ಅಮಹಾರಾಷ್ಟ್ರದ ದೊಡ್ಡ ಗ್ರಾಮವೊಂದರಲ್ಲಿನ ಸರ್ಕಾರಿ ಶಾಲೆ ಒಂದು ಅಂತಸ್ತಿನ ಕಟ್ಟಡದಲ್ಲಿ ನಡೆಯುತ್ತಿತ್ತು. ಒಂದರಿಂದ ಏಳನೆಯ ತರಗತಿಯವರೆಗಿದ್ದ ಆ ಶಾಲೆಯಲ್ಲಿ 300 ವಿದ್ಯಾರ್ಥಿಗಳು, ಎಂಟು ಶಿಕ್ಷಕರು ಮತ್ತು ನಾಲ್ಕು ಸಿಬ್ಬಂದಿಗಳಿದ್ದರು. 2022ರ ಜುಲೈ ತಿಂಗಳ ಒಂದು ಮಧ್ಯಾಹ್ನ 12.30ಕ್ಕೆ ಶಾಲೆಯ ತಾರಸಿಯಿಂದ ದೊಪ್ಪೆಂದು ಏನೋ ಕೆಳಗೆ ಬಿದ್ದ ಶಬ್ದ ಕೇಳಿಸಿದಾಗ ಶಿಕ್ಷಕರು ಮತ್ತು ಸಿಬ್ಬಂದಿ ಅಲ್ಲಿಗೆ ಧಾವಿಸಿದರು. ಶಾಲೆಯ ನಾಲ್ಕನೆಯ ತರಗತಿಯ ವಿದ್ಯಾರ್ಥಿ ಅಲೋಕ್ ಕೆಳಗೆ ಬಿದ್ದಿದ್ದು, ಅವನ ತಲೆಗೆ ತೀವ್ರ ಗಾಯವಾಗಿ ರಕ್ತ ಸುರಿಯುತ್ತಿತ್ತು.
ಅಲೋಕ್​ನ ತಾಯಿ ಮೀನಾ ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಕಾರಣ ಆಕೆಗೆ ಸುದ್ದಿ ಮುಟ್ಟಿಸಲು ಶಿಕ್ಷಕ ಮಧುಸೂದನ್ ಆಕೆಯ ತರಗತಿಯತ್ತ ಧಾವಿಸಿದರು. ಅವರು ಮಹಡಿಯ ಮೆಟ್ಟಿಲುಗಳನ್ನು ಏರತೊಡಗಿದಾಗ ತಮ್ಮ ಸಹೋದ್ಯೋಗಿ ಶಂಕರ್ ಮೀನಾಗೆ ಸುತ್ತಿಗೆಯಿಂದ ಹೊಡೆಯುತ್ತಿದ್ದುದನ್ನು ಕಂಡು ಅವಾಕ್ಕಾದರು. ‘ಏನು ಮಾಡ್ತಿದ್ದೀರಿ, ನಿಲ್ಲಿ’ ಎಂದವರು ಅರಚಿದಾಗ ಮೀನಾಳ ತಲೆಗೆ ಸುತ್ತಿಗೆಯಿಂದ ಇನ್ನೊಂದು ಏಟು ಕೊಟ್ಟ ಶಂಕರ್, ‘ಇವಳಂತೆಯೇ ಈಗಲೇ ನಿನ್ನನ್ನೂ ಮುಗಿಸಿಬಿಡುತ್ತೇನೆ’ ಎನ್ನುತ್ತ ಅವರತ್ತ ಧಾವಿಸಿದ. ಹೆದರಿದ ಮಧುಸೂದನ್ ಬಿರಬಿರನೆ ಕೆಳಗಿಳಿಯತೊಡಗಿದರು. ಅವರನ್ನು ಹಿಂಬಾಲಿಸಿದ ಶಂಕರ್ ಅವರ ತಲೆಗೆ ಹೊಡೆಯಲು ಹೊರಟಾಗ ಮಧುಸೂದನ್ ತನ್ನ ಕೈಗಳಿಂದ ತಲೆಯನ್ನು ರಕ್ಷಿಸಿಕೊಂಡರು. ಆಗ ಅವರ ಬೆನ್ನಿನ ಮೇಲೆ ಸುತ್ತಿಗೆಯಿಂದ ಶಂಕರ್ ಥಳಿಸತೊಡಗಿದ. ಮುಖ್ಯೋಪಾಧ್ಯಾಯರ ಕೋಣೆಯತ್ತ ಮಧುಸೂದನ್ ಓಡಿದಾಗ ಅಲ್ಲಿಗೂ ಅವರನ್ನಟ್ಟಿಸಿಕೊಂಡು ಹೋದ ಶಂಕರ್. ಮುಖ್ಯೋಪಾಧ್ಯಾಯರು ಅಲ್ಲಿದ್ದ ಕುರ್ಚಿಯನ್ನು ಗುರಾಣಿಯಂತೆ ಹಿಡಿದುಕೊಂಡು ಅವರಿಬ್ಬರ ಮಧ್ಯೆ ಬಂದರು. ಆಗ ಶಂಕರ್ ಹೆದರಿ ತನ್ನ ಕೈಯಲ್ಲಿದ್ದ ಸುತ್ತಿಗೆಯನ್ನು ಅಲ್ಲೇ ಎಸೆದು ಓಡಿಹೋದ.
ಗಾಯಗೊಂಡಿದ್ದ ತಾಯಿ-ಮಗ ಮತ್ತು ಮಧುಸೂದನ್​ನನ್ನು ಕೂಡಲೇ ಆಸ್ಪತ್ರೆಗೆ ಕಳಿಸಲು ವ್ಯವಸ್ಥೆಯನ್ನು ಮಾಡಿದ ಮುಖ್ಯೋಪಾಧ್ಯಾಯರು ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿ ಏನಾಯಿತೆಂದು ಶಾಲೆಯಲ್ಲಿ ವಿಚಾರಿಸಿದರು. ಅಂದಿನ ದಿನ ತಮ್ಮ ತರಗತಿಯನ್ನು ಮೀನಾ ಟೀಚರ್ ತೆಗೆದುಕೊಂಡಿದ್ದಾಗಿ ಹೇಳಿದ ನಾಲ್ಕನೆಯ ತರಗತಿಯ ವಿದ್ಯಾರ್ಥಿಗಳು, ತಾವು ಶೌಚಗೃಹಕ್ಕೆ ಹೋಗುತ್ತೇನೆಂದು ಟೀಚರ್ ಕೆಳಗೆ ಹೋದ ಸಮಯಕ್ಕೆ ಶಂಕರ್ ಮಾಸ್ತರರು ತರಗತಿಗೆ ಬಂದರು. ‘ಮೀನಾ ಟೀಚರ್ ಎಲ್ಲಿ?’ ಎಂದು ವಿಚಾರಿಸಿದರು. ‘ಅವರು ಶೌಚಗೃಹಕ್ಕೆ ಹೋಗಿದ್ದಾರೆ’ ಎಂದು ತಿಳಿದಾಗ ಮುಂದಿನ ಬೆಂಚಿನ ಮೇಲೆ ಕುಳಿತಿದ್ದ ಅಲೋಕ್​ನನ್ನು ತಮ್ಮ ಜತೆಗೆ ಕರೆದೊಯ್ದರು. ಅವರು ಹೋಗುವಾಗ ಕೋಣೆಗೆ ಹೊರಗಿನಿಂದ ಚಿಲಕ ಹಾಕಿಕೊಂಡರು ಎಂದರು.
ಅಲೋಕ್ ಮತ್ತು ಮೀನಾರನ್ನು ಆಸ್ಪತ್ರೆಗೆ ಕಳಿಸುವ ಮಾರ್ಗಮಧ್ಯದಲ್ಲಿಯೇ ತೀವ್ರ ರಕ್ತಸ್ರಾವವಾಗಿ ಅಲೋಕ್ ಮೃತಪಟ್ಟನೆಂದು ಮಾಹಿತಿ ಬಂದಿತು. ಶಿಕ್ಷಕ ಮಧುಸೂದನ್​ಗೆ ಹೆಚ್ಚು ಗಾಯಗಳಾಗದೆ ಇದ್ದರಿಂದ ಆತನಿಗೆ ಪ್ರಥಮ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ ಎಂದೂ ತಿಳಿಯಿತು. ಕೂಡಲೇ ಪೊಲೀಸರು ಮಧುಸೂದನ್​ನನ್ನು ಕರೆಸಿಕೊಂಡು ಅವನ ಹೇಳಿಕೆ ಮೇರೆಗೆ ಶಂಕರ್​ನ ವಿರುದ್ಧ ಕೊಲೆ ಮತ್ತು ಕೊಲೆಯ ಯತ್ನದ ಪ್ರಕರಣ ದಾಖಲಿಸಿಕೊಂಡರು.
ಪಂಚನಾಮೆ ಮಾಡುವಾಗ ಪೊಲೀಸರಿಗೆ ಶಾಲಾ ತಾರಸಿಯ ಗೋಡೆಯ ಮೇಲೆ ರಕ್ತದ ಕಲೆಗಳು ಕಂಡವು. ಆ ಗೋಡೆಗೆ ಅಲೋಕ್​ನ ತಲೆಯನ್ನು ಶಂಕರ್ ಜಜ್ಜಿ ಬಾಲಕನನ್ನು ಕೆಳಗೆ ಎಸೆದಿರಬಹುದೆಂದು ಊಹಿಸಲಾಯಿತು. ಮುಂದಿನ ವಿಚಾರಣೆಯಲ್ಲಿ, 32 ವರ್ಷದ ಮೀನಾಳ ಗಂಡ ಹೊಲ ಮಾಡಿಕೊಂಡಿದ್ದು ಮೀನಾ ಕಳೆದರೆಡು ವರ್ಷಗಳಿಂದ ಆ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಳೆಂದು ತಿಳಿಯಿತು. ಮೀನಾಗೆ ಇಬ್ಬರು ಮಕ್ಕಳಿದ್ದು ಮಗ ಅಲೋಕ್ ನಾಲ್ಕನೆಯ ತರಗತಿಯಲ್ಲಿದ್ದರೆ, ಮಗಳು ನರ್ಸರಿ ಶಾಲೆಗೆ ಹೋಗುತ್ತಿದ್ದಳು ಎಂದೂ ತಿಳಿಯಿತು.
ಅದೇ ಸಂಜೆ ಶಂಕರ್ ತನ್ನ ಕೋಣೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ. ಆತ ಪೊಲೀಸರಿಗೆ ಹೀಗೆ ಹೇಳಿದ:
‘‘32 ವರ್ಷ ವಯಸ್ಸಿನ ನಾನು ಅವಿವಾಹಿತನಾಗಿದ್ದು, ಒಂದು ವರ್ಷದಿಂದ ಶಿಕ್ಷಕನಾಗಿರುವೆ. ಸಹಶಿಕ್ಷಕಿ ಮೀನಾ ನನ್ನ ಜತೆ ಸಲುಗೆಯಿಂದ ಇದ್ದ ಕಾರಣ ಕಾಲಕ್ರಮೇಣ ಅವಳ ಮೇಲೆ ಪ್ರೇಮ ಮೂಡಿತು. ವಾಟ್ಸ್​ಆಪ್ ಮೂಲಕ ಪ್ರೇಮವನ್ನು ನಿವೇದಿಸಿಕೊಂಡೆ. ಅವಳು ಅದನ್ನು ತಿರಸ್ಕರಿಸಲಿಲ್ಲವಾದ್ದರಿಂದ ಅವಳ ಜತೆ ಹೆಚ್ಚಿನ ಸಮಯ ಕಳೆಯತೊಡಗಿದೆ. ನಾವಿಬ್ಬರೂ ಫೋನ್ ಮತ್ತು ವಾಟ್ಸ್​ಆಪ್ ಮುಖಾಂತರ ನಮ್ಮ ಭಾವನೆಗಳನ್ನು ಹಂಚಿಕೊಳ್ಳತೊಡಗಿದೆವು. ನಿನ್ನ ಗಂಡನನ್ನು ಬಿಟ್ಟು ನನ್ನನ್ನು ಮದುವೆಯಾಗು ಎಂದು ಹೇಳಿದಾಗ ಆಕೆ ಯಾವ ಪ್ರತಿಕ್ರಿಯೆ ತೋರಿಸಲಿಲ್ಲ; ನನ್ನನ್ನು ದೂರವೂ ಮಾಡಲಿಲ್ಲ.
10 ದಿನಗಳ ಹಿಂದೆ ನಾವು ವಿದ್ಯಾರ್ಥಿಗಳನ್ನು ಕರೆದುಕೊಂಡು ಪ್ರವಾಸಕ್ಕೆ ಹೋಗಿದ್ದೆವು. ನಮ್ಮೊಡನೆ ಮೀನಾ ಅಲ್ಲದೆ ಮಧುಸೂದನ್ ಟೀಚರ್ ಸಹ ಬಂದರು. ಈ ಪ್ರವಾಸದಲ್ಲಿ ಮೀನಾ ನನ್ನ ಜತೆ ಹೆಚ್ಚಿನ ಸಮಯ ಕಳೆಯದೆ ಮಧುಸೂದನ್ ಜತೆಗೇ ಇರುತ್ತಿದ್ದಳು. ಒಂದು ರಾತ್ರಿ ಬಸ್ಸಿನಲ್ಲಿ ದೀಪಗಳನ್ನು ಆರಿಸಿದಾಗ ಮಧುಸೂದನ್ ತನ್ನ ಪಕ್ಕದಲ್ಲಿ ಕುಳಿತಿದ್ದ ಮೀನಾಳ ಹೆಗಲಿಗೆ ಕೈ ಹಾಕಿ ಅವಳಿಗೆ ಮುತ್ತು ಕೊಡುತ್ತಿದ್ದದ್ದನ್ನು ಕಂಡೆ. ಆಗ ಕೋಪ ನೆತ್ತಿಗೇರಿತು. ಊರಿಗೆ ಮರಳಿದಾಗ ಮೀನಾಳಿಗೆ, ‘ನೀನು ನನ್ನ ಜತೆ ಪ್ರೀತಿಯ ನಾಟಕವಾಡುತ್ತಿದ್ದು, ಮಧುಸೂದನನ ಜತೆಯೂ ಚಕ್ಕಂದವಾಡುತ್ತಿರುವೆ. ಮುಂದಿನ ಒಂದು ವಾರದಲ್ಲಿ ನೀನು ನಮ್ಮಿಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಂಡು ತಿಳಿಸು. ನನ್ನನ್ನು ಪ್ರೀತಿ ಮಾಡುವಂತೆ ನಟಿಸಿ ಇನ್ನೊಬ್ಬರ ಜೊತೆ ಹೋಗುವುದು ಸರಿಯಲ್ಲ’ ಎಂದೆ.
ಮಾರನೆಯ ದಿನ ಅವಳಿಗೆ ಹಲವಾರು ವಾಟ್ಸ್​ಆಪ್ ಸಂದೇಶ ಕಳುಹಿಸಿದಾಗ ಮೀನಾ ಸಕಾರಾತ್ಮಕವಾಗಿಯೇ ಸ್ಪಂದಿಸಿದಳು. ಹೀಗಾಗಿ ಆಕೆ ನನ್ನ ಜೊತೆ ಪ್ರೀತಿ ಮುಂದುವರಿಸುವುದಾಗಿ ಭಾವಿಸಿದೆ. ಆದರೆ ಎರಡು ದಿನಗಳ ಹಿಂದೆ ಅವಳ ಸೋದರ ಮನೋಜ್ ಬಂದು, ‘ನೀನು ನನ್ನ ತಂಗಿಯನ್ನು ಲವ್ ಮಾಡುವುದನ್ನು ಬಿಟ್ಟುಬಿಡು’ ಎಂದ. ‘ಮದುವೆಯಾದ ಮೀನಾಳನ್ನು ನಾನು ಸೋದರಿಯೆಂದೇ ಭಾವಿಸುತ್ತಿರುವೆ’ ಎಂದವನಿಗೆ ಸುಳ್ಳು ಹೇಳಿ ಕಳಿಸಿದೆ. ಮೀನಾಳ ಮೇಲೆ ಭಯಂಕರ ಸಿಟ್ಟು ಬಂದಿತು.
ಮಾರನೆಯ ದಿನ ಮೀನಾಳನ್ನು ಏಕಾಂತದಲ್ಲಿ ಭೇಟಿಯಾಗಿ, ‘ನೀನು ಮೊದಲು ನನ್ನ ಜತೆ ಇದ್ದೆ. ಈಗ ಮಧುಸೂದನನ ಜೊತೆ ಇರುವೆ. ಇದಲ್ಲದೆ ನಿನ್ನ ಸೋದರನನ್ನು ಕಳುಹಿಸಿ ಹೆದರಿಸಿರುವೆ. ನೀನು ನನ್ನ ಜೊತೆ ಇರುವೆಯೋ ಇಲ್ಲವೋ ಎಂಬುದನ್ನು ಇನ್ನು 24 ಗಂಟೆಗಳಲ್ಲಿ ತಿಳಿಸಬೇಕು’ ಎಂದೆ. ಆಕೆ ಮುಖ ತಿರುಗಿಸಿ ಹೊರಟು ಹೋದಳು. ಅವಳಿಗೆ ಬುದ್ಧಿ ಕಲಿಸಬೇಕೆಂದು ಮನಸ್ಸಾಯಿತು. ಮಾರನೆಯ ದಿನ ಶಾಲೆಗೆ ಬಂದ ಕೂಡಲೇ ಕಡೆಗೊಮ್ಮೆ ಅವಳನ್ನು ವಿಚಾರಿಸಬೇಕೆಂದು ತೀರ್ವನಿಸಿದೆ. ನನಗೆ ಆ ದಿನ ತರಗತಿ ಇರಲಿಲ್ಲ. ಮೀನಾ ಮೊದಲ ಮಹಡಿಯಲ್ಲಿ ತರಗತಿ ತೆಗೆದುಕೊಳ್ಳಲು ಹೋದದ್ದನ್ನು ನೋಡಿದ ನಾನು ಅವಳನ್ನು ಶಾಲೆಯ ತಾರಸಿಗೆ ಕರೆದುಕೊಂಡು ಹೋಗಿ ಮಾತನಾಡಿಸುವ ಉದ್ದೇಶದಿಂದ ಅವಳ ತರಗತಿಗೆ ಹೋದೆ. ಅವಳು ಶೌಚಗೃಹಕ್ಕೆ ಹೋಗಿದ್ದಾಳೆ ಎಂದು ತಿಳಿಯಿತು. ಅವಳ ಮಗ ಅಲೋಕ್​ನನ್ನು ತಾರಸಿಗೆ ಕರೆದೊಯ್ದೆ.
ನನಗೆ ಮೀನಾ ಕೊಟ್ಟಿರುವ ವೇದನೆ ಅವಳಿಗೆ ತಿಳಿಯಬೇಕಾದರೆ ಅವಳ ಮಗನನ್ನು ಕೊಂದು ಅವಳಿಗೂ ವೇದನೆ ನೀಡಬೇಕು ಎಂದು ರ್ತಸಿದೆ. ಕೃಶನಾಗಿದ್ದ ಆ ಬಾಲಕನ ತಲೆಯನ್ನು ಗೋಡೆಗೆ ಅಪ್ಪಳಿಸಿದೆ. ಅವನ ತಲೆಯಿಂದ ರಕ್ತ ಬರತೊಡಗಿತು. ಆತ ಚೀರತೊಡಗಿದಾಗ ಕೋಪಗೊಂಡ ನಾನು ಅವನನ್ನು ಅನಾಮತ್ತಾಗಿ ಮೇಲೆತ್ತಿ ತಾರಸಿಯಿಂದ ಕೆಳಕ್ಕೆ ಎಸೆದೆ. ಅವನು ದೊಪ್ಪೆಂದು ಕೆಳಗೆ ಬಿದ್ದ. ಆನಂತರ ಅಲ್ಲಿಂದ ಕೆಳಗಿಳಿದು ಮೀನಾಳನ್ನು ಹುಡುಕತೊಡಗಿದೆ. ಆಗ ಕೋಣೆಯೊಂದರಲ್ಲಿ ಬಿದ್ದಿದ್ದ ಸುತ್ತಿಗೆ ಕಣ್ಣಿಗೆ ಬಿತ್ತು. ಅದನ್ನು ಕೈಯಲ್ಲಿ ತೆಗೆದುಕೊಂಡು ಮೀನಾಳಿಗಾಗಿ ಕಾಯುತ್ತಿದ್ದೆ. ಅಷ್ಟರಲ್ಲಿ ಮೀನಾ ಶೌಚಗೃಹದಿಂದ ಬಂದು ಮಹಡಿಯ ಮೆಟ್ಟಿಲು ಹತ್ತುತ್ತಿರುವುದು ಕಂಡಿತು. ಆಕೆಗೆ ತಿಳಿಯದಂತೆ ಅವಳ ಹಿಂದೆ ಹೋಗಿ ಅವಳ ತಲೆಗೆ ಎರಡು ಬಾರಿ ಸುತ್ತಿಗೆಯಿಂದ ಹೊಡೆದೆ. ಆಕೆ ಜೋರಾಗಿ ಅರಚುತ್ತ ಕೆಳಗೆ ಬಿದ್ದಳು. ಅವಳ ಚೀರಾಟ ಕೇಳಿದ ಮಧುಸೂದನ ಅಲ್ಲಿಗೆ ಧಾವಿಸಿ ಬಂದು ‘ಇದೇನು ಮಾಡುತ್ತಿರುವಿರಿ’ ಎಂದು ಕೇಳಿ ಅವಳಿಗೆ ಸಹಾಯ ಮಾಡಲು ಹೊರಟ. ಅವನನ್ನು ನೋಡಿದ ಕೂಡಲೇ ಅವನನ್ನು ಮುಗಿಸಬೇಕೆಂದು ಮನಸ್ಸಾಯಿತು. ಮೀನಾಳನ್ನು ಅಲ್ಲಿಯೇ ಬಿಟ್ಟು ಅವನನ್ನು ಅಟ್ಟಿಸಿಕೊಂಡು ಹೋದೆ. ಅವನ ತಲೆಗೆ ಹೊಡೆಯಲು ಸುತ್ತಿಗೆ ಬೀಸಿದಾಗ ಅವನು ತನ್ನ ಕೈಗಳಿಂದ ತಲೆಯನ್ನು ರಕ್ಷಿಸಿಕೊಂಡ. ಆಗ ಅವನ ಬೆನ್ನಿಗೆ ಒಂದೇಟು ಕೊಟ್ಟೆ. ಅವನು ಮುಖ್ಯೋಪಾದ್ಯಾಯರ ಕೋಣೆಗೆ ಓಡಿದ. ನಮ್ಮಿಬ್ಬರನ್ನು ನೋಡಿದ ಅವರು ಒಂದು ಕುರ್ಚಿ ಹಿಡಿದು ನಮ್ಮ ಮಧ್ಯೆ ಬಂದರು. ನಮ್ಮ ಗಲಾಟೆ ಕೇಳಿದ ಇತರರು ಅಲ್ಲಿಗೆ ಬರತೊಡಗಿದರು. ಅವರು ನನ್ನನ್ನು ಹಿಡಿದು ಸಾಯಿಸಿಬಿಡುತ್ತಾರೆ ಎಂಬ ಭಯದಿಂದ ಅಲ್ಲಿಂದ ಓಡಿಹೋದೆ’.
ಶಂಕರ್​ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಲಾಯಿತು. ಏತನ್ಮಧ್ಯೆ ಚಿಕಿತ್ಸೆ ಫಲಕಾರಿಯಾಗದೆ ಮೀನಾ ಆಸ್ಪತ್ರೆಯಲ್ಲಿಯೇ ಅಸುನೀಗಿದಳು. ಬೇಗನೇ ತನಿಖೆ ಮುಗಿಸಿ ಶಂಕರ್ ಮೇಲೆ ನ್ಯಾಯಾಲಯದಲ್ಲಿ ಎರಡು ಕೊಲೆ ಹಾಗೂ ಒಂದು ಕೊಲೆ ಯತ್ನದ ಆರೋಪಪಟ್ಟಿ ಸಲ್ಲಿಸಲಾಯಿತು. ವಿಚಾರಣೆ ನಡೆಯುತ್ತಿದೆ.
ಶಂಕರ್​ನಿಗೆ ಮೀನಾ ತನ್ನ ಉದ್ದೇಶದ ಸ್ಪಷ್ಟ ಸಂಕೇತವನ್ನು ನೀಡದೆ ಮಧುಸೂಧನನ ಜತೆಯೂ ಸಲಿಗೆಯಿಂದಿದ್ದದ್ದು ಅವನ ಮನವನ್ನು ತೀವ್ರವಾಗಿ ಕದಡಿ ಈ ದುರಂತಕ್ಕೆ ಕಾರಣವಾಯಿತು. ‘ಕುದಿ ಹೆಚ್ಚಿ ವೆಗಟಹುದು; ಕಡಿಮೆಯಿರೆ ಹಸಿನಾತ, ಕದಡಲೊಡೆವುದು ಹಾಲು, ಸೂಕ್ಷ್ಮವದರ ಹದ, ಅದರವೊಲೆ ಮನದ ಹದ, ಅದನೆಚ್ಚರದಿ ನೋಡು, ಬದುಕು ಸೊಗ ಹದದಿಂದ ಮಂಕುತಿಮ್ಮ’ ಎನ್ನುವ ಡಿ.ವಿ.ಜಿ ಹೇಳಿದ ಮಾತುಗಳನ್ನು ಮೀನಾ ಅರಿತು ಸೂಕ್ಷ್ಮವಾದ ಶಂಕರ್​ನ ಮನಸ್ಸಿನ ಬಗ್ಗೆ ಎಚ್ಚರದಿಂದಿರಬೇಕಾಗಿತ್ತು.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)
ಬಂಡೆಯನ್ನು ನಂಬಿ ನಾನು ಕೆಟ್ಟಿದ್ದೆ: ಡಿಕೆಶಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × four =
Remember me
