ದಕ್ಷಿಣ ಕನ್ನಡ:ಪುತ್ತೂರಿನಲ್ಲಿ ಬಿಜೆಪಿ ಹಾಗೂ ಹಿಂದು ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಡಿವೈಎಸ್​ಪಿ ಸೇರಿ ಮೂವರು ಪೊಲೀಸರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ಶ್ರೀನಾಥ್ ರೆಡ್ಡಿ ಹಾಗೂ ಅದೇ ಠಾಣೆಯ ಪೊಲೀಸ್ ಪೇದೆ ಹರ್ಷಿತ್​ನನ್ನು ಅಮಾನತುಗೊಳಿಸಿ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಆದೇಶ ಹೊರಡಿಸಿದ್ದಾರೆ. ಪುತ್ತೂರು ಡಿವೈಎಸ್​ಪಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಮೇಲಾಧಿಕಾರಿಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಎಸ್​ಪಿ ವಿಕ್ರಮ್ ಅಮಟೆ ತಿಳಿಸಿದ್ದಾರೆ.
ಪೊಲೀಸರ ದೌರ್ಜನ್ಯದ ವಿರುದ್ಧ ಸಾಕಷ್ಟು ಆಕ್ರೋಶಗಳು ಕೇಳಿ ಬರುತ್ತಿರುವ ಬೆನ್ನಲ್ಲೇ, ಹಿರಿಯ ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹಲ್ಲೆಗೊಳಗಾದ ಕಾರ್ಯಕರ್ತರನ್ನ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪೊಲೀಸರು ದೌರ್ಜನ್ಯ ಎಸಗಲು ಕಾಂಗ್ರೆಸ್​ನ ಕುಮ್ಮಕ್ಕೇ ಕಾರಣ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬರಲಿರುವ VVIPಗಳು ಯಾರು? ಆಹ್ವಾನಿತರ ಪಟ್ಟಿ ಇಂತಿದೆ…
ಹಿಂದು ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವುದು ನೂರಕ್ಕೆ ನೂರು ಇದು ಕಾಂಗ್ರೆಸ್​ನ ಕಿತಾಪತಿ. ಸರಕಾರ ಬದಲಾದ ತಕ್ಷಣ ಏನು ಬೇಕಾದರೂ ಮಾಡಬಹುದಾ? ಎಂದು ಪ್ರಭಾಕರ್ ಭಟ್ ಪ್ರಶ್ನಿಸಿದ್ದಾರೆ. ಕಾರ್ಯಕರ್ತರಿಂದ ಸಣ್ಣ ಪುಟ್ಟ ವ್ಯತ್ಯಾಸವಾಗುತ್ತದೆ. ಹಾಗೆಂದು ಅದು ಅಕ್ಷಮ್ಯ ಅಪರಾಧವಲ್ಲ. ಹಲ್ಲೆ ಮಾಡಿದ ಡಿವೈಎಸ್​​ಪಿಯನ್ನು ಅಮಾನತು ಮಾಡಬೇಕು. ಈ ಪ್ರಕರಣವನ್ನು ನಾವು ಹೀಗೇ ಬಿಡುವುದಿಲ್ಲ. ಇದರ ಹಿಂದಿನ ಶಕ್ತಿ ಯಾರೆಂದು ತಿಳಿಯಬೇಕು. ಈ ರೀತಿ ಹಿಂಸಿಸಲು ಯಾರ ಒತ್ತಡ ಇತ್ತೆಂದು ಪೊಲೀಸರು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಾರ್ಯಕರ್ತರು ಅಸಮಾಧಾನಗೊಂಡಾಗ, ಹಿಡಿ ತಡಿ ಬಡಿಯೆಂದು ನಾವು ಇವತ್ತಿನವರೆಗೆ ಯಾರಿಗೂ ಹೇಳಿಲ್ಲ. ರಾಜ್ಯದಲ್ಲಿ ಸರಕಾರ ಬದಲಾಗುತ್ತಿದ್ದಂತೆ ಹೀಗಾಗುವುದು ಒಳ್ಳೆಯ ಲಕ್ಷಣವಲ್ಲ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.
ಇದನ್ನೂ ಓದಿ:ಸಿದ್ದರಾಮಯ್ಯ ಸಂಪುಟ ಸೇರಲಿರುವ ಸಚಿವರ ಪಟ್ಟಿ ಇಲ್ಲಿದೆ ನೋಡಿ…
ಪುತ್ತೂರು ಅರಣ್ಯ ಇಲಾಖೆ ಕಚೇರಿ ಆವರಣ ಗೋಡೆ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡರ ಭಾವಚಿತ್ರ ಹಾಕಿ ಬಿಜೆಪಿ ಸೋಲಿಗೆ ಕಾರಣರಾದ ನಾಯಕರಿಗೆ ಶ್ರದ್ಧಾಂಜಲಿ ಎಂದು ಬರೆದು, ಚಪ್ಪಲಿ ಹಾರ ಹಾಕಿದ್ದ ಬ್ಯಾನರ್ ಕಳೆದ ಭಾನುವಾರ ರಾತ್ರಿ ಕಂಡುಬಂದಿತ್ತು. ಸರ್ಕಾರಿ ಆಸ್ತಿಪಾಸ್ತಿ ಮತ್ತು ಸಾರ್ವಜನಿಕ ಸ್ಥಳ ವಿರೂಪ ಬಗ್ಗೆ ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್ ನಗರ ಠಾಣೆಗೆ ದೂರು ನೀಡಿದ್ದರು. ಬ್ಯಾನರ್ ಅಳವಡಿಕೆ ವಿರುದ್ಧ ಮೇ 15ರಂದು ಬಿಜೆಪಿಯೂ ಪುತ್ತೂರಿನಲ್ಲಿ ಪ್ರತಿಭಟನೆ ನಡೆಸಿತ್ತು. ಘಟನೆಯಲ್ಲಿ ತಮ್ಮ ಕೈವಾಡ ಇಲ್ಲ ಎಂದು ಕಾಂಗ್ರೆಸ್ ಹೇಳಿಕೊಂಡಿತ್ತು.
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡರ ಭಾವಚಿತ್ರ ಇರುವ ಫ್ಲೆಕ್ಸ್ ಅಳವಡಿಸಿ ಅದಕ್ಕೆ ಚಪ್ಪಲಿ ಹಾರ ಹಾಕಿದ್ದ ವಿಚಾರ ರಾಜ್ಯದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡ ಒಂಬತ್ತು ಮಂದಿ ಮೇಲೆ ಪುತ್ತೂರು ಪೊಲೀಸರು ಹಿಗ್ಗಾಮುಗ್ಗ ಹಲ್ಲೆ ನಡೆಸಿ ದೌರ್ಜನ್ಯ ಎಸಗಿರುವ ಮಾಹಿತಿ ಬುಧವಾರ ಬೆಳಕಿಗೆ ಬಂದಿತ್ತು. ದೌರ್ಜನ್ಯಕ್ಕೆ ಒಳಗಾದವರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.
ಇದನ್ನೂ ಓದಿ:ಮೈಸೂರಲ್ಲಿ ನಡುರಸ್ತೆಯಲ್ಲೇ ಅವ್ವ ಮಾದೇಶ್ ಆಪ್ತನ ಹತ್ಯೆ: ಒಂಟಿಕೊಪ್ಪಲಿನಲ್ಲಿ ಬಿಗುವಿನ ವಾತಾವರಣ
ಪೊಲೀಸರು ಮೊದಲ ಹಂತದಲ್ಲಿ ನರಿಮೊಗರು ನಿವಾಸಿಗಳಾದ ವಿಶ್ವನಾಥ್, ಮಾಧವ ಎಂಬುವರನ್ನು ವಶಕ್ಕೆ ಪಡೆದಿದ್ದರು. ಬಳಿಕ ಅಭಿ ಯಾನೆ ಅವಿನಾಶ್, ಶಿವರಾಮ್, ಚೈತ್ರೇಶ್, ಈಶ್ವರ್, ನಿಶಾಂತ್, ದೀಕ್ಷಿತ್, ಗುರುಪ್ರಸಾದ್ ಎಂಬುವರನ್ನೂ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದರು. ಈ ವೇಳೆ ಪೊಲೀಸರು ತಮ್ಮ ವಶದಲ್ಲಿದ್ದವರನ್ನು ಹಿಗ್ಗಾಮುಗ್ಗಾ ಥಳಿಸಿ ಗಾಯಗೊಳಿಸಿದರು ಎಂಬ ಆರೋಪ ಕೇಳಿಬಂದಿದೆ. ಥಳಿತದಿಂದ ಗಾಯಗೊಂಡ ಯುವಕರ ಫೋಟೋಗಳು ಹಾಗೂ ತಡರಾತ್ರಿ ನಡೆಯಲು ಕಷ್ಟಪಡುವ ಯುವಕರು ಪುತ್ತೂರು ಡಿವೈಎಸ್‌ಪಿ ಕಚೇರಿಯಿಂದ ಹೊರಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರು ಬಿಜೆಪಿ ಕಾರ್ಯಕರ್ತರು. ಈ ಪೈಕಿ ಕೆಲವರು ಈ ಬಾರಿ ಪಕ್ಷೇತರ ಅಭ್ಯರ್ಥಿ ಪುತ್ತಿರ ಅವರ ಚುನಾವಣಾ ಪರ ಪ್ರಚಾರ ಮಾಡಿದ್ದರೆ, ಉಳಿದವರು ಬಿಜೆಪಿ ಪರ ಫೀಲ್ಡ್ ವರ್ಕ್ ಮಾಡಿದ್ದರು. ಪೊಲೀಸರು ದೌರ್ಜನ್ಯದ ಹಿಂದೆ ಸ್ಥಳೀಯ ಹಾಗೂ ಜಿಲ್ಲಾಮಟ್ಟದ ಮುಖಂಡರ ಚಿತಾವಣೆಯಿದೆ ಎಂಬ ಆರೋಪ ಕೇಳಿಬರುತ್ತಿದೆ. ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯೇ ದೌರ್ಜನ್ಯದ ಉಸ್ತುವಾರಿ ವಹಿಸಿದ್ದಾರೆಂಬ ಟೀಕೆಯೂ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋ ಮತ್ತು ವಿಡಿಯೋ ಬಗ್ಗೆ ನೆಟ್ಟಿಗರು ಭಾರೀ ಆಕ್ರೋಶ ಹೊರಹಾಕಿ, ಪುತ್ತೂರಿನಲ್ಲಿ ಪೊಲೀಸರೇ ಗೂಂಡಾಗಿರಿಗೆ ಇಳಿದರೇ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 + nineteen =
Remember me
