ಬೆಂಗಳೂರು:ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರಲು ಜೆಡಿಎಸ್ ಈಗ ಬೇರು ಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಮುಂದಾಗಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಎಲ್ಲ 224 ಕ್ಷೇತ್ರಗಳಲ್ಲೂ ಬೂತ್ ಮಟ್ಟದ ಸಮಿತಿ ರಚನಾ ಪ್ರಕ್ರಿಯೆ ಆರಂಭಿಸಿದೆ. ಜತೆಗೆ 250 ಯುವಕರನ್ನು ಒಳಗೊಂಡ ವಾರ್ ರೂಂ ಸ್ಥಾಪಿಸಿ ಕಾರ್ಯಾಚರಣೆಗೆ ಇಳಿಯಲಿದೆ. ಆ ಮೂಲಕ ಪಕ್ಷ ಸಂಘಟನೆ, ಚುನಾವಣಾ ಪ್ರಚಾರ, ಪ್ರಣಾಳಿಕೆ ಪ್ರಚಾರ ಕೈಗೊಂಡು ಚುನಾವಣಾ ಕಣವನ್ನು ರಂಗೇರಿಸಲು ಮುಂದಾಗಿದೆ. 2023ರ ಚುನಾವಣೆಯಲ್ಲಿ ಮಿಷನ್ 123 ಗುರಿ ಇಟ್ಟುಕೊಂಡು 126 ಕ್ಷೇತ್ರಗಳನ್ನು ಗಂಭೀರವಾಗಿ ಪರಿಗಣಿಸಿರುವ ಜೆಡಿಎಸ್ ಪಂಚರತ್ನ ರಥಯಾತ್ರೆ ಆರಂಭಿಸಿದೆ.
‘ವಿಜಯವಾಣಿ’ ಸಂವಾದದಲ್ಲಿ ಈ ಕುರಿತು ಮಾಹಿತಿ ನೀಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ತಮ್ಮ ಚುನಾವಣಾ ಕಾರ್ಯತಂತ್ರ, ಪ್ರಣಾಳಿಕೆಯ ಪ್ರಮುಖ ಅಂಶ, ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದರೆ ಜನ ಕಲ್ಯಾಣಕ್ಕಾಗಿ ಕೈಗೊಳ್ಳಲಿರುವ ಕಾರ್ಯಕ್ರಮಗಳನ್ನು ಬಿಚ್ಚಿಟ್ಟರು. ಮುಳಬಾಗಿಲಿನಿಂದ ನ.18ರಂದು ಆರಂಭವಾಗುವ ಪಂಚರತ್ನ ರಥಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಸುಮಾರು 90 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿದರು. ಬಿಜೆಪಿ ಹಾಗೂ ಕಾಂಗ್ರೆಸ್ ಕೆಲವರು ಸಂಪರ್ಕದಲ್ಲಿದ್ದಾರೆ. ಅದರಲ್ಲಿ ಕೆಲವರು ಹಾಲಿ ಶಾಸಕರೂ ಸೇರಿದ್ದಾರೆ. ಇನ್ನು ಕೆಲವರು ನೀವು ಒಂದೇ ರೂಪಾಯಿ ಕೊಡಬೇಡಿ. ಟಿಕೆಟ್ ಕೊಡಿ ನಾವು ಗೆದ್ದು ಬರುತ್ತೇವೆ ಎಂದು ಹೇಳಿರುವ ಸಮರ್ಥರೂ ಇದ್ದಾರೆ ಎಂದು ತಿಳಿಸಿದರು.
2 ಹಂತದಲ್ಲಿ ಪಂಚರತ್ನ ಯಾತ್ರೆ:ಪಂಚರತ್ನ ಯಾತ್ರೆ 2 ಹಂತದಲ್ಲಿ ನಡೆಯಲಿದೆ. ಮುಳಬಾಗಿಲಿನಿಂದ ನ.18 ರಂದು ಆರಂಭಗೊಂಡು ಡಿಸೆಂಬರ್ 29 ರವರೆಗೆ ನಡೆಯಲಿದೆ. 2ನೇ ಹಂತದ ರಥಯಾತ್ರೆ ಜ.3 ರಿಂದ ಕಲಬುರಗಿಯಿಂದ ಆರಂಭವಾಗಿ ಮಾರ್ಚ್15ಕ್ಕೆ ಮೈಸೂರಿನಲ್ಲಿ ಕೊನೆಗೊಳ್ಳಲಿದೆ. ಮೈಸೂರಿನಲ್ಲಿ ಸುಮಾರು 10-15 ಲಕ್ಷ ಜನರನ್ನು ಸೇರಿಸಿ ಬೃಹತ್ ಸಮಾವೇಶ ಮಾಡುವ ಉದ್ದೇಶವಿದೆ ಎಂದರು.
ಪ್ರತಿ ಕ್ಷೇತ್ರದಲ್ಲಿ 3 ಸಭೆ, 1 ಗ್ರಾಮ ವಾಸ್ತವ್ಯ:ಪಂಚರತ್ನ ಯಾತ್ರೆ ಸಂದರ್ಭದಲ್ಲಿ ಪ್ರತಿ ಕ್ಷೇತ್ರದಲ್ಲಿ 3 ಸಭೆಗಳನ್ನು 6 ಬೀದಿ ಬದಿ ಸಭೆ, 30-35 ಗ್ರಾಮಗಳ ಭೇಟಿ, 1 ಗ್ರಾಮದಲ್ಲಿ ವಾಸ್ತವ್ಯ ಮಾಡುವ ಕಾರ್ಯಸೂಚಿ ಸಿದ್ಧಪಡಿಸಲಾಗಿದೆ. 22 ಜಿಲ್ಲೆಗಳ 126 ಕ್ಷೇತ್ರಗಳಲ್ಲಿ ಪಂಚರತ್ನ ಯಾತ್ರೆ ನಡೆಯಲಿದೆ. ದೊಡ್ಡ ದೊಡ್ಡ ಬಹಿರಂಗಸಭೆಗಳಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭಾಗವಹಿಸುತ್ತಾರೆ ಎಂದು ಹೇಳಿದರು.
ಜನಸ್ಪಂದನಕ್ಕೆ ಪರ್ಯಾಯವಲ್ಲ:ಜನಸ್ಪಂದನ ಯಾತ್ರೆಗೆ ಪಂಚರತ್ನ ಯಾತ್ರೆ ಪರ್ಯಾಯವೂ ಅಲ್ಲ. ಎಲ್ಲೂ ನಾವು ಯಾರನ್ನೂ ಟೀಕಿಸಲೂ ಹೋಗುವುದಿಲ್ಲ. ಪರಸ್ಪರ ಟೀಕೆ-ಟಿಪ್ಪಣಿಯಿಂದ ಜನರಿಗೆ ಏನೂ ಪ್ರಯೋಜನವಾಗುವುದಿಲ್ಲ. ಒಂದೆರಡು ದಿನ ಖುಷಿಯಾಗಬಹುದಷ್ಟೆ. ನಾವು ನಮ್ಮ ಪಕ್ಷ ಜನ ಕಲ್ಯಾಣಕ್ಕಾಗಿ ರೂಪಿಸಿರುವ ಕಾರ್ಯಕ್ರಮಗಳನ್ನು ಜನರ ಮನೆ ಬಾಗಿಲಿಗೆ ತಲುಪಿ ಸುವ ಕೆಲಸ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಗುಜರಾತ್ ಎಫೆಕ್ಟ್ ಇಲ್ಲ:ಗುಜರಾತ್ ಚುನಾವಣೆ ನಮ್ಮ ಪಕ್ಷದ ಮೇಲೆ ಎಫೆಕ್ಟ್ ಆಗುವುದಿಲ್ಲ. ಎಎಪಿ ಇಲ್ಲಿ ಟೇಕ್ ಆಫ್ ಆಗುವುದು ಕಷ್ಟ. ಇಲ್ಲಿನ ವ್ಯವಸ್ಥೆಯೇ ಬೇರೆ. ನಾವೂ ಎಲ್ಲ ರೀತಿಯಲ್ಲೂ ಇಂದಿನ ಚುನಾವಣಾ ವ್ಯವಸ್ಥೆಗೆ ಸಜ್ಜಾಗಿದ್ದೇವೆ. ಅದಕ್ಕೆ ಪೂರಕವಾಗಿ ತಯಾರಿ ನಡೆಸಿದ್ದೇವೆ ಎಂದು ತಿಳಿಸಿದರು.
ನಿಖಿಲ್ ಸ್ಪರ್ಧೆ ಇಲ್ಲ, ಭವಾನಿಗೆ ಭರವಸೆ ಇಲ್ಲ:ನಮ್ಮ ಕುಟುಂಬದಿಂದ ಹೊಸಬರನ್ನು ಕಣಕ್ಕಿಳಿಸುವ ಆಲೋಚನೆ ಇಲ್ಲ. ನಿಖಿಲ್, ಭವಾನಿ ರೇವಣ್ಣ ಅವರನ್ನು ಚುನಾವಣಾ ಕಣಕ್ಕಿಳಿಸುವಂತೆ ಒತ್ತಡ ಬರುತ್ತಿವೆ. ಆದರೆ ನಿಖಿಲ್​ರನ್ನು ಕಣಕ್ಕಿಳಿಸದೇ 40-50 ಕ್ಷೇತ್ರಗಳ ಪ್ರಚಾರದ ಹೊಣೆಯನ್ನು ಅವರಿಗೆ ವಹಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಹಿಂದು ಗೊಂದಲ ಸ್ವೀಕರಿಸಲ್ಲ:ಹಿಂದು ಧರ್ವಧಾರಿತ ಗೊಂದಲಗಳನ್ನು ಅಂತಿಮವಾಗಿ ಸ್ವೀಕರಿಸುವುದಿಲ್ಲ. ಭಾವನಾತ್ಮಕ ವಿಷಯಗಳು ಚುನಾವಣೆಯಲ್ಲಿ ಇಳುವರಿ ತಂದುಕೊಡುವುದಿಲ್ಲ. ಇದನ್ನು ಜನ ನಂಬುವುದಿಲ್ಲ. ಇದು ಜನರ ಸಮಸ್ಯೆಗಳಿಗೆ ಪರಿಹಾರವೂ ಅಲ್ಲ ಎಂದು ಹೇಳಿದರು.
90 ಕ್ಷೇತ್ರದ ಗೆಲುವು ಸುಲಭ:ಈಗಿನ ಲೆಕ್ಕಾಚಾರದ ಪ್ರಕಾರ 75-90 ಸೀಟು ಗೆಲ್ಲಲು ನಮಗೆ ತೊಂದರೆ ಇಲ್ಲ. ಹಿಂದಿನ ಮೂರು ಚುನಾವಣೆಗಳನ್ನು ವಿಶ್ಲೇಷಿಸಿ ನಾವು ಚುನಾವಣಾ ಕಾರ್ಯತಂತ್ರ ರೂಪಿಸಿದ್ದೇವೆ. 2013ರ ಚುನಾವಣೆಯಲ್ಲಿ ಜೆಡಿಎಸ್​ನ್ನು ಬಿಜೆಪಿ ಬಿ ಟೀಂ ಎಂದು ಅಪಪ್ರಚಾರ ಮಾಡಿ 15-20 ಸ್ಥಾನ ಹಿನ್ನೆಡೆ ಮಾಡಲಾಯಿತು. ಈ ಬಾರಿ ಅಂತಹ ಪರಿಸ್ಥಿತಿ ಇಲ್ಲ. ನಾವು ಎರಡೂ ಪಕ್ಷಗಳ ನಡುವೆ ಸಮಾನ ಅಂತರ ಕಾಯ್ದುಕೊಂಡಿದ್ದೇವೆ ಎಂದು ಹೇಳಿದರು.
‘ಪಂಚರತ್ನ ರಥಯಾತ್ರೆ; ನವ ಕರ್ನಾಟಕ ನಿರ್ವಣಕ್ಕಾಗಿ ಮಹಾಯಾತ್ರೆ ’ ಹೆಸರಿನಲ್ಲಿ ಈ ರಥಯಾತ್ರೆ ಕೈಗೊಳ್ಳಲಾಗುತ್ತಿದೆ. ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಪಂಚರತ್ನ ಪರಿಪೂರ್ಣ ಪರಿಹಾರ ಎಂದು ಬಿಂಬಿಸಲಾಗುತ್ತಿದೆ. ಶಿಕ್ಷಣವೆ ಆಧುನಿಕ ಶಕ್ತಿ, ಆರೋಗ್ಯ ಸಂಪತ್ತು. ಕೃಷಿ ಚೈತನ್ಯ, ಯುವ ನವಮಾರ್ಗ ಮತ್ತು ಮಹಿಳಾ ಸಬಲೀಕರಣ ಹಾಗೂ ವಸತಿ ಆಸರೆ ಪಂಚರತ್ನ ಯೋಜನೆಗಳಾಗಿವೆ. ಚುನಾವಣೆ ಪ್ರಣಾಳಿಕೆಯಲ್ಲಿ ಕೂಡ ಈ ಐದು ಅಂಶಗಳೇ ಪ್ರಮುಖ ಯೋಜನೆಗಳಾಗಿರುತ್ತವೆ ಎಂದು ಕುಮಾರಸ್ವಾಮಿ ವಿವರಿಸಿದರು.
ಮಧ್ಯರಾತ್ರಿಯಲ್ಲಿ ಕಾಂಪೌಂಡ್ ಹಾರಿ ಸಿಕ್ಕಿಬಿದ್ದ ಲವರ್​; ಪ್ರೇಯಸಿಯ ಪತಿಯ ಕೈಯಿಂದ ಬಚಾವಾಗಲು ಯತ್ನಿಸಿ ಪೊಲೀಸರ ವಶವಾದ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − seventeen =
Remember me
