‘ಕವಿ ಒಂದು ಜೇನ್ನೊಣದ ಹಾಗೆ. ಜೇನ್ನೊಣ ಹಲವಾರು ಬಗೆಯ ಹೂಗಳಿಂದ ಮಕರಂದವನ್ನು ಸಂಗ್ರಹಿಸುತ್ತೆ. ಆ ಹೂಗಳ ಮಕರಂದಗಳಿಗೆ ತಮ್ಮದೇ ಬಣ್ಣ, ರುಚಿ, ಪರಿಮಳ ಇರುತ್ತೆ. ಆದರೆ ಜೇನ್ನೊಣ ಆ ಬಗೆಬಗೆಯ ಮಕರಂದಗಳನ್ನು ತನ್ನ ಮೇಣದ ಗೂಡಿನಲ್ಲಿ ಸಂಗ್ರಹಿಸಿದ ಮೇಲೆ ಆ ಜೇನುತುಪ್ಪಕ್ಕೆ ತನ್ನದೇ ಬೇರೆ ಬಗೆಯ ಬಣ್ಣ, ರುಚಿ, ಪರಿಮಳ ಬರುತ್ತೆ. ಅದು ನಾಲಿಗೆಗೆ ರುಚಿಯಷ್ಟೇ ಅಲ್ಲದೆ ಆರೋಗ್ಯಕ್ಕೂ ಹಿತಕಾರಿ. ಜತೆಗೆ, ಮೇಣವನ್ನು ಉರಿಸಿದರೆ ಬೆಳಕೂ ಬರುತ್ತಲ್ಲ, ಅದೇ ರೀತಿ, ಕವಿ ಸಂಗ್ರಹಿಸಿದ ಲೋಕಾನುಭವ ಕಾವ್ಯಾನುಭವವಾಗಿ ಪರಿವರ್ತಿತವಾಗಬೇಕು. ಆ ಕವಿತೆಗೆ ವಿಶಿಷ್ಟವಾದ ರುಚಿಯೂ ಇರಬೇಕು, ಬೆಳಕೂ ಇರಬೇಕು. ಅದು ಅಪ್ಪಟ ಕಾವ್ಯ’ ಡಾ. ಕೆ.ಎಸ್. ನಿಸಾರ್ ಅಹಮದ್ ಕಾವ್ಯವನ್ನು ವ್ಯಾಖ್ಯಾನಿಸುತ್ತಿದ್ದ ರೀತಿ ಇದು.
ಪದ್ಮಶ್ರೀ, ನಾಡೋಜ ನೃಪತುಂಗ ಮುಂತಾದ ಹತ್ತು ಹಲವು ಪ್ರತಿಷ್ಠಿತ ಪ್ರಶಸ್ತಿಗಳ ಜತೆಗೆ ತಮ್ಮ ನಿತ್ಯೋತ್ಸವದ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ಕನ್ನಡದ ಪ್ರಮುಖ ಕವಿಗಳಲ್ಲೊಬ್ಬರು ಡಾ. ನಿಸಾರ್ ಅಹಮದ್. ಅವರು ನನ್ನ ಕಾವ್ಯಗುರುಗಳಲ್ಲೊಬ್ಬರು ಎಂಬುದು ನನ್ನ ಹೆಮ್ಮೆ. ಅವರೊಂದಿಗೆ ನನ್ನ ಒಡನಾಟ ತುಂಬ ಹಿಂದಿನಿಂದಲೂ ಇತ್ತು. ಕೆಲವೊಮ್ಮೆ ಸಮಯದ ಪರಿವೆಯಿಲ್ಲದೆ, ನಮಗೇ ಅರಿವಿಲ್ಲದೆ, ಹಲವಾರು ಘಂಟೆಗಳ ಕಾಲ ಹತ್ತಾರು ವಿಷಯಗಳ ಬಗ್ಗೆ ಮಾತುಕತೆ ನಡೆಸಿದ್ದುಂಟು. ಅಂಥ ಚರ್ಚೆಯ ವೇಳೆಯಲ್ಲೆಲ್ಲ ಅವರ ಕಾವ್ಯಪ್ರೀತಿಯ ದರ್ಶನವಾಗುತ್ತಿತ್ತು. ನಿಸಾರ್ ಅವರ ಮನೆಮಾತು ಉರ್ದು. ಅವರು ಓದಿದ್ದು ಭೂವಿಜ್ಞಾನವನ್ನು. ಆದರೂ ಅವರು ಕಾವ್ಯಕ್ಷೇತ್ರಕ್ಕೆ ಬಂದರು. ಅದು ಹೇಗೆ? ಅವರಲ್ಲೇ ಅದನ್ನು ಕೇಳಿ ಸಂದೇಹ ನಿವಾರಿಸಿ ಕೊಂಡಿದ್ದೆ. ಅವರು ಹೇಳಿದ್ದರು: ‘ನಾನು ಮೊದಲು ಧನ್ಯವಾದ ಹೇಳಬೇಕಾದ್ದು ನನ್ನ ತಂದೆಗೆ. ಆಗಿನ ಬಹು ಪಾಲು ಮುಸ್ಲಿಮರ ಹಾಗೆ ಅವರು ನನ್ನನ್ನು ಉರ್ದು ಮಾಧ್ಯಮದ ಶಾಲೆಗೆ ಸೇರಿಸಲಿಲ್ಲ. ನನ್ನನ್ನು, ನನ್ನ ತಮ್ಮನನ್ನು ಕನ್ನಡ ಮಾಧ್ಯಮದ ಶಾಲೆಗೆ ಸೇರಿಸಿದರು.
ಜೊತೆಗೆ ರಾತ್ರಿ ಮಲಗುವ ಮುಂಚೆ ನಮಗೆ ಅರೇಬಿಯನ್ ನೈಟ್ಸ್ ಕತೆಗಳನ್ನು ಹೇಳುತ್ತಿದ್ದರು. ಅದು ನನ್ನಲ್ಲಿ ಒಂದು ಕಲ್ಪನಾ ಪ್ರಪಂಚವನ್ನು ತೆರೆಸಿತು. ನಮ್ಮ ಮನೆ ಬೆಂಗಳೂರಿನ ಮಾವಳ್ಳಿ ಸರ್ಕಲ್ಲಿನ ಬಳಿ ಇದ್ದಿದ್ದರಿಂದ ಪ್ರತಿದಿನ ಲಾಲ್ ಬಾಗಿಗೆ ಹೋಗುತ್ತಿದ್ದೆ. ಅಲ್ಲಿನ ಪ್ರಕೃತಿ ಸೌಂದರ್ಯ ನನ್ನ ಒಳಗಣ್ಣಿಗೆ, ಒಳಮನಸ್ಸಿಗೆ ಇಳಿಯಿತು. ಶಾಲೆಯಲ್ಲಿ ಕಮಲಮ್ಮ ಮೇಡಂ ಅಂತ ಇದ್ದರು. ಅವರು ಪುಣ್ಯಕೋಟಿಯ ಪದ್ಯ ಹೇಳುತ್ತಿದ್ದರೆ ವಿದ್ಯಾರ್ಥಿಗಳಾದ ನಾವೆಲ್ಲ ಅಕ್ಷರಶಃ ಕಣ್ಣೀರು ಸುರಿಸುತ್ತಿದ್ದೆವು. ಆ ಕವನ ನನ್ನ ಮೇಲೆ ಗಾಢ ಪ್ರಭಾವ ಬೀರಿತು; ಮುಂದೆ ಕುವೆಂಪು ಅವರ ‘ಕಿಂದರಿಜೋಗಿ’ ಸಹ. ಇಂಟರ್ ಮೀಡಿಯಟ್​ನಲ್ಲಿ ಎಲ್.ಗುಂಡಪ್ಪ, ಎಂ.ವಿ.ಸೀ., ಕೆ.ವೆಂಕಟರಾಮಪ್ಪ ಕನ್ನಡ ಅಭಿಜಾತ ಕಾವ್ಯದಲ್ಲಿ ನನಗೆ ಆಸಕ್ತಿ ಕುದುರಿಸಿದರು. ಆ ಮೇಲೆ ಆನರ್ಸ್ ಮಾಡಲು ನಾನು ಸೆಂಟ್ರಲ್ ಕಾಲೇಜು ಸೇರಿದಾಗ ಜಿ.ಪಿ. ರಾಜರತ್ನಂ ಅವರು ನನ್ನನ್ನು ಕರ್ನಾಟಕ ಸಂಘದ ಕಾರ್ಯದರ್ಶಿಯನ್ನಾಗಿ ಮಾಡಿದರು. ‘ಪದ್ಯಾಂಜಲಿ’ ಎಂಬ ಉದಯೋನ್ಮುಖ ಕವಿಗಳ ಕವನ ಸಂಕಲನ ಹೊರತಂದು, ಅದರಲ್ಲಿ ಲಂಕೇಶ್, ಸುಮತೀಂದ್ರ ನಾಡಿಗರ ಜೊತೆ ನನ್ನ ಕವನಗಳನ್ನೂ ಪ್ರಕಟಿಸಿ, ಪೋ›ತ್ಸಾಹಿಸಿದರು. ಅಲ್ಲಿಂದ ಮುಂದೆ ಗೋಪಾಲಕೃಷ್ಣ ಅಡಿಗರು ಮತ್ತು ವೈಯೆನ್ಕೆ ನನ್ನ ಕಾವ್ಯಕ್ಕೆ ದಿಕ್ಕುದೆಸೆ ತೋರಿದರು. ಹೀಗೆ ನಾನು ಕನ್ನಡ ಕಾವ್ಯಕ್ಷೇತ್ರಕ್ಕೆ ಬಂದೆ.’
ನಿಸಾರ್ ಅವರನ್ನು ರಾಜರತ್ನಂ ಪೋ›ತ್ಸಾಹಿಸಿದ ಹಾಗೆ ನನ್ನ ಕಾಲೇಜಿನ ದಿನಗಳಲ್ಲಿ ನಿಸಾರ್ ನನ್ನನ್ನು ಪೋ›ತ್ಸಾಹಿಸಿದ್ದರು…ಯಾವುದೇ ಸಿದ್ಧಾಂತಗಳಿಂದ ನಿಜವಾದ ಕಾವ್ಯ ಮೂಡುವುದಿಲ್ಲ. ಸ್ವಾನುಭವ ನಿಷ್ಠೆ, ಪ್ರಾಮಾಣಿಕತೆ ಬೇಕು. ಕಾವ್ಯ ಸೃಷ್ಟಿಯಾಗುವುದು ಏಕಾಂತದಲ್ಲಿ, ಗುಂಪಿನಲ್ಲಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಸಹಜ ಪ್ರತಿಭೆ ಇರಬೇಕು. ಮಿಕ್ಕಿದ್ದೆಲ್ಲ ಆ ಮೇಲೆ ಎಂಬುದು ಅವರ ಖಚಿತ ನಿಲುವಾಗಿತ್ತು.
‘ಕವಿತೆಯಲ್ಲಿ ಸಾಮಾಜಿಕ ಕಳಕಳಿ, ವೈಚಾರಿಕತೆ ಇರಬೇಕು, ನಿಜ. ಆದರೆ ಅದೆಲ್ಲಕ್ಕಿಂತ ಕವಿಯ ಅನನ್ಯತೆ, ಕವಿತೆಯ ಕಲಾತ್ಮಕತೆ ಮುಖ್ಯ. ಸಹೃದಯನಿಗೆ ಕಾವ್ಯವು ರಸಾನುಭೂತಿ ನೀಡಬೇಕು ಎನ್ನುತ್ತಿದ್ದರು. ಹಾಗೆ ನೋಡಿದರೆ, ನಮ್ಮ ಅನೇಕ ಮುಖ್ಯ ಕವಿಗಳು ಇಂದಿಗೂ ಜನಮಾನಸದಲ್ಲಿ ಉಳಿದಿರುವುದು ಅವರ ಭಾವಗೀತೆಗಳಿಂದಲೇ ಅಂದರೆ ತಪ್ಪಲ್ಲ. ಹಾಗೆ, ನಿತ್ಯೋತ್ಸವ ಧ್ವನಿಸುರುಳಿಯ ಮೂಲಕ ನಿಸಾರ್ ಮತ್ತು ಮೈಸೂರು ಅನಂತಸ್ವಾಮಿಯವರು ಕನ್ನಡ ಸುಗಮ ಸಂಗೀತ ಕ್ಷೇತ್ರಕ್ಕೆ ಹೊಸ ಆಯಾಮ ಕೊಟ್ಟರು. ಕುವೆಂಪು, ಬೇಂದ್ರೆ ಅವರಿಂದ ಹಿಡಿದು ಎಚ್ಚೆಸ್ವಿ ಮತ್ತು ನನ್ನ ತನಕ ಅನೇಕ ಕವಿಗಳ ಭಾವಗೀತೆಗಳು ನಾಡಿನ ಮನೆಮನೆ ತಲುಪಲು ಕಾರಣರಾದರು. ಇಷ್ಟಿದ್ದರೂ ನಿತ್ಯೋತ್ಸವದ ನಂತರ ಸುಗಮ ಸಂಗೀತ ಕ್ಷೇತ್ರದಲ್ಲಿ ಅಷ್ಟಾಗಿ ನಿಸಾರ್ ಆಸಕ್ತಿ ವಹಿಸಲಿಲ್ಲ, ಅದಕ್ಕೆ ಕಾರಣವೂ ಇತ್ತು. ನಿಸಾರ್ ಅಹಮದ್ ಅವರಿಗೆ ನಿತ್ಯೋತ್ಸವದ ರೀತಿಯ ಗೀತೆಗಳನ್ನು ಪುನರಾವರ್ತಿಸುವುದು ಇಷ್ಟವಿರಲಿಲ್ಲ. ಬರೆದರೆ ಅದರಲ್ಲಿ ಏನಾದರು ಹೊಸತನ, ಅನನ್ಯತೆ ಇರಬೇಕು ಎಂಬುದು ಅವರ ನಿಲುವು. ಜೊತೆಗೆ ಅನಂತಸ್ವಾಮಿ ನಂತರ ಬೇರೆ ಯಾವ ಸಂಗೀತ ಸಂಯೋಜಕರೂ ಅವರಿಗೆ ಅಷ್ಟಾಗಿ ಇಷ್ಟವಾಗಿರಲಿಲ್ಲ.
ಹಿಂದೆ ಸಾಹಿತಿಗಳಿಗೆ ನಮ್ಮ ಸಮಾಜದಲ್ಲಿ ದೊಡ್ಡ ಗೌರವದ ಸ್ಥಾನ ಇತ್ತು. ಯುವ ಪೀಳಿಗೆಗೆ ಕುವೆಂಪು, ಶಿವರಾಮ ಕಾರಂತ ಮುಂತಾದವರು ಆದರ್ಶವಾಗಿದ್ದರು. ಆದರೆ ಇಂದು ಭಾರೀ ಶ್ರೀಮಂತರಾಗಿರೋ ಸಿನಿಮಾ ತಾರೆಯರು, ಕ್ರೀಡಾಪಟುಗಳು, ಕೈಗಾರಿಕೋದ್ಯಮಿಗಳು ಯುವಜನತೆಗೆ ಮಾದರಿಯಾಗಿದ್ದಾರೆ. ಸಾಹಿತ್ಯ ಸಮಾಜದಲ್ಲಿ ತನ್ನ ಆದ್ಯತೆ, ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ ಅಲ್ಲವೇ ಎಂದು ಕೇಳಿದರೆ ಅವರು ಬಹುಮಟ್ಟಿಗೆ ನಿಜ ಎಂದು ಒಪ್ಪುತ್ತಿದ್ದರಾದರೂ, ಅಂಥವರೆಲ್ಲ ಬಹು ಬೇಗ ಭ್ರಮನಿರಸನಗೊಂಡು ಮತ್ತೆ ಸರಳ ಜೀವನ ಹಾಗೂ ಗಂಭೀರ ಸಾಹಿತ್ಯ, ಸಂಗೀತ ಮತ್ತು ಅಧ್ಯಾತ್ಮಕ್ಕೆ ಹಿಂತಿರುಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸುವುದನ್ನು ಮರೆಯುತ್ತಿರಲಿಲ್ಲ. ಪ್ರತಿಯೊಬ್ಬರಿಗೂ ಅಂತರಂಗದ, ಅಂತರಾತ್ಮದ ಹಸಿವು ಅನ್ನೋದು ಇದ್ದೇ ಇರುತ್ತೆ. ಅದು ಹಿಂಗಬೇಕಾದರೆ ಸಾಹಿತ್ಯ, ಲಲಿತಕಲೆಗಳು ಮತ್ತು ಅಧ್ಯಾತ್ಮ ಬೇಕೇಬೇಕಾಗುತ್ತದೆ. ಸದ್ಯಕ್ಕೆ ಸಾಹಿತ್ಯ ಸಮಾಜದಲ್ಲಿ ತನ್ನ ಆದ್ಯತೆ ಕಳೆದುಕೊಂಡಿರಬಹುದು, ಆದರೆ ನಿರ್ಲಕ್ಷ್ಯಕ್ಕೆ ಒಳಗಾಗಿಲ್ಲ. ಸಾಹಿತಿಗಳ ಪ್ರಾಮಾಣಿಕತೆ, ದಿಟ್ಟತನದ ಬಗ್ಗೆ ಈಗಲೂ ಸಮಾಜಕ್ಕೆ ಒಂದು ರೀತಿಯ ಬೆರಗು, ಗೌರವದ ಭಾವನೆ ಉಳಿದೇ ಇದೆ. ಇದನ್ನು ನಾನೇ ಪ್ರತ್ಯಕ್ಷ ಕಂಡಿದ್ದೇನೆ, ಅನುಭವಿಸಿದ್ದೇನೆ ಎನ್ನುತ್ತಿದ್ದರು.
ಹಾಗೆಯೇ ಜಾಗತೀಕರಣದಿಂದ ಕನ್ನಡ ನುಡಿ ಮತ್ತು ಸಂಸ್ಕೃತಿ ಅವಸಾನದ ಅಂಚಿನಲ್ಲಿದೆ ಎಂಬ ಆತಂಕವನ್ನೂ ಅವರು ಅಲ್ಲಗಳೆಯುತ್ತಿದ್ದರು. ಕಾಲಕಾಲಕ್ಕೆ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಮಗೆ ವಿಜ್ಞಾನ, ತಂತ್ರಜ್ಞಾನದ ಪ್ರಯೋಜನಗಳೆಲ್ಲ ಬೇಕು. ಅಂತರ್ಜಾಲ ಬೇಕು, ಮೊಬೈಲ್ ಫೋನ್ ಬೇಕು, ಜಾಗತೀಕರಣ ಬೇಡ, ಇಂಗ್ಲಿಷ್ ಬೇಡ ಅಂದರೆ ಆಗುತ್ತ? ಶತಶತಮಾನಗಳಿಂದ ಕನ್ನಡ ನುಡಿ ಹಾಗೂ ಸಂಸ್ಕೃತಿ ಇಂಥ ಹಲವಾರು ಆಕ್ರಮಣಗಳನ್ನು, ಸಾಂಸ್ಕೃತಿಕ ಆಘಾತಗಳನ್ನು ಎದುರಿಸಿ, ಅರಗಿಸಿಕೊಂಡು, ಶ್ರೀಮಂತವಾಗಿ ಬೆಳೆದಿವೆ. ಕನ್ನಡಕ್ಕೆ ಈಗಲೂ ಜಾಗತೀಕರಣವನ್ನು ಎದುರಿಸಿ ನಿಲ್ಲುವ ತಾಕತ್ತು ಇದೆ ಎಂಬ ನಂಬಿಕೆ ವ್ಯಕ್ತಪಡಿಸುತ್ತಿದ್ದರು.
ನಿಸಾರ್ ಅವರು ಅನ್ಯ ಭಾಷೆ, ಧರ್ಮದವರಾದರೂ ಆ ಎಲ್ಲ ಎಲ್ಲೆಗಳನ್ನೂ ಮೀರಿ, ಎಲ್ಲರಿಗೂ ‘ಇವ ನಮ್ಮವ’ ಅನ್ನಿಸಿ, ಆತ್ಮೀಯರಾಗಿದ್ದವರು. ‘ದಾಸರೆಂದರೆ ನಮ್ಮ ವರಪುರಂದರರಯ್ಯ’ ಅನ್ನೋ ಸೊಗಸಾದ ಪದ್ಯ ಬರೆದವರು. ‘ಬೆಣ್ಣೆ ಕದ್ದ ನಮ್ಮ ಕೃಷ್ಣ’ ಅನ್ನೋ ಅತ್ಯಂತ ಜನಪ್ರಿಯ ಹಾಡು ಬರೆದವರು. ಯಾರು ಏನೇ ಹೇಳಲಿ, ನಾನು ಅಪ್ಪಟ ಭಾರತೀಯ, ಅಪ್ಪಟ ಕನ್ನಡಿಗ. ನನಗೆ ಪುಣ್ಯವಶಾತ್ ಸಿಕ್ಕಿರುವ ಈ ಎಲ್ಲ ಕೀರ್ತಿ, ಮಾನ್ಯತೆಗಳಿಗೂ ಕನ್ನಡವೇ ಕಾರಣ; ಕನ್ನಡ ನಾಡು, ಕನ್ನಡ ಜನತೆಯ ನಿಸ್ಪೃಹ ಪ್ರೀತಿಯೇ ಕಾರಣ. ಏಳೇಳು ಜನ್ಮ ಎತ್ತಿ ಬಂದರೂ ಈ ಋಣವನ್ನು ತೀರಿಸಲು ನನ್ನಿಂದ ಸಾಧ್ಯವಿಲ್ಲ ಎನ್ನುತ್ತಿದ್ದರು.
‘ಧರ್ವಂಧತೆ, ಭಯೋತ್ಪಾದನೆಗೆ ಬಹು ಮುಖ್ಯ ಕಾರಣ ಅಜ್ಞಾನ. ನಾನು ಕುರಾನ್ ಓದಿದ್ದೇನೆ; ಹಾಗೆಯೇ ಭಗವದ್ಗೀತೆ ಮತ್ತು ಬೈಬಲ್ ಸಹ. ಎಲ್ಲದರಲ್ಲಿರುವುದೂ ಉದಾತ್ತ ತತ್ವಗಳೇ. ಎಲ್ಲದರ ಗುರಿಯೂ ಸಹಜೀವನ ಮತ್ತು ಮನುಕುಲದ ಹಿತವೇ. ಇದನ್ನು ಎಲ್ಲರೂ ತಿಳಿಯಬೇಕಾಗಿದೆ. ತಿಳಿದವರು ತಿಳಿಯದವರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಸದ್ವಿದ್ಯೆಯೊಂದೇ ಧರ್ವಂಧತೆಗೆ ಮದ್ದು’ ಎಂದು ನಂಬಿ ಬದುಕಿದವರು ನಿಸಾರ್. ‘ಕವಿಗೆ ತೃಪ್ತಿ, ಅವನ ಕಾವ್ಯದ ಪರಿಸಮಾಪ್ತಿ ಎನ್ನುತ್ತಿದ್ದ ನಿಸಾರ್ ಸೃಜನಶೀಲ ವ್ಯಕ್ತಿಗೆ ತೃಪ್ತಿ ಅನ್ನೋದು ಎಂದೂ ಸಾಧ್ಯವಿಲ್ಲ ಎಂದಿದ್ದರು. ಈವರೆಗೆ ಬರೆದಿರುವುದರ ಕುರಿತು ಸಂತೋಷ, ಸಮಾಧಾನ ಇದೆ, ನಿಜ. ಆದರೆ ಇನ್ನೂ ಮಹತ್ವವಾದದ್ದು, ನನ್ನ ಇಡೀ ಜೀವನ ದರ್ಶನವನ್ನು ಬಿಂಬಿಸುವಂಥದ್ದು, ಏನಾದರೂ ಬರೀಬೇಕು ಅನ್ನೋ ಆಸೆ ಅವರಲ್ಲಿ ಸದಾ ತುಡಿಯುತ್ತಿತ್ತು. ಅಂಥ ನಿಸಾರ್ ಇನ್ನಿಲ್ಲ. ಅವರಿಗಾಗಿ ಈ ನುಡಿನಮನ.
ಹಿರಿಯ ಸಾಹಿತಿ, ಕವಿ ಕೆ.ಎಸ್. ನಿಸಾರ್ ಅಹಮದ್ ನಿತ್ಯೋತ್ಸವದ ಕವಿ ಎಂದೇ ಖ್ಯಾತರಾಗಿ ಕನ್ನಡಿಗರ ಮನೆ ಮಾತಾಗಿದ್ದರು. ಶಿವಮೊಗ್ಗದಲ್ಲಿ ಕೆಲವು ವರ್ಷಗಳ ಕಾಲ ಕಾರ್ಯನಿರ್ವ ಹಿಸಿದ್ದರು. ಹಾಗೂ ವಿಶೇಷ ಬಾಂಧವ್ಯ ಹೊಂದಿದ್ದರು. ಪಂಪ ಪ್ರಶಸ್ತಿ, ಪದ್ಮಶ್ರೀ ಸೇರಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಅವರು ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳನ್ನು ಶ್ರೀಮಂತಗೊಳಿಸಿದ್ದರು. ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕದ ಕೊಂಡಿಯೊಂದು ಕಳಚಿಬಿದ್ದಂತಾಗಿದೆ.
| ಯಡಿಯೂರಪ್ಪ ಮುಖ್ಯಮಂತ್ರಿ
ನಿತ್ಯೋತ್ಸವ ಮುಗಿಸಿದ ಕವಿ
ಬೆಂಗಳೂರು: ಕರ್ನಾಟಕ ಸಾಹಿತ್ಯ ಲೋಕದ ಮತ್ತೊಂದು ಹಿರಿಯ ಕೊಂಡಿ ಕಳಚಿದೆ. ಕ್ಯಾನ್ಸರ್​ನಿಂದ ಬಳಲುತ್ತಿದ್ದ ನಿತ್ಯೋತ್ಸವ ಕವಿ ಪ್ರೊ. ಕೆ.ಎಸ್. ನಿಸಾರ್ ಅಹಮದ್ (84) ಭಾನುವಾರ ಪದ್ಮನಾಭನಗರದ ಸ್ವಗೃಹದಲ್ಲಿ ನಿಧನರಾದರು. ಮನೆ ಮುಂಭಾಗದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಗಣ್ಯರು, ಸ್ನೇಹಿತರು ಸೇರಿ ನೂರಾರು ಜನರು ಆಗಮಿಸಿದ್ದರಾದರೂ ಕರೊನಾ ನಿರ್ಬಂಧ ಕಾರಣಕ್ಕೆ ಬಹುತೇಕರಿಗೆ ಅಂತಿಮ ದರ್ಶನ ಸಾಧ್ಯವಾಗಲಿಲ್ಲ. ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ನಿಸಾರ್ ಅಗಲಿದ್ದಾರೆ. ಮತ್ತೋರ್ವ ಪುತ್ರ 15 ದಿನದ ಹಿಂದಷ್ಟೇ ಅಮೆರಿಕದಲ್ಲಿ ನಿಧನರಾಗಿದ್ದರು. ಕಳೆದ ವರ್ಷ ಪತ್ನಿ ಮೃತಪಟ್ಟಿದ್ದರು. ಓರ್ವ ಪುತ್ರಿ ಅಮೆರಿಕದಲ್ಲಿದ್ದು ವಿಡಿಯೋ ಕಾಲ್ ಮೂಲಕ ತಂದೆಯ ಅಂತಿಮ ದರ್ಶನ ಪಡೆದರು. ಸೋಮವಾರ ಮಧ್ಯಾಹ್ನ 1.10ರ ವೇಳೆಗೆ ಜಯಚಾಮರಾಜೇಂದ್ರ ನಗರದ ದೂರದರ್ಶನ ಕಚೇರಿ ಬಳಿಯ ಸ್ಮಶಾನದಲ್ಲಿ ಅಂತಿಮ ಕ್ರಿಯೆ ನಡೆಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
| ಬಿ.ಆರ್. ಲಕ್ಷ್ಮಣರಾವ್ (ಲೇಖಕರು ಹಿರಿಯ ಕವಿ)
ಬೆಂಗಳೂರಿಗರಿಗೆ ಕರೊನಾ ಕಲಿಸುತ್ತಿದೆ ವಿಚಿತ್ರ ನೈತಿಕತೆ ಪಾಠ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 1 =
Remember me
