ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯ ಭೇಟಿ ಸರದಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದ್ದು, ರಾಜ್ಯ ನಾಯಕರಿಗೆ ತರಹೇವಾರಿ ಟಾಸ್ಕ್​ಗಳನ್ನು ನೀಡಿ ಬಿಡುವಿಲ್ಲದಂತೆ ತೊಡಗಿಸಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಗೆ ‘ಮಿಷನ್ 150’ ಆಕರ್ಷಕ ಘೋಷಣೆಯಲ್ಲ. ಸಾಧಿಸಲೇ ಬೇಕಾದ ಗುರಿ ಎಂದು ವರಿಷ್ಠರು ಈಗಾಗಲೆ ಕಟ್ಟಪ್ಪಣೆ ಮಾಡಿದ್ದು, ಕಾರ್ಯಯೋಜನೆ ಜಾರಿ ಮಾಡಿದ ರೀತಿಯನ್ನು ಪರಾಮಶಿಸುವ ಮೂಲಕ ರಾಜ್ಯ ನಾಯಕರ ಮೇಲೆ ನಿಗಾ ಇಟ್ಟಿದ್ದಾರೆ.
ನಡ್ಡಾ ಪ್ರವಾಸ:ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಮೋದಿ ಪಾಲ್ಗೊಳ್ಳುತ್ತಿದ್ದರೆ, ಅಮಿತ್ ಷಾ ಎರಡೂ ರೀತಿ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಸಂಘಟನಾತ್ಮಕ ಚಟುವಟಿಕೆಗಳಿಗೆ ನಡ್ಡಾ ಹೆಚ್ಚಿನ ಗಮನ ನೀಡಿದ್ದು, ಫೆ.20 ಮತ್ತು 21ರಂದು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಪಕ್ಷದ ಹಿಡಿತ, ಗೆಲುವು-ಸೋಲಿನ ನೆಲೆಯಲ್ಲಿ ವಿಧಾನಸಭೆ ಕ್ಷೇತ್ರಗಳನ್ನು ಎ, ಬಿ ಹಾಗೂ ಸಿ ವರ್ಗದಲ್ಲಿ ವಿಂಗಡಿಸಿ ಕಾರ್ಯತಂತ್ರ ಹೆಣೆದಿದೆ. ಉಡುಪಿ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಮೂರು ವರ್ಗಗಳಿಗೆ ಸೇರಿದ 17 ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡುವ ಗುರಿಯಿಟ್ಟುಕೊಂಡು ನಡ್ಡಾ ಈ ಬಾರಿ ಆಗಮಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾರ್ಯಕ್ರಮಗಳಲ್ಲಿ ಭಾಗಿ:ಉಡುಪಿಯಲ್ಲಿ 20ರಂದು ಬೂತ್ ಕಾರ್ಯಕರ್ತರ ಸಮಾವೇಶ, ಬೈಂದೂರಿನಲ್ಲಿ ಸಾರ್ವಜನಿಕ ಸಮಾರಂಭ, ನಂತರ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಅಡಕೆ ಬೆಳೆಗಾರರ ಜತೆಗೆ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು ಶೃಂಗೇರಿಯಲ್ಲಿ ವಾಸ್ತವ್ಯ ಹೂಡಲಿದ್ದು, 21ರ ಬೆಳಗ್ಗೆ ಚಿಕ್ಕಮಗಳೂರಿನಲ್ಲಿ ಪ್ರಬುದ್ಧರ ಸಮಾವೇಶದಲ್ಲಿ ಭಾಗವಹಿಸಿದ ನಂತರ ಹಾಸನ ಜಿಲ್ಲೆಗೆ ತೆರಳಲಿದ್ದು, ಬೇಲೂರಿನಲ್ಲಿ ಸಾರ್ವಜನಿಕ ಸಮಾರಂಭ, ಹಾಸನದಲ್ಲಿ ಬೂತ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸುವರು.
ಉಡುಪಿ ಜಿಲ್ಲೆಯ ಐದಕ್ಕೆ ಐದು, ಚಿಕ್ಕಮಗಳೂರು ಜಿಲ್ಲೆಯ ಐದರಲ್ಲಿ ನಾಲ್ಕು ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದು, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಹಿಡಿತ ಮತ್ತಷ್ಟು ಬಿಗಿಗೊಳಿಸಲು ತಂತ್ರೋಪಾಯ ನಡ್ಡಾ ರೂಪಿಸಿಕೊಡುವ ಸಾಧ್ಯತೆಯಿದೆ. ಹಾಸನ ಜಿಲ್ಲೆಯಲ್ಲಿ ಪಕ್ಷದ ಗತವೈಭವ ಮರುಕಳಿಸುವುದು ವರಿಷ್ಠರ ಇರಾದೆಯಾಗಿದೆ. ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಒಂದರಲ್ಲಿ ಗೆದ್ದಿದೆ. ಜೆಡಿಎಸ್ ಜತೆಗೆ ಜಿದ್ದಾಜಿದ್ದಿ ಇನ್ನಷ್ಟು ತೀವ್ರಗೊಳಿಸುತ್ತಿದ್ದು, ತಂತ್ರ ರೂಪಿಸಲಾಗುತ್ತಿದೆ. ಪಕ್ಷದ ನಾಯಕರ ಮೇಲೆ ದಳಪತಿಗಳು ಕೆಂಡ ಕಾರುತ್ತಿರುವುದಕ್ಕೆ ಇದೇ ಕಾರಣ ಎಂದು ಮೂಲಗಳು ಹೇಳಿವೆ.
ಸಂಘಟನಾ ಶಕ್ತಿ, ಡಬಲ್ ಇಂಜಿನ್ ಸರ್ಕಾರದ ಸಾಧನೆಗಳ ಬಲ ಸಮರ್ಪಕವಾಗಿ ಬಳಸಿಕೊಂಡು ‘ಆಡಳಿತ ವಿರೋಧಿ ಅಲೆ’ ತಗ್ಗಿಸುವ ಟಾಸ್ಕನ್ನು ಬಿಜೆಪಿ ಮಂಡಲ (ವಿಧಾನಸಭೆ ಕ್ಷೇತ್ರ) ಪ್ರಭಾರಿಗಳಿಗೆ ನೀಡಲಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್​ವೊಂದರಲ್ಲಿ ಬುಧವಾರ ಆಯೋಜಿಸಿದ್ದ ಪ್ರಭಾರಿಗಳಿಗೆ ಪ್ರಶಿಕ್ಷಣ ವರ್ಗದಲ್ಲಿ ಭಾಗವಹಿಸಿದ್ದ ನಾಯಕರು, ಮುಂದಿನ ಮೂರು ತಿಂಗಳು ಕಾರ್ಯನಿರ್ವಹಿಸಬೇಕಾದ ರೀತಿ-ರಿವಾಜು, ಜವಾಬ್ದಾರಿಗಳ ಬಗ್ಗೆ ಮಾರ್ಗದರ್ಶನ ಮಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ಇನ್ನಿತರ ಹಿರಿಯರು ಸಲಹೆ-ಸೂಚನೆಗಳನ್ನಿತ್ತರು. ಮಿಷನ್ 150 ಗುರಿ ಸಕಾರಾತ್ಮಕ ಭಾವನೆ ತುಂಬಿದೆ. ಈ ನಿಟ್ಟಿನಲ್ಲಿ ಪ್ರಭಾರಿಗಳ ಕ್ರಿಯಾಶೀಲತೆ ಮತ್ತು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಕಾರ್ಯತತ್ಪರತೆ ಪ್ರಮುಖವಾಗಿದೆ. ಇಷ್ಟು ದಿನ ಆಡಳಿತ, ಸಂಘಟನೆ ಬೇರೆ ಬೇರೆಯಾಗಿತ್ತು.
ಮುಂದಿನ ಮೂರು ತಿಂಗಳು ಸಚಿವರು, ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ಸೇರಿ ಸಂಘಟನೆ ಒಗ್ಗೂಡಿಸಿ, ಎಲ್ಲರಿಂದಲೂ ಕೆಲಸ ತೆಗೆದುಕೊಳ್ಳುವುದು ಪ್ರಭಾರಿಗಳ ಗುರುತರ ಹೊಣೆಯಾಗಿದೆ. ಆಯಾ ವಿಧಾನಸಭೆ ಕ್ಷೇತ್ರದಲ್ಲಿ ಅಭಿಪ್ರಾಯ ಬೇಧ ಇಲ್ಲವೇ ಗುಂಪುಗಾರಿಕೆ ಜತೆಗೆ ಗುರುತಿಸಿಕೊಳ್ಳುವ ಬದಲು ಕಾರ್ಯ-ಕಾರಣ ತಿಳಿದು, ಒಂದಾಗಿಸಲು ಪ್ರಯತ್ನಿಸಬೇಕು ಎಂದು ಸೂಚಿಸಿದ್ದಾರೆ. ಪ್ರತಿಪಕ್ಷಗಳು, ವಿರೋಧಿಗಳ ಅಪಪ್ರಚಾರ ವಿಷಯವಸ್ತು ತಿಳಿದುಕೊಂಡು ಅದಕ್ಕೆ ತಕ್ಕ ಉತ್ತರ, ಸಾಧನೆಗಳ ಜನರ ಬಾಗಿಲಿಗೆ ತಲುಪಿಸಲು ಕಾರ್ಯಕರ್ತರಿಗೆ ಪ್ರೇರಣೆ ನೀಡಿ, ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಪ್ರಭಾರಿಗಳಿಗೆ ಸಲಹೆ ನೀಡಿದರು. ಆಯಾ ವಿಧಾನಸಭೆ ಕ್ಷೇತ್ರಕ್ಕೆ ಅಗತ್ಯವಾದ ಕಾರ್ಯತಂತ್ರ, ಕಾರ್ಯಯೋಜನೆಯನ್ನು ರೂಪಿಸಿ ಎಲ್ಲ ಹಂತದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು ಎಂದು ತಾಕೀತು ಮಾಡಿದರು. ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ. ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್, ಪ್ರಧಾನ ಕಾರ್ಯದರ್ಶಿಗಳಾದ ಎನ್.ರವಿಕುಮಾರ್, ಮಹೇಶ್ ಟೆಂಗಿನಕಾಯಿ ಇನ್ನಿತರರು ಇದ್ದರು.
ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆ ಎಂಬ ಭ್ರಮೆಯಿಂದ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ. ಸದನದಲ್ಲಿ ಮಾತನಾಡಲಿ, ಅದಕ್ಕೆ ಉತ್ತರ ನೀಡಲು ನಾವು ಸಿದ್ಧರಿದ್ದೇವೆ. ಅಧಿವೇಶನದಲ್ಲಿ ಇರುವುದಿಲ್ಲವೆಂಬ ಸಿದ್ದರಾಮಯ್ಯ ಹೇಳಿಕೆ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಗೌರವ ತರುವುದಿಲ್ಲ.
|ಬಿ.ಎಸ್.ಯಡಿಯೂರಪ್ಪಮಾಜಿ ಸಿಎಂ
ಕಾಂಗ್ರೆಸ್​ಗೆ ಭವಿಷ್ಯವಿಲ್ಲ:ಎಂಕ, ನಾಣಿ, ಶೀನ ನಾಯಕತ್ವವು ಜತೆಗಿರುವ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಭವಿಷ್ಯವಿಲ್ಲ. ಪಕ್ಷದ ಕಾರ್ಯಕರ್ತರು ಎಂದಿನ ಉತ್ಸಾಹ, ಛಲದಿಂದ ಶ್ರಮಿಸಬೇಕು ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು. ಪ್ರಧಾನಿ ಮೋದಿ ಬಲಿಷ್ಠ ನಾಯಕತ್ವ, ಕೇಂದ್ರ ಸರ್ಕಾರದ ಕೊಡುಗೆಗಳು ಹಾಗೂ ರಾಜ್ಯ ಸರ್ಕಾರದ ಸಾಧನೆಗಳು ವಿಧಾನಸಭೆ ಕ್ಷೇತ್ರದಲ್ಲಿ ಸಕಾರಾತ್ಮಕ ವಾತಾವರಣ, ಪಕ್ಷದ ಪರವಾಗಿ ಅಲೆ ಸೃಷ್ಟಿಸಲು ನೆರವಾಗಲಿದೆ ಎಂದು ಹುರಿದುಂಬಿಸಿದರು. ಟಿಕೆಟ್ ಹಂಚಿಕೆ ಬಳಿಕ ಸಣ್ಣಪುಟ್ಟ ಅಸಮಾಧಾನವಿದ್ದರೆ ಶಮನಗೊಳಿಸಿ, ಪಕ್ಷದ ಬೆನ್ನೆಲುಬಿನಂತೆ ಕೆಲಸ ಮಾಡಬೇಕು. ಪ್ರತಿ ಮನೆಯಲ್ಲೂ ಒಂದಿಲ್ಲೊಂದು ಫಲಾನುಭವಿ ಇದ್ದಾರೆ. ಅಂತಹವರನ್ನು ಗುರುತಿಸಿ ತಲುಪುವ ಕಾರ್ಯ ನಮ್ಮಿಂದಾಗಬೇಕು ಎಂದರು.
ಇನ್ನೇನು ನಿಮ್ಮ ಕೆಲಸದ ಅವಧಿ ಮುಗಿಯುತ್ತೆ, ಮನೆಗೆ ಹೊರಡಿ: ಈ ಕಂಪನಿಯಲ್ಲಿ ಉದ್ಯೋಗಿಗಳಿಗೆ ಹೀಗೊಂದು ಎಚ್ಚರಿಕೆ!

ತಮ್ಮದೇ ಮೂತ್ರ ಕುಡಿದು ಜೀವ ಉಳಿಸಿಕೊಂಡ ಸಹೋದರರು; ಭೂಕಂಪದ ಅವಶೇಷಗಳಡಿ 1 ವಾರ ಜೀವನ್ಮರಣ ಹೋರಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
