ದಾವಣಗೆರೆ/ಬೆಂಗಳೂರು:ಜಾತಿ ಗಣತಿ ವರದಿಯನ್ನು ಸರ್ಕಾರ ಸ್ವೀಕಾರಿಸಿರುವುದರ ವಿರುದ್ಧ ಅಸಮಾಧಾನದ ಕಾವು ಹೆಚ್ಚುತ್ತಿದ್ದು, ಹೋರಾಟದ ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರಬಲ ಸಮುದಾಯಗಳಾದ ವೀರಶೈವ ಲಿಂಗಾಯತರು ಹಾಗೂ ಒಕ್ಕಲಿಗರು ಜಂಟಿ ಹೋರಾಟದ ಕಹಳೆ ಮೊಳಗಿಸಲು ಸಿದ್ಧತೆ ನಡೆಸಿದ್ದಾರೆ. ವರದಿ ವಿರುದ್ಧ ಈಗಾಗಲೇ ಎರಡೂ ಸಮಾಜಗಳು ತಿರುಗಿ ಬಿದ್ದಿವೆ. ಅದನ್ನೀಗ ಹೋರಾಟದ ರೂಪಕ್ಕಿಳಿಸಿ ತಮ್ಮ ಸಮುದಾಯಗಳ ಹಿತ ರಕ್ಷಿಸಿಕೊಳ್ಳಲು ಮುಂದಾಗಿವೆ.
ರಾಜ್ಯದಲ್ಲಿ ಇದುವರೆಗೆ ಸಂಖ್ಯಾಬಲದಲ್ಲಿ ವೀರಶೈವ ಲಿಂಗಾಯತರು -ಒಕ್ಕಲಿಗರು ಮೊದಲ ಎರಡು ಸ್ಥಾನದಲ್ಲಿದ್ದವರು. ಇದೀಗ ಮೂರು-ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಡುತ್ತಿರುವುದನ್ನು ಒಪ್ಪಿಕೊಳ್ಳಲು ಉಭಯ ಸಮಾಜಗಳು ತಯಾರಿಲ್ಲ. ವೀರಶೈವ ಮಹಾಸಭಾ-ರಾಜ್ಯ ಒಕ್ಕಲಿಗರ ಸಂಘದ ಪ್ರಮುಖರು ಸದ್ಯದಲ್ಲೇ ಬೆಂಗಳೂರಿನಲ್ಲಿ ಸಭೆ ಸೇರಿ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ವಿಸõತ ಚರ್ಚೆ ನಡೆಸಲಿದ್ದಾರೆಂದು ಮೂಲಗಳು ತಿಳಿಸಿವೆ. ಕಾಂತರಾಜು ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುವ ಪೂರ್ವದಲ್ಲಿ ಅದನ್ನು ವಿರೋಧಿಸಿ ಎರಡೂ ಸಮುದಾಯಗಳು ಜಂಟಿ ಸಭೆ ನಡೆಸಿ ತಮ್ಮ ವಿರೋಧ ದಾಖಲಿಸಿದ್ದವು ಎಂಬುದಿಲ್ಲಿ ಗಮನಾರ್ಹ.
ವೀರಶೈವ ಮಠಾಧೀಶರು- ಜನಪ್ರತಿನಿಧಿಗಳ ಸಭೆ?:ಜಂಟಿ ಹೋರಾಟಕ್ಕೂ ಮುನ್ನ ವೀರಶೈವ ಲಿಂಗಾಯತ ಸಮಾಜದ ಸ್ವಾಮೀಜಿಗಳು, ಜನಪ್ರತಿನಿಧಿಗಳ ಮಹಾಸಭಾ ರ್ಚಚಿಸಲಿದ್ದು, ಸಭೆಯ ದಿನಾಂಕ ನಿಗದಿಯಾಗಬೇಕಿದೆ.
ಸಂಪುಟ ಸಭೆ, ಸದನದಲ್ಲೂ ವಿರೋಧ?:ಜಾತಿ ಗಣತಿ ವರದಿಗೆ ಒಪ್ಪಿಗೆ ಬಯಸಿ ಅದನ್ನು ಸಂಪುಟ ಸಭೆಯಲ್ಲಿ ಮಂಡಿಸಿದರೆ ಅಲ್ಲಿಯೇ ವಿರೋಧ ವ್ಯಕ್ತಪಡಿಸಬೇಕು ಎಂಬ ಚಿಂತನೆಗಳು ಕೂಡ ನಡೆದಿದ್ದು ವೀರಶೈವ -ಒಕ್ಕಲಿಗ ಸಚಿವರಿಗೆ ಈ ಬಗ್ಗೆ ಮೌಖಿಕ ಸಂದೇಶ ಕಳುಹಿಸಲು ನಿರ್ಧರಿಸಲಾಗಿದೆ. ಹಾಗೊಂದು ವೇಳೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದರೂ ಉಭಯ ಸದನಗಳಲ್ಲಿ ವರದಿ ಮಂಡಿಸಬೇಕಾಗುತ್ತದೆ. ವೀರಶೈವ- ಒಕ್ಕಲಿಗರ ಸಂಖ್ಯಾಬಲ ಗಮನಿಸಿದರೆ ಆಗಲೂ ವಿರೋಧಿಸಲು ಸಾಧ್ಯವಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ. ವಿಧಾನಸಭೆಯಲ್ಲಿ 58 ವೀರಶೈವ- ಲಿಂಗಾಯತ ಶಾಸಕರು, 42 ಒಕ್ಕಲಿಗ, 37 ಪರಿಶಿಷ್ಟ ಜಾತಿ, 17 ಪರಿಶಿಷ್ಟ ಪಂಗಡದ ಹಾಗೂ ಕುರುಬ ಸಮುದಾಯದ 12 ಶಾಸಕರಿದ್ದಾರೆ ಎಂದು ಲೆಕ್ಕ ಹಾಕಲಾಗಿದೆ. ಜಾತಿ ಗಣತಿಗೆ ನಮ್ಮ ವಿರೋಧವಿಲ್ಲ. ಆದರದು ಅವೈಜ್ಞಾನಿಕವಾಗಿದೆ. ಸಮೀಕ್ಷೆ ವೇಳೆ ಮನೆ, ಮನೆಗೆ ಭೇಟಿ ನೀಡಿಲ್ಲ. ವಾಸ್ತವ ಅಂಶಗಳನ್ನು ಮರೆಮಾಚಲಾಗಿದೆ ಎಂದಿರುವ ವೀರಶೈವ ಮಹಾಸಭಾ, ವೈಜ್ಞಾನಿಕ ಮಾನದಂಡ ಆಧರಿಸಿ ಮರು ಗಣತಿ ಮಾಡುವುದಾದರೆ ಸ್ವಾಗತವಿದೆ ಎಂದಿದೆ.
ಮೊದಲಿಂದಲೂ ವಿರೋಧ:ಅವೈಜ್ಞಾನಿಕ ಜಾತಿ ಗಣತಿ ವರದಿ ಸ್ವೀಕರಿಸದಂತೆ ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂಥನಾಥ ಸ್ವಾಮೀಜಿ, ತುಮಕೂರಿನ ಸ್ಪಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ನೇತೃತ್ವದಲ್ಲಿ ಸಮುದಾಯದ ಪ್ರಮುಖ ಮುಖಂಡರು ಸಭೆ ನಡೆಸಿದ್ದರು. ಈ ಸಭೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲಾಗಿತ್ತು. ರಾಜ್ಯದಲ್ಲಿ ನಿಮ್ಮ ಸರ್ಕಾರವಿದೆ. ಕಾಂಗ್ರೆಸ್​ನಲ್ಲಿ ಮುಂಚೂಣಿ ನಾಯಕರಲ್ಲಿ ನೀವೇ ಅಗ್ರಗಣ್ಯರು. ಹೀಗಾಗಿ, ವರದಿ ಸ್ವೀಕಾರ ಮಾಡದಂತೆ ಕ್ರಮಕೈಗೊಳ್ಳಬೇಕೆಂದು ಉಪಮುಖ್ಯಮಂತ್ರಿಗೆ ಪಕ್ಷಾತೀತವಾಗಿ ಎಲ್ಲರೂ ಒತ್ತಾಯಿಸಿದ್ದರು.
ವಿರೋಧ ವ್ಯಕ್ತಪಡಿಸದ ಒಕ್ಕಲಿಗ ಸಚಿವರು:ಜಾತಿಗಣತಿ ವರದಿ ವಿಚಾರದಲ್ಲಿ ವೀರಶೈವ-ಲಿಂಗಾಯುತ ಸಮುದಾಯದ ಸಚಿವರು, ತಮ್ಮದೇ ಸರ್ಕಾರ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ವರದಿ ಸ್ವೀಕರಿಸಿ 24 ಗಂಟೆ ಕಳೆದರೂ ಆಡಳಿತ ಪಕ್ಷದ ಒಕ್ಕಲಿಗ ಸಮುದಾಯ ಸಚಿವರು ಇದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಮುಖ್ಯವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಚಲುವರಾಯಸ್ವಾಮಿ ಮತ್ತು ಕೃಷ್ಣಭೈರೇಗೌಡ ವಿರೋಧಿಸಿಲ್ಲ.
ಒಕ್ಕಲಿಗರ ಸಂಘದಿಂದ ಕಾನೂನು ಹೋರಾಟ:ಕಾಂತರಾಜು ಆಯೋಗ ತಯಾರಿಸಿರುವ ಅವೈಜ್ಞಾನಿಕ ಜಾತಿಗಣತಿ ವರದಿ ವಿರುದ್ಧ ಆರಂಭದಿಂದಲೂ ಅಪಸ್ವರ ಎತ್ತಿದ್ದ ಒಕ್ಕಲಿಗ ಸಮುದಾಯ, ವರದಿ ಸ್ವೀಕರಿಸಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿರುದ್ಧ ಇನ್ನಷ್ಟು ಕೆರಳಿದೆ. ವರದಿ ಅಂಗೀಕರಿಸಿದರೆ ಕಾನೂನು ಹೋರಾಟ ನಡೆಸುವುದಾಗಿ ಸಂಘದ ಅಧ್ಯಕ್ಷ ಡಿ. ಹನುಮಂತಯ್ಯ ಎಚ್ಚರಿಕೆ ಕೊಟ್ಟಿದ್ದಾರೆ. ಸಮುದಾಯದ ಮಠಾಧೀಶರು, ಡಿಸಿಎಂ, ಸಚಿವರು, ವಿವಿಧ ಸಂಘ-ಸಂಸ್ಥೆಗಳ ಜತೆ ಸಮಾಲೋಚಿಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು. 8 ವರ್ಷದ ಬಳಿಕ ತಯಾರಿಸಿರುವ ಈ ವರದಿ ಅವೈಜ್ಞಾನಿಕ. 10 ವರ್ಷಕ್ಕೊಮ್ಮೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಬೇಕೆಂಬ ನಿಯಮ ಇರುವುದ ರಿಂದ ವರದಿ ಅಪ್ರಸ್ತುತ ಎಂದು ಡಿ.ಹನುಮಂತಯ್ಯ ಹೇಳಿದ್ದಾರೆ.
ಬ್ರಾಹ್ಮಣ ಸಮುದಾಯದಿಂದಲೂ ವಿರೋಧ:ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದ ಒಟ್ಟು ಜನಸಂಖ್ಯೆಯನ್ನು 14 ಲಕ್ಷ ಎಂದು ತಪ್ಪಾಗಿ ತೋರಿಸಲಾಗಿದೆ. ಈ ಬಗ್ಗೆ ಹಲವು ಸಂದೇಹ ಮೂಡುತ್ತಿದೆ. ಸಂವಿಧಾನ ಪ್ರಕಾರವಾಗಿ ಜನಗಣತಿ ಸಮೀಕ್ಷೆಯನ್ನು ಆಯೋಗ ಮಾಡುವಂತಿಲ್ಲ. ಇದನ್ನು ಕೇಂದ್ರ ಸರ್ಕಾರ ಮಾತ್ರ ಮಾಡಲು ಅವಕಾಶವಿದೆ. ಅವೈಜ್ಞಾನಿಕ ವರದಿ ಬಗ್ಗೆ ನಮಗೆ ಹಲವು ಅನುಮಾನಗಳಿವೆ. ನಮ್ಮ ಸಮುದಾಯದ ಜನಗಣತಿ ಮಾಡುವ ಅವಶ್ಯಕತೆ ಇದ್ದರೆ ಅದನ್ನು ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ವಹಿಸಬಹುದು. ಇಲ್ಲವಾದಲ್ಲಿ ಆ ಜವಾಬ್ದಾರಿಯನ್ನು ನಮ್ಮ ಪರಿಷತ್ತಿಗೆ ನೀಡಬಹುದು. ಹಿಂದುಳಿದ ವರ್ಗ, ಪರಿಶಿಷ್ಟ ಸಮುದಾಯಗಳಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳ ಬಗ್ಗೆ ನಮಗೆ ತಕರಾರು ಇರುವುದಿಲ್ಲ ಎಂದು ವಿಶ್ವ ವಿಪ್ರತ್ರಯೀ ಪರಿಷತ್ ಹೇಳಿದೆ.
ವರದಿ ಮೂಲೆಗೆ ಎಸೆಯಿರಿ:ಜಾತಿ ಗಣತಿ ವರದಿ ಅವೈಜ್ಞಾನಿಕವಾಗಿದೆ ಎಂದು ವೀರಶೈವ ಮಹಾಸಭಾ ಪದೆಪದೇ ಹೇಳುತ್ತ ಬಂದಿದೆ. ಅಷ್ಟಕ್ಕೂ ಇದು 8 ವರ್ಷಗಳ ಹಿಂದಿನ ವರದಿ. ಅದನ್ನು ಮೂಲೆಗೆ ಎಸೆಯಬೇಕಿತ್ತು. ಕಳೆದ 8 ವರ್ಷಗಳ ಅವಧಿಯಲ್ಲಿ ಜಾತಿವಾರು ಜನಸಂಖ್ಯೆಯಲ್ಲಿ ಸಾಕಷ್ಟು ಏರುಪೇರು ಆಗಿವೆ. ಈ ವರದಿ ಅಂಗೀಕರಿಸಲು ಮುಂದಾದರೆ ವೀರಶೈವ ಸಮಾಜದ ಹಿತ ಕಾಯಲು ಹರ-ಗುರು-ಚರ ಮೂರ್ತಿಗಳ ನೇತೃತ್ವದಲ್ಲಿ ನಾವು ಬೀದಿಗಿಳಿಯುತ್ತೇವೆ.
| ಡಾ. ಶಾಮನೂರು ಶಿವಶಂಕರಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ
ಮಹಿಳೆಯರಿಗೆ ರೆಡ್‌ ಬಾಲ್ ಕ್ರಿಕೆಟ್‌ ಟೂರ್ನಿ ನಡೆಸಲು ಬಿಸಿಸಿಐ ಐತಿಹಾಸಿಕ ನಿರ್ಧಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 12 =
Remember me
