ಭಾರತೀಯ ತಾತ್ವಿಕ ಚಿಂತನೆಗಳಲ್ಲೇ ಬಹುಮುಖ್ಯ ಗ್ರಂಥ ಭಗವದ್ಗೀತೆ. ಗೀತೆ ಎಂದೇ ಖ್ಯಾತವಾದ ಈ ಕೃತಿ ವಾಸ್ತವದಲ್ಲಿ ಪ್ರತ್ಯೇಕ ಗ್ರಂಥವಲ್ಲ. ಮಹರ್ಷಿ ವೇದವ್ಯಾಸರ ಮಹಾಭಾರತ ಮಹಾಕಾವ್ಯದ ಒಂದು ಭಾಗ. ರಣರಂಗದ ತುಮುಲದಲ್ಲಿ ಯುದ್ಧವಿಮುಖನಾಗಲಿದ್ದ ಅರ್ಜುನನಲ್ಲಿ ದಿವ್ಯಜ್ಞಾನವನ್ನು ಪ್ರಚೋದಿಸಿ ಕರ್ತವ್ಯೋನ್ಮುಖನಾಗುವಂತೆ ಮಾಡಿದ ವಿಶಿಷ್ಟ ಸಂದರ್ಭ. ಇದನ್ನು ಕನ್ನಡ ಸಾರಸ್ವತಲೋಕದ ಪಿತಾಮಹ ಡಿ.ವಿ.ಗುಂಡಪ್ಪನವರು ಕೃಷ್ಣಾರ್ಜುನ ಸಂವಾದವೆಂದು ಹೇಳಿ, ಆ ಸಂವಾದವನ್ನು ಮಾನವಲೋಕದ ನಿತ್ಯಸತ್ಯವೆಂದು ಪ್ರತಿಪಾದಿಸಿ ಬರೆದ ಉದ್ಧಾಮ ಕೃತಿ ‘ಜೀವನಧರ್ಮಯೋಗ’. ಏಳು ನೂರು ಪುಟಗಳ ವಿಸ್ತಾರವಾದ ಗ್ರಂಥ. ಕನ್ನಡದಲ್ಲಿ ಗೀತೆಯಮೇಲೆ ಬಂದ ಎಲ್ಲ ಕೃತಿಗಳಿಗಿಂತ ಹಿರಿದಾದ ಯೋಗ್ಯತೆಯ ಬೃಹದ್ಗ್ರಂಥ.
ಡಿವಿ ಗುಂಡಪ್ಪನವರು ಎರಡು ವರ್ಷಗಳ ಕಾಲ ಬೆಂಗಳೂರಿನ ಗೋಖಲೆ ಸಂಸ್ಥೆಯಲ್ಲಿ ಗೀತೆಯಮೇಲೆ ನಡೆಸಿದ ಉಪನ್ಯಾಸ ಮೊದಲ ಹಂತ. ನಂತರ ಇದು ‘ಪ್ರಜಾಮತ’ ವಾರಪತ್ರಿಕೆಯಲ್ಲಿ ಪ್ರಕಟವಾಯಿತು. ಇದು ನಡೆದದ್ದು 1960-64ರ ಕಾಲದಲ್ಲಿ. ಗ್ರಂಥವಾಗಿ ಮೊದಲು ಪ್ರಕಟವಾದದ್ದು 1965ರಲ್ಲಿ. ಇಷ್ಟಾದಮೇಲೆ ಡಿವಿಜಿ ಹೇಳುತ್ತಾರೆ, ‘ಗ್ರಂಥದ ಗಾತ್ರವು ನಿರೀಕ್ಷಿಸಿದ್ದಕ್ಕಿಂತ ಬಹಳ ದೊಡ್ಡದಾಗಿದೆ. ಆದರೂ ಹೇಳಬೇಕಾದ್ದನ್ನೆಲ್ಲ ಹೇಳಿದ್ದಾಯಿತೆಂಬ ತೃಪ್ತಿ ಬಂದಿಲ್ಲ’. ಒಂದು ಸಂಪೂರ್ಣವಾದ ವಿಶ್ವಜೀವನ ದರ್ಶನ ಅದರ ವಿಷಯ ಎಂದೇ ಪರಿಭಾವಿಸಿ ವ್ಯಾಖ್ಯಾನಕ್ಕಿಳಿಯುತ್ತಾರೆ. ಗೀತೆ ಶಾಸ್ತ್ರವನ್ನು ಬರೆಯಬೇಕೆಂದು ಬರೆದದ್ದಲ್ಲ. ಇದು ಮಿತ್ರ ಸಂಹಿತೆ ಎನ್ನುತ್ತಾರೆ. ಡಿವಿಜಿಯವರು ಮೊದಲು ಪ್ರವಚನವಾಗಿ ನಿರೂಪಿಸಿದ್ದರಿಂದ ಕೇಳುಗರಿಗೆ ಅರಿವಾಗುವ ನೆಲೆಯಲ್ಲಿ ಸರಳವೂ, ಗಹನವೂ, ಚಿಂತನೀಯವೂ ಆದ ವಿನ್ಯಾಸವನ್ನು ವ್ಯಾಖ್ಯಾನಕ್ಕೆ ಜೋಡಿಸಿಕೊಂಡಿದ್ದಾರೆ. ಲೌಕಿಕವಾದ ನಿತ್ಯಜೀವನದ ಸತ್ಯಗಳು ಕೃತಿಯನ್ನು ಓದುವವರಿಗೆ ಕ್ಷಣಕ್ಷಣಕ್ಕೂ ಎದುರಾಗುತ್ತವೆ. ಮತ್ತು ಇವೇ ಈ ಗೀತಾವ್ಯಾಖ್ಯಾನವನ್ನು ಜೀವನಧರ್ಮಯೋಗವನ್ನಾಗಿಸುತ್ತವೆ.
ಗೀತೆಯ ಹದಿನೆಂಟು ಅಧ್ಯಾಯದ ಮೂಲಪಾಠವನ್ನು ಅದೇ ಅದೇ ಹೆಸರಿನಲ್ಲಿ ಹೇಳಿ ಕನ್ನಡ ವ್ಯಾಖ್ಯಾನಕ್ಕೆ ಪರ್ಯಾಯ ನಾಮವನ್ನು ನೀಡಿರುವುದು ವಿಶೇಷ. ಅರ್ಜುನ ವಿಷಾದ ಯೋಗಕ್ಕೆ ಪ್ರಾಕೃತ ಕಾರುಣ್ಯ ಯೋಗ, ಸಾಂಖ್ಯ ಯೋಗಕ್ಕೆ ತತ್ತ ್ವ ವಿವೇಕ ಯೋಗ ಹೀಗೆ. ಡಿವಿಜಿಯವರು ಗೀತೆಯನ್ನು ಅನುವಾದ ಮಾಡುವುದಿಲ್ಲ. ಯಕ್ಷಗಾನ ತಾಳಮದ್ದಲೆಯಲ್ಲಿ ಅರ್ಥಧಾರಿಗಳು ಪದ್ಯಕ್ಕೆ ಅರ್ಥ ಹೇಳುತ್ತಾರಲ್ಲ ಹಾಗೆ. ಗುಂಡಪ್ಪನವರ ಲೋಕಮಾನ್ಯ ಕೃತಿ, ಕನ್ನಡ ಕಾವ್ಯಲೋಕದಲ್ಲೇ ಅನನ್ಯ ಗ್ರಂಥ ‘ಮಂಕುತಿಮ್ಮನ ಕಗ್ಗ’ ಪ್ರಕಟವಾದದ್ದು 1943ರಲ್ಲಿ. ಕಗ್ಗದಲ್ಲೇ ಅವರು ಗೀತೆಯ ಅನೇಕ ವಿಚಾರಗಳನ್ನೂ ಹೇಳಿದ್ದಾರೆ. ಬಹು ಸೊಗಸಾದ ಊರ್ಧ್ವಮೂಲಾಶ್ವತ್ಥದ ವಿಚಾರವನ್ನು ‘ತಲೆಯ ಮೇಗಡೆ ಬೇರು, ಕೆಳಗೆ ಕೊಂಬೆಲೆ ಚಿಗುರು’ ಎಂಬ ವಿಚಾರವನ್ನು ಹೇಳುತ್ತಾರೆ. ವಿದ್ವಾಂಸರು ಕಗ್ಗವನ್ನು ‘ಕನ್ನಡದ ಗೀತೆ’ ಎಂದು ಕೈವಾರಿಸಿದ್ದೂ ಇದೆ.
ಜೀವನಧರ್ಮಯೋಗ ಗೀತೆಯ ವ್ಯಾಖ್ಯಾನದ ವಿಷಯವೇ ಆದರೂ ಸಂಸ್ಕೃತ ಶ್ಲೋಕಗಳಿಗೆ ಸಂವಾದಿಯಾದ ತುಂಬ ಪ್ರೌಢವಾದ ಕಂದಪದ್ಯಗಳ ಮೂಲಕ ಸಂಗ್ರಹವಾಗಿ ಪ್ರತಿ ಅಧ್ಯಾಯದ ಕೊನೆಯಲ್ಲಿ ನಿರೂಪಿಸುವ ವಿಧಾನವೂ ವಸ್ತುಗಾಂಭೀರ್ಯಕ್ಕೆ ಪೋಷಕವಾಗುತ್ತದೆ. ಅರ್ಜುನನಿಗೆ ವಿಶ್ವರೂಪವನ್ನು ಭಗವಂತ ಏಕೆ ತೋರಿಸಬೇಕಾಯಿತು ಎಂಬುದನ್ನು…
ಪ್ರತ್ಯಕ್ಷಮಿಲ್ಲದ ರಹ|
ಸ್ಸತ್ಯಂ ಸಂಪ್ರತ್ಯಯಕ್ಕೆ ದುರ್ಲಭಮದರಿಂ||
ತತ್ತಾ Ìರ್ಥಿಗೆ ನಿಜಮಹಿಮೆಯ|
ತಥ್ಯದಿನಾಕಾರಗೊಳಿಸಿದಂ ಭಗವಂತಂ||
ಬುದ್ಧಿಯಿಂದ ಅರಿವಾಗದ್ದನ್ನು ಪ್ರತ್ಯಕ್ಷಾನುಭವಕ್ಕೆ ಬರುವಂತೆ ಮಾಡಲು ಹರಿ ವಿಶ್ವರೂಪಧರನಾದನಂತೆ. ಇದು ಡಿವಿಜಿಯವರ ಚಿಂತನೆಯ ಎತ್ತರ.
ಈ ಮಹಾಗ್ರಂಥದ ಓದು ಮಹತ್ವವಾಗುವುದು ಅವರು ಪ್ರಾರಂಭದಲ್ಲಿ ವಿಸ್ತಾರವಾಗಿ ಬರೆದ ಭೂಮಿಕೆ ಮತ್ತು ಕೊನೆಯಲ್ಲಿ ಅದಕ್ಕಿಂತಲೂ ವಿಸ್ತಾರವಾಗಿ ನೀಡಿದ ಪರಿಶಿಷ್ಟ ಹಾಗೂ ಅನುಬಂಧಗಳಿಂದ. ಇವುಗಳು ಗೀತೆಯ ಕುರಿತು ಗುಂಡಪ್ಪನವರ ನಿಲುವು ಏನೆಂಬುದನ್ನು ಪ್ರತಿಪಾದಿಸುತ್ತವೆ. ಅವರು ತಾತ್ವಿಕ ವಿಚಾರವನ್ನು ಹೇಗೆ ಸರಳಗೊಳಿಸಿ ಮನಮುಟ್ಟುವಂತೆ ಹೇಳುತ್ತಾರೆಂಬುದಕ್ಕೆ ಒಂದು ಮಾದರಿಯನ್ನು ನೋಡೋಣ.
ಮಾಯೆಯ ದ್ವೆವಿಧ್ಯವನ್ನು ಹೇಳುತ್ತ ಅದು ಎರಡು ವಿಧ ಎನ್ನುತ್ತಾರೆ. ವಿಕ್ಷೇಪ ಶಕ್ತಿ ಮತ್ತು ಆವರಣ ಶಕ್ತಿ ಇದೇ ಆ ಎರಡು ಮಾಯಾಶಕ್ತಿಗಳು. ಒಂದಿರುವುದನ್ನು ಇನ್ನೊಂದಾಗಿ ತೋರಿಸುವುದು ವಿಕ್ಷೇಪ ಶಕ್ತಿ. ನಿರ್ಜಲವಾದ ಮರಳು ಕಾಡಿನ ಮೇಲೆ ಮಧ್ಯಾಹ್ನ ಸೂರ್ಯಕಿರಣ ಬಿದ್ದು ಅಲ್ಲಿ ಜಲಾಶಯವಿರುವಂತೆ ದೂರದಿಂದ ನಮ್ಮ ಕಣ್ಣಿಗೆ ಆಗುತ್ತದೆ. ಅದೇ ಮರೀಚಿಕೆ. ಅದು ಮಾಯೆಯ ವಿಕ್ಷೇಪ. ಇರುವುದನ್ನು ಇಲ್ಲವೆನ್ನಿಸುವಂತೆ ಮುಸುಕು ಕವಿಸುವುದು ಆವರಣ. ದೊಡ್ಡ ಮರ ಹಿಂದೆ ಎಂದೋ ತನ್ನ ಹುಟ್ಟಿಗೆ ಕಾರಣವಾಗಿದ್ದ ಬೀಜವನ್ನು ಅದೃಶ್ಯವನ್ನಾಗಿ ಮಾಡುತ್ತದೆ. ಗಿಡ ಬೆಳೆದು ಮರವಾದ ಮೇಲೆ ಮರ ಹೀಗೇ ಎಂದೆಂದೂ ಇತ್ತು ಎಂದು ನಾವು ಭ್ರಮಿಸುತ್ತೇವೆ.
ದೇಹದ ಬಾಹ್ಯಸೌಂದರ್ಯ ದೇಹದೊಳಗಿನ ಮಲಮೂತ್ರ, ಕೀವು ಮೊದಲಾದವುಗಳನ್ನು ನಮ್ಮ ಮನಸ್ಸಿಗೆ ಬಾರದಂತೆ ಮುಚ್ಚಿಡುತ್ತದೆ. ಇದೇ ಆವರಣ ಶಕ್ತಿ.
ಹೀಗೆ ಡಿವಿಜಿಯವರ ಮಹಾಗ್ರಂಥ ಕನ್ನಡ ಸಾರಸ್ವತ ಲೋಕದ ಅನನ್ಯ ಕೃತಿ, ಗೀತೆಯನ್ನು ಕುರಿತ ಅವರದೇ ನುಡಿ, ಕನ್ನಡದ ಕಂದದಲ್ಲಿ..
ಮರಳಿನಲಿ ಗಾಳಿ ಬರೆಯುವ |
ಬರಿಬೊಂಬೆಯೆ ನರನದಲ್ಲವೆನೆ ಬಾಳ್ಕೆಯದೇನ್ |
ಗುರಿಯೇನರ್ಥವದೇನಿದ |
ನರುಹುವನೀ ಗೀತೆಯೊಳ್ ಜಗದ್ಗುರು ಕೃಷ್ಣಂ ||
ಪತಿ ಸಾವಿಗೀಡಾಗಿ ಕೆಲವೇ ತಿಂಗಳುಗಳಲ್ಲಿ ಭಾರತೀಯ ವ್ಯಕ್ತಿಯ ಪ್ರೀತಿಯಲ್ಲಿ ಬಿದ್ದ ಜರ್ಮನ್ ನಟಿ!

ಟಿಕೆಟ್ ಕೈತಪ್ಪಿದೆ, ಇವನ ಬಳಿ ಹೇಗೆ ಕೆಲಸಕ್ಕಾಗಿ…. ಕಾರ್ಯಕರ್ತರಲ್ಲಿ ಪ್ರತಾಪ್ ಸಿಂಹ ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − thirteen =
Remember me
