ್ತೇನೆ. ನಮ್ಮ ಎಲ್ಲ ಶಾಸಕರಿಗೆ ಭಾಗವಹಿಸಲು ಸೂಚಿಸಿದ್ದೇನೆ ಎಂದು ಎಚ್​ಡಿಕೆ ತಿಳಿಸಿದರು.ಈ ಸಂದರ್ಭದಲ್ಲಿ ಪಕ್ಷದ ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಹಾಜರಿದ್ದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
