| ರೆ.ಫಾದರ್ ವಿಜಯ್​ಕುಮಾರ್​
ಯೇಸುಕ್ರಿಸ್ತ ಎಂದರೆ ವಿಧೇಯತೆ, ಪ್ರೀತಿ, ಕ್ಷಮೆ, ಕಾರುಣ್ಯ, ಕರುಣೆ. ಮನುಷ್ಯರು ಹೇಗಿರಬೇಕು ಎಂಬುದಕ್ಕೆ ಅವರ ಜೀವನವೇ ಒಂದು ನಿದರ್ಶನ, ಮಾದರಿ. ಹಗೆತನ, ದ್ವೇಷ, ಅಸೂಯೆ, ಕ್ರೌರ್ಯ, ಹಿಂಸೆ ತುಂಬಿದ ಭೂಮಿಗೆ ದೇವರು ಕಳುಹಿಸಿಕೊಟ್ಟ ಯೇಸು ಮನುಕುಲದ ರಕ್ಷಕ. ಬಾಲಯೇಸುವಿನಿಂದ ಹಿಡಿದು ಶಿಲುಬೆಗೆ ಏರಿ ಮರಣದವರೆಗೂ ಅವರ ಜೀವನಕ್ರಮವೇ ಈಗಿನ ಜಗತ್ತಿಗೂ ಮಾದರಿ.
ಯೇಸು ವಿಧೇಯತೆಯ ಪ್ರತಿರೂಪ. ಹೇಗೆ ಸಮಾಜದಲ್ಲಿ ವಿಧೇಯತನದಿಂದ ಬದುಕಬೇಕೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಪ್ರೀತಿಯ ಸಂಕೇತ ಯೇಸು. ಎಲ್ಲರನ್ನೂ ಪ್ರೀತಿಸಿದರು. ತೆಗಳಿದವರು, ದ್ವೇಷಿಸಿದವರು, ಆರೋಪಿಸಿದವರು, ಶಿಲುಬೆಗೇರಿಸಿದವರು… ಹೀಗೆ ಸಕಲರನ್ನೂ ಪ್ರೀತಿಸಿದರೇ ಹೊರತು, ದ್ವೇಷಿಸಲಿಲ್ಲ. ದ್ವೇಷದ ಒಂದು ಉದಾಹರಣೆಯೂ ಎಲ್ಲೂ ಸಿಗಲ್ಲ. ಅವರ ಪ್ರೀತಿಗೆ ಮಿತಿಯೇ ಇರಲಿಲ್ಲ.
ಬಡವರು, ನಿರ್ಗತಿಕರು, ತಳ ಸಮುದಾಯದವರ ಕೈಹಿಡಿದು ನಡೆಸಿದರು. ಕುಷ್ಠರೋಗಿಗಳನ್ನು ಅಪ್ಪಿಕೊಂಡು ಗುಣಪಡಿಸಿದರು. ಭೇದ-ಭಾವ, ಬಡವ- ಶ್ರೀಮಂತ ಎಂಬ ತಾರತಮ್ಯ ಮಾಡಲಿಲ್ಲ. ಬದಲಿಗೆ ಎಲ್ಲರನ್ನೂ ಒಂದೆಂದುಕೊಂಡರು. ರೋಗಿಗಳು, ವಿಧವೆಯರು, ಜೀವನದಲ್ಲಿ ನಿರಾಶೆ, ಜಿಗುಪ್ಸೆ ಹೊಂದಿದವರಿಗೆ ಕರುಣೆ ತೋರಿಸಿದ್ದರು. ಕಷ್ಟದಲ್ಲಿದ್ದವರಿಗೆ ಕೈಲಾದಷ್ಟು ಸಹಾಯ ಮಾಡಬೇಕು. ಇದು ಬಾಯಿಮಾತು ಆಗಬಾರದು. ಕೃತಿಯಲ್ಲಿ ಜಾರಿಗೆ ಬರಬೇಕು ಎಂಬುದು ಅವರ ಆಶಯ.
ಯೇಸು ಮಹಾ ಕ್ಷಮಾದಾನಿ. ಅವರಿಗೆ ತೊಂದರೆ, ಕಷ್ಟವನ್ನು ಕೊಟ್ಟವರಿಗೂ ಕ್ಷಮೆ ನೀಡಿದರು. ತಪ್ಪುಗಳನ್ನು ನೇರವಾಗಿ ಹೇಳುವ ಮೂಲಕ ಖಂಡಿಸುತ್ತಿದ್ದರು. ಈ ವಿಷಯದಲ್ಲಿ ಅವರು ಎಂದೂ ರಾಜಿ ಆಗಲಿಲ್ಲ. ತಪ್ಪುಗಳ ಕುರಿತು ಎದೆಗಾರಿಕೆಯಿಂದ ಹೇಳುತ್ತಿದ್ದರು.
ಕ್ರಿಸ್​ಮಸ್ ಬರೀ ಆಚರಣೆಯಲ್ಲ. ಅದು ಯೇಸುವಿನ ಸಂದೇಶ ಮತ್ತು ಮೌಲ್ಯವನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳುವುದು. ಇದನ್ನು ಸಮುದಾಯ, ಕುಟುಂಬ ಸಂಬಂಧದಲ್ಲಿ ಜಾರಿಗೆ ತರುವುದು. ಅದಕ್ಕಾಗಿಯೇ ಕ್ರಿಸ್​ಮಸ್ ಆಚರಣೆ. ಪ್ರತಿವರ್ಷ ಈ ರೀತಿಯ ಆಚರಣೆ ಮೂಲಕ ಯೇಸು ಸಂದೇಶ, ಮೌಲ್ಯ ಸ್ಮರಿಸಿಕೊಳ್ಳುವುದು, ಅರ್ಥೈಸಿಕೊಳ್ಳುವ ಹಬ್ಬ. ಈ ಮೂಲಕ ಸಾಮಾಜಿಕ ಮೌಲ್ಯ, ಸಾಮಾಜಿಕ ಕಾಳಜಿಯನ್ನು ಪ್ರದರ್ಶಿಸಬೇಕಿದೆ. ಯೇಸುವಿನ ಜನ್ಮದಿನವಾದ ಕ್ರಿಸ್​ಮಸ್ ದಿನದಂದು ಕ್ಯಾರೆಲ್​ಹಾಡುಗಳನ್ನು ಹಾಡುವ ಮೂಲಕ ಅವರ ಸಂದೇಶವನ್ನು ಸ್ಮರಣೆ ಮಾಡಲಾಗುತ್ತದೆ.
ಯೇಸು ಜನನವೇ ಐತಿಹಾಸಿಕ ಘಟನೆ. ಇವರು ಹುಟ್ಟುವ ಮುನ್ನ ದೇವರು ಕೊಟ್ಟಿರುವ ವಿವೇಚನೆ ಮತ್ತು ಸ್ವಾತಂತ್ರ್ಯನ್ನು ಮನುಷ್ಯರು ದುರ್ಬಳಕೆ ಮಾಡಿಕೊಂಡು ತಪ್ಪುಗಳನ್ನು ಎಸಗುತ್ತಿದ್ದರು.
ಯೇಸುವಿಗೂ ಮುನ್ನವೇ 2 ಸಾವಿರ ವರ್ಷಗಳ ಹಿಂದೆಯೇ ದೇವರು ಪ್ರವಾದಿಗಳನ್ನು ಭೂಮಿಗೆ ಕಳುಹಿಸಿಕೊಟ್ಟು ಜನರಿಗೆ ತಿಳಿಹೇಳುವ ಕೆಲಸ ಮಾಡಿದ. ಈ ಕುರಿತು ಅನೇಕ ನಿದರ್ಶನಗಳು ಬೈಬಲ್​ನಲ್ಲಿ ದೊರೆಯುತ್ತವೆ. ದೇವರು ಕಳುಹಿಸಿಕೊಟ್ಟ ಪ್ರವಾದಿಗಳು ರಾಜರು, ನ್ಯಾಯಾಧೀಶರು… ಹೀಗೆ ವಿವಿಧ ರೂಪದಲ್ಲಿದ್ದರು. ಆದಾಗ್ಯೂ, ಮನುಷ್ಯರು ಸುಧಾರಣೆ ಆಗಲಿಲ್ಲ. ಹೀಗಾಗಿಯೇ, ಯೇಸು ಬರಬೇಕಾಯಿತು.
ಯೇಸು ಭೂಮಿಗೆ ಬರುವ ಕುರಿತು ವಿಶ್ವಾಸದ ಪಿತಾಮಹ ಅಬ್ರಾಹಂ ಸಹ ಸುಳಿವು ನೀಡಿದ್ದರು. ಯೇಸುದೇವ ಮನುಷ್ಯ ಜನಾಂಗದ ರಕ್ಷಕನ ಅವತಾರವಾಗಲಿದ್ದು, ಆತನೇ ಮನುಷ್ಯರ ಪಾಪ ತೊಳೆಯುತ್ತಾರೆಂದು ಭರವಸೆ ಕೊಟ್ಟಿದ್ದರು. ಅದೇ ರೀತಿ ನೂರಾರು ಪ್ರವಾದಿಗಳು ಈ ಭವಿಷ್ಯವನ್ನೇ ನುಡಿದಿದ್ದರು.
ಅಂತೆಯೆ, ದೇವರು ಯೇಸುವನ್ನು ಭೂಮಿಗೆ ಕಳುಹಿಸಿದರು. ಕನ್ಯೆಯಲ್ಲೇ ಆತ ಜನಿಸಬೇಕೆಂಬ ಆಶಯ ಇತ್ತು. ಅದಕ್ಕಾಗಿ ‘ಮೇರಿ’ ಎಂಬ ಯುವತಿಯನ್ನು ದೇವರು ಆಯ್ಕೆ ಮಾಡಿದರು. ಈ ಹಿನ್ನೆಲೆಯಲ್ಲಿ ದೇವದೂತ, ಮೇರಿಯನ್ನು ಭೇಟಿ ಮಾಡಿ ‘ನೀನು ಗರ್ಭವತಿ ಆಗಿರುವೆ. ಇದು ಪವಿತ್ರ ಆತ್ಮದ ಪ್ರೇರಿತ. ಅವರೇ ಲೋಕದ ರಕ್ಷಕ’ ಎಂದು ಹೇಳಿದರು. ಇದರಿಂದ ಕಳವಳಕ್ಕೆ ಒಳಗಾದ ಮೇರಿ, ‘ಅದು ಹೇಗೆ ಸಾಧ್ಯ’ ಎಂದು ಪ್ರಶ್ನೆ ಹಾಕಿಕೊಂಡಳು. ಪುರುಷನ ಸಂಪರ್ಕವಿಲ್ಲದೆ ಗರ್ಭವತಿ ಆಗುವುದು ಹೇಗೆ ಎಂಬ ಚಿಂತೆಗೆ ಒಳಗಾದಳು. ಆಕೆಗೆ ದೇವದೂತ ತಿಳಿಹೇಳಿದ. ‘ಇದು ಮನುಷ್ಯರಿಂದ ಆಗಿರುವುದಲ್ಲ, ದೇವರ ಪವಿತ್ರ ಆತ್ಮದಿಂದ ಆವರಿಸಿಕೊಂಡಿದ್ದು. ಇದುವೇ ದೇವರ ಆಶೀರ್ವಾದ, ಭಯಪಡಬೇಡ’ ಎಂದು ಸಂತೈಸಿದರು. ಇದನ್ನು ನಂಬಿದ ಮೇರಿ, ದೇವರ ಇಚ್ಛೆಯಂತೆ ಆಗಲಿ ಅಂದುಕೊಂಡರು. ಈ ನಡುವೆ, ಮೇರಿಗೆ ಜೋಸೆಫ್ ಎಂಬ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಆತನಿಗೂ ದೇವದೂತ ಮನವರಿಕೆ ಮಾಡಿಕೊಟ್ಟರು. ಬಳಿಕ ಮೇರಿಯನ್ನು ಜೋಸೆಫ್ ಮದುವೆಯಾದ. ದೇವರ ಯೋಜನೆಯಂತೆ ಈ ದಂಪತಿ ಕೌಟುಂಬಿಕ ಜೀವನವನ್ನು ಇದಕ್ಕಾಗಿಯೇ ಮೀಸಲು ಇಟ್ಟರು.
ಗರ್ಭಿಣಿಯಾಗಿದ್ದಾಗ, ಕಡ್ಡಾಯವಾಗಿ ಜನಗಣತಿಗೆ ಹಾಜರಾಗಬೇಕಾಗಿ ಬಂತು. ಆಗ ಜೋಸೆಫ್ ಮಡದಿಯನ್ನು ಬೆತ್ಲೆಹೆಮ್ೆ ಕರೆದೊಯ್ದ. ಅಲ್ಲಿ ವಾಸ್ತವ್ಯಕ್ಕೆ ಮನೆ, ಛತ್ರ ಏನೂ ಸಿಗದ ಕಾರಣ, ದನದ ಕೊಟ್ಟಿಗೆಯಲ್ಲಿ ಆಶ್ರಯ ಪಡೆದರು. ಹೀಗೆ ಉಳಿದುಕೊಳ್ಳಲು ಅವರಿಗೆ ಸಿಕ್ಕಿದ ಕೊಟ್ಟಿಗೆಯಲ್ಲೇ ಪುಟ್ಟ ಯೇಸುವಿನ ಜನನವಾಯಿತು. ಯೇಸು ಭೂಮಿ ಮೇಲೆ ಜನ್ಮ ಪಡೆದಾಗ ಆಕಾಶದಲ್ಲಿ ದೊಡ್ಡ ನಕ್ಷತ್ರ ಕಾಣಿಸಿಕೊಂಡಿತು. ದೇವದೂತರು ಮೂವರು ಜ್ಞಾನಿಗಳಿಗೆ ಈ ವಿಷಯ ತಿಳಿಸಿದರು. ಅವರು ಜನರಿಗೆ ವಿಷಯ ಮುಟ್ಟಿಸಿದರು. ಅಲ್ಲಿಗೆ ಬಂದ ಅವರೆಲ್ಲ ಬಾಲಯೇಸುವಿನ ದರ್ಶನ ಪಡೆದು ಆರಾಧನೆ ಮಾಡಿದರು.
(ಲೇಖಕರು ಮೈಸೂರು ಡಯೋಸಿಸನ್ ಎಜುಕೇಷನಲ್ ಸೊಸೈಟಿಯ ಕಾರ್ಯದರ್ಶಿ)
https://www.vijayavani.net/wp-admin/post.php?post=1905352&action=edit
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 2 =
Remember me
